ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ 80's ಟ್ರೆಂಡ್‌ನಂತಹ ಫೋಟೋ ಆ್ಯಪ್‌ಗಳ ಬಗ್ಗೆ ರಾಜ್ಯ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಈ ಟ್ರೆಂಡ್‌ಗಳ ಮೂಲಕ ಮೂರನೇ ವ್ಯಕ್ತಿಗೆ ನಿಮ್ಮ ಫೋಟೋ ಹಂಚಿಕೊಳ್ಳುವುದರಿಂದ ಡೀಪ್‌ಫೇಕ್ ಅಶ್ಲೀಲ ವಿಡಿಯೋಗಳು ಸೃಷ್ಟಿಯಾಗುವ ಅಪಾಯವಿದೆ. ಅಲ್ಲದೆ, ಅಪರಿಚಿತ ಎಪಿಕೆ (APK) ಫೈಲ್ ಲಿಂಕ್ ಕ್ಲಿಕ್ ಮಾಡುವುದರಿಂದ ಬ್ಯಾಂಕ್ ಖಾತೆಯಲ್ಲಿರುವ ಹಣವೂ ಕಳ್ಳತನವಾಗಬಹುದು.

ಬೆಂಗಳೂರು: ಒಂದು ಟ್ರೆಂಡ್​ ಸೋಷಿಯಲ್​ ಮೀಡಿಯಾದಲ್ಲಿ ಹವಾ ಸೃಷ್ಟಿಸಿತು ಎಂದರೆ ನನ್ನದೂ ಒಂದಿರಲಿ ಎಂದು ಸೆಲೆಬ್ರಿಟಿಗಳಾದಿಯಾಗಿ ಬಹುತೇಕ ಮಂದಿ ಅದರ ಮೊರೆ ಹೋಗುತ್ತಾರೆ. ಅದರಲ್ಲಿ ಒಂದು 80's Trend. ಇದರ ಬಗ್ಗೆ ಪೊಲೀಸರಾದಿಯಾಗಿ ಬಹುತೇಕ ಮಂದಿ ಎಚ್ಚರಿಕೆ ಕೊಟ್ಟು ಆಗಿದೆ. ಡಾಟಾ ಕದಿಯುತ್ತಾರೆ ಎನ್ನುವ ಎಚ್ಚರಿಕೆ ಕೊಟ್ಟಿದ್ದರಿಂದ ಹಲವರು, ಕದಿಯೋದೆಲ್ಲಾ ಕದ್ದಾಗಿದೆ, ಇನ್ನೇನು ಬಾಕಿ ಇದೆ. ಇರೋ ಒಂದು ಲೈಫ್​ ಎಂಜಾಯ್​ ಮಾಡದಿದ್ರೆ ಹೇಗೆ? ಎಲ್ಲರೂ ಮಾಡ್ತಾರೆ, ನಾನೊಬ್ಬ- ನಾನೊಬ್ಬಳು ಮಾಡಿದ್ರೆ ಯಾರ ಗಂಟು ಹೋಗತ್ತೆ, ಡಾಟಾ ಕದೀತಾರಂತೆ, ಮತ್ತೊಂದು ಮಾಡ್ತಾರಂತೆ... ಉಫ್​ ಕೇಳಿ ಕೇಳಿ ಸಾಕಾಗಿ ಹೋಗಿದೆ ಎಂದೆಲ್ಲಾ ಸೋಷಿಯಲ್​ ಮೀಡಿಯಾಗಳಲ್ಲಿ ಬರೆದು ತಮ್ಮ ಫೋಟೋ ಹಾಕುವ ಚಾಳಿ ಶುರುವಾಗಿ ಕೆಲ ತಿಂಗಳೇ ಗತಿಸಿ ಹೋಗಿವೆ.

ನಿಜ. ಅವರಿಗೆ ಏನೂ ಆಗಲಿಲ್ಲ, ಇವರಿಗೆ ಏನೂ ಆಗಲಿಲ್ಲ. ಡಾಟಾ ಕದಿಯಲು ಹಲವು ಮಾರ್ಗ ಇದಾಗಲೇ ಮಾಡಿಬಿಟ್ಟಿದ್ದಾರೆ. ಡಾಟಾ ಕದಿಯೋದು ಕಷ್ಟದ ಕೆಲಸವೇನಲ್ಲ... ಎಲ್ಲವೂ ನಿಜನೇ. ಆದರೆ ಇಂಥ ಟ್ರೆಂಡ್​ಗಳಿಂದ ನಿಮ್ಮ ಬ್ಯಾಂಕ್​ ಖಾತೆ ಗೋವಿಂದ ಆದ್ರೆ ಮಾತ್ರ ಕೊನೆಗೆ ಅಳಬೇಡಿ ಎನ್ನುವ ಖಡಕ್​ ವಾರ್ನಿಂಗ್​ ಅನ್ನು ರಾಜ್ಯ ಪೊಲೀಸರು ನೀಡಿದ್ದಾರೆ. ಅವರಿಗೆ, ಇವರಿಗೆ ಏನೂ ಆಗಲಿಲ್ಲ ಎಂದ ಮಾತ್ರಕ್ಕೆ ನಿಮಗೂ ಆಗಬಾರದು ಎಂದೇನಿಲ್ಲ ಎನ್ನುವುದು ಪೊಲೀಸರ ಎಚ್ಚರಿಕೆ.

