ಜಾಗತಿಕ ಕಲಾ ಕಳ್ಳಸಾಗಣೆದಾರ ಸುಭಾಷ್ ಕಪೂರ್, ಒಂದು ಪ್ರಕರಣದಲ್ಲಿ ಶಿಕ್ಷೆ ಮುಗಿದ ನಂತರ, ಹಸ್ತಾಂತರ ಒಪ್ಪಂದದ ಕಾರಣದಿಂದಾಗಿ ಭಾರತದಲ್ಲಿನ ಇತರ ಪ್ರಕರಣಗಳಿಂದ ತಾತ್ಕಾಲಿಕವಾಗಿ ಪಾರಾಗಿದ್ದಾನೆ. ಮದ್ರಾಸ್ ಹೈಕೋರ್ಟ್ ಆತನನ್ನು ಜರ್ಮನಿಗೆ ವಾಪಸ್ ಕಳುಹಿಸಲು ಆದೇಶಿಸಿದ್ದು, ಇದು ಕಾನೂನು ಮತ್ತು ರಾಜತಾಂತ್ರಿಕತೆಯ ಸಂಕೀರ್ಣತೆಯನ್ನು ಎತ್ತಿ ತೋರಿಸುತ್ತದೆ.

ಒಮ್ಮೆ ನ್ಯೂಯಾರ್ಕ್‌ನ ಮ್ಯಾಡಿಸನ್ ಅವೆನ್ಯೂದಲ್ಲಿ ‘ಆರ್ಟ್ ಆಫ್ ದಿ ಪಾಸ್ಟ್’ ಎಂಬ ಗ್ಯಾಲರಿ ಜಾಗತಿಕ ಕಲಾಪ್ರೇಮಿಗಳ ಆಕರ್ಷಣೆಯ ಕೇಂದ್ರವಾಗಿತ್ತು. ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಅಪರೂಪದ, ಪುರಾತನ ಕಲಾಕೃತಿಗಳನ್ನು ಪ್ರದರ್ಶಿಸುತ್ತಿದ್ದ ಈ ಗ್ಯಾಲರಿಯ ಮಾಲೀಕ ಸುಭಾಷ್ ಚಂದ್ರ ಕಪೂರ್, ಕಲಾ ಪ್ರಪಂಚದ ದೈತ್ಯ ಆಸಾಮಿಯಾಗಿದ್ದ. ಆದರೆ, ಈ ಹೊಳೆಯುವ ಗ್ಯಾಲರಿಯ ಹಿಂದೆ ಅಪಾರ ಪ್ರಮಾಣದ ಕತ್ತಲೆ ಅಡಗಿತ್ತು. ತನಿಖಾಧಿಕಾರಿಗಳು ನಂತರ ಪತ್ತೆ ಮಾಡಿದಂತೆ, ಕಪೂರ್ ಸುಮಾರು 143 ಮಿಲಿಯನ್ ಡಾಲರ್‌ಗೂ ಹೆಚ್ಚು ಮೌಲ್ಯದ, 2,500ಕ್ಕೂ ಹೆಚ್ಚು ಕದ್ದ ಪ್ರಾಚೀನ ವಸ್ತುಗಳನ್ನು ಜಾಗತಿಕವಾಗಿ ಅಕ್ರಮ ರಫ್ತು ಮಾಡುತ್ತಿದ್ದ ದಂಧೆಯ ರೂವಾರಿಯಾಗಿದ್ದ.

ತಮಿಳುನಾಡಿನ ಹಳ್ಳಿಯೊಂದರ ದೇವಸ್ಥಾನದಲ್ಲಿ ಆರಂಭವಾದ ಈತನ ವಿಗ್ರಹ ಕಳ್ಳತನದ ಈ ಕಥೆ, ಇದೀಗ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠದ ತೀರ್ಪಿನೊಂದಿಗೆ ಪ್ರಮುಖ ಘಟ್ಟಕ್ಕೆ ಬಂದು ತಲುಪಿದೆ.

