ವಾರಾಣಸಿಯ ಪೊಲೀಸ್ ಕಾನ್‌ಸ್ಟೇಬಲ್ ಒಬ್ಬರು, ನಿರಂತರ ಕರ್ತವ್ಯದ ಒತ್ತಡದಿಂದ 'ನನ್ನಲ್ಲಿ ವಿಶೇಷ ಶಕ್ತಿ ಇಲ್ಲ' ಎಂದು ವಾಟ್ಸಾಪ್ ಗ್ರೂಪ್‌ನಲ್ಲಿ ರಾಜೀನಾಮೆ ಪತ್ರ ಹಂಚಿಕೊಂಡಿದ್ದಾರೆ. ಕರ್ತವ್ಯ ಹಂಚಿಕೆಯಲ್ಲಿನ ತಾರತಮ್ಯವನ್ನು ಅವರು ಆರೋಪಿಸಿದ್ದಾರೆ.
ಲಖನೌ (ಸೆ.10): "ನನ್ನ ಬಳಿ ಯಾವುದೇ ವಿಶೇಷ ಶಕ್ತಿ ಇಲ್ಲ. ಹೀಗಾಗಿ ಪ್ರತಿದಿನ 24 ಗಂಟೆಯೂ ಕರ್ತವ್ಯ ನಿರ್ವಹಿಸಲು ನನ್ನಿಂದ ಸಾಧ್ಯವಿಲ್ಲ. ದಯವಿಟ್ಟು ನನ್ನನ್ನು ಸೇವೆಯಿಂದ ಮುಕ್ತಗೊಳಿಸಿ!" - ಇದು ಉತ್ತರ ಪ್ರದೇಶದ ವಾರಾಣಸಿಯ ರಾಮ್‌ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾನ್‌ಸ್ಟೇಬಲ್ ಒಬ್ಬರು ಠಾಣೆಯ ಅಧಿಕೃತ ವಾಟ್ಸಾಪ್ ಗ್ರೂಪ್‌ನಲ್ಲಿ ಪೋಸ್ಟ್ ಮಾಡಿದ ರಾಜೀನಾಮೆ ಪತ್ರದ ಸಾಲುಗಳು!
ಕಾನ್‌ಸ್ಟೇಬಲ್ ದೇವಗನ್ ಕುಮಾರ್ ಚೌಹಾಣ್ ಎಂಬುವರು ಸೆಪ್ಟೆಂಬರ್ 7ರಂದು ಈ ರಾಜೀನಾಮೆ ಪತ್ರವನ್ನು ವಾಟ್ಸಾಪ್ ಗ್ರೂಪ್‌ನಲ್ಲಿ ಹಂಚಿಕೊಂಡಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳಲ್ಲಿ ತೀವ್ರ ಅಚ್ಚರಿ ಉಂಟುಮಾಡಿತ್ತು. ರಾಜೀನಾಮೆ ಪತ್ರದಲ್ಲಿದ್ದ ವಿಭಿನ್ನ ಹಾಗೂ ಖಾರವಾದ ಪದಬಳಕೆಯನ್ನು ಕಂಡ ಹಿರಿಯ ಅಧಿಕಾರಿಗಳು, ತಕ್ಷಣವೇ ಸಂಬಂಧಪಟ್ಟ ಠಾಣಾಧಿಕಾರಿ (SHO) ಹಾಗೂ ಕಾನ್‌ಸ್ಟೇಬಲ್ ಇಬ್ಬರನ್ನೂ ಕರೆಸಿ ಘಟನೆಯ ಹಿನ್ನೆಲೆಯನ್ನು ವಿಚಾರಿಸಿದ್ದಾರೆ.
