ಡಿಜಿಟಲ್ ಯುಗದಲ್ಲಿ ಹೊಸ ಮಾದರಿಯ ಸ್ಕ್ಯಾಮ್‌ವೊಂದು ಬೆಳಕಿಗೆ ಬಂದಿದೆ. ವಂಚಕರು ಜನನಿಬಿಡ ಪ್ರದೇಶಗಳಲ್ಲಿ ನಿಮ್ಮ ಮೊಬೈಲ್‌ನ NFC ವೈಶಿಷ್ಟ್ಯವನ್ನು ಬಳಸಿ, ನಿಮಗೆ ತಿಳಿಯದಂತೆ ಬ್ಯಾಂಕ್ ಖಾತೆಯಿಂದ ಹಣವನ್ನು ಕದಿಯುತ್ತಿದ್ದಾರೆ. ಈ ವಂಚನೆಯಿಂದ ಪಾರಾಗಲು ನಿಮ್ಮ ಮೊಬೈಲ್‌ನಲ್ಲಿ NFC ಆಯ್ಕೆಯನ್ನು ಆಫ್ ಮಾಡುವುದು ಹೇಗೆಂದು ಈ ಲೇಖನದಲ್ಲಿ ವಿವರಿಸಲಾಗಿದೆ.
ಮೋಸ ಹೋಗುವವರು ಎಚ್ಚರವಾಗುತ್ತಿದ್ದಂತೆಯೇ, ಮೋಸ ಮಾಡುವವರು ಇನ್ನೊಂದು ಹೊಸ ಹೊಸ ತಂತ್ರಗಳನ್ನು ಹುಡುಕುತ್ತಲೇ ಇರುತ್ತಾರೆ. ಅದರಲ್ಲಿಯೂ ಈ ಡಿಜಿಟಲ್ ಯುಗದಲ್ಲಿ, ಮೋಸ ಮಾಡುವುದು ಸಿಕ್ಕಾಪಟ್ಟೆ ಸುಲಭವಾಗಿಬಿಟ್ಟಿದೆ. ಜೇಬಲ್ಲಿ ಹಣ ಇಲ್ಲದಿದ್ದರೆ ಏನಂತೆ, ಮೊಬೈಲ್ ಅಂತೂ ಎಲ್ಲರ ಬಳಿಯೂ ಇದ್ದೇ ಇರತ್ತಲ್ಲ. ಅದೇ ಈಗ ಈ ಹೊಸ ಸ್ಕ್ಯಾಮ್ ಮಾಡುವವರ ಬಂಡವಾಳ. ನಿಮ್ಮ ಜೇಬಿನಲ್ಲಿ ಮೊಬೈಲ್ ಇದ್ದರೆ ಸಾಕು, ನಿಮಗೆ ಗೊತ್ತಿಲ್ಲದಂತೆಯೇ ಬ್ಯಾಂಕ್ನಲ್ಲಿ ಇರುವ ಹಣ ಯಾಮಾರಿ ಹೋಗುತ್ತದೆ.
ಆನ್ಲೈನ್ ಫ್ರಾಡ್, ಸೈಬರ್ ಕ್ರೈಂ ಎಂದರೆ ಇಲ್ಲಿಯವರೆಗೆ ನೀವು ನಿಮ್ಮ ಮೊಬೈಲ್ಗೆ ಏನೋ ಲಿಂಕ್ ಬಂದಿರುತ್ತೆ, ಅದನ್ನು ಕ್ಲಿಕ್ ಮಾಡಬಾರದು, ಎಪಿಕೆ ಫೈಲ್ ಕ್ಲಿಕ್ ಮಾಡಿದ್ರೆ ಹಣ ಹೋಗತ್ತೆ, ಬಂದಿರುವ ಓಟಿಪಿಯನ್ನು ಯಾರ ಜೊತೆಗಾದ್ರೂ ಶೇರ್ ಮಾಡಿದ್ರೆ ಬ್ಯಾಂಕ್ ಅಕೌಂಟ್ ಖಾಲಿಯಾಗತ್ತೆ, ಫೋನ್ ಹ್ಯಾಕ್ ಆದ್ರೆ ದುಡ್ಡು ಹೋಗತ್ತೆ... ಇವೆಲ್ಲವೂ ಕೇಳಿರುತ್ತೀರಿ. ಆದರೆ ಈ ಫ್ರಾಡ್ ಆ ರೀತಿ ಅಲ್ಲ, ಇದ್ಯಾವುದೂ ನಿಮಗೆ ಬರಲ್ಲ. ಆದರೆ ಜೇಬಿನಲ್ಲಿ ಮೊಬೈಲ್ ಇದ್ದರೆ ಸಾಕು, ಒಂದು ಮಷಿನ್ ತಂದು, ಜನ ನಿಬಿಡ ಪ್ರದೇಶದಲ್ಲಿ ನಿಮ್ಮ ಜೇಬಿನ ಬಳಿ ಅದನ್ನು ಹಿಡಿದರೆ, ಅಲ್ಲಿರುವ ಮೊಬೈಲ್ನಿಂದ ನಿಮ್ಮ ಬ್ಯಾಂಕ್ ಅಕೌಂಟ್ನಲ್ಲಿರೋ ಹಣ ಖತಂ!