ಅಶ್ಲೀಲ ವಿಡಿಯೋಗಳಿಗೆ ದಾರಿ ಮಾಡಿಕೊಳ್ತಿದ್ದೀರಿ ಹುಷಾರ್​!

ಅಷ್ಟಕ್ಕೂ ಇದು ಹೇಗೆ ವರ್ಕ್​ ಆಗುತ್ತದೆಎಂದರೆ, ಇಂಥ ಟ್ರೆಂಡ್​ಗಳು ಬಂದಾಗ ಮೂರನೆಯ ಪಾರ್ಟಿಗೆ ನಿಮ್ಮ ಫೋಟೋ ಕೊಟ್ಟಿರುತ್ತೀರಿ. ಆಗ ನಿಮ್ಮ ವೈಯಕ್ತಿಕ ಡೇಟಾ ಆ ಮೂರನೆಯ ವ್ಯಕ್ತಿಗೆ ಹೋಗುತ್ತೆ. ಅಂಥದ್ದೇನು ಮಹಾ ನಮ್ಮ ಬಳಿ ಇದೆ ಎಂದುಕೊಳ್ಳಬೇಡಿ. ಅದರಲ್ಲಿಯೂ ಮಹಿಳೆಯರ ಫೋಟೋಗಳು ಸುಲಭದಲ್ಲಿ ಸಿಕ್ಕು, ಇದೇ ಮುಂದೆ ಡೀಪ್​ಫೇಕ್​ ಫೋಟೋಗಳಾಗಿ ವೈರಲ್​ ಆಗುತ್ತವೆ. ಯಾರದ್ದೋ ದೇಹಕ್ಕೆ ಇನ್ನಾರದ್ದೋ ಮುಖ ಹಾಕಿ, ನಿಮ್ಮದೇ ರೂಪವನ್ನು ಇನ್ನಾವುದೋ ಅವತಾರದಲ್ಲಿ ನಿಮ್ಮವರು ಸೋಷಿಯಲ್​ ಮೀಡಿಯಾದಲ್ಲಿ ನೋಡಬಹುದು. ಅದ್ಯಾವ ರೀತಿ ಇರುತ್ತದೆ ಎನ್ನೋದು ಹೇಳಬೇಕಾಗಿಲ್ಲ ಅಲ್ವಾ? ಆಗ ಅವರಿಗೆ ಆಗಿಲ್ಲ, ಇವರಿಗೆ ಆಗಿಲ್ಲ ಎಂದು ರೇಗುವಷ್ಟರಲ್ಲಿ ನಿಮ್ಮ ಇಂಥ ಫೋಟೋ, ವಿಡಿಯೋಗಳು ಎಲ್ಲೆಲ್ಲೋ ಹರಿದಾಡು ಏನೇನೋ ಆವಾಂತರ ಸೃಷ್ಟಿಯಾಗಿರುತ್ತದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಬ್ಯಾಂಕ್​ ಖಾತೆ ಗೋವಿಂದ

ನೀವು ಇಂಥ ಟ್ರೆಂಡ್​ ಮಾಡಲು ಹೋದಾಗ ನೀವು ಕೊಟ್ಟ ಮಾಹಿತಿ ಬಳಿಕ ನಿಮಗೊಂದು ಎಪಿಕೆ ಫೈಲ್​ ಬರುತ್ತದೆ. ನೀವು ಅದನ್ನು ನಿಮ್ಮ 80's Trend ಫೋಟೋ ಎಂದುಕೊಂಡು, ನಾನು ಹೇಗೆ ಕಾಣಿಸುತ್ತೇನೆ ಎನ್ನುವ ಭರದಲ್ಲಿ ಲಿಂಕ್​ ಓಪನ್​ ಮಾಡಿದ್ರೆ, ಅಲ್ಲಿಗೆ ನಿಮ್ಮ ಬ್ಯಾಂಕ್​ನಲ್ಲಿ ಹಣ ಗೋವಿಂದ! ಕೊನೆಗೆ ಸೈಬರ್​ ಕ್ರೈಂಗೆ ದೂರು ಕೊಟ್ಟು ಅಲೆದಾಡಿದ್ರೂ ಪ್ರಯೋಜನ ಆಗಲಿಕ್ಕಿಲ್ಲ. ಆದ್ದರಿಂದ ಇಂಥ ಟ್ರೆಂಡ್​ಗಳು ಬಂದಾಗ, ಅವುಗಳ ಹಿಂದಿನ ಉದ್ದೇಶವೇನು, ಇಂಥವುಗಳನ್ನು ಫ್ರೀ ಆಗಿ ಯಾಕೆ ಕೊಡ್ತಿದ್ದಾರೆ ಎನ್ನುವ ಯೋಚನೆ ಎಜುಕೇಟೆಡ್​ ಮಂದಿ ಮಾಡಬೇಕಿದೆ. ಇರೋದೊಂದೇ ಲೈಫು ಎಂದುಕೊಂಡು ಆ ಲೈಫ್​ ಎಂಜಾಯ್​ ಮಾಡಲು ಹೋಗಿ ಅನಾಹುತ ಆಗಬಾರದು ಎನ್ನೋದು ಪೊಲೀಸರ ಕಳಕಳಿ.