KWIN City ದೊಡ್ಡಬಳ್ಳಾಪುರ ಮತ್ತು ದಾಬಸ್‌ಪೇಟೆ ನಡುವೆ 5000 ಎಕರೆಯಲ್ಲಿ ಅಭಿವೃದ್ಧಿಪಡಿಸುತ್ತಿರುವ ಕ್ವಿನ್ ಸಿಟಿಯಲ್ಲಿ, ಟೊಯೊಟಾ ಸೇರಿದಂತೆ 14 ಅಗ್ರಗಣ್ಯ ಕಂಪನಿಗಳು ಮತ್ತು ಸಂಶೋಧನಾ ಸಂಸ್ಥೆಗಳು ಒಡಂಬಡಿಕೆ ಮಾಡಿಕೊಂಡಿವೆ.

ಬೆಂಗಳೂರು: ದೊಡ್ಡಬಳ್ಳಾಪುರ ಮತ್ತು ದಾಬಸ್‌ಪೇಟೆ ನಡುವೆ ಅಭಿವೃದ್ಧಿಪಡಿಸುತ್ತಿರುವ ಕ್ವಿನ್ ಸಿಟಿಯಲ್ಲಿ ಟೊಯೊಟಾದಂತಹ 8 ಅಗ್ರಗಣ್ಯ ಕಂಪನಿಗಳು ಹಾಗೂ ಸಂಶೋಧನಾ ಸಂಸ್ಥೆಗಳು (ಒಟ್ಟು 14) ಒಡಂಬಡಿಕೆ ಮಾಡಿಕೊಂಡಿವೆ. ಕೆಲವು ವಿದೇಶಿ ವಿ.ವಿ.ಗಳು ತಮ್ಮ ಅಗತ್ಯಕ್ಕೆ ಹೊಂದುವಂತಹ ಕಟ್ಟಡಗಳನ್ನು (ಬಿಲ್ಡ್ ಟು ಸೂಟ್) ಕೇಳುತ್ತಿವೆ. ಈ ನಿಟ್ಟಿನಲ್ಲಿ ಸೂಕ್ತ ಮಾದರಿ ಅಳವಡಿಸಿಕೊಳ್ಳಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.

ಕಾಂಗ್ರೆಸ್‌ನ ಕೆ.ಶಿವಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಒಟ್ಟು 5000 ಎಕರೆಯಲ್ಲಿ ಕ್ವಿನ್ ಸಿಟಿ ಅಸ್ತಿತ್ವಕ್ಕೆ ಬರುತ್ತಿದೆ. ಈಗ ಮೊದಲ ಹಂತದ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಟೆಂಡರ್ ಪ್ರಕ್ರಿಯೆ ಮುಗಿದಿದೆ. ಟೊಯೊಟಾ ಕಂಪನಿಯು ತನ್ನ ತವರಾಗಿರುವ ಜಪಾನಿನಲ್ಲಿ ಕೂಡ ಹೊಂದಿಲ್ಲದಂತಹ ಅತ್ಯುತ್ಕೃಷ್ಟ ಗುಣಮಟ್ಟದ ನಾವೀನ್ಯತಾ ಕೇಂದ್ರವನ್ನು ಇಲ್ಲಿ ಸ್ಥಾಪಿಸುತ್ತಿದೆ. ಜೊತೆಗೆ ಜಾಗತಿಕ ಮಟ್ಟದ ವೈದ್ಯಕೀಯ ಸಂಸ್ಥೆಗಳು, ಭಾರತೀಯ ವಿಜ್ಞಾನ ಸಂಸ್ಥೆ, ರಾಷ್ಟ್ರೀಯ ಕಾನೂನು ಶಾಲೆಯ ಕ್ಯಾಂಪಸ್ ಕೂಡ ಇಲ್ಲಿ ಬರಲಿವೆ ಎಂದು ಅವರು ವಿವರಿಸಿದ್ದಾರೆ.

ಕ್ವಿನ್ ಸಿಟಿಯಲ್ಲಿ ವಿದೇಶಿ ವಿವಿಗಳ ಕ್ಯಾಂಪಸ್; ಮೈಸೂರಿನಲ್ಲಿ ಏರೋಸ್ಪೇಸ್ ಪಾರ್ಕ್!