ಪೊಲೀಸರ ಎಚ್ಚರಿಕೆ
ಈ ಬಗ್ಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಕಾರಣ ಮೊಬೈಲ್ ಫೋನ್ನಲ್ಲಿ ಇರುವ NFC ಆಪ್ಷನ್. ಇದರ ಸಹಾಯದಿಂದಲೇ ಸ್ಕ್ಯಾಮ್ ಮಾಡುವವರು ಸುಲಭದಲ್ಲಿ ಹಣವನ್ನು ಯಾಮಾರಿಸುತ್ತಿರುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. NFC ಎಂದರೆ ನಿಯರ್ ಫೀಲ್ಡ್ ಕಮ್ಯುನಿಕೇಷನ್. ಇದು ಒಂದು ಅಲ್ಪ-ಶ್ರೇಣಿಯ ವೈರ್‌ಲೆಸ್ ತಂತ್ರಜ್ಞಾನವಾಗಿದ್ದು, ಇದು ನಿಮ್ಮ ಮೊಬೈಲ್ ಫೋನ್ ಅನ್ನು ಮತ್ತೊಂದು ಸಾಧನ ಅಥವಾ ರೀಡರ್‌ನೊಂದಿಗೆ ಸಣ್ಣ ಪ್ರಮಾಣದ ಡೇಟಾವನ್ನು ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ, ಅವುಗಳನ್ನು ಬಹಳ ಹತ್ತಿರದಲ್ಲಿ ಇರಿಸಿದಾಗ - ಸಾಮಾನ್ಯವಾಗಿ 4 ಸೆಂಟಿಮೀಟರ್‌ಗಳ ಒಳಗೆ (1.5 ಇಂಚುಗಳು). ಆದರೆ ಇದನ್ನೇ ಬಳಸಿಕೊಂಡು ಈಗ ವಂಚನೆ ಮಾಡಲಾಗುತ್ತಿದೆ.
ಇಲ್ಲಿದೆ ಮಾಹಿತಿ
ಹಾಗಿದ್ದರೆ ಇದರಿಂದ ಪಾರಾಗಲು ಏನು ಮಾಡಬೇಕು ಎನ್ನುವ ಬಗ್ಗೆಯೂ ಇದರಲ್ಲಿ ಮಾಹಿತಿ ನೀಡಲಾಗಿದೆ.
ಮೊದಲು ಮೊಬೈಲ್ ಸೆಟ್ಟಿಂಗ್ಸ್ಗೆ ಹೋಗಿ ಅಲ್ಲಿ Connection ಸಿಕ್ಕರೆ ಅದರ ಮೇಲೆ ಕ್ಲಿಕ್ ಮಾಡಿ
ಆ ಬಳಿಕ NFC and contactless Payment ಆಪ್ಷನ್ ಸಿಗುತ್ತದೆ. ಅದು ಆನ್ ಇದ್ದರೆ ಆಫ್ ಮಾಡಿ ಸೇಫ್ ಆಗಿರಿ.
ಒಂದು ವೇಳೆ ನಿಮ್ಮ ಫೋನ್ನಲ್ಲಿ ಇಲ್ಲಿ ಸಿಗದೇ ಹೋದರೆ, ಸೆಟ್ಟಿಂಗ್ಸ್ನಲ್ಲಿ More Connectivity Option ಕ್ಲಿಕ್ ಮಾಡಿದರೆ ಸಿಗುತ್ತದೆ.
ರೆಡ್ಮೀನ ಕೆಲವು ಮಾಡೆಲ್ ಸೇರಿದಂತೆ ಕೆಲವು ಫೋನ್ಗಳಲ್ಲಿ ಈ ಆಪ್ಷನ್ ಇಲ್ಲ. ಆದ್ದರಿಂದ ನೀವು ನೆಮ್ಮದಿಯಿಂದ ಇರಬಹುದು.


