ಯುಪಿ ಸಿಎಂ ಯೋಗಿ ಆದಿತ್ಯನಾಥ್ ಇಂದು ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಈ ವೇಳೆ ನೆರೆದಿದ್ದ ಭಕ್ತರು ಜೈ ಶ್ರೀರಾಮ್, ಭಾರತ್ ಮಾತಾ ಕಿ ಜೈ ಘೋಷಣೆ ಕೂಗಿದ್ದಾರೆ. ತಿರುಪತಿಯಲ್ಲಿ ಯೋಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಆಂಧ್ರ ಪ್ರದೇಶ (ಸೆ.07) ಆಂಧ್ರ ಪ್ರದೇಶ ಪ್ರವಾಸದಲ್ಲಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಂದು ತಿರುಪತಿ ತಿರುಮಲಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ. ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಯೋಗಿ ಆದಿತ್ಯನಾಥ್ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಯೋಗಿ ಆದಿತ್ಯನಾಥ್ ಜೊತೆ ಆಂಧ್ರ ಪ್ರದೇಶದ ಸಚಿವ ಸತ್ಯಕುಮಾರ್ ಯಾದವು ಹಾಗೂ ಪಿ ನಾರಾಯಣ್ ಹಾಗೂ ಬಿಜೆಪಿ ನಾಯಕರು ಸಾಥ್ ನೀಡಿದ್ದಾರೆ. ಟಿಟಿಡಿ ಆಡಳಿತ ಮಂಡಳಿ ಸದಸ್ಯರು ಸಿಎಂ ಯೋಗಿ ಆದಿತ್ಯನಾಥ್ ಸ್ವಾಗತಿಸಿದ್ದಾರೆ.

ವೈಂಕುಂಠ ಕ್ಯೂ ಕಾಂಪ್ಲೆಕ್ಸ್ ಮೂಲಕ ಆಗಮಿಸಿದ ಯೋಗಿ ಆದಿತ್ಯನಾಥ್ ಇತರ ಭಕ್ತರ ಜೊತೆ ತಿರುಪತಿ ವೆಂಕಟೇಶ್ವರನ ದರ್ಶನ ಪಡೆದಿದ್ದಾರೆ. ಯೋಗಿ ಆದಿತ್ಯನಾಥ್ ದರ್ಶನಕ್ಕೆ ಆಗಮಿಸುತ್ತಿದ್ದಂತೆ ಸರದಿ ಸಾಲಿನಲ್ಲಿ ನಿಂತಿದ್ದ ಭಕ್ತರು ಜೈ ಶ್ರೀರಾಮ್, ಭಾರತ್ ಮಾತಾ ಕಿ ಜೈ ಘೋಷಣೆ ಕೂಗಿದ್ದಾರೆ. ಭಕ್ತರಿಗೆ ಮುಗಿದ ಯೋಗಿ ಆದಿತ್ಯನಾಥ್ ದೇವರ ದರ್ಶನ ಪಡೆದು ಮರಳಿದ್ದಾರೆ. ಹಲವು ಭಕ್ತರು ತಮ್ಮ ಫೋನ್‌ಗಳಲ್ಲಿ ಯೋಗಿ ಫೋಟೋ, ವಿಡಿಯೋ ಕ್ಲಿಕ್ಕಿಸಿದ್ದಾರೆ.

ತಿರುಪತಿ ಅನ್ನದಾನಕ್ಕೆ ಮೆಚ್ಚುಗೆ ಸೂಚಿಸಿದ ಯೋಗಿ

ಪ್ರತಿ ದಿನ 1.5 ಲಕ್ಷಕ್ಕೂ ಅಧಿಕ ಮಂದಿಗೆ ಅನ್ನದಾನ ನಡೆಸುತ್ತಿರುವ ತಿರುಮಲ ತಿರುಪತಿ ದೇವಸ್ಥಾನ ಆಡಳಿತ ಮಂಡಳಿ ಕಾರ್ಯಕ್ಕೆ ಯೋಗಿ ಆದಿತ್ಯನಾಥ್ ಮೆಚ್ಚುಗೆ ಸೂಚಿಸಿದ್ದಾರೆ.

ಇಂದು ಬೆಳಗ್ಗೆ ತಿರುಪತಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಯೋಗಿ ಆದಿತ್ಯನಾಥ್ ನೆಲ್ಲೂರಿನ ಸ್ವರ್ಣ ಭಾರತ್ ಟ್ರಸ್ಟ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಾಜಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಆರಂಭಿಸಿದ ಸ್ವರ್ಣ ಭಾರತ್ ಟ್ರಸ್ಟ್ 25ನೇ ವರ್ಷಾಚರಣೆ ಪ್ರಯುಕ್ತ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಯೋಗಿ ಆದಿತ್ಯನಾಥ್ ಮುಖ್ಯ ಅತಿಥಿಯಾಗಿ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಕಾರ್ಯಕ್ರಮದ ಬಳಿಕ ಯೋಗಿ ಆದಿತ್ಯನಾಥ್ ತಿರುಮಲ ತಿರುಪತಿ ದರ್ಶನ ಪಡೆದಿದ್ದಾರೆ.

ನೆಲ್ಲೂರಿಗೆ ಯೋಗಿ ಆದಿತ್ಯನಾಥ್ ಆಗಮನದ ಹಿನ್ನಲೆಯಲ್ಲಿ ಭಾರಿ ಬಿಗಿ ಬಂದೋಬಸ್ತ್ ಆಯೋಜಿಸಲಾಗಿತ್ತು. ಹೆಚ್ಚುವರಿ ಪೊಲೀಸರು, ಸಿಸಿಟಿವಿ, ಡ್ರೋನ್ ಕ್ಯಾಮೆರಾಗಳ ಮೂಲಕ ಬಿಗಿ ಭದ್ರತೆ ಒದಗಿಸಲಾಗಿತ್ತು. ಯೋಗಿ ಸಂಚರಿಸುವ ಮಾರ್ಗ ಸೇರಿದಂತೆ ಇಡೀ ಕಾರ್ಯಕ್ರಮದಲ್ಲಿ ಪೊಲೀಸ್ ಹಾಗೂ ಭದ್ರತಾ ಪಡೆಗಳು ಹದ್ದಿನ ಕಣ್ಣಿಟ್ಟಿತ್ತು.