- Home
- Karnataka Districts
- ಮೂಲ್ಕಿ, ಸುಳ್ಯ, ಬಂಟ್ವಾಳ, ಪುತ್ತೂರಿನಲ್ಲಿ ಮಳೆ: ಕೆರೆಗಳಾದ ರಸ್ತೆಗಳು, ಕೃತಕ ನೆರೆ ಸೃಷ್ಟಿ
ಮೂಲ್ಕಿ, ಸುಳ್ಯ, ಬಂಟ್ವಾಳ, ಪುತ್ತೂರಿನಲ್ಲಿ ಮಳೆ: ಕೆರೆಗಳಾದ ರಸ್ತೆಗಳು, ಕೃತಕ ನೆರೆ ಸೃಷ್ಟಿ
ಮೂಲ್ಕಿ, ಸುಳ್ಯ, ಪುತ್ತೂರು ಸೇರಿದಂತೆ ದಕ್ಷಿಣ ಕನ್ನಡದ ಹಲವೆಡೆ ಗುಡುಗು ಸಹಿತ ಮಳೆಯಾಗಿದೆ. ಮೂಲ್ಕಿ ತಾಲೂಕಿನಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ರಸ್ತೆಗಳಲ್ಲಿ ನೀರು ನಿಂತು ಕೃತಕ ನೆರೆ ಸೃಷ್ಟಿಯಾಗಿದ್ದು, ವಾಹನ ಸಂಚಾರಕ್ಕೆ ಮತ್ತು ಸ್ಥಳೀಯರಿಗೆ ತೀವ್ರ ತೊಂದರೆಯಾಗಿದೆ.

ಮೂಲ್ಕಿ ಪರಿಸರದಲ್ಲಿ ಶುಕ್ರವಾರ ಸಂಜೆ ಮಳೆ
ಮೂಲ್ಕಿ, ಹಳೆಯಂಗಡಿ, ಕಿನ್ನಿಗೋಳಿ, ಕಟೀಲು ಸೇರಿದಂತೆ ಮೂಲ್ಕಿ ಪರಿಸರದಲ್ಲಿ ಶುಕ್ರವಾರ ಸಂಜೆ ಬಳಿಕ ಸಾಧಾರಣ ಮಳೆಯಾಗಿದೆ. ಮೂಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಕಳೆದ ಎರಡು ದಿನ ಸುರಿದ ಭಾರಿ ಮಳೆಗೆ ಗ್ರಾಮೀಣ ಪ್ರದೇಶದಲ್ಲಿ ಸಮಸ್ಯೆಯಾಗಿದ್ದು, ಮೂಲ್ಕಿ ತಾಲೂಕು ವ್ಯಾಪ್ತಿಯ ಕಿಲ್ಪಾಡಿ ಹಾಗೂ ಅತಿಕಾರಿಬೆಟ್ಟು ಗ್ರಾಪಂ ವ್ಯಾಪ್ತಿಯ ಗ್ರಾಮೀಣ ಭಾಗದ ರಸ್ತೆಗಳು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲಿ ಮಳೆ ನೀರು ಹರಿಯುತ್ತಿದ್ದು, ರಸ್ತೆಯಲ್ಲಿ ಕೆಲ ಕಡೆ ಕೃತಕ ಕೆರೆ ಸೃಷ್ಟಿಯಾಗಿದೆ.
ಮೂಲ್ಕಿ-ಮೂಡುಬಿದಿರೆ ರಾಜ್ಯ ಹೆದ್ದಾರಿಯ ಕುಬೆವೂರು ರೈಲ್ವೆ ಮೇಲ್ಸೇತುವೆಯಿಂದ ಒಳ ರಸ್ತೆ ಶಿಮಂತೂರು ದೇವಸ್ಥಾನದ ರಸ್ತೆ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಅವ್ಯವಸ್ಥೆಯ ಆಗರವಾಗಿದೆ. ಪ್ರತಿ ಮಳೆಗಾಲದಲ್ಲಿ ಈ ರಸ್ತೆಯ ಕೆಲವು ಕಡೆಗಳಲ್ಲಿ ಕೃತಕ ನೆರೆ ಉಂಟಾಗುತ್ತಿದೆ.

