ತಮಿಳುನಾಡಿನಲ್ಲಿ ನವೋದಯ ವಿದ್ಯಾಲಯ ಸ್ಥಾಪನೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಮೌಖಿಕ ಎಚ್ಚರಿಕೆ ನೀಡಿದೆ. ಹಿಂದಿ ಹೇರಿಕೆ ಆರೋಪದಡಿ ಯೋಜನೆಯನ್ನು ವಿರೋಧಿಸುತ್ತಿರುವ ತಮಿಳುನಾಡಿಗೆ, ಶಾಲೆಗಳಿಗೆ ಜಾಗ ಗುರುತಿಸಲು ಮೂರು ತಿಂಗಳ ಗಡುವು ನೀಡಲಾಗಿದೆ.

ನವದೆಹಲಿ (ಸೆ.18): ತಮಿಳುನಾಡು ರಾಜ್ಯದಲ್ಲಿ ಕೇಂದ್ರ ಸರ್ಕಾರದ 'ನವೋದಯ ವಿದ್ಯಾಲಯ' (Navodaya Vidyalaya) ಯೋಜನೆಯನ್ನು ಜಾರಿಗೊಳಿಸುವ ಕುರಿತಾದ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ (Supreme Court) ತಮಿಳುನಾಡು ಸರ್ಕಾರಕ್ಕೆ ಈ ರೀತಿಯ ಮೌಖಿಕ ಎಚ್ಚರಿಕೆ ನೀಡಿದೆ. ಸುಮಾರು ಒಂದು ಗಂಟೆಯ ಕಾಲ ನಡೆದ ಸುದೀರ್ಘ ವಿಚಾರಣೆಯಲ್ಲಿ, ನ್ಯಾಯಮೂರ್ತಿ ಬಿ.ವಿ. ನಾಗರತ್ನ (Justice B.V. Nagarathna) ಹಾಗೂ ನ್ಯಾಯಮೂರ್ತಿ ಎ.ಜಿ. ಮಸೀಹ್ (Justice A.G. Masih) ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ಪ್ರಮುಖ ಅಭಿಪ್ರಾಯ ವ್ಯಕ್ತಪಡಿಸಿದೆ.

ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ನವೋದಯ ಶಾಲೆಗಳ ಸ್ಥಾಪನೆಗೆ ಅಗತ್ಯವಿರುವ ಜಾಗವನ್ನು ಗುರುತಿಸುವಂತೆ 2025 ರ ಡಿಸೆಂಬರ್ 15 ರಂದು ನೀಡಿದ್ದ ಆದೇಶವನ್ನು ಪಾಲಿಸಲು ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಮೂರು ತಿಂಗಳ ಕಾಲಾವಕಾಶ ನೀಡಿದೆ. ಈ ನಿರ್ದೇಶನವು ಪ್ರಕರಣದ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ತಿಳಿಸಿರುವ ನ್ಯಾಯಪೀಠ, ಈ ಮಧ್ಯಂತರ ಅವಧಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರತಿನಿಧಿಗಳು ಸಭೆ ನಡೆಸಿ ನವೋದಯ ಶಾಲೆಗಳ ಸ್ಥಾಪನೆಯ ನೀತಿಯ ಕುರಿತು ಚರ್ಚಿಸುವಂತೆ ಸೂಚಿಸಿದೆ. ಇದೇ ವೇಳೆ ಎರಡೂ ಸರ್ಕಾರಗಳನ್ನು ಉದ್ದೇಶಿಸಿ ಮಾತನಾಡಿದ ನ್ಯಾಯಮೂರ್ತಿ ನಾಗರತ್ನ, "ಚೆನ್ನೈ ದೆಹಲಿಯನ್ನು ದೂರ ತಳ್ಳಬಾರದು, ಹಾಗೆಯೇ ದೆಹಲಿ ಕೂಡ ಚೆನ್ನೈ ಅನ್ನು ದೂರ ತಳ್ಳಬಾರದು" ಎಂದು ಕಿವಿಮಾತು ಹೇಳಿದರು.

