ಜಾಗತಿಕ ಐಷಾರಾಮಿ ವಾಹನ ತಯಾರಕ 'ಜಾಗ್ವಾರ್ ಲ್ಯಾಂಡ್ ರೋವರ್' (JLR) ವೆಚ್ಚ ಕಡಿತದ ಭಾಗವಾಗಿ ಮುಂದಿನ ಎರಡು ವರ್ಷಗಳಲ್ಲಿ 4,000 ಉದ್ಯೋಗಗಳನ್ನು ಕಡಿತಗೊಳಿಸುವುದಾಗಿ ಘೋಷಿಸಿದೆ. ಈ ನಿರ್ಧಾರಕ್ಕೆ ಸೈಬರ್ ದಾಳಿ, ಚೀನೀ ಇವಿಗಳ ಪೈಪೋಟಿ, ಮತ್ತು ಹೆಚ್ಚುತ್ತಿರುವ ಉತ್ಪಾದನಾ ವೆಚ್ಚಗಳು ಪ್ರಮುಖ ಕಾರಣಗಳಾಗಿದ್ದು, ಈ ಕಡಿತವು ಪ್ರಮುಖವಾಗಿ ಬ್ರಿಟನ್‌ನಲ್ಲಿರುವ ಆಡಳಿತಾತ್ಮಕ ಹುದ್ದೆಗಳ ಮೇಲೆ ಪರಿಣಾಮ ಬೀರಲಿದೆ.
ಲಂಡನ್: ಜಾಗತಿಕ ಮಟ್ಟದ ಪ್ರಸಿದ್ಧ ಐಷಾರಾಮಿ ವಾಹನ ತಯಾರಿಕಾ ಸಂಸ್ಥೆಯಾದ 'ಜಾಗ್ವಾರ್ ಲ್ಯಾಂಡ್ ರೋವರ್' , ತನ್ನ ಕಾರ್ಯಾಚರಣೆಯ ವೆಚ್ಚವನ್ನು ತಗ್ಗಿಸುವ ಉದ್ದೇಶದಿಂದ ಮುಂದಿನ ಎರಡು ವರ್ಷಗಳಲ್ಲಿ ಸುಮಾರು 4,000 ಉದ್ಯೋಗಗಳನ್ನು ಕಡಿತಗೊಳಿಸುವುದಾಗಿ ಅಧಿಕೃತವಾಗಿ ಘೋಷಿಸಿದೆ. ಸಂಸ್ಥೆಯ ಒಟ್ಟಾರೆ ವೆಚ್ಚದಲ್ಲಿ ಸುಮಾರು ಅಂದಾಜು ₹19,000 ಕೋಟಿಗೂ ಹೆಚ್ಚು ಹಣ ಉಳಿಸುವ ಬೃಹತ್ ಯೋಜನೆಯ ಭಾಗವಾಗಿ ಈ ಕಠಿಣ ನಿರ್ಧಾರ ಕೈಗೊಳ್ಳಲಾಗಿದೆ.
ಈ ಉದ್ಯೋಗ ನಷ್ಟವು ಪ್ರಮುಖವಾಗಿ ಆಡಳಿತ, ನಿರ್ವಹಣೆ ಮತ್ತು ಕಚೇರಿ ಸಂಬಂಧಿತ ಹುದ್ದೆಗಳ ಮೇಲೆ ತೀವ್ರ ಪರಿಣಾಮ ಬೀರಲಿದೆ. JLR ಸಂಸ್ಥೆಯು ಬ್ರಿಟನ್ ಒಂದರಲ್ಲೇ 34,000ಕ್ಕೂ ಹೆಚ್ಚು ನೌಕರರನ್ನು ಹೊಂದಿದ್ದು, ಜಾಗತಿಕ ಕಾರ್ಯಪಡೆಯ ಪೈಕಿ ಹೆಚ್ಚಿನ ಸಂಖ್ಯೆಯ ಉದ್ಯೋಗ ಕಡಿತವು ಬ್ರಿಟನ್ ಕಾರ್ಯಾಚರಣೆಯಲ್ಲೇ ನಡೆಯಲಿದೆ. ಬ್ರಿಟನ್ ಹೊರತಾಗಿ ವಿದೇಶಗಳಲ್ಲಿ ಸಂಸ್ಥೆಯು 10,000ಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿದೆ.
