ಕಲಬುರಗಿಯಲ್ಲಿ ಪಾಕಿಸ್ತಾನಿ ಉಗ್ರರೊಂದಿಗೆ ಸಂಪರ್ಕ ಮತ್ತು ದೇಶ ವಿರೋಧಿ ಜಾಲತಾಣ ಚಟುವಟಿಕೆಗಳ ಶಂಕೆಯ ಮೇಲೆ ಉತ್ತರ ಪ್ರದೇಶ ಮೂಲದ ಇಬ್ಬರು ಯುವಕರನ್ನು ಸಿಸಿಬಿ ಪೊಲೀಸರು ವಶಕ್ಕೆ.. ವಿಚಾರಣೆ ಬಳಿಕ ಒಬ್ಬನನ್ನು ಬಿಡುಗಡೆ ಮಾಡಲಾಗಿದ್ದು, ಮತ್ತೊಬ್ಬ ಆರೋಪಿ ಸಮೀರ್ ಬಂಧಿಸಿ ತನಿಖೆ ಮುಂದುವರಿಸಲಾಗಿದೆ.
ಉತ್ತರ ಪ್ರದೇಶ ಮೂಲದ ಯುವಕರು ವಶಕ್ಕೆ- ತೀವ್ರ ವಿಚಾರಣೆ ನಡೆಸಿದ ಬಳಿಕ ಒಬ್ಬನ ಬಿಡುಗಡೆ
ಕಲಬುರಗಿ (ಆ.14): ಮಹತ್ವದ ಬೆಳವಣಿಗೆಯೊಂದರಲ್ಲಿ ಪಾಕಿಸ್ತಾನದ ಉಗ್ರರ ಜೊತೆ ಸಂಪರ್ಕ ಶಂಕೆ ಮತ್ತು ಜಾಲತಾಣಗಳಲ್ಲಿ ದೇಶ ವಿರೋಧಿ ಚಟುವಟಿಕೆಗಳ ಆರೋಪದ ಮೇರೆಗೆ ಉತ್ತರ ಪ್ರದೇಶ ಮೂಲದ ಇಬ್ಬರನ್ನು ಕಲಬುರಗಿಯಲ್ಲಿ ಸಿಸಿಬಿ ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ ಘಟನೆ ನಡೆದಿದೆ.
ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯ ಸದಾರಪೂರ ಗ್ರಾಮದ ಮೊಹಮ್ಮದ್ ಸಮೀರ್ ಹಾಗೂ ಈತನ ಸಹೋದ್ಯೋಗಿ ಸಲ್ಮಾನ್‌ನನ್ನು ವಶಕ್ಕೆ ಪಡೆಯಲಾಗಿತ್ತು. ಏತನ್ಮಧ್ಯೆ ವಿಚಾರಣೆ ನಡೆಸಿ ಸಲ್ಮಾನ್‌ನನ್ನು ಬಿಡುಗಡೆ ಮಾಡಿರುವ ಪೊಲೀಸರು, ಸಮೀರ್‌ನನ್ನು ಬಂಧಿಸಿ ವಿಚಾರಣೆ ಮುಂದುವರಿಸಿದ್ದಾರೆ.
ದೇಶವಿರೋಧಿ ಹಾಗೂ ಮೂಲಭೂತವಾದಿ ಚಟುವಟಿಕೆಗಳಲ್ಲಿ ತೊಡಗಿವೆ ಎನ್ನಲಾದ ಹಲವು ಇನ್‌ಸ್ಟಾಗ್ರಾಂ ಖಾತೆಗಳನ್ನು ಆರೋಪಿ ಸಮೀರ್ ಫಾಲೋ ಮಾಡುತ್ತಿದ್ದ. ಸಹೋದ್ಯೋಗಿ ಸಲ್ಮಾನ್ ಅವುಗಳಿಗೆ ಕಮೆಂಟ್ ಮಾಡುತ್ತಿದ್ದನೆಂಬ ಸಂಗತಿ ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ. ಅವರು ತಿಳಿಸಿದ್ದಾರೆ.
ದೇಶ ವಿರೋಧಿ ರೀತಿಯ ಸಾಮಾಜಿಕ ಜಾಲತಾಣ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಪದ ಹಿನ್ನೆಲೆ ಸಮೀರ್‌ನನ್ನು ಬಂಧಿಸಲಾಗಿದೆ. ಈ ಖಾತೆಗಳನ್ನು ನಿರ್ವಹಿಸುತ್ತಿದ್ದ ವ್ಯಕ್ತಿಗಳಿಗೆ ಪಾಕಿಸ್ತಾನ ಅಥವಾ ಭಾರತದ ಹೊರಗಿನ ಇತರ ಯಾವುದೇ ಪ್ರದೇಶಗಳೊಂದಿಗೆ ಸಂಪರ್ಕವಿದೆಯೇ ಎಂಬುದನ್ನು ಪತ್ತೆಹಚ್ಚಲು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.


