ಕೆಪಿಎಸ್‌ಸಿ ಪರೀಕ್ಷಾ ಅಕ್ರಮಕ್ಕೆ ಸ್ಫೋಟಕ ಟ್ವಿಸ್ಟ್: ದೂರುದಾರ ಮಂಜುನಾಥ್‌ಗೆ 7 ನಿಮಿಷಗಳ ಬೆದರಿಕೆ ಆಡಿಯೋ! ‘ಆಕೆ ಸೂ*ಸೈಡ್ ಮಾಡ್ಕೊಂಡ್ರೆ ಯಾರು ಹೊಣೆ?’ ಎಂದು ಬೆದರಿಕೆ ಹಾಕಿದ ಪ್ರಕರಣ ನಡೆದಿದೆ. ಈ ಬಗ್ಗೆ ದೂರುದಾರ ಮಂಜುನಾಥ್ ಅವರು ಆಡಿಯೋ ಬಿಡುಗಡೆ ಮಾಡಿದ್ದು, ಆರೋಪಿಗಳ ಸಂಬಂಧಿಕರ ಮೇಲೆ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಬೆಂಗಳೂರು (ಸೆ.07): ರಾಜ್ಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿರುವ ಕೆಪಿಎಸ್‌ಸಿ (KPSC) ಪಶು ವೈದ್ಯಕೀಯ ಅಧಿಕಾರಿಗಳ ನೇಮಕಾತಿ ಪರೀಕ್ಷಾ ಅಕ್ರಮ ಪ್ರಕರಣ ದಿನಕ್ಕೊಂದು ಆಘಾತಕಾರಿ ತಿರುವು ಪಡೆಯುತ್ತಿದೆ. ಪರೀಕ್ಷೆಯಲ್ಲಿ ನಡೆದಿರುವ ಅಕ್ರಮದ ವಿರುದ್ಧ ಧ್ವನಿಯೆತ್ತಿ ಎಫ್‌ಐಆರ್ ದಾಖಲಿಸಿದ್ದ ದೂರುದಾರ ಡಾ. ಮಂಜುನಾಥ್ ಅವರಿಗೆ ಸುಮಾರು 7 ನಿಮಿಷಗಳ ಕಾಲ ನಿರಂತರ ಬೆದರಿಕೆ ಕರೆ ಮಾಡಿರುವ ಆಡಿಯೋ ಸಂಭಾಷಣೆ ಈಗ ಹೊರಬಿದ್ದಿದ್ದು, ಇಡೀ ಪ್ರಕರಣದಲ್ಲಿ ಸಂಚಲನ ಸೃಷ್ಟಿಸಿದೆ. ಪರೀಕ್ಷೆಯಲ್ಲಿ ಅಕ್ರಮವಾಗಿ ತೇರ್ಗಡೆಯಾಗಿ ಎಫ್‌ಐಆರ್‌ನಲ್ಲಿ ಹೆಸರಿರುವ ಅಭ್ಯರ್ಥಿಯೊಬ್ಬರ ಸಂಬಂಧಿಕರು ಹಾಗೂ ಸ್ನೇಹಿತರೇ ಈ ಬೆದರಿಕೆ ಕರೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
7 ನಿಮಿಷಗಳ ಆಡಿಯೋದಲ್ಲಿ ನಡೆದಿದ್ದೇನು? ಧಮಕಿಯ ಹೈಲೈಟ್ಸ್:
ವೈರಲ್ ಆಗಿರುವ 7 ನಿಮಿಷಗಳ ಫೋನ್ ಸಂಭಾಷಣೆಯಲ್ಲಿ ದೂರುದಾರರನ್ನು ತೀವ್ರವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಾನಸಿಕವಾಗಿ ಕುಗ್ಗಿಸುವ ಯತ್ನ ನಡೆದಿದೆ. 'ನೀನು ಎಲ್ಲಿರುತ್ತೀಯಾ? ಬೆಂಗಳೂರಿನಲ್ಲಿ ಇರ್ತೀಯಾ? ನಿನ್ನನ್ನ ಸುಮ್ಮನೆ ಬಿಡಲ್ಲ, ಬೆಂಗಳೂರಿಗೆ ಬರುತ್ತೇವೆ. ನಿನ್ನ ಇಡೀ ಜೀವನವೇ ಹಾಳಾಗುತ್ತೆ. ನಿಮ್ಮ ಮನೆಗೆ 5 ರೂಪಾಯಿ ರೇಷನ್ ಕೂಡ ಬಾರದಂತೆ ಮಾಡುತ್ತೇವೆ' ಎಂದು ರೌಡಿಸಂ ಶೈಲಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಸಾವಿನ ಬ್ಲ್ಯಾಕ್‌ಮೇಲ್: 'ನ್ಯೂಸ್‌ನಲ್ಲೆಲ್ಲಾ ನಮ್ಮವರ ಹೆಸರು ಬರ್ತಾ ಇದೆ. ಎಫ್‌ಐಆರ್ ಆಗಿ ನಂಬರ್ ಜನರೇಟ್ ಆಗಿದೆ. ಆಕೆ ಮನನೊಂದು ಸೂ*ಸೈಡ್ ಮಾಡಿಕೊಂಡರೆ ಯಾರು ಹೊಣೆ? ಅದಕ್ಕೆ ನೀನೇ ಹೊಣೆಯಾಗಬೇಕಾಗುತ್ತದೆ' ಎಂದು ದೂರುದಾರರ ಮೇಲೆ ಗೂಬೆಕೂರಿಸಲು ಯತ್ನಿಸಲಾಗಿದೆ. 'ನೀವು ಏನು ಪ್ರೂಫ್ ಇಟ್ಟುಕೊಂಡು ದೂರು ಕೊಟ್ರಿ? ಫೈನಲ್ ಲಿಸ್ಟ್ ಬಿಟ್ಟಿದ್ದು ಐಎಎಸ್ (IAS) ಆಫೀಸರ್. ಎಫ್‌ಐಆರ್ ತೆಗೆಯುವ ಪವರ್ ಯಾರಿಗಿದೆ? ನಮ್ಮ ಕಡೆಯೂ ಲಾಯರ್‌ಗಳು ಇದ್ದಾರೆ, ನಿಮ್ಮ ಮೇಲೆಯೇ ಕೇಸ್ ಹಾಕ್ತೀವಿ' ಎಂದು ಸವಾಲು ಹಾಕಿದ್ದಾರೆ. 'ಯಾರು ಅಕ್ರಮ ಮಾಡಿದ್ದಾರೋ ಅವರನ್ನ ಹಿಡಿಯಿರಿ, ನಾವು ನಿಮಗೆ ಶಾಭಾಸ್‌ಗಿರಿ ಕೊಡ್ತೀವಿ, ನೀವು ಹೋರಾಟ ಮಾಡಿದರೆ ನಾವೇ ಊಟ ಹಾಕ್ತೀವಿ. ಆದರೆ ಸರಿಯಾಗಿ ಪರೀಕ್ಷೆ ಬರೆದವರ ತೇಜೋವಧೆ ಮಾಡಿದರೆ ಪರಿಣಾಮ ನೆಟ್ಟಗಿರಲ್ಲ' ಎಂದು ಆಕ್ರೋಶ ಹೊರಹಾಕಿದ್ದಾರೆ.
ದೂರುದಾರರ ಸ್ಪಷ್ಟನೆ:
ಬೆದರಿಕೆ ಕರೆಯ ನಡುವೆಯೂ ಧೃತಿಗೆಡದ ದೂರುದಾರ ಮಂಜುನಾಥ್, 'ನಾವು ಯಾರ ವಿರುದ್ಧವೂ ವೈಯಕ್ತಿಕ ದ್ವೇಷದಿಂದ ದೂರು ನೀಡಿಲ್ಲ. ಪರೀಕ್ಷೆಯಲ್ಲಿ ಅಸಹಜವಾಗಿ ಹೆಚ್ಚು ಅಂಕಗಳು ಬಂದಿರುವ ಬಗ್ಗೆ ಬಲವಾದ ಅನುಮಾನ ಮೂಡಿದ್ದರಿಂದಲೇ ನಿಯಮಾನುಸಾರ ತನಿಖೆಗೆ ಒತ್ತಾಯಿಸಿ ದೂರು ದಾಖಲಿಸಿದ್ದೇವೆ' ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಾಮಾಣಿಕವಾಗಿ ಓದಿ ಪರೀಕ್ಷೆ ಬರೆದ ಲಕ್ಷಾಂತರ ನಿರುದ್ಯೋಗಿ ಯುವಕರ ಪರವಾಗಿ ನಿಂತಿರುವ ದೂರುದಾರರಿಗೆ ಈ ಮಟ್ಟದ ಬೆದರಿಕೆ ಕರೆಗಳು ಬರುತ್ತಿರುವುದು ವ್ಯವಸ್ಥೆಯ ಲೋಪವನ್ನು ಬೆಟ್ಟುಮಾಡಿದೆ. ಕೂಡಲೇ ಪೊಲೀಸರು ಈ 7 ನಿಮಿಷಗಳ ಆಡಿಯೋ ಆಧಾರದ ಮೇಲೆ ಬೆದರಿಕೆ ಹಾಕಿದವರನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕ ವಲಯದಲ್ಲಿ ಆಗ್ರಹ ಕೇಳಿಬಂದಿದೆ.