ಉದ್ಯೋಗ ವಜಾಕ್ಕೆ ಪ್ರಮುಖ ಕಾರಣಗಳು:
ಕಳೆದ ವರ್ಷ ಸಂಸ್ಥೆಯ ಮೇಲೆ ನಡೆದ ಭಾರಿ ಸೈಬರ್ ದಾಳಿಯಿಂದಾಗಿ ಕಾರು ಉತ್ಪಾದನೆ ಸಂಪೂರ್ಣ ಸ್ಥಗಿತಗೊಂಡಿತ್ತು. ಈ ನಷ್ಟದಿಂದ ಕಂಪನಿ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ.
ಜಾಗತಿಕ ಮಾರುಕಟ್ಟೆಯಲ್ಲಿ ಅಗ್ಗದ ದರದ ಚೀನೀ ಎಲೆಕ್ಟ್ರಿಕ್ ವಾಹನಗಳ (EV) ಪೈಪೋಟಿ ಹೆಚ್ಚಾಗಿರುವುದರಿಂದ JLR ಕಾರುಗಳ ಮಾರಾಟದಲ್ಲಿ ಗಣನೀಯ ಕುಸಿತ ಕಂಡಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿರುವ ಆಮದು ಸುಂಕ, ಏರಿಕೆಯಾಗುತ್ತಿರುವ ಉತ್ಪಾದನಾ ವೆಚ್ಚ ಹಾಗೂ ಭೌಗೋಳಿಕ-ರಾಜಕೀಯ ಅನಿಶ್ಚಿತತೆಗಳು ಸಂಸ್ಥೆಗೆ ಭಾರಿ ನಷ್ಟ ಉಂಟುಮಾಡಿವೆ.
ಕಂಪನಿಯ ಸಿಇಒ ಅಭಯ:
ಈ ಕುರಿತು ಪ್ರತಿಕ್ರಿಯಿಸಿರುವ ಜಿಎಲ್‌ಆರ್ ಸಿಇಒ ಪಿ.ಬಿ. ಬಾಲಾಜಿ, ತಾಂತ್ರಿಕ ಬದಲಾವಣೆ ಹಾಗೂ ಮಾರುಕಟ್ಟೆಯ ತೀವ್ರ ಸ್ಪರ್ಧೆಯಿಂದಾಗಿ ಆಟೋಮೊಬೈಲ್ ಉದ್ಯಮವು ಅತ್ಯಂತ ಸವಾಲಿನ ಹಂತದಲ್ಲಿದೆ. ದೀರ್ಘಾವಧಿಯ ಯಶಸ್ಸಿಗಾಗಿ ನಾವು ಹೊಸ ಕಾರ್ಯತಂತ್ರವನ್ನು ರೂಪಿಸುತ್ತಿದ್ದೇವೆ. ಈ ಪ್ರಕ್ರಿಯೆಯಲ್ಲಿ ಕೆಲಸ ಕಳೆದುಕೊಳ್ಳುವ ಪ್ರತಿಯೊಬ್ಬ ಸಹೋದ್ಯೋಗಿಗೂ ನ್ಯಾಯ, ಕಾಳಜಿ ಮತ್ತು ಗೌರವಯುತವಾದ ಬೆಂಬಲ ನೀಡಲು ನಮ್ಮ ಸಂಸ್ಥೆ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.
