ಸುಮಾರು 11 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬಯಲುಸೀಮೆಯ ಎತ್ತಿನಹೊಳೆ ಯೋಜನೆ ಅಂತಿಮವಾಗಿ ಪರೀಕ್ಷಾರ್ಥ ಸಂಚಾರ ಹಂತಕ್ಕೆ ತಲುಪಿದೆ. ಅಕ್ಟೋಬರ್ ಅಂತ್ಯದ ವೇಳೆಗೆ ತುಮಕೂರಿಗೆ ನೀರು ಹರಿಸಿ ಟ್ರಯಲ್ ರನ್ ನಡೆಸಲು ಸಿದ್ಧತೆ ನಡೆದಿದ್ದು, ಇದು ಯೋಜನೆಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಈ ಯೋಜನೆಯಿಂದಾಗಿ ಈಗಾಗಲೇ ಚಿಕ್ಕಮಗಳೂರಿನ ಹಲವು ಕೆರೆಗಳು ತುಂಬಿ, ರೈತರಲ್ಲಿ ಆಶಾಭಾವನೆ ಮೂಡಿಸಿದೆ.

ಬೆಂಗಳೂರು: ಬಯಲುಸೀಮೆಯ ಬಹುನಿರೀಕ್ಷಿತ ಎತ್ತಿನಹೊಳೆ ಯೋಜನೆ ಕೊನೆಗೂ ಪರೀಕ್ಷಾ ಹಂತ ತಲುಪಿದ್ದು, ಅಕ್ಟೋಬರ್ ಅಂತ್ಯದ ವೇಳೆಗೆ ಟ್ರಯಲ್ ರನ್ ನಡೆಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಸುಮಾರು 11 ವರ್ಷಗಳಿಂದ ನಡೆಯುತ್ತಿರುವ ಯೋಜನೆಯ ಕಾಮಗಾರಿಯ ಬಳಿಕ, ಒಂದು ತಿಂಗಳ ಕಾಲ ನಾಲೆಗೆ ನೀರು ಹರಿಸಿ ನೀರಿನ ಸರಾಗ ಹರಿವನ್ನು ಇಂಜಿನಿಯರ್‌ಗಳು ಪರೀಕ್ಷಿಸಲಿದ್ದಾರೆ.

ಎತ್ತಿನಹೊಳೆ ಯೋಜನೆ: 11 ವರ್ಷಗಳ ಕಾಯುವಿಕೆಗೆ ಕೊನೆ?

ಈ ಬಗ್ಗೆ ಸುದ್ದಿಗೋಷ್ಠಿ ಮಾಹಿತಿ ನೀಡಿರುವ ಸಚಿವ ಜಿ ಪರಮೇಶ್ವರ್ ಅವರು, ಎತ್ತಿನಹೊಳೆ ಯೋಜನೆಯನ್ನು 2026 ಅಥವಾ 2027ರ ಆರಂಭದ ವೇಳೆಗೆ ಮುಕ್ತಾಯ ಮಾಡುವ ಗುರಿಯನ್ನು ಹೊಂದಿದ್ದೇವು. ಆದರೆ ಕೇಂದ್ರ ಸರ್ಕಾರ ಹಾಸನ ಜಿಲ್ಲೆಯಲ್ಲಿ ಸುಮಾರು 500 ಮೀಟರ್ ದೂರದ ಅರಣ್ಯ ಪ್ರದೇಶದಲ್ಲಿ ಕಾಮಗಾರಿ ನಡೆಸಲು ಅನುಮತಿ ನೀಡಬೇಕಿತ್ತು. ನಾವು ಬಹಳ ಬಾರಿ ಒತ್ತಡ ಹಾಕಿದ ಬಳಿಕ ಅರಣ್ಯ ಪ್ರದೇಶವನ್ನು ಕ್ಲೀಯರ್ ಮಾಡಿ ಕೊಟ್ಟಿದ್ದರು. ಈಗ ಆ 500 ಮೀಟರ್ ಪ್ರದೇಶದಲ್ಲಿ ಆಗಬೇಕಿದ್ದ ಕೆಲಸ ಸಂಪೂರ್ಣಗೊಂಡಿದೆ ಎಂದು ತಿಳಿಸಿದರು.