'ವಿಶೇಷ ಶಕ್ತಿ ನನಗಿಲ್ಲ':
ಪೊಲೀಸ್ ಕಮಿಷನರ್‌ಗೆ ಉದ್ದೇಶಿಸಿ ಬರೆದ ಪತ್ರದಲ್ಲಿ ಚೌಹಾಣ್, ನಾನು ಪ್ರಸ್ತುತ ಪ್ರತಿದಿನ 24x7 ಗಂಟೆಗಳ ಕಾಲ ಕೆಲಸ ಮಾಡಲು ಸಮರ್ಥನಾಗಿಲ್ಲ. ನನ್ನ ಬಳಿ ಯಾವುದೇ ವಿಶೇಷ ಶಕ್ತಿಗಳಿಲ್ಲದಿರುವುದರಿಂದ, ನನ್ನನ್ನು ಕರ್ತವ್ಯದಿಂದ ಮುಕ್ತಗೊಳಿಸಬೇಕೆಂದು ವಿನಂತಿಸುತ್ತೇನೆ ಎಂದು ಬರೆದಿದ್ದರು.
ಪೋಲಿಸ್ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ಈ ಕಾನ್‌ಸ್ಟೇಬಲ್ ಕಳೆದ ಕೆಲವು ದಿನಗಳಿಂದ ಟ್ರಾಮಾ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಯೊಬ್ಬರ ಭದ್ರತಾ ಕರ್ತವ್ಯಕ್ಕೆ ಸತತವಾಗಿ ನಿಯೋಜನೆಗೊಂಡು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು. ಜೊತೆಗೆ, ಅವರ ಮನೆಯಲ್ಲೂ ಕೆಲವು ವೈಯಕ್ತಿಕ ಹಾಗೂ ಕುಟುಂಬದ ಸಮಸ್ಯೆಗಳಿದ್ದವು.
ಕರ್ತವ್ಯ ಹಂಚಿಕೆಯಲ್ಲಿ ತಾರತಮ್ಯದ ಆರೋಪ
ಇಷ್ಟೇ ಅಲ್ಲದೆ, ತಮ್ಮ ಠಾಣೆಯಲ್ಲಿ ಕರ್ತವ್ಯಗಳನ್ನು (Duty Allocation) ಹಂಚಿಕೆ ಮಾಡುವ ವಿಧಾನದ ಬಗ್ಗೆಯೂ ಕಾನ್‌ಸ್ಟೇಬಲ್ ಚೌಹಾಣ್ ತೀವ್ರ ಕಳವಳ ಮತ್ತು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಠಾಣೆಯ ಹೆಡ್ ಕಾನ್‌ಸ್ಟೇಬಲ್ (ದಿವಾನ್) ವಿರುದ್ಧ ಅಕ್ರಮ ಮತ್ತು ತಾರತಮ್ಯದ ಆರೋಪ ಮಾಡಿದ ಚೌಹಾಣ್, ದಿವಾನ್ ಅವರಿಗೆ ಆಪ್ತರಾಗಿದ್ದ ಕೆಲವು ಸಿಬ್ಬಂದಿಗೆ ಸುಲಭವಾದ ಕೆಲಸಗಳನ್ನು ಹಾಗೂ ವಿಶ್ರಾಂತಿಯನ್ನು ನೀಡಲಾಗುತ್ತಿತ್ತು. ಆದರೆ ಇತರ ಕಾನ್‌ಸ್ಟೇಬಲ್‌ಗಳಿಗೆ ಹಗಲು-ರಾತ್ರಿ ಎನ್ನದೆ ದಿನದ 24 ಗಂಟೆಯೂ ಸತತವಾಗಿ ಕೆಲಸ ನೀಡುವ ಯತ್ನ ನಡೆಯುತ್ತಿತ್ತು ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ರಾಜೀನಾಮೆ ಪತ್ರವು ಇಲಾಖೆಯೊಳಗೆ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಪೊಲೀಸರು ಎದುರಿಸುತ್ತಿರುವ ಸುದೀರ್ಘ ಕರ್ತವ್ಯದ ಅವಧಿ ಹಾಗೂ ಮಾನಸಿಕ ಒತ್ತಡದ ಸಮಸ್ಯೆಯನ್ನು ಎತ್ತಿ ತೋರಿಸಿದೆ.
