ಶಾರ್ಟ್ಸ್, ರೀಲ್ಸ್‌ಗಳಂತಹ ಕಿರು ವಿಡಿಯೋಗಳನ್ನು ಅತಿಯಾಗಿ ನೋಡೋದ್ರಿಂದ ಮೆದುಳಿನ ಪ್ರಿಫ್ರಂಟಲ್ ಭಾಗದ ಮೇಲೆ ಪರಿಣಾಮ ಉಂಟಾಗಿ, ಏಕಾಗ್ರತೆ, ಸ್ವಯಂ ನಿಯಂತ್ರಣದ ಸಾಮರ್ಥ್ಯ ಕುಂಠಿತವಾಗುತ್ತದೆ ಎಂದು ಅಧ್ಯಯನಗಳು ಸೂಚಿಸುತ್ತವೆ. ಈ ಬಗ್ಗೆ ಇನ್ನು ಹೆಚ್ಚಿನ ಸಂಶೋಧನೆಗಳ ಅಗತ್ಯವಿದ್ದರೂ, ಮಾನಸಿಕ ಗಮನ ಮತ್ತು ಬೌದ್ಧಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಮೊಬೈಲ್ ಬಳಕೆಯ ಸಮಯ ಮಿತಿಗೊಳಿಸುವುದು ಉತ್ತಮ ಎಂದು ತಜ್ಞರು ಎಚ್ಚರಿಸಿದ್ದಾರೆ.
ಪ್ರಸ್ತುತ ದಿನಗಳಲ್ಲಿ ಸ್ಮಾರ್ಟ್‌ಫೋನ್ ಬಳಕೆ ಜೀವನದ ಅವಿಭಾಜ್ಯ ಅಂಗ. ಅದರಲ್ಲೂ ಇನ್‌ಸ್ಟಾಗ್ರಾಮ್ ರೀಲ್ಸ್ (Instagram Reels), ಯೂಟ್ಯೂಬ್ ಶಾರ್ಟ್ಸ್ (YouTube Shorts) ನಂತಹ ಶಾರ್ಟ್ ವಿಡಿಯೋಗಳನ್ನು ನೋಡುವುದು ಎಲ್ಲ ವಯಸ್ಸಿನವರಲ್ಲೂ ಹವ್ಯಾಸವಾಗಿ ಬಿಟ್ಟಿದೆ. ಕೇವಲ ಐದು ನಿಮಿಷ ಮನರಂಜನೆಗಾಗಿ ಫೋನ್ ಕೈಗೆತ್ತಿಕೊಂಡರೆ ಗಂಟೆಗಟ್ಟಲೆ ಸಮಯ ಹೇಗೆ ಕಳೆದುಹೋಗುತ್ತದೆ ಎಂಬುದೇ ತಿಳಿಯುವುದಿಲ್ಲ.
ಮೊದಲಿಗೆ ಕೇವಲ ಸಮಯ ಕಳೆಯುವ ಹವ್ಯಾಸವಾಗಿ ಆರಂಭವಾಗುವ ಈ ಶಾರ್ಟ್ ವಿಡಿಯೋಗಳ ವೀಕ್ಷಣೆ, ಕ್ರಮೇಣ ವ್ಯಸನವಾಗಿ (Addiction) ಬದಲಾಗುತ್ತಿದೆ. ಈ ರೀತಿಯ ನಿರಂತರ ಸ್ಕ್ರೋಲಿಂಗ್ ಹವ್ಯಾಸವು ಮೆದುಳಿನ ಏಕಾಗ್ರತೆ ಮತ್ತು ಸ್ವಯಂ ನಿಯಂತ್ರಣದಂತಹ ಸಾಮರ್ಥ್ಯಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ಸಂಶೋಧನೆಗಳು ಎಚ್ಚರಿಸಿವೆ.
ಸಂಶೋಧನೆ ಏನು ಹೇಳುತ್ತದೆ?
'ಫ್ರಾಂಟಿಯರ್ಸ್ ಇನ್ ಹ್ಯೂಮನ್ ನ್ಯೂರೋಸೈನ್ಸ್' (Frontiers in Human Neuroscience) ಜರ್ನಲ್‌ನಲ್ಲಿ ಪ್ರಕಟವಾದ ಇಇಜಿ (EEG) ಅಧ್ಯಯನ ಒಂದರಲ್ಲಿ 56 ಯುವಕರ ಮೇಲೆ ಶಾರ್ಟ್ ವಿಡಿಯೋಗಳ ಪ್ರಭಾವದ ಕುರಿತು ವಿಶ್ಲೇಷಣೆ ನಡೆಸಲಾಗಿತ್ತು. ಹೆಚ್ಚು ಶಾರ್ಟ್ ವಿಡಿಯೋಗಳನ್ನು ನೋಡುವವರ ಮೆದುಳಿನ ಪ್ರಿಫ್ರಂಟಲ್ ಭಾಗದಲ್ಲಿರುವ (Prefrontal Cortex) 'ಎಕ್ಸಿಕ್ಯೂಟಿವ್ ಕಂಟ್ರೋಲ್' (Executive Control) ಸಾಮರ್ಥ್ಯವು ಕಡಿಮೆಯಾಗಿರುವುದು ಈ ಅಧ್ಯಯನದಲ್ಲಿ ಕಂಡುಬಂದಿದೆ.