ಪ್ರಕರಣದ ಹಿನ್ನೆಲೆ ಮತ್ತು ತಮಿಳುನಾಡು ಸರ್ಕಾರದ ವಿರೋಧ

ತಮಿಳುನಾಡು ರಾಜ್ಯದಲ್ಲಿ ಜಾರಿಯಲ್ಲಿರುವ 'ದ್ವಿಭಾಷಾ ನೀತಿಗೆ' (Two-Language Policy) ನವೋದಯ ಯೋಜನೆ ಸಂಪೂರ್ಣವಾಗಿ ವಿರುದ್ಧವಾಗಿದೆ ಎಂದು ಪ್ರತಿಪಾದಿಸಿರುವ ತಮಿಳುನಾಡು ಸರ್ಕಾರವು ಈ ಯೋಜನೆಯನ್ನು ನಿರಂತರವಾಗಿ ವಿರೋಧಿಸುತ್ತಿದೆ. ಹಿಂದಿನ ದ್ರಾವಿಡ ಮುನ್ನೇತ್ರ ಕಳಗಂ (DMK) ಸರ್ಕಾರವು 2026 ರ ಮಾರ್ಚ್‌ನಲ್ಲಿ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ, "ತ್ರಿಭಾಷಾ ಸೂತ್ರವನ್ನು ಆಧರಿಸಿರುವ ನವೋದಯ ಯೋಜನೆಯು 'ತಮಿಳುನಾಡು ತಮಿಳು ಕಲಿಕಾ ಕಾಯ್ದೆ-2006'ರ ಆಶಯಕ್ಕೆ ಧಕ್ಕೆ ತರುತ್ತದೆ. ಇದು ಹಿಂಬಾಗಿಲ ಮೂಲಕ ರಾಜ್ಯದಲ್ಲಿ ಹಿಂದಿ ಭಾಷೆಯನ್ನು ಕಡ್ಡಾಯಗೊಳಿಸುವ ಹುನ್ನಾರ," ಎಂದು ಆರೋಪಿಸಿತ್ತು.

ಪ್ರಸ್ತುತ ನ್ಯಾಯಾಲಯದ ವಿಚಾರಣೆ ವೇಳೆಯೂ, ನೂತನವಾಗಿ ಅಧಿಕಾರಕ್ಕೆ ಬಂದಿರುವ 'ತಮಿಳಗ ವೆಟ್ರಿ ಕಳಗಂ' (TVK) ಸರ್ಕಾರವು ಈ ಯೋಜನೆಯನ್ನು ತೀವ್ರವಾಗಿ ವಿರೋಧಿಸಿತು. "ಭಾಷೆಯ ಆಯ್ಕೆಯು ಪ್ರಜೆಗಳ ಮೂಲಭೂತ ಹಕ್ಕು" ಎಂದು ರಾಜ್ಯ ಸರ್ಕಾರ ಪ್ರತಿಪಾದಿಸಿತು.

