ಸಿಂಫನಿ ಲಿಮಿಟೆಡ್ ಸ್ಥಾಪಕ ಅಚಲ್ ಅನಿಲ್ ಬಕೇರಿ ಅವರು ತಮ್ಮ ಉದ್ಯೋಗಿಗಳಿಗೆ 20 ಕೋಟಿ ರೂ. ಮೌಲ್ಯದ ಷೇರುಗಳನ್ನು ಉಡುಗೊರೆಯಾಗಿ ನೀಡಲು ನಿರ್ಧರಿಸಿದ್ದು, ಇದರಿಂದ ಷೇರು ಬೆಲೆ ಶೇ. 13 ರಷ್ಟು ಏರಿಕೆಯಾಗಿದೆ. ಕೂಲರ್ ಜೊತೆಗೆ ಎಸಿ ಮತ್ತು ಫ್ಯಾನ್ ಮಾರುಕಟ್ಟೆಗೂ ಪ್ರವೇಶಿಸಲು ಕಂಪನಿ ಸಜ್ಜಾಗಿದ್ದು, ಇದು ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸಿದೆ.

ಮುಂಬೈ: ಷೇರು ಮಾರುಕಟ್ಟೆಯಲ್ಲಿ ಮಲ್ಟಿಬ್ಯಾಗರ್ ರಿಟರ್ನ್ ನೀಡಿರುವ ಪ್ರಖ್ಯಾತ ಏರ್ ಕೂಲರ್ ತಯಾರಿಕಾ ಕಂಪನಿ 'ಸಿಂಫನಿ ಲಿಮಿಟೆಡ್' (Symphony Limited) ಈಗ ಸುದ್ದಿಯಲ್ಲಿದೆ. ಕಂಪನಿಯ ಸ್ಥಾಪಕರು ತಮ್ಮ ಉದ್ಯೋಗಿಗಳಿಗೆ ಬರೋಬ್ಬರಿ 20 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಉಡುಗೊರೆಯಾಗಿ ನೀಡುವುದಾಗಿ ಘೋಷಿಸಿದ್ದಾರೆ. ಈ ಸುದ್ದಿ ಹೊರಬೀಳುತ್ತಿದ್ದಂತೆಯೇ ಕಂಪನಿಯ ಷೇರು ಬೆಲೆ ಇಂದು ಶೇ. 13 ರಷ್ಟು ಏರಿಕೆ ಕಂಡಿದೆ.

20 ಕೋಟಿ ರೂಪಾಯಿ ಮೌಲ್ಯದ ಷೇರು ಗಿಫ್ಟ್

ಸಿಂಫನಿ ಲಿಮಿಟೆಡ್‌ನ ಸ್ಥಾಪಕ ಪ್ರವರ್ತಕ ಅಚಲ್ ಅನಿಲ್ ಬಕೇರಿ ಅವರು ತಮ್ಮ ಕಂಪನಿಯ ಉದ್ಯೋಗಿಗಳಿಗೆ ಸುಮಾರು 3,43,000 ಇಕ್ವಿಟಿ ಷೇರುಗಳನ್ನು ಉಡುಗೊರೆಯಾಗಿ ನೀಡುತ್ತಿದ್ದಾರೆ. ಇದು ಕಂಪನಿಯ ಒಟ್ಟು ಬಂಡವಾಳದ ಶೇ. 0.5 ರಷ್ಟಿದ್ದು, ಇದರ ಮಾರುಕಟ್ಟೆ ಮೌಲ್ಯ ಅಂದಾಜು 20 ಕೋಟಿ ರೂಪಾಯಿಗಳಾಗಿದೆ.

