ಶಾದ್‌ನಗರದ ಆರ್​ಟಿಸಿ ಕಂಡಕ್ಟರ್ ಸರಿತಾ ಅವರು ಬಸ್ಸಿನಲ್ಲಿ ಪ್ರಯಾಣಿಕರು ಬಿಟ್ಟು ಹೋಗಿದ್ದ 3 ಲಕ್ಷ ರೂಪಾಯಿ ಹಣವನ್ನು ಮರಳಿಸಿ ದೊಡ್ಡ ಮಟ್ಟದ ಪ್ರಾಮಾಣಿಕತೆ ಮೆರೆದಿದ್ದಾರೆ. ಇಂದಿನ ಸ್ವಾರ್ಥದ ಕಾಲದಲ್ಲೂ ಇವರ ಈ ನಿಸ್ವಾರ್ಥ ಕಾರ್ಯ ಮತ್ತು ಮಾನವೀಯತೆ ಎಲ್ಲರಿಗೂ ಮಾದರಿಯಾಗಿದ್ದು, ಸಾರ್ವಜನಿಕರಿಂದ ಭಾರೀ ಶ್ಲಾಘನೆ ವ್ಯಕ್ತವಾಗಿದೆ.

ಶಾದ್‌ನಗರ: ಪ್ರಾಮಾಣಿಕತೆ ಎಂಬುದು ಇಂದಿನ ಕಾಲದಲ್ಲಿ ಮರೀಚಿಕೆ ಎಂದು ಅಂದುಕೊಳ್ಳುವವರ ನಡುವೆ ತೆಲಂಗಾಣದ ಶಾದ್‌ನಗರ ಡಿಪೋದ ಮಹಿಳಾ ಕಂಡಕ್ಟರ್ ಒಬ್ಬರು ಮಾನವೀಯತೆ ಮತ್ತು ನಿಷ್ಠೆಗೆ ಸಾಕ್ಷಿಯಾಗಿದ್ದಾರೆ. ಬಸ್ಸಿನಲ್ಲಿ ಬಿಟ್ಟು ಹೋಗಿದ್ದ ಬರೋಬ್ಬರಿ 3 ಲಕ್ಷ ರೂಪಾಯಿ ನಗದನ್ನು ವಾಪಸ್ ಮಾಡುವ ಮೂಲಕ ಅವರು ಎಲ್ಲರ ಹೃದಯ ಗೆದ್ದಿದ್ದಾರೆ.

ನಡೆದಿದ್ದೇನು?

ಶಾದ್‌ನಗರ ಮೂಲದ ಉದ್ಯಮಿ ಜಹಾಂಗೀರ್ ಅವರು ತಮ್ಮ ಪತ್ನಿಯೊಂದಿಗೆ ಹಜ್ ಯಾತ್ರೆಗೆ ಹೋಗಲು ಸಿದ್ಧತೆ ನಡೆಸಿದ್ದರು. ಈ ದಂಪತಿ ಶಾದ್‌ನಗರದಿಂದ ಹೈದರಾಬಾದ್‌ಗೆ ಆರ್​ಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ಹೈದರಾಬಾದ್‌ನ ಅಫ್ಜಲ್‌ಗಂಜ್‌ನಲ್ಲಿ ಬಸ್ ಇಳಿದು ನಾಮಪಲ್ಲಿಗೆ ತಲುಪಿದಾಗ ಅವರಿಗೆ ದೊಡ್ಡ ಆಘಾತ ಕಾದಿತ್ತು. ಹಜ್ ಯಾತ್ರೆಗಾಗಿ ಇಟ್ಟುಕೊಂಡಿದ್ದ 3 ಲಕ್ಷ ರೂಪಾಯಿ ನಗದು ತುಂಬಿದ್ದ ಬ್ಯಾಗ್ ಬಸ್ಸಿನಲ್ಲೇ ಮರೆತು ಹೋಗಿತ್ತು!