ಅಕ್ಟೋಬರ್‌ನಲ್ಲಿ ತುಮಕೂರಿಗೆ ಎತ್ತಿನಹೊಳೆ ನೀರು

ಹಾಸನದಲ್ಲಿ ಕಾಮಗಾರಿ ಪೂರ್ಣಗೊಂಡ ಬಳಿಕ ಅರಸೀಕೆರೆಗೆ ನೀರು ಬರುತ್ತದೆ. ಅಲ್ಲಿಂದ ನೀರು ತುಮಕೂರಿಗೆ ಬರಬೇಕು. ಆದರೆ ತುಮಕೂರಿನಲ್ಲಿ ಅಲ್ಲಲ್ಲಿ ಕೆಲವು ಅಡಚಣೆಗಳು ಇತ್ತು. ಆದರೆ ಈಗ ಆ ಎಲ್ಲಾ ಕೆಲಸಗಳು ಪೂರ್ಣಗೊಂಡಿದೆ. ಈ ವರ್ಷದ ಅಕ್ಟೋಬರ್‌ನಲ್ಲಿ ಅಂದರೆ ಮುಂದಿನ ತಿಂಗಳ ಕೊನೆಯ ಒಳಗೆ ತುಮಕೂರಿಗೆ ನೀರು ಹರಿಸಲಾಗುತ್ತದೆ. ಇದು ಕೇವಲ ಟ್ರಯಲ್ ರನ್ ಆಗಿದ್ದು, ಶೇಖರಣೆ ಮಾಡಿರುವ ನೀರಿನ್ನು ಮಾತ್ರ ಇಲ್ಲಿಗೆ ಹರಿಸಿ ಪರೀಕ್ಷೆ ನಡೆಸಲಾಗುತ್ತದೆ. ಏಕೆಂದರೆ ನಮಗೆ ಅಕ್ಟೋಬರ್‌ನಲ್ಲಿ ಮಳೆ ಬರುವುದಿಲ್ಲ. ಶೇಖರಣೆ ಮಾಡಿದ ನೀರನ್ನು ಮಾತ್ರ ಟ್ರಯಲ್ ರನ್‌ಗಾಗಿ ಹರಿಸಲಾಗುತ್ತದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಎತ್ತಿಕಹೊಳೆ ಯೋಜನೆ ಆರಂಭವಾಗಿ 11 ವರ್ಷಗಳು ಕಳೆದ ಬಳಿಕ ಯೋಜನೆ ಪ್ರಯೋಗಾತ್ಮಕ ನೀರಿನ ಹರಿವು ಮಾಡುವ ಹಂತಕ್ಕೆ ಬಂದಿದೆ. ಟ್ರಯಲ್‌ ರನ್ ವೇಳೆ ಎಂಜಿನಯರ್ ಗಳು ನೀರಿನ ಸರಾಗ ಹರಿವಿನ ಬಗ್ಗೆ ಪರೀಕ್ಷೆಯನ್ನು ನಡೆಸಲಿದ್ದಾರೆ. ಇದರೊಂದಿಗೆ ತುಮಕೂರಿಗೆ ಎತ್ತಿನಹೊಳೆ ನೀರು ಹರಿಯುವುದು ಬಹುತೇಕ ಖಚಿತವಾಗಿದೆ.

ಕೆರೆಗೆ ಬಾಗಿನ ಅರ್ಪಿಸಿದ ಶಾಸಕ

ಹಿಂದಿನ ಸಿಎಂ ಸಿದ್ದರಾಮಯ್ಯ ಅವರು 2014ರಲ್ಲಿ ಮಾರ್ಚ್‌ನಲ್ಲಿ ಯೋಜನೆಗೆ ಚಾಲನೆಯನ್ನು ನೀಡಿದ್ದರು. ಇನ್ನು, ಎತ್ತಿನಹೊಳೆ ಯೋಜನೆಯ ನೀರಿನಿಂದ ಚಿಕ್ಕಮಗಳೂರು ತಾಲೂಕಿನ ಲಕ್ಯಾದ ಬೆಳವಾಡಿ ಕೆರೆ ತುಂಬಿ ಕೋಡಿ ಹರಿದ ಹಿನ್ನೆಲೆಯಲ್ಲಿ ಶಾಸಕ ತಿಮ್ಮಪ್ಪಯ ಅವರು ಗುರುವಾರ ಕೆರೆಗೆ ಬಾಗಿನ ಅರ್ಪಿಸಿದ್ದರು. ಈ ವೇಳೆ ಮಾತನಾಡಿದ್ದ ಶಾಸಕರು, ಎತ್ತಿನಹೊಳೆ ಯೋಜನೆಗೆ ಸರ್ಕಾರ ಆದ್ಯತೆ ನೀಡಿದ ಪರಿಣಾಮ ಈಗ ಹಳೇಬೀಡು, ಬೆಳವಾಡಿ, ಮಾಚೇನಹಳ್ಳಿ, ಕುರುಬರಹಳ್ಳಿ, ದೇವನೂರು ಸೇರಿದಂತೆ ಹಲವು ಕೆರೆಗಳು ತುಂಬಿದೆ. ಇದರಿಂದ ಈ ಭಾಗದ ಹಲವು ವರ್ಷಗಳ ನೀರಿನ ಸಮಸ್ಯೆ ದೂರವಾಗಿದೆ. ರೈತರ ಜೀವನದಲ್ಲಿ ಹೊಸ ಆಶಾಭಾವನೆ ಮೂಡಿಸಿದೆ ಎಂದು ಹೇಳಿದ್ದರು.

YouTube video player