ಕೇಂದ್ರ ಸರ್ಕಾರವು ಕರ್ನಾಟಕದ ಹುಬ್ಬಳ್ಳಿ, ವಾರಾಣಸಿ ಮತ್ತು ತಿರುಪತಿ ಸೇರಿದಂತೆ ದೇಶದ 11 ವಿಮಾನ ನಿಲ್ದಾಣಗಳನ್ನು ಸಾರ್ವಜನಿಕ-ಖಾಸಗಿ ಪಾಲುದಾರಿಕೆಯಡಿ (ಪಿಪಿಪಿ) ಗುತ್ತಿಗೆ ನೀಡಲು ಯೋಜಿಸಿದೆ. ಈ ವಿಮಾನ ನಿಲ್ದಾಣಗಳನ್ನು ಐದು ಗುಚ್ಛಗಳಾಗಿ ವಿಂಗಡಿಸಿ, 50 ವರ್ಷಗಳ ಅವಧಿಗೆ ಖಾಸಗಿ ಕಂಪನಿಗಳಿಗೆ ಹಸ್ತಾಂತರಿಸಲಾಗುವುದು.

ನವದೆಹಲಿ: ಕರ್ನಾಟಕದ ಹುಬ್ಬಳ್ಳಿ, ಉತ್ತರಪ್ರದೇಶದ ವಾರಾಣಸಿ ಹಾಗೂ ಆಂಧ್ರಪ್ರದೇಶದ ತಿರುಪತಿ ಸೇರಿ ದೇಶದ 11 ವಿಮಾನ ನಿಲ್ದಾಣಗಳನ್ನು ಸಾರ್ವಜನಿಕ- ಖಾಸಗಿ ಪಾಲುದಾರಿಕೆಯಡಿ ಖಾಸಗಿ ಕಂಪನಿಗಳಿಗೆ ಗುತ್ತಿಗೆ ನೀಡಲು ಕೇಂದ್ರ ಸರ್ಕಾರ ಯೋಜಿಸಿದೆ.

11 ವಿಮಾನ ನಿಲ್ದಾಣಗಳನ್ನು ಐದು ಗುಚ್ಛಗಳಾಗಿ ಮಾಡಿ, ಅವನ್ನು ಖಾಸಗಿ ಕಂಪನಿಗಳಿಗೆ ಗುತ್ತಿಗೆ ನೀಡುವುದು ಸರ್ಕಾರದ ಉದ್ದೇಶ. ಇದರಿಂದಾಗಿ ವಿಮಾನ ನಿಲ್ದಾಣಗಳಲ್ಲಿ ಗುತ್ತಿಗೆ ಪಡೆದ ಕಂಪನಿಗಳೇ ಹೂಡಿಕೆ ಮಾಡಿ, ಮೂಲಸೌಕರ್ಯವನ್ನು ಪ್ರಯಾಣಿಕರಿಗೆ ಕಲ್ಪಿಸಿ ನಿರ್ವಹಣೆ ಮಾಡಲಿವೆ. ಇದರಿಂದ ಸರ್ಕಾರದ ಬೊಕ್ಕಸದ ಮೇಲೆ ಹೊರೆ ತಪ್ಪಿದಂತಾಗುತ್ತದೆ. ನಾಗರಿಕ ವಿಮಾನಯಾನ ಸಚಿವಾಲಯದ ಪ್ರಸ್ತಾವಕ್ಕೆ ಆ.4ರಂದೇ ಸಾರ್ವಜನಿಕ ಖಾಸಗಿ ಪಾಲುದಾರಿಕೆ ಪರಿಶೀಲನಾ ಸಮಿತಿ ತಾತ್ವಿಕ ಒಪ್ಪಿಗೆ ಕೊಟ್ಟಿದೆ.