ಈ ಉಡುಗೊರೆಯನ್ನು ಒಂದೇ ಬಾರಿಗೆ ನೀಡುವ ಬದಲಾಗಿ ಮುಂದಿನ 4 ವರ್ಷಗಳ ಅವಧಿಯಲ್ಲಿ ಹಂತ ಹಂತವಾಗಿ ವಿತರಿಸಲಾಗುತ್ತದೆ. ಪ್ರಸ್ತುತ ಉದ್ಯೋಗಿಗಳು ಮಾತ್ರವಲ್ಲದೆ, ಮಾಜಿ ಉದ್ಯೋಗಿಗಳು ಮತ್ತು ಅವರ ಕುಟುಂಬದವರು ಕಂಪನಿಯ ಬೆಳವಣಿಗೆಗೆ ನೀಡಿದ ಕೊಡುಗೆಯನ್ನು ಸ್ಮರಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಉದ್ಯೋಗಿಗಳಿಗೆ ಇದು ಉಚಿತ

ಈ ಯೋಜನೆಯ ವಿಶೇಷತೆಯೆಂದರೆ.. ಉದ್ಯೋಗಿಗಳು ಈ ಷೇರುಗಳನ್ನು ಪಡೆಯಲು ಒಂದು ರೂಪಾಯಿ ಕೂಡ ಖರ್ಚು ಮಾಡಬೇಕಿಲ್ಲ. ಇದು ಪ್ರವರ್ತಕರ ವೈಯಕ್ತಿಕ ಪಾಲಿನಿಂದ ನೀಡುತ್ತಿರುವ ಉಡುಗೊರೆಯಾದ್ದರಿಂದ ಕಂಪನಿಯ ನಗದು ಹರಿವಿನ (Cash Flow) ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಮಾಲೀಕತ್ವದ ಭಾವನೆಯನ್ನು ಉದ್ಯೋಗಿಗಳಲ್ಲಿ ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ಷೇರು ಮಾರುಕಟ್ಟೆಯಲ್ಲಿ ಭರ್ಜರಿ ಏರಿಕೆ

ಈ ಘೋಷಣೆಯ ಬೆನ್ನಲ್ಲೇ ಬಿಎಸ್‌ಇ (BSE) ನಲ್ಲಿ ಸಿಂಫನಿ ಷೇರುಗಳು ಶೇ. 13 ಕ್ಕಿಂತ ಹೆಚ್ಚು ಜಿಗಿದು 652.25 ರೂ. ಮಟ್ಟವನ್ನು ತಲುಪಿದವು. ಕಂಪನಿಯ ಈ ಮಾನವೀಯ ನಡೆ ಹೂಡಿಕೆದಾರರ ವಿಶ್ವಾಸವನ್ನೂ ಹೆಚ್ಚಿಸಿದೆ.

ಕೂಲರ್ ಮಾರುಕಟ್ಟೆಯಲ್ಲಿ ನಾಯಕನಾಗಿರುವ ಸಿಂಫನಿ ಈಗ ತನ್ನ ವ್ಯವಹಾರವನ್ನು ವಿಸ್ತರಿಸಲು ಮುಂದಾಗಿದೆ. ಮುಂದಿನ ದಿನಗಳಲ್ಲಿ ಕಂಪನಿಯು ಏರ್ ಕಂಡಿಷನರ್ (AC), ಏರ್ ಪ್ಯೂರಿಫೈಯರ್ ಮತ್ತು ಬಿಎಲ್‌ಡಿಸಿ (BLDC) ಸೀಲಿಂಗ್ ಫ್ಯಾನ್ ಮಾರುಕಟ್ಟೆಗೆ ಲಗ್ಗೆ ಇಡಲು ಯೋಜಿಸಿದೆ. ದೇಶಾದ್ಯಂತ ಬಲಿಷ್ಠ ಡೀಲರ್ ಜಾಲವನ್ನು ಹೊಂದಿರುವ ಕಾರಣ, ಹೊಸ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಯಶಸ್ವಿಯಾಗುವ ನಿರೀಕ್ಷೆಯಿದೆ. ಇದರಿಂದ ಕಂಪನಿಯ ಲಾಭಾಂಶ ಹೆಚ್ಚಲಿದ್ದು, ದೀರ್ಘಾವಧಿ ಹೂಡಿಕೆದಾರರಿಗೆ ಇದು ಶುಭ ಸುದ್ದಿಯಾಗಿದೆ.