ಸಾರಿಗೆ ಇಲಾಖೆಯು ಡ್ರೈವಿಂಗ್ ಲೈಸೆನ್ಸ್‌ಗೆ ಪ್ರಸ್ತುತ ಬಳಕೆಯಲ್ಲಿರುವ ಮೊಬೈಲ್ ನಂಬರ್ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಿದೆ. ಇ-ಚಲನ್ ಮತ್ತು ಇತರ ಮಾಹಿತಿಗಳು ಸರಿಯಾಗಿ ತಲುಪಲು ಈ ಕ್ರಮ ಕೈಗೊಳ್ಳಲಾಗಿದೆ. ಸಾರಥಿ ಪರಿವಾಹನ್ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಸುಲಭವಾಗಿ ನಂಬರ್ ಅಪ್‌ಡೇಟ್ ಮಾಡಬಹುದು.
ದೆಹಲಿ: ಇಂದು ಬಹುತೇಕ ಮನೆಗಳಲ್ಲಿ ದ್ವಿಚಕ್ರ ಇಲ್ಲವೇ ನಾಲ್ಕು ಚಕ್ರ ವಾಹನಗಳು ಇದ್ದೇ ಇವೆ. ಭಾರತದಲ್ಲಿ ಪ್ರತಿನಿತ್ಯ ಕನಿಷ್ಠ 32 ಸಾವಿರ ವಾಹನ ಸವಾರರು ಹೊಸದಾಗಿ ಡ್ರೈವಿಂಗ್ ಲೈಸೆನ್ಸ್ ಮಾಡಿಸಿಕೊಳ್ಳುತ್ತಿದ್ದಾರೆ ಎಂದರೆ, ವಾಹನ ಇಂದು ಯಾವ ಪರಿಯಲ್ಲಿ ಎಲ್ಲರ ಅಗತ್ಯವಾಗಿದೆ ಎನ್ನುವುದು ತಿಳಿದುಬರುತ್ತದೆ. ಇದೀಗ ಸಾರಿಗೆ ಇಲಾಖೆಯು, ನಿಮ್ಮ ಡ್ರೈವಿಂಗ್ ಲೈಸೆನ್ಸ್‌ಗೆ ಮೊಬೈಲ್ ನಂಬರ್ ಲಿಂಕ್ ಮಾಡುವುದನ್ನು ಕಡ್ಡಾಯ ಗೊಳಿಸಿದೆ. ಕೆಲವರ ನಂಬರ್ ಲಿಂಕ್ ಆಗಿಲ್ಲದಿದ್ದರೆ, ಮತ್ತೆ ಕೆಲವರು, ಹಳೆಯ ಮೊಬೈಲ್ ನಂಬರ್ ಅನ್ನೇ ಇಟ್ಟುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಹಾಲಿ ನಂಬರ್ ಲಿಂಕ್ ಮಾಡುವುದು ಕಡ್ಡಾಯಗೊಳಿಸಲಾಗಿದೆ.
ಸೋಷಿಯಲ್ ಮೀಡಿಯಾಗಳಲ್ಲಿ ಈ ಮೊಬೈಲ್ ನಂಬರ್ ಲಿಂಕ್ ಮಾಡಲು ಸೆಪ್ಟೆಂಬರ್ 25 ಕೊನೆಯ ದಿನ ಎಂದು ಹೇಳಲಾಗುತ್ತಿದೆಯಾದರೂ, ಸಾರಿಗೆ ಇಲಾಖೆ ಇಂಥ ಯಾವುದೇ ಅಧಿಕೃತ ಮಾಹಿತಿ ಹೊರಡಿಸಿಲ್ಲ. ಈಗ ವೈರಲ್ ಆಗ್ತಿರೋ ದಿನಾಂಕ ಸತ್ಯಕ್ಕೆ ದೂರವಾಗಿದೆ. ಆದರೆ ಆದಷ್ಟು ಬೇಗನೇ ನೀವು ಮೊಬೈಲ್ ನಂಬರ್ ಅಪ್‌ಡೇಟ್ ಮಾಡಿಕೊಳ್ಳುವುದು ಒಳ್ಳೆಯದು. ಶೀಘ್ರದಲ್ಲಿ ಇದಕ್ಕೂ ಕೊನೆಯ ದಿನ ಕೊಟ್ಟರೂ ಅಚ್ಚರಿಯೇನಿಲ್ಲ.