ತಿರುಪತಿ ಏರ್‌ಪೋರ್ಟ್ ಅನ್ನು ತಿರುಚಿರಾಪಳ್ಳಿ ಹಾಗೂ ಹುಬ್ಬಳ್ಳಿಯನ್ನು ಭುವನೇಶ್ವರ ವಿಮಾನ ನಿಲ್ದಾಣದ ಜತೆಗೂಡಿಸಿ ಹಂಚಿಕೆ ಮಾಡಲಾಗುತ್ತದೆ. ಗಯಾ, ಕುಶಿನಗರಗಳ ಜತೆ ವಾರಾಣಸಿ ವಿಮಾನ ನಿಲ್ದಾಣವನ್ನು ಹಂಚಲಾಗುತ್ತದೆ. ಈ ಗುತ್ತಿಗೆ ಅವಧಿ 50 ವರ್ಷ. 2018-19ರಲ್ಲೂ ಸರ್ಕಾರ ಆರು ವಿಮಾನ ನಿಲ್ದಾಣಗಳನ್ನು ಇದೇ ರೀತಿ ಗುತ್ತಿಗೆ ಕೊಟ್ಟಿತ್ತು.

ದೆಹಲಿ-ಹುಬ್ಬಳ್ಳಿ ಮತ್ತು ದೆಹಲಿ-ಬೆಳಗಾವಿ ಮಧ್ಯೆ ಪ್ರತಿನಿತ್ಯ ವಿಮಾನ ಸೇವೆ

ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಪ್ರಯಾಣಿಕರಿಗಾಗಿ ಇಂಡಿಗೋ ಏರ್‌ಲೈನ್ಸ್ ಸಂಸ್ಥೆ ದೆಹಲಿ-ಹುಬ್ಬಳ್ಳಿ ಮತ್ತು ದೆಹಲಿ-ಬೆಳಗಾವಿ ಮಧ್ಯೆ ಪ್ರತಿನಿತ್ಯ ವಿಮಾನ ಸೇವೆ ಆರಂಭಿಸುವ ಸಿಹಿ ಸುದ್ದಿ ನೀಡಿದೆ. ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್‌ ಜೋಶಿ ಅವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಇಂಡಿಗೋ ಏರ್‌ಲೈನ್ಸ್ ಅ.1ರಿಂದಲೇ ಪ್ರತಿದಿನ ವಿಮಾನ ಸಂಚಾರ ಆರಂಭಿಸುವುದಾಗಿ ಪ್ರಕಟಿಸಿದೆ.

ಇದನ್ನೂ ಓದಿ: ಹುಬ್ಬಳ್ಳಿ- ಪುಣೆ- ಪಿಂಪ್ರಿ ನಡುವೆ ರಾಜರಥ ಎಸಿ ಸ್ಲೀಪರ್ ಬಸ್ ಸಂಚಾರ ಆರಂಭ: ಮುಂಗಡ ಬುಕ್ಕಿಂಗ್‌ನಲ್ಲಿ ಡಿಸ್ಕೌಂಟ್ ಲಭ್ಯ

ಈ ಮಹಾನಗರಗಳ ‎‎ಪ್ರಯಾಣಿಕರ ಅನುಕೂಲ ಹಾಗೂ ಜನರ ಬೇಡಿಕೆ ಗಮನದಲ್ಲಿಟ್ಟುಕೊಂಡು ಸಚಿವ ಪ್ರಹ್ಲಾದ್ ಜೋಶಿ ಅವರು ದೆಹಲಿ-ಹುಬ್ಬಳ್ಳಿ ಹಾಗೂ ದೆಹಲಿ-ಬೆಳಗಾವಿ ನಡುವೆ ದೈನಂದಿನ ವಿಮಾನ ಸೇವೆ ಆರಂಭಿಸುವಂತೆ ಇತ್ತೀಚೆಗೆ ಇಂಡಿಗೋ ಏರ್‌ಲೈನ್ಸ್ ಅಧಿಕಾರಿಗಳ ಗಮನ ಸೆಳೆದಿದ್ದರು.

ಇದನ್ನೂ ಓದಿ: ISRO ಉಡಾವಣಾ ವಾಹನ ತಯಾರಿಕೆ ಖಾಸಗಿ ವಲಯಕ್ಕೆ? ಕಾಂಗ್ರೆಸ್‌ ಕಿಡಿ, ಬಿಜೆಪಿ ಸಮರ್ಥನೆ