ಕಲಬುರಗಿಯಲ್ಲಿ ನಡೆದ ಮಲ್ಲಿಕಾರ್ಜುನ ಖರ್ಗೆ ಅವರ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ನಟ ಪ್ರಕಾಶ್ ರಾಜ್ ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. "ಮಹಾಪ್ರಭು ಮೋದಿ ಇಂದು ತಮ್ಮ ಸ್ವಂತ ಶಕ್ತಿಯ ಮೇಲೆ ನಿಂತಿಲ್ಲ, ಅವರು ಪವನ್ ಕಲ್ಯಾಣ್ ಮತ್ತು ನಿತೀಶ್ ಕುಮಾರ್ ಅವರ ಆಸರೆಯ ಮೇಲೆ ನಿಂತಿದ್ದಾರೆ" ಎಂದು ಲೇವಡಿ ಮಾಡಿದರು.

ಕಲಬುರಗಿ: ಮಹಾಪ್ರಭು ನರೇಂದ್ರ ಮೋದಿ ಅವರು ಇಂದು ತಮ್ಮ ಸ್ವಂತ ಶಕ್ತಿಯ ಮೇಲೆ ನಿಂತಿಲ್ಲ. ಅವರು ತಮ್ಮ ಅಕ್ಕಪಕ್ಕದಲ್ಲಿ ಇರುವ ಪವನ್ ಕಲ್ಯಾಣ್ ಮತ್ತು ನಿತೀಶ್ ಕುಮಾರ್ ಅವರ ಹೆಗಲ ಮೇಲೆ ನಿಂತಿದ್ದಾರೆ ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಲೇವಡಿ ಮಾಡಿದ್ದಾರೆ.

ಕಲಬುರಗಿಯಲ್ಲಿ ನಡೆದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಈ ವೇಳೆ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ದೇಶವನ್ನು ವಿಕಸಿತ ಭಾರತ ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದು, ಇವರು ಭಾರತವನ್ನು ಅವನತಿಯತ್ತ ಕೊಂಡೊಯ್ದಿದ್ದಾರೆ. ಮಹಾಪ್ರಭು ಮೋದಿ ಅವರು ಒಬ್ಬ ರಾಜನಂತೆ ಬದುಕುತ್ತಿದ್ದಾರೆ. ಅವರ ಬಟ್ಟೆಗಳು, ವೈಭವದ ಮೆರವಣಿಗೆಗಳು ಅವರಿಗೆ ಬೇಕಾ? ಒಬ್ಬ ದೇಶದ ಪ್ರಧಾನಿಯನ್ನು ಸಾಮಾನ್ಯ ಜನ ಮುಟ್ಟದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಅವರು ರಾಮ ಮಂದಿರ ವ್ಯಾಪ್ತಿಯ ಕ್ಷೇತ್ರದಲ್ಲೇ ಸೋಲು ಕಂಡಿದ್ದಾರೆ. ಎಂಪಿ, ಎಂಎಲ್‌ಎಗಳನ್ನು ಖರೀದಿ ಮಾಡಲು ರಾಮ ಮಂದಿರದ ದುಡ್ಡನ್ನು ಕದಿಯಲಾಗಿದೆ ಎಂದು ಪ್ರಕಾಶ್ ರಾಜ್ ಗಂಭೀರವಾಗಿ ಆರೋಪಿಸಿದರು.

ಕರಾವಳಿ ಮಂದಿ ನನ್ನಂತೆ ಆದರೆ ಇವರ ಕಥೆ ಏನು?

ತಮ್ಮನ್ನು ಕರಾವಳಿ ಭಾಗಕ್ಕೆ ಕಳುಹಿಸಬೇಕು ಎನ್ನುವ ವಿರೋಧಿಗಳ ಹೇಳಿಕೆಗೆ ಟಾಂಗ್ ನೀಡಿದ ಅವರು, ಪ್ರಕಾಶ್ ರಾಜ್‌ನನ್ನು ಕರಾವಳಿಗೆ ಹಾಕಿ ಎಂದು ಕೆಲವರು ಹೇಳುತ್ತಿದ್ದಾರೆ. ಒಂದು ವೇಳೆ ಆ ಕರಾವಳಿಯ ಜನ ಅಲ್ಲಿನ ಸಮುದ್ರದ ಮೀನು ತಿಂದು ನನ್ನಂತೆಯೇ ಯೋಚಿಸಿ, ಪ್ರಶ್ನೆ ಮಾಡಲು ಆರಂಭಿಸಿದರೆ ಇವರ ಪರಿಸ್ಥಿತಿ ಏನಾಗಬಹುದು? ಎಂದು ಪ್ರಶ್ನಿಸಿದರು. ಅಲ್ಲದೆ ಪ್ರತಿದಿನ ಸುಳ್ಳು ಹೇಳುವವರನ್ನು ಮತ್ತು ಅಪಶಬ್ದಗಳನ್ನು ಬಳಸುವವರನ್ನು ಮೊದಲು ಶುದ್ಧೀಕರಿಸಬೇಕಾಗಿದೆ ಎಂದರು.