ಕೋರ್ಟ್‌ನಲ್ಲಿ ನಡೆದ ರೋಚಕ ವಾದ-ಪ್ರತಿವಾದ

ತಮಿಳುನಾಡು ಸರ್ಕಾರದ ಪರ ವಾದ: ತಮಿಳುನಾಡು ಸರ್ಕಾರದ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಜೈದೀಪ್ ಗುಪ್ತಾ ಹಾಗೂ ಹೆಚ್ಚುವರಿ ಅಡ್ವೊಕೇಟ್ ಜನರಲ್ ಹರಿಪ್ರಿಯಾ ಪದ್ಮನಾಭನ್, "ನವೋದಯ ಯೋಜನೆಯು ಕೇವಲ ಒಂದು ನೀತಿಯಾಗಿದ್ದು (Policy), ರಾಜ್ಯ ಸರ್ಕಾರದ ಸ್ವಂತ ನೀತಿ ಮತ್ತು ಕಾಯ್ದೆಗಳಿಗೆ ವಿರುದ್ಧವಾಗಿ ಅದನ್ನು ಬಲವಂತವಾಗಿ ಹೇರಲು ಸಾಧ್ಯವಿಲ್ಲ," ಎಂದರು. ಮುಂದುವರಿದು, "ಇದು ಮನಸ್ಥಿತಿಯ ವಿಚಾರವಲ್ಲ. ಪ್ರತಿಯೊಂದು ರಾಜ್ಯಕ್ಕೂ ತನ್ನದೇ ಆದ ನೀತಿಗಳನ್ನು ಹೊಂದುವ ಹಕ್ಕಿದೆ. ಕೇಂದ್ರಕ್ಕೆ ನವೋದಯ ನೀತಿಯನ್ನು ಏಕರೂಪವಾಗಿ ಜಾರಿಗೊಳಿಸುವ ಉದ್ದೇಶವಿದ್ದರೆ ಶಾಸನ ರೂಪಿಸಬೇಕಿತ್ತು," ಎಂದು ವಾದಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ನಾಗರತ್ನ, "ನಮ್ಮದು ಅಂತಿಮವಾಗಿ ಏಕತೆ ಮಾದರಿಯ ಸರ್ಕಾರ," ಎಂದರು. ಆದರೆ ಈ ಅಭಿಪ್ರಾಯವನ್ನು ತಳ್ಳಿಹಾಕಿದ ವಕೀಲ ಜೈದೀಪ್ ಗುಪ್ತಾ, "ನಮ್ಮದು ಒಕ್ಕೂಟ ವ್ಯವಸ್ಥೆಯ (Federal) ಸರ್ಕಾರ. ಇಂತಹ ಬಲವಂತದ ಏಕೀಕರಣವು ಸಂವಿಧಾನದ ಆಶಯವಲ್ಲ. ಒಕ್ಕೂಟ ವ್ಯವಸ್ಥೆಯು ಸಂವಿಧಾನದ ಮೂಲ ರಚನೆಯ (Basic Structure) ಭಾಗವಾಗಿದೆ. ಭಾರತದ ಆಡಳಿತ ಶೈಲಿಯು ಆಶಯದಲ್ಲಿ ಏಕಾತ್ಮಕವಾಗಿದ್ದರೂ, ರಚನೆಯಲ್ಲಿ ಒಕ್ಕೂಟ ವ್ಯವಸ್ಥೆಯಾಗಿದೆ," ಎಂದು ಮರುವಾದ ಮಂಡಿಸಿದರು.

ಶಿಕ್ಷಣವು 'ಸಮವರ್ತಿ ಪಟ್ಟಿ'ಯಲ್ಲಿ (Concurrent List) ಇರುವುದರಿಂದ ಕೇಂದ್ರದ ನೀತಿಯನ್ನು ಒಪ್ಪಿಕೊಳ್ಳುವುದು ರಾಜ್ಯಕ್ಕೆ ಕಡ್ಡಾಯವಲ್ಲ ಎಂದು ವಾದಿಸಿದ ಜೈದೀಪ್ ಗುಪ್ತಾ, "ಭಾಷೆಯು ಈ ದೇಶದಲ್ಲಿ ಮೂಲಭೂತ ಹಕ್ಕಾಗಿದೆ. ಪ್ರತಿಯೊಂದು ರಾಜ್ಯಕ್ಕೂ ತನ್ನದೇ ಆದ ಕಾನೂನುಗಳು ಹಾಗೂ ಅಗತ್ಯತೆಗಳಿವೆ. ನವೋದಯ ಎಂಬುದು ಐಚ್ಛಿಕ ನೀತಿಯಾಗಿದ್ದು, ಇದನ್ನು ಅಳವಡಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್ 'ರಿಟ್ ಆಫ್ ಮ್ಯಾಂಡಮಸ್' ಹೊರಡಿಸಿದರೆ, ಅದು ಈ ನ್ಯಾಯಾಲಯ ನೀಡಿರುವ 75 ವರ್ಷಗಳ ತೀರ್ಪುಗಳನ್ನೇ ಬುಡಮೇಲು ಮಾಡಿದಂತಾಗುತ್ತದೆ," ಎಂದು ಪ್ರತಿಪಾದಿಸಿದರು. ಅಲ್ಲದೆ, "ನಾವು ನಮಗಾಗಿಯೇ ಸ್ವಂತ ಮಾಡೆಲ್ ಶಾಲೆಗಳನ್ನು ತೆರೆಯುತ್ತಿದ್ದೇವೆ. ನಮ್ಮ ಮಾಡೆಲ್ ಕೇಂದ್ರಕ್ಕಿಂತ ಉತ್ತಮವಾಗಿರಬಹುದು," ಎಂದು ಗುಪ್ತಾ ಹೇಳಿದರು.

