ಜಾಗತಿಕ ಸಂಸ್ಥೆಯಾದ 'ಡನ್ ಅಂಡ್ ಬ್ರಾಡ್‌ಸ್ಟ್ರೀಟ್' ವರದಿಯ ಪ್ರಕಾರ, ಭಾರತದ ಆರ್ಥಿಕ ಬೆಳವಣಿಗೆಯು ಮೆಟ್ರೋ ನಗರಗಳನ್ನು ಮೀರಿ ಸಣ್ಣ ಮತ್ತು ಉದಯೋನ್ಮುಖ ನಗರಗಳಿಗೆ ವಿಸ್ತರಿಸುತ್ತಿದೆ. ಪುಣೆ ಮೆಟ್ರೋ ನಗರಗಳಲ್ಲಿ ಅಗ್ರಸ್ಥಾನದಲ್ಲಿದ್ದರೆ, ಪಶ್ಚಿಮ ಬಂಗಾಳದ ಸೌತ್ 24 ಪರಗಣದಂತಹ ಜಿಲ್ಲೆಗಳು ಉದ್ಯಮ ಮತ್ತು ಹೂಡಿಕೆಯಲ್ಲಿ ಮುಂಚೂಣಿಯಲ್ಲಿವೆ.
ಬೆಂಗಳೂರು: ದೇಶದ ಆರ್ಥಿಕ ಬೆಳವಣಿಗೆ ಎಂದರೆ ಕೇವಲ ಮುಂಬೈ, ದೆಹಲಿ, ಬೆಂಗಳೂರು ಹಾಗೂ ಹೈದರಾಬಾದ್‌ನಂತಹ ಮೆಟ್ರೋ ನಗರಗಳು ಮಾತ್ರ ಎಂಬ ಕಾಲವೊಂದಿತ್ತು. ಆದರೆ ಈಗ ಆ ಲೆಕ್ಕಾಚಾರ ಸಂಪೂರ್ಣವಾಗಿ ಬದಲಾಗುತ್ತಿದೆ. ದೇಶದ ಆರ್ಥಿಕತೆಗೆ ಇದೀಗ ಸಣ್ಣ ಮತ್ತು ಉದಯೋನ್ಮುಖ ನಗರಗಳು ಅತಿ ದೊಡ್ಡ ಕೊಡುಗೆ ನೀಡುತ್ತಿವೆ ಎಂಬ ಅಚ್ಚರಿಯ ಸಂಗತಿಯನ್ನು ಹೊಸ ವರದಿಯೊಂದು ಹೊರಹಾಕಿದೆ.
ಜಾಗತಿಕ ಡೇಟಾ ಮತ್ತು ವಿಶ್ಲೇಷಣಾ ಸಂಸ್ಥೆಯಾದ 'ಡನ್ ಅಂಡ್ ಬ್ರಾಡ್‌ಸ್ಟ್ರೀಟ್' 2026ರ ಏಪ್ರಿಲ್-ಜೂನ್ ತ್ರೈಮಾಸಿಕದ 'ಸಿಟಿ ವಿಟಾಲಿಟಿ ಇಂಡೆಕ್ಸ್' ವರದಿಯನ್ನು ಬಿಡುಗಡೆ ಮಾಡಿದೆ. ಉಪಗ್ರಹಗಳಿಂದ ಪಡೆದ ದತ್ತಾಂಶಗಳು ಹಾಗೂ ವಿಭಿನ್ನ ಆರ್ಥಿಕ ಸೂಚಕಗಳನ್ನು ಆಧರಿಸಿ, ದೇಶದ ಬರೋಬ್ಬರಿ 800ಕ್ಕೂ ಹೆಚ್ಚು ಜಿಲ್ಲೆಗಳ ಆರ್ಥಿಕ ಚಟುವಟಿಕೆಗಳನ್ನು ಅಳೆದು ಈ ಸಮಗ್ರ ವರದಿಯನ್ನು ಸಿದ್ಧಪಡಿಸಲಾಗಿದೆ.
