ಪಾಕಿಸ್ತಾನದ ಕಿರಾನಾ ಹಿಲ್ಸ್ ಅಣ್ವಸ್ತ್ರ ತಾಣದ ಮೇಲಿನ ದಾಳಿ ಉದ್ದೇಶಪೂರ್ವಕವಾಗಿರಲಿಲ್ಲ ಎಂದು ಮಾಜಿ ಸಿಡಿಎಸ್ ಜನರಲ್ ಅನಿಲ್ ಚೌಹಾಣ್ ಸ್ಪಷ್ಟಪಡಿಸಿದ್ದಾರೆ. 'ಆಪರೇಷನ್ ಸಿಂಧೂರ್' ವೇಳೆ ರಡಾರ್ ಪತ್ತೆಗಾಗಿ ಕಳುಹಿಸಿದ್ದ ಡ್ರೋನ್ ಇಂಧನ ಖಾಲಿಯಾಗಿ ಅಲ್ಲಿ ಅಪ್ಪಳಿಸಿತ್ತು ಎಂದು ಅವರು ವಿವರಿಸಿದ್ದಾರೆ.

ನವದೆಹಲಿ (ಆ.25): ಪಾಕಿಸ್ತಾನದ ಅತ್ಯಂತ ಸೂಕ್ಷ್ಮ ಸಶಸ್ತ್ರ ಪಡೆಗಳ ಅಣುವಿಜ್ಞಾನ ಸಂಶೋಧನಾ ಕೇಂದ್ರ ಹಾಗೂ ಅಣ್ವಸ್ತ್ರ ತಾಣವೆನಿಸಿದ 'ಕಿರಾನಾ ಹಿಲ್ಸ್' (Kirana Hills) ಮೇಲೆ ಭಾರತದ ದಾಳಿ ನಡೆದಿತ್ತೇ ಎಂಬ ದೀರ್ಘಕಾಲದ ಕುತೂಹಲ ಹಾಗೂ ರಹಸ್ಯಕ್ಕೆ ಕೊನೆಗೂ ತೆರೆ ಬಿದ್ದಿದೆ. ಕಳೆದ ವರ್ಷ ಭಾರತ ಪಹಲ್ಗಾಂ ಉಗ್ರಕೃತ್ಯಕ್ಕೆ ಪ್ರತಿಯಾಗಿ ನಡೆಸಿದ್ದ ಮಹಾ ಮಿಲಿಟರಿ ಕಾರ್ಯಾಚರಣೆ 'ಆಪರೇಷನ್ ಸಿಂಧೂರ್' (Operation Sindoor) ವೇಳೆ ಭಾರತದ ಸುಸಜ್ಜಿತ ದಾಳಿಕೋರ ಡ್ರೋನ್ ಪಾಕಿಸ್ತಾನದ ಕಿರಾನಾ ಹಿಲ್ಸ್‌ಗೆ ಅಪ್ಪಳಿಸಿದ್ದು ನಿಜ, ಆದರೆ ಆ ದಾಳಿ ಉದ್ದೇಶಪೂರ್ವಕವಾಗಿರಲಿಲ್ಲ ಎಂದು ಭಾರತದ ರಕ್ಷಣಾ ಪಡೆಗಳ ಮಾಜಿ ಮುಖ್ಯಸ್ಥ (CDS) ಜನರಲ್ ಅನಿಲ್ ಚೌಹಾಣ್ ಸ್ಪಷ್ಟಪಡಿಸಿದ್ದಾರೆ.

ನವದೆಹಲಿಯ ವಿವೇಕಾನಂದ ಇಂಟರ್ನ್ಯಾಷನಲ್ ಫೌಂಡೇಶನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಅಪರೂಪದ ಮಿಲಿಟರಿ ವಿವರಗಳನ್ನು ಹಂಚಿಕೊಂಡಿದ್ದಾರೆ.