ಕೇಂದ್ರ ಸರ್ಕಾರ ಮತ್ತು ಪೀಠದ ಅಭಿಪ್ರಾಯ

ಕೇಂದ್ರ ಸರ್ಕಾರದ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ್ ಹಾಗೂ ನವೋದಯ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ಪರ ವಕೀಲರಾದ ಜಿ. ಪ್ರಿಯದರ್ಶಿನಿ ಮತ್ತು ರಾಹುಲ್ ಶ್ಯಾಮ್ ಭಂಡಾರಿ, "ಈ ಶಾಲೆಗಳಿಗೆ ಕೇವಲ ಜಾಗ ನೀಡುವುದು ಮಾತ್ರ ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ. ಈ ಶಾಲೆಗಳಲ್ಲಿ ತಮಿಳು ಭಾಷೆಯನ್ನೂ ಬೋಧಿಸಲಾಗುತ್ತದೆ ಹಾಗೂ ಇಲ್ಲಿ ಶೇ. 99 ರಷ್ಟು ಉತ್ತೀರ್ಣ ಪ್ರಮಾಣವಿದೆ," ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ಉಚಿತವಾಗಿ ಜಾಗ ನೀಡುವುದು ಒಂದು ರೀತಿಯ 'ಬಂಡವಾಳ ಹೂಡಿಕೆ' (Capital Contribution) ಇದ್ದಂತೆ ಎಂದು ಗುಪ್ತಾ ವಾದಿಸಿದಾಗ, "ಅದು ಯಾರ ಜಾಗ? ಅಂತಿಮವಾಗಿ ಅದು ಭಾರತದ ಜಾಗ!" ಎಂದು ನ್ಯಾಯಮೂರ್ತಿ ನಾಗರತ್ನ ಮರುಪ್ರಶ್ನಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಗುಪ್ತಾ, "ಹಾಗಾದರೆ ತಮಿಳುನಾಡಿನಲ್ಲಿರುವ ಯಾವುದೇ ಜಾಗವನ್ನು ಕೇಂದ್ರ ಸರ್ಕಾರ ವಿಲೇವಾರಿ ಮಾಡಬಹುದು ಎಂದು ನ್ಯಾಯಪೀಠ ಹೇಳುತ್ತಿದೆಯೇ? ಅದು ಸಾಧ್ಯವಿಲ್ಲ," ಎಂದರು. ಒಂದು ವೇಳೆ ಪ್ರತಿಯೊಂದು ರಾಜ್ಯವೂ ಕೇಂದ್ರದ ನೀತಿಯನ್ನು ವಿರೋಧಿಸಿ ತನ್ನದೇ ಹಾದಿಯಲ್ಲಿ ಸಾಗಿದರೆ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗುತ್ತದೆ ಎಂದು ನ್ಯಾಯಾಧೀಶರು ಆತಂಕ ವ್ಯಕ್ತಪಡಿಸಿದಾಗ, "ಸಹಕಾರ ಒಕ್ಕೂಟ ವ್ಯವಸ್ಥೆ (Cooperative Federalism) ಎಂಬುದು ಕೇವಲ ಒಂದು ಕಡೆಯಿಂದ ಮಾತ್ರ ಕೆಲಸ ಮಾಡಲು ಸಾಧ್ಯವಿಲ್ಲ," ಎಂದು ಗುಪ್ತಾ ತಿರುಗೇಟು ನೀಡಿದರು.