ಪುಣೆಗೆ ಅಗ್ರಸ್ಥಾನ, ಹೂಡಿಕೆಯಲ್ಲಿ ಭರ್ಜರಿ ವೇಗ ಕಾಯ್ದುಕೊಂಡ ಕೋಲ್ಕತ್ತಾ!
ವರದಿಯ ಪ್ರಕಾರ, ಭಾರತದ ಅತ್ಯಂತ ಪ್ರಭಾವಶಾಲಿ ಮೆಟ್ರೋಪಾಲಿಟನ್ ನಗರವಾಗಿ ಪುಣೆ ತನ್ನ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ಐಟಿ ಸೇವೆಗಳು, ಆಟೋಮೊಬೈಲ್ ಉತ್ಪಾದನೆ, ಶಿಕ್ಷಣ ಮತ್ತು ನಾವೀನ್ಯತೆ ಕ್ಷೇತ್ರಗಳಲ್ಲಿನ ಸಾಧನೆ ಪುಣೆಯ ಈ ಯಶಸ್ಸಿಗೆ ಕಾರಣವಾಗಿದೆ. ಈ ಪಟ್ಟಿಯಲ್ಲಿ ಗುಜರಾತ್‌ನ ಅಹಮದಾಬಾದ್ ಎರಡನೇ ಸ್ಥಾನದಲ್ಲಿದೆ.
ಇನ್ನು, ಮೆಟ್ರೋ ನಗರಗಳ ಪೈಕಿ ಕೋಲ್ಕತ್ತಾ ಅತಿ ವೇಗದ ಆರ್ಥಿಕ ಬೆಳವಣಿಗೆಯನ್ನು ದಾಖಲಿಸಿದ್ದು, ಹೂಡಿಕೆದಾರರ ನೆಚ್ಚಿನ ತಾಣವಾಗಿ ಹೊರಹೊಮ್ಮುತ್ತಿದೆ.
ಉದಯೋನ್ಮುಖ ನಗರಗಳದ್ದೇ ದರ್ಬಾರ್!
ಕೇವಲ ಬೃಹತ್ ಮಹಾನಗರಗಳು ಮಾತ್ರವಲ್ಲದೆ, ಜಿಲ್ಲಾಮಟ್ಟದ ಸಣ್ಣ ನಗರಗಳಲ್ಲೂ ಉದ್ಯಮ ಸ್ಥಾಪನೆ, ಹೂಡಿಕೆ ಮತ್ತು ಉದ್ಯೋಗ ಸೃಷ್ಟಿ ಪ್ರಕ್ರಿಯೆಗಳು ಅತ್ಯಂತ ವೇಗವಾಗಿ ನಡೆಯುತ್ತಿವೆ ಎಂದು ವರದಿ ಬೆಟ್ಟು ಮಾಡಿದೆ.
ಉದಾಹರಣೆಗೆ, ಪಶ್ಚಿಮ ಬಂಗಾಳದ ಸೌತ್ 24 ಪರಗಣ ಉದಯೋನ್ಮುಖ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ನಾರ್ತ್ 24 ಪರಗಣ ಮತ್ತು ಮಹಾರಾಷ್ಟ್ರದ ಥಾಣೆ ಜಿಲ್ಲೆಗಳು ನಂತರದ ಸ್ಥಾನಗಳಲ್ಲಿವೆ.
ಅದೇ ರೀತಿ ಜೈಪುರ, ನಾಸಿಕ್, ಸೂರತ್, ಮುರ್ಷಿದಾಬಾದ್ ಮತ್ತು ರಂಗಾರೆಡ್ಡಿ ಜಿಲ್ಲೆಗಳು ಆಯಾ ಭಾಗದ ಪ್ರಾದೇಶಿಕ ಅಭಿವೃದ್ಧಿಯಲ್ಲಿ ಪ್ರಮುಖ ಇಂಜಿನ್‌ಗಳಾಗಿ ಕೆಲಸ ಮಾಡುತ್ತಿವೆ.
