Viral Butterfly: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ನೀಲಿ ಬಣ್ಣದ ಚಿಟ್ಟೆ AI ಫೋಟೋ ಅಲ್ಲ, ನಿಜವಾದದ್ದು! 'ಫ್ಲಫ್ಫಿ ಟಿಟ್' (Zeltus amasa) ಎಂಬ ಈ ಅಪರೂಪದ ಸೌಂದರ್ಯರಾಶಿಯ ವಿಶಿಷ್ಟ ಲಕ್ಷಣಗಳ ಕುರಿತು ಇಲ್ಲಿದೆ ಪೂರ್ಣ ಮಾಹಿತಿ. ಈ ಚಿಟ್ಟೆಗಳು ಯಾವ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ? ಇಲ್ಲಿದೆ ಸಂಪೂರ್ಣ ಮಾಹಿತಿ.

AI Photo ಅಲ್ಲ, ಈಕೆ ಸ್ವರ್ಗ ಲೋಕದಿಂದ ಧರೆಗಿಳಿದ ಸುಂದರಿ

ನಮ್ಮ ಮನೆಯ ಸುತ್ತಮುತ್ತ ಹಾರಾಡುವ ಚಿಟ್ಟೆಗಳನ್ನು ನೋಡುವುದೇ ಏನೋ ಒಂದು ರೀತಿಯ ಕಣ್ಣಿಗೆ ಹಬ್ಬ. ಅವುಗಳ ಬಣ್ಣ, ಹೂವಿನಿಂದ ಹೂವಿಗೆ ಹಾರುವ ಬಗೆ ಎಲ್ಲವೂ ಪ್ರಕೃತಿಯ ಪ್ರೇಮಕಾವ್ಯದಂತೆ ಕಾಣಿಸುತ್ತದೆ. ಕೆಲವೊಂದು ಚಿಟ್ಟೆಗಳನ್ನು ಕಂಡಾಗ, ವಾರೆವಾ ಎನ್ನುತ್ತಾ, ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತೇವೆ. ಅಂತಹ ಅಪರೂಪದ ಹಾಗೂ ಮೋಹಕ ಚಿಟ್ಟೆಗಳಲ್ಲಿ 'ಫ್ಲಫಿ ಟಿಟ್' (Fluffy Tit / Zeltus amasa) ಒಂದಾಗಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ಚಿಟ್ಟೆಯ ಫೋಟೊ ನೋಡಿದ್ರೆ, ಜನ, ಇದು AI ಫೋಟೊ ಎನ್ನುತ್ತಿದ್ದಾರೆ. ಆದರೆ ಇದು ಅಪರೂಪದ ಚಿಟ್ಟೆಯಾಗಿದೆ. ಕಡು ನೀಲಿಯನ್ನು ತನ್ನ ರೆಕ್ಕೆಗಳಲ್ಲಿ ಹಿಡಿದಿಟ್ಟುಕೊಂಡು, ಹಿಮದ ಹತ್ತಿಯಂತಹ ಸೂಕ್ಷ್ಮತೆಯನ್ನು ತನ್ನ ದೇಹದಲ್ಲಿ ಧರಿಸಿರುವ ಈ ಚಿಟ್ಟೆಯನ್ನು ಕಂಡರೆ ಯಾರಾದರೂ ಕ್ಷಣಕಾಲ ಮೈಮರೆಯುವುದು ಖಂಡಿತ.