ಕಳ್ಳಸಾಗಣೆ ಜಾಲ

ಕಪೂರ್ ಮತ್ತು ಆತನ ಸಹಚರರು ತಮಿಳುನಾಡಿನ ಪುರಾತನ ದೇವಾಲಯಗಳಿಂದ ಶತಮಾನಗಳಷ್ಟು ಹಳೆಯದಾದ ಮೂರ್ತಿಗಳನ್ನು ಕದ್ದು, ಮ್ಯಾನ್‌ಹ್ಯಾಟನ್‌ಗೆ ಕಳ್ಳಸಾಗಣೆ ಮಾಡುತ್ತಿದ್ದರು. ಅಲ್ಲಿಂದ ವಿಶ್ವದ ಪ್ರಸಿದ್ಧ ವಸ್ತುಸಂಗ್ರಹಾಲಯಗಳು ಹಾಗೂ ಖಾಸಗಿ ಸಂಗ್ರಹಕಾರರಿಗೆ ಕೋಟ್ಯಂತರ ರೂಪಾಯಿಗೆ ಮಾರಾಟ ಮಾಡುತ್ತಿದ್ದರು.

ಆಸ್ಟ್ರೇಲಿಯಾದ ನ್ಯಾಷನಲ್ ಗ್ಯಾಲರಿಗೆ ಮಾರಾಟವಾಗಿದ್ದ 900 ವರ್ಷಗಳಷ್ಟು ಹಳೆಯದಾದ ಶ್ರೀಪುರಂತನ್ ನಟರಾಜನ ಕಂಚಿನ ವಿಗ್ರಹ, ಯುಎಸ್ ಅಧಿಕಾರಿಗಳು ವಶಪಡಿಸಿಕೊಂಡ 4 ಮಿಲಿಯನ್ ಡಾಲರ್ ಮೌಲ್ಯದ ನಟರಾಜ ಹಾಗೂ 2.5 ಮಿಲಿಯನ್ ಡಾಲರ್ ಮೌಲ್ಯದ ಉಮಾ ಪಾರ್ವತಿ ವಿಗ್ರಹಗಳು ಈ ಜಾಲದ ಬೃಹತ್ ಪ್ರಮಾಣವನ್ನು ತೆರೆದಿಟ್ಟವು.

ಭಾರತ ಸರ್ಕಾರದ ಕೋರಿಕೆಯ ಮೇರೆಗೆ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ಹೊರಡಿಸಿತು. ಅಕ್ಟೋಬರ್ 30, 2011 ರಂದು ಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣದಲ್ಲಿ ಕಪೂರ್‌ನನ್ನು ಬಂಧಿಸಲಾಯಿತು. ಅರಿಯಲೂರು ಜಿಲ್ಲೆಯ ಸುತಮಲ್ಲಿ ಗ್ರಾಮದ ವರದರಾಜ ಪೆರುಮಾಳ್ ದೇವಸ್ಥಾನದ ವಿಗ್ರಹಗಳ ಕಳ್ಳತನ ಪ್ರಕರಣದ ವಿಚಾರಣೆಗಾಗಿ ಜುಲೈ 13, 2012 ರಂದು ಜರ್ಮನಿಯು ಕಪೂರ್‌ನನ್ನು ಭಾರತಕ್ಕೆ ಹಸ್ತಾಂತರಿಸಿತು. ನವೆಂಬರ್ 1, 2022 ರಂದು ಕುಂಭಕೋಣಂನ ವಿಶೇಷ ನ್ಯಾಯಾಲಯವು ಕಪೂರ್‌ಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿತು.

ಕಾನೂನು ತೊಡಕು

ಸುತಮಲ್ಲಿ ಕಳ್ಳತನ ಪ್ರಕರಣಕ್ಕಾಗಿ ವಿಧಿಸಲಾದ 10 ವರ್ಷಗಳ ಶಿಕ್ಷೆಯ ಅವಧಿಯು ಅಕ್ಟೋಬರ್ 2022 ಕ್ಕೇ ಮುಕ್ತಾಯಗೊಂಡಿತು. ಆದರೆ ತಮಿಳುನಾಡಿನ ವಿಗ್ರಹ ಕಳ್ಳತನ ತಡೆ ಪಡೆ ಆತನ ವಿರುದ್ಧ ಬಾಕಿ ಇರುವ ಇತರ 10 ವಿಗ್ರಹ ಕಳ್ಳತನ ಪ್ರಕರಣಗಳ ವಿಚಾರಣೆಗಾಗಿ ಆತನನ್ನು ಜೈಲಿನಲ್ಲೇ ಉಳಿಸಿಕೊಳ್ಳಲು ಬಯಸಿತು.

