ನಿಯಮಬಾಹಿರವಾಗಿ ಟೋಲ್ ಸಂಗ್ರಹಿಸುತ್ತಿರುವ ಬ್ರಹ್ಮರಕೊಟ್ಲು ಟೋಲ್ ಗೇಟ್ ವಿರುದ್ಧ SDPI ತನ್ನ ಹೋರಾಟವನ್ನು ತೀವ್ರಗೊಳಿಸಲು ನಿರ್ಧರಿಸಿದೆ. ಟೋಲ್ ಗೇಟ್ ಸ್ಥಗಿತಗೊಳ್ಳುವವರೆಗೂ ಧರಣಿ, ಪಾದಯಾತ್ರೆ, ಜೈಲ್ ಭರೋ ಸೇರಿದಂತೆ ಹಂತ ಹಂತದ ಚಳುವಳಿಗಳನ್ನು ನಡೆಸಲು ಪಕ್ಷವು ತೀರ್ಮಾನಿಸಿದೆ.
ಬಂಟ್ವಾಳ: ನಿಯಮ ಹಾಗೂ ನಿಗದಿತ ಅವಧಿ ಮೀರಿ ಟೋಲ್ ಸಂಗ್ರಹ ನಡೆಸುತ್ತಿರುವ ರಾಷ್ಟ್ರೀಯ ಹೆದ್ದಾರಿ 73ರ ಬ್ರಹ್ಮರಕೊಟ್ಲು ಟೋಲ್ ಗೇಟ್ ವಿರುದ್ಧ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಹಮ್ಮಿಕೊಂಡಿರುವ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ಪಕ್ಷದ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸಭೆ ನಿರ್ಧರಿಸಿದೆ.
ವಿವಿಧ ಹಂತಗಳಲ್ಲಿ ಹೋರಾಟ
ಬ್ರಹ್ಮರಕೊಟ್ಲು ಟೋಲ್ ಗೇಟ್‌ನ ಅವೈಜ್ಞಾನಿಕ ಕಾರ್ಯವೈಖರಿ ಹಾಗೂ ನಿಯಮಬಾಹಿರವಾಗಿ ಟೋಲ್ ಸಂಗ್ರಹ ಮುಂದುವರಿಸಿರುವುದಕ್ಕೆ ಜಿಲ್ಲೆಯ ನಾಗರಿಕರಿಂದಲೂ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ SDPI ಕಳೆದ ಹಲವಾರು ಸಮಯಗಳಿಂದ ವಿವಿಧ ಹಂತಗಳಲ್ಲಿ ಹೋರಾಟಗಳನ್ನು ನಡೆಸಿಕೊಂಡು ಬರುತ್ತಿದೆ.
ಇತ್ತೀಚೆಗೆ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಡಿಸಿ ಕಚೇರಿ ಚಲೋ ಪಾದಯಾತ್ರೆಯಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು. ಜಿಲ್ಲಾದ್ಯಂತ ನಿರಂತರವಾಗಿ ಹೋರಾಟಗಳು ನಡೆಯುತ್ತಿದ್ದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯಾವುದೇ ಸ್ಪಂದನೆ ನೀಡದೆ ನಿರ್ಲಕ್ಷ್ಯ ವಹಿಸುತ್ತಿರುವುದನ್ನು ಸಭೆ ತೀವ್ರವಾಗಿ ಖಂಡಿಸಿದೆ.
ಮುಂದಿನ ಹಂತದ ಹೋರಾಟಗಳ ಕುರಿತು ವಿಸ್ತೃತ ಚರ್ಚೆ
ಈ ಹಿನ್ನೆಲೆಯಲ್ಲಿ ಬಂಟ್ವಾಳದಲ್ಲಿ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಅವರ ಅಧ್ಯಕ್ಷತೆಯಲ್ಲಿ ಹಾಗೂ ಜಿಲ್ಲಾ ಉಸ್ತುವಾರಿ ಮತ್ತು ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು ಅವರ ಉಪಸ್ಥಿತಿಯಲ್ಲಿ ನಡೆದ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸಭೆಯಲ್ಲಿ ಮುಂದಿನ ಹಂತದ ಹೋರಾಟಗಳ ಕುರಿತು ವಿಸ್ತೃತ ಚರ್ಚೆ ನಡೆಸಲಾಯಿತು.
ಟೋಲ್ ಗೇಟ್ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಧರಣಿ ಸತ್ಯಾಗ್ರಹ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರ ಕಚೇರಿ ಚಲೋ, ಟೋಲ್ ಗೇಟ್‌ನಲ್ಲಿ ಪೋಸ್ಟರ್ ಪ್ರದರ್ಶನ, ಫ್ಲೆಕ್ಸ್ ಅಭಿಯಾನ, ಸಾರ್ವಜನಿಕರಿಗೆ ನೋಟಿಸ್ ಹಂಚುವ ಮೂಲಕ ಜಾಗೃತಿ ಮೂಡಿಸುವುದು, ಟೋಲ್ ಬಹಿಷ್ಕಾರ ಹಾಗೂ ಜೈಲ್ ಭರೋ ಸೇರಿದಂತೆ ಹಂತ ಹಂತವಾಗಿ ತೀವ್ರ ಸ್ವರೂಪದ ಚಳುವಳಿಗಳನ್ನು ನಡೆಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಬ್ರಹ್ಮರಕೊಟ್ಲು ಟೋಲ್ ಗೇಟ್ ಸ್ಥಗಿತಗೊಳ್ಳುವವರೆಗೆ ಯಾವುದೇ ಕಾರಣಕ್ಕೂ ಹೋರಾಟವನ್ನು ಹಿಂಪಡೆಯುವುದಿಲ್ಲ. ಸಾರ್ವಜನಿಕರ ಹಿತದೃಷ್ಟಿಯಿಂದ ಈ ಹೋರಾಟವನ್ನು ಇನ್ನಷ್ಟು ವ್ಯಾಪಕಗೊಳಿಸಲಾಗುವುದು ಎಂದು SDPI ಕಾರ್ಯದರ್ಶಿ ಮಂಡಳಿ ಸಭೆ ಸ್ಪಷ್ಟಪಡಿಸಿದೆ.
ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಪುತ್ತೂರು, ಕಾರ್ಯದರ್ಶಿಗಳಾದ ಅಶ್ರಫ್ ತಲಪಾಡಿ, ಶಾಕಿರ್ ಅಳಕೆಮಜಲು, ನವಾಝ್ ಕಟ್ಟೆ ಹಾಗೂ ಸಮಿತಿ ಸದಸ್ಯರಾದ ಮೂನಿಶ್ ಅಲಿ ಮತ್ತು ರಹ್ಮಾನ್ ನಾವೂರು ಉಪಸ್ಥಿತರಿದ್ದರು.


