ವಿಧಾನ ಪರಿಷತ್ ಕಲಾಪದಲ್ಲಿ ಪ್ರತಿಪಕ್ಷಗಳ ನಿರಂತರ ಗದ್ದಲದಿಂದಾಗಿ, ಸಭಾಪತಿ ಸಲೀಂ ಅಹಮದ್ ಅವರು ಕಠಿಣ ಕ್ರಮದ ಎಚ್ಚರಿಕೆ ನೀಡಿದರು. ಸಮಯಕ್ಕೆ ಸರಿಯಾಗಿ ಹಾಜರಿರದ ಸಚಿವರಿಗೂ ಅವರು ಎಚ್ಚರಿಸಿದರು. ನನ್ನ ಸೌಮ್ಯ ಸ್ವಭಾವ ದೌರ್ಬವಲ್ಲ. ಕಠಿಣ ಕ್ರಮ ಕೈಗೊಳ್ಳಬೇಕಾದೀತು ಎಂದು ಎಚ್ಚರಿಸಿದರು.
ವಿಧಾನ ಪರಿಷತ್ (ಆ.25): ‘ನನ್ನ ಸೌಮ್ಯ ಸ್ವಭಾವವನ್ನು ದೌರ್ಬಲ್ಯ ಎಂದು ಪರಿಗಣಿಸಬೇಡಿ. ಕಟು ನಿರ್ಧಾರ ಕೈಗೊಳ್ಳುವ ಪರಿಸ್ಥಿತಿ ನಿರ್ಮಿಸಬೇಡಿ. ಕಳೆದ ಆರು ದಿನಗಳಿಂದ ಕಲಾಪ ಹಾಳಾಗುತ್ತಿದೆ. ಇದೇ ರೀತಿ ಗಲಾಟೆ ಮುಂದುವರೆಸಿದರೆ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಸಭಾಪತಿ ಸಲೀಂ ಅಹಮದ್ ಎಚ್ಚರಿಸಿದ ಪ್ರಸಂಗ ನಡೆಯಿತು.
ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷದ ಸದಸ್ಯರು ಎಂದಿನಂತೆ ಪ್ರತಿಭಟನೆ ನಡೆಸಿ ಘೋಷಣೆ, ಧಿಕ್ಕಾರ ಕೂಗತೊಡಗಿದಾಗ ಸಭಾಪತಿಗಳು ಕೈ ಮುಗಿಯುತ್ತೇನೆ, ಗಲಾಟೆ ನಿಲ್ಲಿಸಿ ಎಂದು ಮನವಿ ಮಾಡಿದರು, ಆದರೆ ಇದಕ್ಕೆ ಪ್ರತಿಪಕ್ಷಗಳು ಸ್ಪಂದಿಸದೇ ಘೋಷಣೆ ಮುಂದುವರೆಸಿದಾಗ ಸಚಿವ ಬಸವರಾಜ ರಾಯರೆಡ್ಡಿ ಅವರು, ಸಭಾಪತಿಗಳು ಮನವಿ ಮಾಡಿದರೂ ಕೇಳದೆ ಇರುವುದು ನಿಮಗೆ ಗೌರವ ತರುವ ವಿಷಯವಲ್ಲ. ಸಚಿವ ಬಿ. ನಾಗೇಂದ್ರ ವಿಷಯದಲ್ಲಿ ಸೂಚನೆ ನೀಡಿದರೆ ಸರ್ಕಾರ ಚರ್ಚಿಸಲು ಸಿದ್ಧ ಎಂದರು. ಸಭಾ ನಾಯಕ ಡಾ. ಯತೀಂದ್ರ ಅವರು, ಸದನ ಹಾಗೂ ಸದಸ್ಯರಿಗೆ ಅಗೌರವ ತೋರಿಸುತ್ತಿರುವ ಪ್ರತಿಪಕ್ಷಗಳ ಸದಸ್ಯರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ ಎಂದರು.
ಸದನ ಸಚಿವರಿಗೆ ಕಾಯಲ್ಲ- ಸಲೀಂ ಗರಂ:
ಪ್ರಶ್ನೋತ್ತರ ವೇಳೆಯಲ್ಲಿ ಸಂಬಂಧಪಟ್ಟ ಸಚಿವರು ಹಾಜರು ಇರದೇ ಇರುವುದನ್ನು ಗಮನಿಸಿದ ಸಭಾಪತಿ ಸಲೀಂ ಅಹಮದ್ ಅವರು, ಈ ಸದನ ಸಚಿವರಿಗೆ ಕಾಯುವುದಲ್ಲ. ಸಚಿವರು ಬಂದು ಸದನಕ್ಕಾಗಿ ಕಾಯಬೇಕು. ನೀವು ಸರಿಯಾದ ಸಮಯಕ್ಕೆ ಬರಬೇಕು, ಇದು ನಮ್ಮ ಎಚ್ಚರಿಕೆ. ಸಮಯಕ್ಕೂ ಅರ್ಧ ಗಂಟೆ ಮೊದಲೇ ಸಚಿವರು ಬಂದು ಕಾಯಬೇಕು ಎಂದು ಗದ್ದಲದ ನಡುವೆಯೇ ಸಭಾಪತಿಗಳು ಕೊಂಚ ಗರಂ ಆಗಿ ಎಚ್ಚರಿಕೆ ನೀಡಿದರು.
-- -- -- -- ಹೊರ ಹಾಕುವ ಪ್ರಸ್ತಾಪ ಜಾರಿ ಇಲ್ಲ
ಸಚಿವ ಬಿ. ನಾಗೇಂದ್ರ ಅವರನ್ನು ಸಂಪುಟದಿಂದ ವಜಾ ಮಾಡಬೇಕೆಂದು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿರುವ ಪ್ರತಿಪಕ್ಷದ ಸದಸ್ಯರುಗಳನ್ನು ನಿಯಮ 327(1)(2)ರ ಪ್ರಕಾರ ಸದನದಿಂದ ಹೊರ ಹಾಕುವ ಪ್ರಸ್ತಾವವನ್ನು ಆಡಳಿತ ಪಕ್ಷ ಸಭಾನಾಯಕರಿಗೆ ಸಲ್ಲಿಸಿತ್ತು.
ಬೆಳಗ್ಗೆ ಕಲಾಪ ಆರಂಭವಾದ ಕೆಲ ನಿಮಿಷದಲ್ಲಿ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರು ತಾವು ಸಲ್ಲಿಸಿರುವ ಪ್ರಸ್ತಾವನೆಗೆ ಅವಕಾಶ ಕೊಡಬೇಕೆಂದು ಮನವಿ ಮಾಡಿದರು. ಆದರೆ ಸಭಾಪತಿಗಳು ಪ್ರಶ್ನೋತ್ತರ, ಶೂನ್ಯವೇಳೆ ನಂತರ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ ದಿಢೀರೆಂದು ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ ಹಿನ್ನೆಲೆಯಲ್ಲಿ ವಿಪಕ್ಷ ಸದಸ್ಯನ್ನು ಹೊರ ಹಾಕುವ ಪ್ರಸಂಗ ನಡೆಯಲಿಲ್ಲ.