ಕಳೆದ ಒಂದು ದಶಕದ (2012 ರಿಂದ) ಅಂಕಿ-ಅಂಶಗಳನ್ನು ಗಮನಿಸಿದರೆ; ಆನಂದ್, ಅಯೋಧ್ಯೆ, ರಾಂಪುರ ಹಾಗೂ ಔರಂಗಾಬಾದ್ ಸೇರಿದಂತೆ ಹಲವು ಜಿಲ್ಲೆಗಳು ಸತತವಾಗಿ ಅತ್ಯುತ್ತಮ ಆರ್ಥಿಕ ಪ್ರಗತಿಯನ್ನು ಸಾಧಿಸುತ್ತಲೇ ಬಂದಿವೆ ಎಂಬುದಾಗಿಯೂ ಸಿಟಿ ವಿಟಾಲಿಟಿ ಇಂಡೆಕ್ಸ್ ವಿವರಿಸಿದೆ.
ತಜ್ಞರ ಹೇಳುವುದೇನು?
ವರದಿಯ ಕುರಿತು ವಿಶ್ಲೇಷಣೆ ಮಾಡಿರುವ ಡನ್ & ಬ್ರಾಡ್‌ಸ್ಟ್ರೀಟ್ ಇಂಡಿಯಾದ ಮುಖ್ಯ ಅರ್ಥಶಾಸ್ತ್ರಜ್ಞ ಡಾ. ಅರುಣ್ ಸಿಂಗ್, "ಭಾರತದ ಆರ್ಥಿಕತೆಯ ದಿಕ್ಕು ಬದಲಾಗುತ್ತಿರುವುದನ್ನು ಈ ವರದಿ ಸ್ಪಷ್ಟವಾಗಿ ಸಾಬೀತುಪಡಿಸುತ್ತಿದೆ. ಪುಣೆಯಂತಹ ದೊಡ್ಡ ನಗರಗಳ ಜೊತೆಗೆ, ಸೌತ್ 24 ಪರಗಣದಂತಹ ಸಣ್ಣ ಜಿಲ್ಲೆಗಳು ಕೂಡ ಉದ್ಯೋಗ ಸೃಷ್ಟಿ ಮತ್ತು ಹೂಡಿಕೆ ಆಕರ್ಷಣೆಯಲ್ಲಿ ದೊಡ್ಡ ಮಟ್ಟದ ಕೊಡುಗೆ ನೀಡುತ್ತಿವೆ. ಈ ಬೆಳವಣಿಗೆಯು ಮುಂದಿನ ದಿನಗಳಲ್ಲಿ ದೇಶದ ಮೂಲಸೌಕರ್ಯ, ಉದ್ಯೋಗಾವಕಾಶ ಮತ್ತು ಬಂಡವಾಳದ ಹರಿವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ,” ಎಂದು ಅಭಿಪ್ರಾಯಪಟ್ಟಿದ್ದಾರೆ.
ಭಾರತದ ನಗರೀಕರಣ ಮತ್ತು ಅಭಿವೃದ್ಧಿ ಈಗ ಕೇವಲ ಒಂದೆರಡು ಮೆಟ್ರೋ ಸಿಟಿಗಳಿಗೆ ಸೀಮಿತವಾಗಿರದೆ, ದೇಶದ ಮೂಲೆ ಮೂಲೆಗೂ ವಿಸ್ತರಿಸುತ್ತಿರುವುದು ಉದ್ಯಮಿಗಳಿಗೆ ಹಾಗೂ ಹೂಡಿಕೆದಾರರಿಗೆ ಹೊಸ ಹೊಳಹು ನೀಡಿದೆ.