ಕಂಡಕ್ಟರ್ ಸರಿತಾ ಅವರ ಶ್ಲಾಘನೀಯ ಕಾರ್ಯ

ಅತ್ತ ಬಸ್ಸಿನಲ್ಲಿ ಬ್ಯಾಗ್ ಇರುವುದನ್ನು ಗಮನಿಸಿದ ಕಂಡಕ್ಟರ್ ಸರಿತಾ (E.No.152270), ಕೂಡಲೇ ಚಾಲಕ ನರಸಿಂಹಲು ಅವರಿಗೆ ಮಾಹಿತಿ ನೀಡಿದರು. ಹಣದ ಬ್ಯಾಗನ್ನು ಸುರಕ್ಷಿತವಾಗಿ ತಮ್ಮ ವಶಕ್ಕೆ ಪಡೆದುಕೊಂಡರು. ಬ್ಯಾಗ್ ಕಳೆದುಕೊಂಡು ಕಂಗಾಲಾಗಿದ್ದ ಜಹಾಂಗೀರ್ ಅವರು ತಕ್ಷಣ ಬಸ್ ನಿಲ್ದಾಣಕ್ಕೆ ಓಡಿ ಬಂದರು. ಅವರ ಮುಖದಲ್ಲಿನ ಆತಂಕ ನೋಡಿದ ಸರಿತಾ ಅವರು, ವಿಚಾರಿಸಿ ಅಷ್ಟೂ ಹಣವನ್ನು ಸುರಕ್ಷಿತವಾಗಿ ವಾಪಸ್ ಮಾಡಿದರು.

ತಮ್ಮ ಹಜ್ ಯಾತ್ರೆಯ ಕನಸಿನ ಹಣ ವಾಪಸ್ ಸಿಕ್ಕಿದ್ದನ್ನು ನೋಡಿ ಜಹಾಂಗೀರ್ ದಂಪತಿ ಭಾವುಕರಾದರು. ಯಾವುದೇ ಆಸೆ ಅಥವಾ ಸ್ವಾರ್ಥಕ್ಕೆ ಬಲಿಯಾಗದೆ ಅಷ್ಟೊಂದು ದೊಡ್ಡ ಮೊತ್ತವನ್ನು ಮರಳಿಸಿದ ಸರಿತಾ ಅವರ ಪ್ರಾಮಾಣಿಕತೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆರ್​ಟಿಸಿ ಉನ್ನತ ಅಧಿಕಾರಿಗಳು ಮತ್ತು ಸಾರ್ವಜನಿಕರು ಸರಿತಾ ಮತ್ತು ಚಾಲಕ ನರಸಿಂಹಲು ಅವರನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ.

ಇವತ್ತಿನ ದಿನಗಳಲ್ಲಿ ದಾರಿಯಲ್ಲಿ ಬಿದ್ದ ಹತ್ತು ರೂಪಾಯಿ ಸಿಕ್ಕರೂ ಜೇಬಿಗಿಳಿಸುವವರಿದ್ದಾರೆ. ಇಂತಹ ಕಾಲಘಟ್ಟದಲ್ಲಿ 3 ಲಕ್ಷ ರೂಪಾಯಿಯನ್ನು ಕಿಂಚಿತ್ತೂ ಆಸೆ ಪಡದೆ ಹಿಂದಿರುಗಿಸಿದ ಸರಿತಾ ಅವರ ಕಾರ್ಯ ನಿಜಕ್ಕೂ ಇಂದಿನ ಸಮಾಜಕ್ಕೆ ದೊಡ್ಡ ಮಾದರಿ. ಪ್ರಾಮಾಣಿಕತೆ ಎಂಬುದು ಕೇವಲ ಪದವಲ್ಲ, ಅದು ಬದುಕಿನ ಸಂಸ್ಕಾರ ಎಂಬುದನ್ನು ಇವರು ಸಾಬೀತುಪಡಿಸಿದ್ದಾರೆ.

Scroll to load tweet…