ಶಿಕ್ಷಣದ ಬಜೆಟ್ ಮತ್ತು ಅನುದಾನದ ಲೆಕ್ಕಚಾರ

ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ಕೇಂದ್ರ ಸರ್ಕಾರವು ತಮಿಳುನಾಡಿಗೆ ಇನ್ನೂ ₹5,000 ಕೋಟಿ ಬಾಕಿ ನೀಡಬೇಕಿದೆ ಎಂದು ಜೈದೀಪ್ ಗುಪ್ತಾ ಕೋರ್ಟ್‌ಗೆ ತಿಳಿಸಿದರು. ರಾಜ್ಯವು ಸುಮಾರು 1.24 ಮಿಲಿಯನ್ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ₹45,000 ಕೋಟಿ ಬಜೆಟ್ ಮೀಸಲಿಟ್ಟಿದ್ದು, ಇದು ಇಡೀ ದೇಶದಲ್ಲೇ ಅತ್ಯಂತ ದೊಡ್ಡದಾಗಿದೆ. ಆದರೆ ಇಡೀ ದೇಶಕ್ಕೆ ಕೇಂದ್ರ ಸರ್ಕಾರದ ಶಿಕ್ಷಣ ಬಜೆಟ್ ಹಂಚಿಕೆ ₹78,000 ಕೋಟಿ ಮಾತ್ರವಾಗಿದೆ ಎಂದು ಅವರು ಲೆಕ್ಕ ನೀಡಿದರು.

ಶಾಲೆಗಳಿಗೆ ಜಾಗ ಗುರುತಿಸುವಂತೆ 2025 ರ ಡಿಸೆಂಬರ್‌ನಲ್ಲಿ ನೀಡಿದ್ದ ಆದೇಶವನ್ನು ತಮಿಳುನಾಡು ಸರ್ಕಾರ ಇನ್ನೂ ಪಾಲಿಸಿಲ್ಲ ಎಂಬುದನ್ನು ಸುಪ್ರೀಂ ಕೋರ್ಟ್ ಪ್ರಸ್ತಾಪಿಸಿತು. ಇದಕ್ಕೆ ಉತ್ತರಿಸಿದ ಗುಪ್ತಾ, ರಾಜ್ಯದಲ್ಲಿ ಪ್ರಸ್ತುತ ಇರುವ ಸರ್ಕಾರ ಬಂದು ಕೇವಲ ಮೂರು ತಿಂಗಳಷ್ಟೇ ಆಗಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ನಾಗರತ್ನ, "ಸರ್ಕಾರಗಳು ಬದಲಾದ ತಕ್ಷಣ ಏನೂ ಬದಲಾಗುವುದಿಲ್ಲ. ಶಿಕ್ಷಣ ಎಂಬುದು ನಿರಂತರವಾದದ್ದು, ಅದು ಯಾವುದೇ ಸರ್ಕಾರದ ಇಷ್ಟಾನಿಷ್ಟಗಳ ಮೇಲೆ ಅವಲಂಬಿತವಾಗಿರುವುದಿಲ್ಲ. ಇಂದು ನವೋದಯ ಯೋಜನೆಗೆ ಹೀಗೆ ಮಾಡಿದರೆ, ನಾಳೆ ರಾಷ್ಟ್ರೀಯ ಕೈಗಾರಿಕಾ ನೀತಿ ಅಥವಾ ರಾಷ್ಟ್ರೀಯ ಹಣಕಾಸು ನೀತಿಯನ್ನು ನಾವು ಜಾರಿಗೊಳಿಸುವುದಿಲ್ಲ ಎಂದು ರಾಜ್ಯಗಳು ಹೇಳಿದರೆ ದೇಶದ ಸ್ಥಿತಿ ಏನಾಗಬೇಕು?" ಎಂದು ಪ್ರಶ್ನಿಸಿದರು.

ಆ ನೀತಿಗಳು 'ಕೇಂದ್ರ ಪಟ್ಟಿ'ಯಲ್ಲಿದ್ದು (Union List), ಶಿಕ್ಷಣವು 'ಸಮವರ್ತಿ ಪಟ್ಟಿ'ಯಲ್ಲಿದೆ (Concurrent List) ಎಂದು ಸಮರ್ಥಿಸಿಕೊಂಡ ಜೈದೀಪ್ ಗುಪ್ತಾ, "ನಾವು ಎಲ್ಲವನ್ನೂ ಒಂದೇ ಬುಟ್ಟಿಗೆ ಹಾಕಲು ಸಾಧ್ಯವಿಲ್ಲ," ಎಂದು ತಮ್ಮ ವಾದವನ್ನು ಮುಕ್ತಾಯಗೊಳಿಸಿದರು. ತೀವ್ರ ಕುತೂಹಲ ಕೆರಳಿಸಿರುವ ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಸುಪ್ರೀಂ ಕೋರ್ಟ್ 2026 ರ ಡಿಸೆಂಬರ್ 14 ಕ್ಕೆ ಮುಂದೂಡಿದೆ.