ವಿಭಿನ್ನ ಮೈಬಣ್ಣ, ಆಕಾರದ ಸುಂದರಿ

ಲೈಕೇನಿಡೆ (Lycaenidae) ಕುಟುಂಬಕ್ಕೆ ಸೇರಿದ ಈ ಚಿಟ್ಟೆಯ ಪ್ರಮುಖ ಆಕರ್ಷಣೆಯೆಂದರೆ ಇದರ ರೆಕ್ಕೆಗಳ ಮೇಲ್ಭಾಗದಲ್ಲಿರುವ ಆಕರ್ಷಕ ಕಡುನೀಲಿ ಮತ್ತು ನಸು ನೀಲಿ ಬಣ್ಣದ ಶೇಡ್. ರೆಕ್ಕೆಗಳ ಕೆಳಭಾಗದಲ್ಲಿ ಹಾಗೂ ದೇಹದ ಹಿಂಭಾಗದಲ್ಲಿರುವ ಸಾವಿರಾರು ಸೂಕ್ಷ್ಮ ಪೊರೆಗಳು (scales) ಇದಕ್ಕೆ ಹತ್ತಿಯಂತಹ ತುಪ್ಪಳದ (Fluffy) ರೂಪವನ್ನು ನೀಡುತ್ತವೆ. ಹಿಂಭಾಗದಲ್ಲಿ ತೂಗಾಡುವ ಬಿಳಿ ವರ್ಣದ ಎಳೆಯಂತಹ ಬಾಲಗಳು ಗಾಳಿಯಲ್ಲಿ ತೇಲಾಡುವಾಗ ಸ್ವರ್ಗದಿಂದ ಇಳಿದು ಬಂದ ಏಂಜಲ್ ನಂತೆ ಕಾಣುತ್ತದೆ.

ಈ ಚಿಟ್ಟೆಗಳು ಎಲ್ಲಿ ಕಂಡು ಬರುತ್ತವೆ?

ದಕ್ಷಿಣ ಏಷ್ಯಾ ಮತ್ತು ಆಗ್ನೇಯ ಏಷ್ಯಾದಲ್ಲಿ ವಿಶೇಷವಾಗಿ ಭಾರತ(ಪಶ್ಚಿಮ ಘಟ್ಟ, ಸಿಕ್ಕಿಂ ಮತ್ತು ಅಸ್ಸಾಂ), ಮಲೇಷ್ಯಾ ಮತ್ತು ಇಂಡೋನೇಷ್ಯಾ, ಮಯನ್ಮಾರ್, ಥೈಲ್ಯಾಂಡ್, ಸಿಂಗಾಪುರದ ಹಸಿರು ದಟ್ಟವಾದ ಕಾಡುಗಳಲ್ಲಿ, ಹಳ್ಳ-ಕೊಳ್ಳಗಳ ಪಕ್ಕದಲ್ಲಿ ಈ ಚಿಟ್ಟೆಗಳು ಹೆಚ್ಚಾಗಿ ಕಂಡುಬರುತ್ತವೆ. ತಂಪಾದ ವಾತಾವರಣ ಮತ್ತು ತೇವಾಂಶವಿರುವ ಪ್ರದೇಶಗಳಲ್ಲಿ ಇವು ಮಕರಂದ ಹೀರುತ್ತಾ ಕಾಲ ಕಳೆಯುತ್ತವೆ. ತನ್ನ ನವಿರಾದ ಶ್ವೇತವರ್ಣದ ಬಾಲಗಳನ್ನು ಶತ್ರುಗಳಿಂದ ತಪ್ಪಿಸಿಕೊಳ್ಳಲು ಈ ಚಿಟ್ಟೆ ಸೂಕ್ಷ್ಮವಾಗಿ ಬಳಸುತ್ತದೆ. ಪರಭಕ್ಷಕಗಳು ಇದರ ಹಿಂಭಾಗವನ್ನೇ ಮುಖವೆಂದು ಭಾವಿಸಿ ದಾಳಿ ಮಾಡಿದಾಗ, ಇದು ಸುಲಭವಾಗಿ ಹಾರಿ ತನ್ನ ಜೀವ ರಕ್ಷಿಸಿಕೊಳ್ಳುತ್ತವೆ. 'ಫ್ಲಫಿ ಟಿಟ್' ಕೇವಲ ಒಂದು ಕೀಟವಲ್ಲ, ಅದು ಪ್ರಕೃತಿಯ ಸೂಕ್ಷ್ಮ ಸೌಂದರ್ಯ ಮತ್ತು ಶಿಲ್ಪಕಲೆಗೆ ಸಾಕ್ಷಿಯಾಗಿದೆ.