ಇವರಿಗೆ ಮಲ್ಲಿಕಾರ್ಜುನ ಖರ್ಗೆ ಅಂದರೆ ಆಗಿಬರುವುದಿಲ್ಲ. ಅದರರ್ಥ ಇವರಿಗೆ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರೂ ಆಗಿಬರುವುದಿಲ್ಲ ಎಂದೇ ಅರ್ಥ. ಸಂವಿಧಾನ ಎನ್ನುವುದು ಬ್ರಿಟಿಷರು ಬಂದ ಮೇಲೆ ರಚನೆಯಾಗಿದ್ದು. ಇವರು ಹಿಂದೂ ಧರ್ಮ ಅಪಾಯದಲ್ಲಿದೆ ಎಂದು ಕಾಂಟ್ರಾಕ್ಟ್ ಪಡೆದುಕೊಂಡವರಂತೆ ಆಡುತ್ತಿದ್ದಾರೆ. ಹಿಂದೆ ಡಿಮಾನಿಟೈಸೇಶನ್ ಮಾಡಿ ದೇಶದ ಜನರ ದುಡ್ಡನ್ನು ಜನರೇ ತೆಗೆದುಕೊಳ್ಳದಂತೆ ಮಾಡಿದರು. ಪಶ್ಚಿಮ ಬಂಗಾಳದಲ್ಲಿ ಒಂದು ಕೋಟಿ ಮತಗಳನ್ನು ಡಿಲೀಟ್ ಮಾಡಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಸೋಲಿನ ಭಯದಿಂದ ದೇಶದಲ್ಲಿ ತನಿಖಾ ಪ್ರಕ್ರಿಯೆಗಳನ್ನು ಆರಂಭಿಸಲಾಗಿದೆ ಎಂದು ಕಿಡಿಕಾರಿದರು.

ವೇದಿಕೆಯಲ್ಲಿದ್ದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಧೈರ್ಯ ತುಂಬಿದ ಪ್ರಕಾಶ್ ರಾಜ್ ಖರ್ಗೆಯವರೇ, ನೀವು ಸದನದಲ್ಲಿ ಹೀಗೆಯೇ ಗುಡುಗುತ್ತಿರಿ, ನಾವೆಲ್ಲರೂ ನಿಮ್ಮ ಜೊತೆಗಿರುತ್ತೇವೆ. ಮೋದಿ ಅಧಿಕಾರದಿಂದ ಕೆಳಗಿಳಿಯುತ್ತಾರೆ, ದೇಶದ ಜನರೇ ಅವರನ್ನು ಇಳಿಸುತ್ತಾರೆ. ಆ ಬಳಿಕ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತೋರಿಸಿದ ದಾರಿದೀಪದಂತೆ ನಡೆಯುವ ಮುಂದಿನ ಪ್ರಧಾನಿಯನ್ನು ನಾವೆಲ್ಲರೂ ಸೇರಿ ಆರಿಸೋಣ ಎಂದು ಕರೆ ನೀಡಿದರು. ಕರ್ನಾಟಕದಲ್ಲಿ ಪ್ರಜೆಗಳೇ ಆರಿಸಿದ ಸರ್ಕಾರವಿದ್ದು, ರಾಜ್ಯದಲ್ಲಿ ಯಾವೊಬ್ಬ ನಾಗರಿಕನೂ ತನ್ನ ಮತದಾನದ ಹಕ್ಕನ್ನು ಕಳೆದುಕೊಳ್ಳದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದು ಪ್ರಕಾಶ್ ರಾಜ್ ತಿಳಿಸಿದರು.