ಕಿರಾನಾ ಹಿಲ್ಸ್ ದಾಳಿಯ ಹಿಂದಿನ ನೈಜ ಘಟನೆಯನ್ನು ವಿವರವಾಗಿ ವಿವರಿಸಿದ ಜನರಲ್ ಅನಿಲ್ ಚೌಹಾಣ್, 'ಆಪರೇಷನ್ ಸಿಂಧೂರ್ ವೇಳೆ ನಾವು ಕಿರಾನಾ ಹಿಲ್ಸ್ ಅನ್ನು ಗುರಿಯಾಗಿಸಿಕೊಂಡಿರಲಿಲ್ಲ ಎಂದು ವಾಯುಪಡೆಯ ಮಾಜಿ ನಿರ್ದೇಶಕ ಜನರಲ್ (ಎಸಿಒ) ಏರ್ ಮಾರ್ಷಲ್ ಎ.ಕೆ.ಭಾರ್ತಿ ನೀಡಿದ್ದ ಸ್ಪಷ್ಟನೆ ಸಂಪೂರ್ಣ ಸತ್ಯವಾಗಿದೆ. ಆದರೆ ಇದಕ್ಕೆ ಸರಿಹೊಂದುವ ವೈಜ್ಞಾನಿಕ ವಿವರಣೆ ನನ್ನಲ್ಲಿದೆ' ಎಂದರು.

'ದಾಳಿ ನಡೆಸುವ ಮುನ್ನ ನಾವು ಸರ್ಗೋಧಾ ಮತ್ತು ಸರ್ಗೋಧಾದಿಂದ ಉತ್ತರಕ್ಕೆ 10 ಕಿ.ಮೀ ದೂರದಲ್ಲಿರುವ ಕಿರಾನಾ ಹಿಲ್ಸ್ ಸುತ್ತಮುತ್ತಲಿನ ಪ್ರದೇಶಕ್ಕೆ ರಡಾರ್‌ಗಳನ್ನು ಪತ್ತೆಹಚ್ಚಲು ಬಹುಸಂಖ್ಯೆಯ 'ಲೋಯಿಟರಿಂಗ್ ಮ್ಯುನಿಷನ್‌ಗಳನ್ನು' (ಬಹುಶಃ ಇಸ್ರೇಲ್ ನಿರ್ಮಿತ ಹ್ಯಾರೋಪ್ ಡ್ರೋನ್‌ಗಳು) ಕಳುಹಿಸಿದ್ದೆವು. ಈ ಡ್ರೋನ್‌ಗಳಿಗೆ ಗರಿಷ್ಠ 2 ಗಂಟೆಗಳ ಕಾಲ ಆಕಾಶದಲ್ಲಿ ಹಾರಾಟ ಮಾಡುವ ಸಾಮರ್ಥ್ಯವಿರುತ್ತದೆ. ನಿಗದಿತ ಅವಧಿಯಲ್ಲಿ ಯಾವುದೇ ರಡಾರ್ ಸಿಗದಿದ್ದರೆ, ಇಂಧನ ಮುಗಿಯುತ್ತಿದ್ದಂತೆ ಅವು ಎಲ್ಲಾದರೂ ಒಂದೆಡೆ ಅಪ್ಪಳಿಸಿ ಸ್ಫೋಟಗೊಳ್ಳುತ್ತವೆ. ಅದೇ ರೀತಿ ರಡಾರ್ ಸಿಗದೆ ಇಂಧನ ಖಾಲಿಯಾದ ಒಂದು ಡ್ರೋನ್ ಕಿರಾನಾ ಹಿಲ್ಸ್ ಬೆಟ್ಟಕ್ಕೆ ಅಪ್ಪಳಿಸಿರಬೇಕು" ಎಂದು ಅವರು ವಿವರಿಸಿದರು.

