ಪ್ರಧಾನಿ ನರೇಂದ್ರ ಮೋದಿ ಮುಂಬೈ ಕಾರ್ಯಕ್ರಮದಲ್ಲಿ ಭದ್ರತಾ ಆತಂಕ ಎದುರಾದ ಘಟನೆ ನಡೆದಿದೆ. ಪ್ರಧಾನ ಮಂತರಿ ಕಾರ್ಯಾಲಯದ ಅಧಿಕಾರಿ ಸೋಗಿನಲ್ಲಿ ಗನ್ ಹಿಡಿದು ಕಾರ್ಯಕ್ರಮ ಬಂದ ಇಬ್ಬರನ್ನು ಅರೆಸ್ಟ್ ಮಾಡಲಾಗಿದೆ.

ಮುಂಬೈ (ಸೆ.08) ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಭದ್ರತಾ ಆತಂಕ ಘಟನೆ ಇದೀಗ ಗಂಭೀರ ಸ್ವರೂಪ ಪಡೆದುಕೊಂಡಿದೆ. ಮುಂಬೈನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೋದಿ ಪಾಲ್ಗೊಳ್ಳುವ ಮೊದಲೇ ಭದ್ರತಾ ಪಡೆಗಳು ಇಬ್ಬರನ್ನು ಅರೆಸ್ಟ್ ಮಾಡಿದೆ. ಈ ಪೈಕಿ ಒರ್ವನಿಂದ ರಿವಾಲ್ವರ್ ವಶಕ್ಕೆ ಪಡೆಯಲಾಗಿದೆ. ಪ್ರಧಾನ ಮಂತ್ರಿ ಕಾರ್ಯಾಲಯದ ಐಡಿ ಕಾರ್ಡ್ ಬಳಸಿ ಮೋದಿ ಕಾರ್ಯಕ್ರಮದ ಪ್ರದೇಶಕ್ಕೆ ಆಗಮಿಸಿದ್ದರು. ಅನುಮಾನಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ಇಬ್ಬರನ್ನು ಭದ್ರತಾ ಪಡೆಗಳು ಅರೆಸ್ಟ್ ಮಾಡಿ ವಿಚಾರಣೆ ತೀವ್ರಗೊಳಿಸಿದೆ.

NMACC ಆಯೋಜಿಸಲಾಗಿದ್ದ ಕಾರ್ಯಕ್ರಮ

ಮುಂಬೈ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (NMACC) ಆಯೋಜಿಸಲಾಗಿದ್ದ ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಇಂದು (ಸೆ.08) ಕಾರ್ಯಕ್ರಮ ಆಯೋಜಿಸಲಾಗಿತ್ತು. ಸೋಮವಾರ ರಾತ್ರಿ ವೇಳೆ ಇಬ್ಬರನ್ನು ಭದ್ರತಾ ಪಡೆಗಳು ಅರೆಸ್ಟ್ ಮಾಡಿದೆ. ಅನುಮಾನಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ವ್ಯಕ್ತಿ ಹಾಗೂ ಆತನ ಬಾಡಿಗಾರ್ಡ್‌ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಓರ್ವನಿಂದ ಒಂದು ಲೈಲೆನ್ಸ್ ಪಿಸ್ತೂಲ್ ವಶಕ್ಕೆ ಪಡೆಯಲಾಗಿದೆ.

ಬಂಧಿತನ ಕೈಯಲ್ಲಿತ್ತು ಪಿಎಂಒ ಐಡಿ ಕಾರ್ಡ್

ಬಂಧಿತನನ್ನು ರೋಹನ್ ಪರೇಖ್ ಎಂದು ಗುರುತಿಸಲಾಗಿದೆ. 24 ವರ್ಷದ ಈತನ ವಿಚಾರಣೆ ವೇಳೆ ಐಡಿ ಕಾರ್ಡ್ ಪತ್ತೆಯಾಗಿದೆ. ಪ್ರಧಾನ ಮಂತ್ರಿ ಕಾರ್ಯಾಲಯದ ಐಡಿ ಕಾರ್ಡ್ ಹಲವು ಅನುಮಾನಕ್ಕೆ ಕಾರಣವಾಗಿದೆ. ಭದ್ರತಾ ಪಡೆಗಳು ಈ ಐಡಿ ಕಾರ್ಡ್ ಪರಿಶೀಲನೆ ಮಾಡಿದಾಗ ಇದು ನಕಲಿ ಎಂದು ಪತ್ತೆಯಾಗಿದೆ. ಪ್ರಕರಣ ಸಂಬಂಧ ಇಬ್ಬರನ್ನು ಅರೆಸ್ಟ್ ಮಾಡಲಾಗಿದೆ. ಇದೀಗ ಇಬ್ಬರ ವಿಚಾರಣೆ ನಡೆಯುತ್ತಿದೆ. ಗನ್ ಹಿಡಿದು, ನಕಲಿ ಐಡಿ ಕಾರ್ಡ್ ಬಳಸಿಕೊಂಡು ಮೋದಿ ಕಾರ್ಯಕ್ರಮ ಪ್ರದೇಶ ಪ್ರವೇಶಿಸಿದ ಹಿಂದಿನ ಉದ್ದೇಶ ಕುರಿತು ವಿಚಾರಣೆ ನಡೆಯುತ್ತಿದೆ.

ಸೆಪ್ಟೆಂಬರ್ 11ರ ವರೆಗೆ ಪೊಲೀಸ್ ಕಸ್ಟಡಿ

ರೋಹನ್ ಪರೇಖ್ ಡ್ರೋನ್ ಉದ್ಯಮ ನಡೆಸುತ್ತಿದ್ದಾರೆ ಅನ್ನೋ ಮಾಹಿತಿ ಬಯಲಾಗಿದೆ. ಕಾರ್ಯಕ್ರಮ ಪ್ರದೇಶಕ್ಕೆ ಮೊದಲು ರೋಹನ್ ಎಂಟ್ರಿಕೊಟ್ಟಿದ್ದ. ಬಳಿಕ ಆತನ ಗನ್ ಮ್ಯಾನ್ ಆಗಮಿಸಿದ್ದಾನೆ. ಮೆಟಲ್ ಡಿಟೆಕ್ಟರ್‌ನಲ್ಲಿ ಅಲರ್ಟ್ ನೀಡುತ್ತಿದ್ದಂತೆ ಪೊಲೀಸರು ತಪಾಸಣೆ ನಡಿಸಿದ್ದಾರೆ. ಈ ವೇಳೆ ಗನ್ ಪತ್ತೆಯಾಗಿದೆ. ಬಂಧಿತ ಇಬ್ಬರನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿದೆ. ಸೆಪ್ಟೆಂಬರ್ 11ರ ವರೆಗೆ ಪೊಲೀಸ್ ಕಸ್ಟಡಿ ಒಪ್ಪಿಸಲಾಗಿದೆ. ಬಿಕೆಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.