ಜೆಎಲ್‌ಆರ್ ಸಂಸ್ಥೆಯು ಸೋಲಿಹಲ್, ವೆಸ್ಟ್ ಮಿಡ್‌ಲ್ಯಾಂಡ್ಸ್ ಮತ್ತು ಮರ್ಸಿಸೈಡ್‌ನ ಹೇಲ್‌ವುಡ್ ಸೇರಿದಂತೆ ಯುಕೆಯ ಪ್ರಮುಖ ಕಾರ್ಖಾನೆಗಳಲ್ಲಿ ಉತ್ಪಾದನಾ ಘಟಕಗಳನ್ನು ಹೊಂದಿದೆ. ಉತ್ಪಾದನಾ ವಿಭಾಗದ ಕಾರ್ಮಿಕರಿಗಿಂತ ಹೆಚ್ಚಾಗಿ, 26,000 ಸಂಬಳ ಪಡೆಯುವ ಆಡಳಿತಾತ್ಮಕ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡು ಸ್ವಯಂಪ್ರೇರಿತ ನಿವೃತ್ತಿ ಇಲ್ಲವೇ ವಜಾ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ.
ಸರ್ಕಾರಿ ಅಭಯವಿಲ್ಲ ಎಂದ ಬ್ರಿಟನ್:
ಉದ್ಯೋಗ ಕಡಿತದ ವರದಿಗಳು ಹೊರಬಿದ್ದ ಬೆನ್ನಲ್ಲೇ ಬ್ರಿಟನ್‌ನ ಉದ್ಯಮ ಕಾರ್ಯದರ್ಶಿ ಜೊನಾಥನ್ ರೆನಾಲ್ಡ್ಸ್, ಜಾಗ್ವಾರ್ ಲ್ಯಾಂಡ್ ರೋವರ್ ಸಂಸ್ಥೆಗೆ ಸರ್ಕಾರದಿಂದ ಯಾವುದೇ ನೇರ ಹಣಕಾಸು ನೆರವು ನೀಡುವುದನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ಮಾರುಕಟ್ಟೆ ಸ್ಪರ್ಧೆಗೆ ತಕ್ಕಂತೆ ಕಾರ್ಯಪಡೆಯನ್ನು ಮರುಸಂಘಟಿಸುವುದು ಸಂಸ್ಥೆಯ ನಿರ್ಧಾರ. ಸಂಕಷ್ಟದಲ್ಲಿರುವ ನೌಕರರಿಗೆ ಹೊಸ ಉದ್ಯೋಗ ಕಂಡುಕೊಳ್ಳಲು ಸರ್ಕಾರ ಸಹಾಯ ಮಾಡುತ್ತದೆಯೇ ಹೊರತು, ಕಂಪನಿಗೆ ನೇರ ಆರ್ಥಿಕ ನೆರವು ನೀಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ತೀವ್ರ ಆಕ್ರೋಶ ಮತ್ತು ರಾಜಕೀಯ ಚರ್ಚೆ:
ಬ್ರಿಟನ್‌ನ ಪ್ರಮುಖ 'ಯುನೈಟೆಡ್ ಟ್ರೇಡ್ ಯೂನಿಯನ್' ನಾಯಕಿ ಶರಾನ್ ಗ್ರಹಾಂ, ಸರ್ಕಾರದ ಅಸಮರ್ಪಕ ZEV (ಶೂನ್ಯ ಹೊರಸೂಸುವಿಕೆ ವಾಹನ) ನಿಯಮಗಳು ಹಾಗೂ ಅತಿಯಾದ ಕೈಗಾರಿಕಾ ಇಂಧನ ವೆಚ್ಚವೇ ಬ್ರಿಟಿಷ್ ವಾಹನ ಉದ್ಯಮಕ್ಕೆ ಮುಳುವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂತೆಯೇ, ವ್ಯಾಪಾರ ಸಮಿತಿಯ ಅಧ್ಯಕ್ಷ ಲಿಯಾಮ್ ಬೈರ್ನ್, ಈ ನಿರ್ಧಾರವು ನೂರಾರು ಕುಟುಂಬಗಳಿಗೆ ನೀಡಿದ ಭಾರಿ ಆಘಾತವಾಗಿದ್ದು, ಕೆಲಸ ಕಳೆದುಕೊಳ್ಳುವವರಿಗೆ ಸರ್ಕಾರ ತಕ್ಷಣವೇ ಪರ್ಯಾಯ ಉದ್ಯೋಗದ ಭರವಸೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.