ಮೆದುಳಿನ ಈ ಭಾಗವು ಯಾವುದೇ ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಏಕಾಗ್ರತೆ ಕಾಯ್ದುಕೊಳ್ಳಲು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಅತಿಯಾಗಿ ಶಾರ್ಟ್ಸ್ ವೀಕ್ಷಿಸುವವರಲ್ಲಿ ಏಕಾಗ್ರತೆ ಬೇಗನೆ ತಪ್ಪುವ ಸಾಧ್ಯತೆ ಇರುತ್ತದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಸಂಶೋಧಕರ ಪ್ರಕಾರ.. ಸತತವಾಗಿ ಶಾರ್ಟ್ ವಿಡಿಯೋಗಳನ್ನು ನೋಡುತ್ತಾ ಹೋಗುವುದರಿಂದ ಮೆದುಳಿನಲ್ಲಿ ಕೇವಲ ಕೆಳಮಟ್ಟದ ಭಾವನಾತ್ಮಕ ಪ್ರಕ್ರಿಯೆಗಳು ಮಾತ್ರ ಸಕ್ರಿಯವಾಗಿರುತ್ತವೆ. ಪರಿಣಾಮವಾಗಿ ಸ್ವಯಂ ನಿಯಂತ್ರಣ ಮತ್ತು ಆಳವಾದ ಏಕಾಗ್ರತೆಗೆ ಕಾರಣವಾಗುವ ಉನ್ನತ ಮಟ್ಟದ ಮೆದುಳಿನ ಕಾರ್ಯಚಟುವಟಿಕೆಗಳು ಕುಂಠಿತಗೊಳ್ಳುವ ಸಾಧ್ಯತೆ ಇರುತ್ತದೆ.
ಇತ್ತೀಚಿನ ಮತ್ತೊಂದು ಬೃಹತ್ ವಿಶ್ಲೇಷಣೆಯಲ್ಲಿ ಸುಮಾರು 98,299 ಜನರ ಮೇಲೆ ನಡೆಸಲಾದ 71 ವಿಭಿನ್ನ ಅಧ್ಯಯನಗಳನ್ನು ಪರಿಶೀಲಿಸಿದಾಗ ಅತಿಯಾಗಿ ಶಾರ್ಟ್ ವಿಡಿಯೋ ವೀಕ್ಷಿಸುವವರಲ್ಲಿ ಅರಿವಿನ ಸಾಮರ್ಥ್ಯ (Cognition), ಪ್ರಮುಖವಾಗಿ ಏಕಾಗ್ರತೆ ಮತ್ತು ಸ್ವಯಂ ನಿಯಂತ್ರಣದ ಕೊರತೆ ಇರುವುದು ಬೆಳಕಿಗೆ ಬಂದಿದೆ. ಈ ಪರಿಣಾಮವು ಎಲ್ಲರ ಮೇಲೂ ಒಂದೇ ರೀತಿ ಇರುತ್ತದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ ಮತ್ತು ಈ ನಿಟ್ಟಿನಲ್ಲಿ ಇನ್ನಷ್ಟು ವಿಸ್ತೃತ ಸಂಶೋಧನೆಗಳು ಅಗತ್ಯವಾಗಿವೆ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ.
ಏಕಾಗ್ರತೆ ಉಳಿಸಿಕೊಳ್ಳಲು ತಜ್ಞರ ಸರಳ ಸಲಹೆಗಳು
ಶಾರ್ಟ್ ವಿಡಿಯೋಗಳನ್ನು ಸಂಪೂರ್ಣವಾಗಿ ನಿಲ್ಲಿಸಬೇಕಾದ ಅಗತ್ಯವಿಲ್ಲದಿದ್ದರೂ ನಿಮ್ಮ ಏಕಾಗ್ರತೆಯನ್ನು ಕಾಪಾಡಿಕೊಳ್ಳಲು ಈ ಕೆಳಗಿನ ಆರೋಗ್ಯಕರ ಡಿಜಿಟಲ್ ಹವ್ಯಾಸಗಳನ್ನು ರೂಢಿಸಿಕೊಳ್ಳಬಹುದು. ದಿನದಲ್ಲಿ ಎಷ್ಟು ಸಮಯ ರೀಲ್ಸ್ ನೋಡಬೇಕು ಎಂಬುದಕ್ಕೆ ನೀವೇ ಒಂದು ಮಿತಿ ನಿಗದಿಪಡಿಸಿಕೊಳ್ಳಿ. ಮೊಬೈಲ್ ಪರದೆಯನ್ನು ಸತತವಾಗಿ ನೋಡುವ ಬದಲು, ಮಧ್ಯೆ ಮಧ್ಯೆ ಸಣ್ಣ ವಿರಾಮಗಳನ್ನು ತೆಗೆದುಕೊಳ್ಳಿ. ಅಧ್ಯಯನ ಮಾಡುವಾಗ ಅಥವಾ ಪ್ರಮುಖ ಕಚೇರಿ ಕೆಲಸಗಳ ಸಮಯದಲ್ಲಿ ಮೊಬೈಲ್ ಫೋನ್‌ಗಳನ್ನು ಸೈಲೆಂಟ್ ಮಾಡಿ ನಿಮ್ಮಿಂದ ದೂರವಿಡಿ. ಯಾವುದೇ ವಿಷಯ ಮನರಂಜನೆಗೆ ಮಾತ್ರ ಸೀಮಿತವಾಗಿದ್ದಾಗ ಚೆನ್ನಾಗಿರುತ್ತದೆ. ಆದರೆ ಅದು ಹವ್ಯಾಸ ಮೀರಿ ನಮ್ಮ ದೈನಂದಿನ ಜೀವನದ ಪ್ರಮುಖ ಕಾರ್ಯಗಳ ಮೇಲೆ ಪ್ರಭಾವ ಬೀರಲು ಆರಂಭಿಸಿದರೆ ಸೂಕ್ತ ಮುನ್ನೆಚ್ಚರಿಕೆ ಅಗತ್ಯ.


