ಖಾಕಿ ಎಂದರೆ ಕೇವಲ ಅಧಿಕಾರವಲ್ಲ, ಅದೊಂದು ಜವಾಬ್ದಾರಿ ಎಂಬುದನ್ನು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಮನೆಯಲ್ಲಿ ಸಾವಿನ ಸೂತಕವಿದ್ದರೂ, ವೈಯಕ್ತಿಕ ದುಃಖವನ್ನು ಬದಿಗಿಟ್ಟು ಸಾರ್ವಜನಿಕ ಶಾಂತಿ ಕಾಪಾಡಲು ಅವರು ರಸ್ತೆಗೆ ಇಳಿದಿರುವ ಘಟನೆ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಹುಬ್ಬಳ್ಳಿ: ಖಾಕಿ ಎಂದರೆ ಕೇವಲ ಅಧಿಕಾರವಲ್ಲ, ಅದೊಂದು ಜವಾಬ್ದಾರಿ ಎಂಬುದನ್ನು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಮನೆಯಲ್ಲಿ ಸಾವಿನ ಸೂತಕವಿದ್ದರೂ, ವೈಯಕ್ತಿಕ ದುಃಖವನ್ನು ಬದಿಗಿಟ್ಟು ಸಾರ್ವಜನಿಕ ಶಾಂತಿ ಕಾಪಾಡಲು ಅವರು ರಸ್ತೆಗೆ ಇಳಿದಿರುವ ಘಟನೆ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ನಡೆದದ್ದೇನು?
ಹುಬ್ಬಳ್ಳಿ-ಧಾರವಾಡದ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರ ಮಾವ ವಿರನಾಗಪ್ಪ ಅವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಯಾವುದೇ ವ್ಯಕ್ತಿಯಾದರೂ ಆಸ್ಪತ್ರೆಗೆ ಓಡುವುದು ಸಹಜ. ಆದರೆ ಶಶಿಕುಮಾರ್ ಅವರು ಮಾಡಿದ್ದೇ ಬೇರೆ.
ಇಂದು ಹಳೆ ಹುಬ್ಬಳ್ಳಿಯ ಭವಾನಿ ಶಂಕರ ದೇವಸ್ಥಾನದ ವಿಚಾರವಾಗಿ ಹಿಂದೂಪರ ಸಂಘಟನೆಗಳು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದವು. ನಗರದ ಕಾನೂನು ಸುವ್ಯವಸ್ಥೆ ಹದಗೆಡಬಾರದು ಎಂಬ ಕಾರಣಕ್ಕೆ ಕಮಿಷನರ್ ಶಶಿಕುಮಾರ್ ಅವರು ಸ್ವತಃ ಸ್ಥಳದಲ್ಲಿ ಹಾಜರಿದ್ದು ಬಂದೋಬಸ್ತ್ ಉಸ್ತುವಾರಿ ವಹಿಸಿದ್ದರು. ಮಾವನ ಸಾವಿನ ಸುದ್ದಿ ಕಿವಿಗೆ ಬಿದ್ದರೂ, ಪ್ರತಿಭಟನೆ ಮುಕ್ತಾಯವಾಗಿ ಪರಿಸ್ಥಿತಿ ಹತೋಟಿಗೆ ಬರುವವರೆಗೂ ಅವರು ಆಸ್ಪತ್ರೆಗೆ ತೆರಳದೆ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು.
ಅನಾರೋಗ್ಯದ ನಡುವೆಯೂ ಸೇವೆ
ಕೇವಲ ಕುಟುಂಬದ ದುಃಖ ಮಾತ್ರವಲ್ಲ, ಕಳೆದ ಎರಡು ದಿನಗಳಿಂದ ಶಶಿಕುಮಾರ್ ಅವರ ಆರೋಗ್ಯವೂ ಅಷ್ಟಕಷ್ಟೇ ಇತ್ತು. ಕೈಗೆ ಸಿರಿಂಜ್ (IV Drip) ಹಾಕಿಸಿಕೊಂಡಿದ್ದ ಸ್ಥಿತಿಯಲ್ಲೇ ಅವರು ಕಚೇರಿ ಕೆಲಸ ಹಾಗೂ ಬಂದೋಬಸ್ತ್ ಕೆಲಸಗಳಲ್ಲಿ ಭಾಗಿಯಾಗಿದ್ದರು. ಇಂದು ವೈಯಕ್ತಿಕ ನಷ್ಟದ ನಡುವೆಯೂ ಅವರು ತೋರಿದ 'ಕರ್ತವ್ಯ ಪ್ರಜ್ಞೆ' ಪೊಲೀಸ್ ಇಲಾಖೆಯ ಹೆಮ್ಮೆಯನ್ನು ಹೆಚ್ಚಿಸಿದೆ.
ಯಾರು ಈ ಎನ್. ಶಶಿಕುಮಾರ್?
ಎನ್. ಶಶಿಕುಮಾರ್ ಅವರು ಕರ್ನಾಟಕದ ದಕ್ಷ ಐಪಿಎಸ್ ಅಧಿಕಾರಿಗಳಲ್ಲಿ ಒಬ್ಬರು. 2007ನೇ ಬ್ಯಾಚ್ ಐಪಿಎಸ್ ಅಧಿಕಾರಿ. ಇವರು ಮೂಲತಹ ಕರ್ನಾಟಕದ ಚಿತ್ರದುರ್ಗ ಜಿಲ್ಲೆಯವರು. ಬಿಎಸ್ಸಿ (ಕೃಷಿ) ಪದವೀಧರರು. ಮಂಗಳೂರು ಪೊಲೀಸ್ ಕಮಿಷನರ್ ಆಗಿ, ಬೆಂಗಳೂರು ಉತ್ತರ ವಿಭಾಗದ ಡಿಸಿಪಿಯಾಗಿ, ಹಾವೇರಿ ಹಾಗೂ ಚಿಕ್ಕಮಗಳೂರು ಎಸ್ಪಿಯಾಗಿ ಇವರು ಕಾರ್ಯನಿರ್ವಹಿಸಿದ್ದಾರೆ. ಜುಲೈ 2024 ರಿಂದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಸಾರ್ವಜನಿಕರೊಂದಿಗೆ ಸೌಮ್ಯವಾಗಿ ವರ್ತಿಸುವ, ಆದರೆ ಅಪರಾಧಿಗಳ ಪಾಲಿಗೆ ಸಿಂಹಸ್ವಪ್ನವಾಗಿರುವ ಶಶಿಕುಮಾರ್ ಅವರು ಇಂದು ತೋರಿದ ಈ ಕರ್ತವ್ಯ ನಿಷ್ಠೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆಗೆ ಒಳಗಾಗಿದೆ. ಕುಟುಂಬಕ್ಕಿಂತ ಕರ್ತವ್ಯವೇ ದೊಡ್ಡದು ಎಂದು ತೋರಿಸಿಕೊಟ್ಟ ಈ ಅಧಿಕಾರಿಗೆ ಸಾರ್ವಜನಿಕರು ಹ್ಯಾಟ್ಸ್ ಆಫ್ ಹೇಳುತ್ತಿದ್ದಾರೆ.