ಸ್ಕರ್ದು ಮೇಲೆ ದಾಳಿಗೆ ಸಿದ್ಧವಾಗಿದ್ದೆವು, ಬಳಿಕ ಭೋಲಾರಿಗೆ ಶಿಫ್ಟ್‌ ಆದೆವು

ಇದೇ ವೇಳೆ ಭಾರತೀಯ ವಾಯುಪಡೆಗೆ (IAF) ಪಾಕ್ ಆಕ್ರಮಿತ ಕಾಶ್ಮೀರದ (PoK) ಸ್ಕರ್ದು (Skardu) ಮೇಲೆಯೂ ದಾಳಿ ನಡೆಸಲು ಹಸಿರು ನಿಶಾನೆ ನೀಡಲಾಗಿತ್ತು ಎಂಬ ಮಹತ್ವದ ಸಂಗತಿಯನ್ನು ಜನರಲ್ ಚೌಹಾಣ್ ಬಹಿರಂಗಪಡಿಸಿದ್ದಾರೆ. ಸರ್ಗೋಧಾ ಮೇಲೆ ದಾಳಿಗೆ ವಾಯುಪಡೆ ಮುಖ್ಯಸ್ಥರು ಅನುಮತಿ ಕೇಳಿದಾಗ 'ಗೋ ಅಹೆಡ್‌' ಎಂದಿದ್ದ ಚೌಹಾಣ್, ಹೆಚ್ಚುವರಿಯಾಗಿ ಎರಡು ಗುರಿಗಳನ್ನು ಗುರುತಿಸಲು ಸೂಚಿಸಿದ್ದರು. ಅದರಲ್ಲಿ ಒಂದಾಗಿದ್ದ 'ಸ್ಕರ್ದು' ಮೇಲೆ ದಾಳಿಗೆ ಸಿದ್ಧತೆ ನಡೆದಿತ್ತಾದರೂ, ಅಲ್ಲಿ ತೀವ್ರ ಹವಾಮಾನ ವೈಪರೀತ್ಯ ಉಂಟಾದ ಕಾರಣ ಕೊನೆ ಕ್ಷಣದಲ್ಲಿ ಯೋಜನೆಯನ್ನು 'ಭೋಲಾರಿ'ಗೆ (Bholari) ಶಿಫ್ಟ್‌ ಮಾಡಲಾಯಿತು ಎಂದಿದ್ದಾರೆ.

ಗಾಂಧಿನಗರ ಮೂಲದ 'ಸೌತ್ ವೆಸ್ಟರ್ನ್ ಏರ್ ಕಮಾಂಡ್' ನಡೆಸಿದ ಈ 'ಭೋಲಾರಿ ಹ್ಯಾಂಗರ್' ಮೇಲಿನ ಭೀಕರ ದಾಳಿಯು ಮೇ 10ರ ಭಾರತೀಯ ವಾಯು ಕಾರ್ಯಾಚರಣೆಯ ಅತ್ಯಂತ ಪ್ರಮುಖ ಹಾಗೂ ಐತಿಹಾಸಿಕ ವಿಜಯವಾಗಿ ದಾಖಲಾಯಿತು.

ಸ್ಯಾಟಲೈಟ್ ಚಿತ್ರಗಳಲ್ಲಿ ಸೆರೆಯಾಗಿತ್ತು ಭಾರತದ ಸರ್ಜಿಕಲ್ ಕಂಟ್ರೋಲ್!

ಎನ್‌ಡಿಟಿವಿ ಮೊದಲ ಬಾರಿಗೆ ಪ್ರಸಾರ ಮಾಡಿದ್ದ ಉಪಗ್ರಹ (Satellite) ಚಿತ್ರಗಳು ಭೋಲಾರಿ ಮಿಲಿಟರಿ ಹ್ಯಾಂಗರ್ ಮೇಲಿನ ದಾಳಿಯ ತೀವ್ರತೆಯನ್ನು ಸಾರಿದ್ದವು. ಬೃಹತ್ ಕಟ್ಟಡದ ಮೇಲ್ಚಾವಣಿ ಸಂಪೂರ್ಣವಾಗಿ ಛಿದ್ರಗೊಂಡು ಕಪ್ಪಗಾದ ದೊಡ್ಡ ಕುಳಿಯನ್ನು ಸ್ಪಷ್ಟವಾಗಿ ಕಾಣಿಸಿತ್ತು. ಕಟ್ಟಡದ ರನ್-ವೇ ಸಂಪರ್ಕಿಸುವ ಜಾಗದಾದ್ಯಂತ ಯುದ್ಧ ವಿಮಾನಗಳ ಬಿಡಿಭಾಗಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ದಾಳಿಯ ಸ್ಫೋಟದ ತೀವ್ರತೆಯನ್ನು ಜಗತ್ತಿಗೆ ಸಾರಿತ್ತು. ಬೃಹತ್ ಕಟ್ಟಡದ ಕೇವಲ ಒಂದೇ ಒಂದು ಭಾಗಕ್ಕೆ ಮಾತ್ರ ಹಾನಿಯಾಗಿದ್ದು, ಭಾರತೀಯ ವಾಯುಪಡೆಯ ಅಚ್ಚುಕಟ್ಟಾದ 'ಪ್ರಿಸಿಷನ್ ಸ್ಟ್ರೈಕ್' (ನಿಖರ ದಾಳಿ) ಸಾಮರ್ಥ್ಯಕ್ಕೆ ಸಾಕ್ಷಿಯಾಗಿತ್ತು.