ಏಕೀ ನಿಯಮ?
ಸಾರಿಗೆ ರಸ್ತೆಯಲ್ಲಿ ಸುರಕ್ಷತೆ ಮತ್ತು ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸಾರಿಗೆ ಇಲಾಖೆಯು ಹೊಸ ಮಾರ್ಗದರ್ಶನ ನೀಡಿದ್ದು, ಚಾಲನಾ ಪರವಾನಗಿಯೊಂದಿಗೆ ಪ್ರಸ್ತುತ ಬಳಕೆಯಲ್ಲಿರುವ ಮೊಬೈಲ್ ಸಂಖ್ಯೆಯನ್ನು ಜೋಡಿಸುವುದನ್ನು ಕಡ್ಡಾಯಗೊಳಿಸಿದೆ. ಸಾಮಾನ್ಯವಾಗಿ ಹಳೆಯ ಚಾಲನಾ ಪರವಾನಗಿಗಳಲ್ಲಿ ಮೊಬೈಲ್ ಸಂಖ್ಯೆ ನಮೂದಾಗದಿರುವುದು ಅಥವಾ ಹಿಂದೆ ನೀಡಿದ್ದ ಸಂಖ್ಯೆಗಳು ಚಾಲ್ತಿಯಲ್ಲಿ ಇಲ್ಲದಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಇದನ್ನು ಕಡ್ಡಾಯ ಮಾಡಲಾಗಿದೆ.
ನಂಬರ್ ಲಿಂಕ್ ಮಾಡುವುದು ಏಕೆ ಕಡ್ಡಾಯ?
ಸಂಚಾರ ನಿಯಮ ಉಲ್ಲಂಘನೆಯಾದಾಗ ವಿಧಿಸಲಾಗುವ ಇ-ಚಲನ್ ಮಾಹಿತಿ ಮತ್ತು ಇತರ ಮುಖ್ಯ ಸೂಚನೆಗಳು ವಾಹನ ಮಾಲೀಕರಿಗೆ ಸಮಯಕ್ಕೆ ಸರಿಯಾಗಿ ತಲುಪುತ್ತಿಲ್ಲ. ರಸ್ತೆ ತಪಾಸಣೆ ಸಮಯದಲ್ಲಿಯೂ ಸಂಚಾರ ಪೊಲೀಸರಿಗೆ ಮಾಹಿತಿ ದೃಢೀಕರಿಸಲು ತೊಂದರೆಯಾಗುತ್ತಿದ್ದು, ಈ ಗೊಂದಲಗಳಿಗೆ ತೆರೆ ಎಳೆಯಲು ಇಲಾಖೆ ಈ ಕ್ರಮ ಕೈಗೊಂಡಿದೆ.
ಆನ್ಲೈನ್ ಮೂಲಕ ಮಾಡಿ
- ಸಾರಥಿ ಪರಿವಾಹನ್ ವೆಬ್‌ಸೈಟ್ (Sarathi Parivahan) ಮೂಲಕ ಉಚಿತವಾಗಿ ಸಂಖ್ಯೆಯನ್ನು ಬದಲಾಯಿಸಬಹುದು.
- ವೆಬ್‌ಸೈಟ್‌ನ ಮುಖಪುಟದಲ್ಲಿ ಕಾಣಿಸುವ ‘Others Menu’ ವಿಭಾಗಕ್ಕೆ ತೆರಳಿ,
- ಅಲ್ಲಿ ‘Mobile Number Update’ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ
- ನಂತರ ನಿಮ್ಮ ಚಾಲನಾ ಪರವಾನಗಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ.
- ಹಾಲಿ ಇರುವ ವಿವರಗಳು ಕಾಣಸಿಗುತ್ತವೆ. ಅಲ್ಲಿ ನಿಮ್ಮ ಸಕ್ರಿಯ ಮೊಬೈಲ್ ಸಂಖ್ಯೆಯನ್ನು ನಮೂದಿಸಿ, ಒಟಿಪಿ (OTP) ಮೂಲಕ ದೃಢೀಕರಿಸುವ ಮೂಲಕ ಪ್ರಕ್ರಿಯೆಯನ್ನು ಸರಳವಾಗಿ ಮುಗಿಸಬಹುದು.