ಕೌನ್ಸೆಲಿಂಗ್ ನಂತರ ನಿರ್ಧಾರ ಹಿಂಪಡೆದ ಕಾನ್‌ಸ್ಟೇಬಲ್
ಈ ಕುರಿತು ಮಾಹಿತಿ ನೀಡಿರುವ ಸಹಾಯಕ ಪೊಲೀಸ್ ಕಮಿಷನರ್ (ACP) ವಿಜಯ್ ಪ್ರತಾಪ್ ಸಿಂಗ್, ಕಾನ್‌ಸ್ಟೇಬಲ್ ಚೌಹಾಣ್ ಸೆಪ್ಟೆಂಬರ್ 5 ರ ರಾತ್ರಿ ತಮ್ಮ ಕರ್ತವ್ಯ ಮುಗಿಸಿ ಮನೆಗೆ ತೆರಳಿದ್ದರು. ಆದರೆ ಮರುದಿನವೇ ಮತ್ತೆ ಟ್ರಾಮಾ ಸೆಂಟರ್‌ನಲ್ಲಿರುವ ರೋಗಿಯೊಂದಿಗೆ ಹೋಗಬೇಕು ಎಂದು ಅವರಿಗೆ ತಿಳಿಸಲಾಗಿತ್ತು. ಅವರು ಕುಟುಂಬದ ಸಮಸ್ಯೆಗಳಿಂದಲೂ ಬಳಲುತ್ತಿದ್ದರು, ಹೀಗಾಗಿ ತೀವ್ರ ಮಾನಸಿಕ ಒತ್ತಡದಲ್ಲಿದ್ದಾಗ ಈ ರಾಜೀನಾಮೆ ನಿರ್ಧಾರ ತೆಗೆದುಕೊಂಡಂತೆ ತೋರುತ್ತದೆ ಎಂದಿದ್ದಾರೆ.
ತದನಂತರ ನಡೆಸಿದ ದೂರವಾಣಿ ಸಂಭಾಷಣೆಯ ವೇಳೆ, ತಾವು ಪೊಲೀಸ್ ಸೇವೆಯಲ್ಲೇ ಮುಂದುವರಿಯಲು ಬಯಸುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ ಎಂದು ಎಸಿಪಿ ತಿಳಿಸಿದ್ದಾರೆ.
ಹಿರಿಯ ಅಧಿಕಾರಿಗಳ ಮಧ್ಯಪ್ರವೇಶದ ನಂತರ ಚೌಹಾಣ್ ಅವರಿಗೆ ಸೂಕ್ತ ಕೌನ್ಸೆಲಿಂಗ್ ನೀಡಲಾಯಿತು. ಅವರ ಸ್ವಯಂಪ್ರೇರಿತ ರಾಜೀನಾಮೆ ಮನವಿಯನ್ನು ನಿರಾಕರಿಸಲಾಗಿದ್ದು, ತಾವು ಪೊಲೀಸ್ ಕಾನ್‌ಸ್ಟೇಬಲ್ ಆಗಿ ಸೇವೆಯನ್ನು ಮುಂದುವರಿಸುವುದಾಗಿ ಅವರು ತಿಳಿಸಿದ್ದಾರೆ.
ಈ ಮಧ್ಯೆ, ವಾಟ್ಸಾಪ್ ಗ್ರೂಪ್‌ನಿಂದ ರಾಜೀನಾಮೆ ಪತ್ರದ ಮೆಸೇಜ್ ಅನ್ನು ಡಿಲೀಟ್ ಮಾಡಲಾಗಿದೆಯಾದರೂ, ಅದರ ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿವೆ. ಈ ಘಟನೆಯು ಪೋಲಿಸ್ ಸಿಬ್ಬಂದಿಯ ಕಠಿಣ ಕೆಲಸದ ವಾತಾವರಣ, ನಿರಂತರ ನಿಯೋಜನೆ ಮತ್ತು ಅವರ ಮಾನಸಿಕ ಆರೋಗ್ಯ ಹಾಗೂ ಕ್ಷೇಮಾಭಿವೃದ್ಧಿಯನ್ನು ನೋಡಿಕೊಳ್ಳುವ ಅಗತ್ಯವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.