ಅಡ್ಡಬಂದ ನಿಯಮ

ಭಾರತೀಯ ಹಸ್ತಾಂತರ ಕಾಯ್ದೆ 1962 ರ ಸೆಕ್ಷನ್ 21: ಯಾವುದೇ ದೇಶದಿಂದ ಹಸ್ತಾಂತರಿಸಲ್ಪಟ್ಟ ವ್ಯಕ್ತಿಯನ್ನು, ಆ ದೇಶವು ನಿರ್ದಿಷ್ಟವಾಗಿ ಒಪ್ಪಿಗೆ ನೀಡಿದ ಅಪರಾಧಕ್ಕಾಗಿ ಮಾತ್ರ ವಿಚಾರಣೆ ನಡೆಸಬಹುದು. ಶರಣಾದ ದೇಶದ ಒಪ್ಪಿಗೆಯಿಲ್ಲದೆ ಹೊಸ ಪ್ರಕರಣಗಳನ್ನು ಹೊರಿಸುವಂತಿಲ್ಲ.

ಜರ್ಮನಿಯು ಕಪೂರ್‌ನನ್ನು ಕೇವಲ ‘ಸುತಮಲ್ಲಿ ಪ್ರಕರಣ’ಕ್ಕಾಗಿ ಮಾತ್ರ ಹಸ್ತಾಂತರಿಸಿತ್ತು. ತಮಿಳುನಾಡು ಪೊಲೀಸರು ಹೆಚ್ಚುವರಿ ಪ್ರಕರಣಗಳ ವಿಚಾರಣೆಗೆ ಒಪ್ಪಿಗೆ ಕೋರಿದಾಗ, ಡಿಸೆಂಬರ್ 2023 ರಲ್ಲಿ ಜರ್ಮನಿಯ ವಿದೇಶಾಂಗ ಕಚೇರಿ ಆ ವಿನಂತಿಯನ್ನು ತಿರಸ್ಕರಿಸಿತು.

ಕಾನೂನು ಪೀಠದ ತೀರ್ಪು ಮತ್ತು ನಾಗರಿಕತ್ವದ ಗೊಂದಲ

ತಮ್ಮ ಬಂಧನ ಕಾನೂನುಬಾಹಿರವೆಂದು ವಾದಿಸಿ ಕಪೂರ್ ಮಧುರೈ ಪೀಠಕ್ಕೆ ‘ಹೇಬಿಯಸ್ ಕಾರ್ಪಸ್’ ಅರ್ಜಿ ಸಲ್ಲಿಸಿದ. ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎ.ಡಿ. ಜಗದೀಶ್ ಚಂದಿರಾ ಮತ್ತು ಎನ್. ಗುಣಶೇಖರನ್ ಅವರಿದ್ದ ಪೀಠವು ಜರ್ಮನಿ ನೀಡಿದ್ದ ಅನುಮತಿಯ ಪ್ರಕರಣದ ಶಿಕ್ಷೆ ಮುಗಿದಿರುವುದರಿಂದ, ಬಾಕಿ ಇರುವ ಇತರ ಪ್ರಕರಣಗಳ ನೆಪದಲ್ಲಿ ಆತನನ್ನು ಬಂಧನದಲ್ಲಿಡುವುದು ಕಾನೂನುಬಾಹಿರ. ಕೇಂದ್ರ ಗೃಹ ಕಾರ್ಯದರ್ಶಿಯವರು ತಿರುಚಿ ಕೇಂದ್ರ ಕಾರಾಗೃಹದಲ್ಲಿದ್ದ ಕಪೂರ್‌ನನ್ನು ವಶಕ್ಕೆ ಪಡೆದು, ತಕ್ಷಣವೇ ಜರ್ಮನಿಗೆ ವಾಪಸ್ ಕಳುಹಿಸಲು ಸೂಕ್ತ ವ್ಯವಸ್ಥೆ ಮಾಡಬೇಕು. ಸಾಫ್ಟ್‌ವೇರ್ ಅಥವಾ ಕಾರ್ಯವಿಧಾನಗಳು ಕಾನೂನು ಜಾರಿಯ ಮಾಧ್ಯಮವಷ್ಟೇ. ರಾಜತಾಂತ್ರಿಕ ಒಪ್ಪಂದದ ನಿಯಮಗಳನ್ನು ಮೀರಿ ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತು

ಕಪೂರ್ ಅಮೆರಿಕನ್ ಪ್ರಜೆಯೋ ಅಥವಾ ಜರ್ಮನ್ ಪ್ರಜೆಯೋ ಎಂಬ ಬಗ್ಗೆ ದಾಖಲೆಗಳಲ್ಲಿ ಗೊಂದಲಗಳಿದ್ದರೂ, ನ್ಯಾಯಾಲಯವು "ಕಪೂರ್ ಯಾವ ಪಾಸ್‌ಪೋರ್ಟ್ ಹೊಂದಿದ್ದಾರೆ ಎನ್ನುವುದಕ್ಕಿಂತ, ಯಾವ ದೇಶ (ಜರ್ಮನಿ) ಆತನನ್ನು ಭಾರತಕ್ಕೆ ಹಸ್ತಾಂತರಿಸಿತ್ತು ಎಂಬುದು ಮುಖ್ಯ ಎಂದು ಸ್ಪಷ್ಟಪಡಿಸಿತು.

ನ್ಯಾಯಾಲಯದ ಈ ಆದೇಶವು ಭಾರತದಲ್ಲಿ ಕಪೂರ್ ವಿರುದ್ಧದ ಪ್ರಕರಣಗಳನ್ನು ಶಾಶ್ವತವಾಗಿ ಮುಚ್ಚುವುದಿಲ್ಲ. ಆದರೆ, ಜರ್ಮನಿಯ ಸ್ಪಷ್ಟ ಒಪ್ಪಿಗೆಯಿಲ್ಲದೆ ಭಾರತದ ನ್ಯಾಯವ್ಯಾಪ್ತಿಯಲ್ಲಿ ಆತನನ್ನು ಬಂಧಿಸಲು ಸಾಧ್ಯವಿಲ್ಲ ಎಂಬುದನ್ನು ಖಚಿತಪಡಿಸಿದೆ.

ಮತ್ತೊಂದೆಡೆ, ಮ್ಯಾನ್‌ಹ್ಯಾಟನ್ ಪ್ರಾಸಿಕ್ಯೂಟರ್‌ಗಳು ಅಮೆರಿಕದಲ್ಲೂ ಕಪೂರ್ ವಿರುದ್ಧ ಬೃಹತ್ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದು, ಯುಎಸ್ ಹಸ್ತಾಂತರಕ್ಕೆ ಕಾಯುತ್ತಿದ್ದಾರೆ. ಆದ್ರೂ ಬರ್ಲಿನ್‌ನ ಅನುಮತಿಯಿಲ್ಲದೆ ಭಾರತವು ಆತನನ್ನು ಮೂರನೇ ದೇಶಕ್ಕೆ ವರ್ಗಾಯಿಸಲು ಸಾಧ್ಯವಿಲ್ಲದಿರುವುದರಿಂದ, ಜಾಗತಿಕ ಇತಿಹಾಸದಲ್ಲೇ ಅತ್ಯಂತ ದೊಡ್ಡ ಕಲಾ ಕಳ್ಳಸಾಗಣೆದಾರನ ಅಂತಿಮ ಶಿಕ್ಷೆಯ ಲೆಕ್ಕಾಚಾರ ಇಂದಿಗೂ ಅಪೂರ್ಣವಾಗಿಯೇ ಉಳಿದಿದೆ.