ದೊಡ್ಡಬಳ್ಳಾಪುರ ಮತ್ತು ದಾಬಸ್ ಪೇಟೆ ನಡುವಿನ ಪ್ರದೇಶದಲ್ಲಿ ನಮ್ಮ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿ ಅಭಿವೃದ್ಧಿಪಡಿಸಲಾಗುತ್ತಿರುವ 5,000 ಎಕರೆ ವಿಸ್ತೀರ್ಣದ ಕ್ವಿನ್ ಸಿಟಿ, ಜಾಗತಿಕ ಮಟ್ಟದ ಶಿಕ್ಷಣ, ಸಂಶೋಧನೆ, ನಾವೀನ್ಯತೆ ಹಾಗೂ ಕೈಗಾರಿಕೆಗಳ ಸಂಗಮದ ತಾಣವಾಗಿ ರೂಪುಗೊಳ್ಳುತ್ತಿದೆ.

ಟೊಯೊಟಾ ಸಹಿತ ಅಗ್ರಗಣ್ಯ ಕಂಪನಿಗಳು ಹಾಗೂ ಸಂಶೋಧನಾ ಸಂಸ್ಥೆಗಳು ಈಗಾಗಲೇ ಕ್ವಿನ್ ಸಿಟಿಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಇಂಪೀರಿಯಲ್ ಕಾಲೇಜ್ ಲಂಡನ್ ಸೇರಿದಂತೆ ಹಲವು ಪ್ರತಿಷ್ಠಿತ ವಿದೇಶಿ ವಿಶ್ವವಿದ್ಯಾಲಯಗಳು ಕರ್ನಾಟಕದೊಂದಿಗೆ ಕೈಜೋಡಿಸಲು ಮುಂದೆ ಬಂದಿವೆ.

ವಿಶ್ವದರ್ಜೆಯ ಶಿಕ್ಷಣ ಮತ್ತು ಸಂಶೋಧನೆಯ ಅವಕಾಶಗಳು ನಮ್ಮ ಯುವಜನತೆಗೆ ರಾಜ್ಯದಲ್ಲಿಯೇ ದೊರೆಯಬೇಕು; ಜಾಗತಿಕ ಜ್ಞಾನವನ್ನು ಸ್ಥಳೀಯ ಪ್ರತಿಭೆಯೊಂದಿಗೆ ಬೆಸೆಯಬೇಕು ಎಂಬುದು ನಮ್ಮ ಮೂಲ ಉದ್ದೇಶ.

ಮೈಸೂರಿನಲ್ಲಿ ಏರೋಸ್ಪೇಸ್ ಪಾರ್ಕ್

ಇಷ್ಟೇ ಅಲ್ಲದೆ, ಪ್ರಾದೇಶಿಕ ಕೈಗಾರಿಕಾ ಪ್ರಗತಿಗೆ ವೇಗ ನೀಡಲು ಮೈಸೂರಿನಲ್ಲಿ ಏರೋಸ್ಪೇಸ್ ಪಾರ್ಕ್ ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದರಿಂದ ಸಾಂಸ್ಕೃತಿಕ ನಗರಿ ಮೈಸೂರು, ಉನ್ನತ ತಂತ್ರಜ್ಞಾನ ಮತ್ತು ರಕ್ಷಣಾ ಉತ್ಪಾದನಾ ಕ್ಷೇತ್ರದಲ್ಲಿ ಜಾಗತಿಕ ನಕ್ಷೆಯಲ್ಲಿ ಗುರುತಿಸಿಕೊಳ್ಳಲಿದೆ.

ಶಿಕ್ಷಣದಿಂದ ಸಂಶೋಧನೆಗೆ, ನಾವೀನ್ಯತೆಯಿಂದ ಕೈಗಾರಿಕೆಗೆ-ಕರ್ನಾಟಕದ ಪ್ರತಿಯೊಂದು ಪ್ರದೇಶಕ್ಕೂ ಸಮಗ್ರ ಅಭಿವೃದ್ಧಿಯ ಅವಕಾಶಗಳನ್ನು ವಿಸ್ತರಿಸುವುದು ನಮ್ಮ ಗುರಿ. ಜಾಗತಿಕ ಹೂಡಿಕೆಗಳಿಗೆ ಕರ್ನಾಟಕದ ಬಾಗಿಲು ಸದಾ ತೆರೆದಿದೆ; ಹೊಸ ತಲೆಮಾರಿನ ಉದ್ಯೋಗ, ಜ್ಞಾನ ಮತ್ತು ಸಮೃದ್ಧಿಯ ಕರ್ನಾಟಕ ನಿರ್ಮಾಣದ ನಮ್ಮ ಸಂಕಲ್ಪ ಮುಂದುವರಿಯಲಿದೆ.