ಕೃತಕ ನೆರೆ
ಗುರುವಾರ ಬೆಳಗ್ಗೆ ಸುರಿದ ಭಾರಿ ಮಳೆಗೆ ರಸ್ತೆಯಲ್ಲಿ ತುಂಬಾ ನೀರುನಿಂತಿದ್ದು, ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಯಿತು. ಪ್ರತಿ ಮಳೆಗಾಲದಲ್ಲಿ ಈ ಭಾಗದಲ್ಲಿ ಕೃತಕ ನೆರೆ ಉಂಟಾಗಿ ರಸ್ತೆ ಮುಳುಗುತ್ತದೆ ಅಲ್ಲದೆ ಕೃಷಿ ನಾಶ ಸಂಭವಿಸುತ್ತದೆ. ಈ ಬಗ್ಗೆ ಅನೇಕ ಬಾರಿ ಸ್ಥಳೀಯರು ಪಂಚಾಯಿತಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ.
ರಸ್ತೆ ಕೆಸರುಮಯ
ಪ್ರಥಮ ಮಳೆಗೆ ಹೀಗಾದರೆ ಮುಂದಿನ ಮಳೆಗಾಲ ಕಳೆಯುವುದು ಹೇಗೆ? ಈ ಭಾಗದ ಜನರ ಸಮಸ್ಯೆ ಹೇಳುವವರು ಕೇಳುವವರು ಯಾರು ಇಲ್ಲದಂತಾಗಿದೆ ಎಂದು ಸ್ಥಳೀಯರಾದ ಸುಗಂಧಿ ಪೂಜಾರಿ ತಿಳಿಸಿದ್ದಾರೆ. ರಸ್ತೆ ಕೆಸರುಮಯವಾಗಿ ಸಂಚಾರ ದುಃಸ್ತರವಾಗಿ ಪರಿಣಮಿಸಿದ್ದು, ಕೂಡಲೇ ಪಂಚಾಯಿತಿ ಆಡಳಿತ ಎಚ್ಚೆತ್ತು ರಸ್ತೆಗೆ ಸೂಕ್ತ ಚರಂಡಿ ನಿರ್ಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಆಗ್ರಹಿಸಿದ್ದಾರೆ.
ಸುಳ್ಯ, ಬಂಟ್ವಾಳದಲ್ಲಿ ಗಾಳಿ ಮಳೆ
ಸುಳ್ಯ/ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮಾಂತರ ಭಾಗಗಳಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗಿದೆ. ಸುಡುಬಿಸಿಲಿನಿಂದ ಬಳಲುತ್ತಿದ್ದ ಜನರಿಗೆ ಮಳೆ ತಂಪೆರೆದಿದೆ. ಸುಳ್ಯದಲ್ಲಿ ಒಂದು ಗಂಟೆ ಕಾಲ ಗುಡುಗು ಸಹಿತ ಮಳೆ ಸುರಿದಿದೆ. ಬಂಟ್ವಾಳ ತಾಲೂಕಿನಲ್ಲಿ ವಿವಿಧೆಡೆ ಭಾರಿ ಗಾಳಿ ಮಳೆಯಾಗಿದೆ. ಗುಡುಗು ಸಿಡಿಲಿಗೆ ವಿದ್ಯುತ್ ಸರಬರಾಜು ವ್ಯತ್ಯಯಗೊಂಡಿದೆ.
ಪುತ್ತೂರು: ಗುಡುಗು, ಮಿಂಚು ಸಹಿತ ಗಾಳಿ ಮಳೆ
ಪುತ್ತೂರು: ಪುತ್ತೂರಿನ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಶುಕ್ರವಾರ ಸಂಜೆ ಗುಡುಗು, ಮಿಂಚು ಸಹಿತ ಗಾಳಿ ಮಳೆಯಾಗಿದೆ. ಸಂಜೆ ಸುಮಾರು 6 ಗಂಟೆಗೆ ಆರಂಭಗೊಂಡ ಮಳೆಯು ಸುಮಾರು ಒಂದು ಗಂಟೆ ಸುರಿಯಿತು.

