ಆಂಧ್ರಪ್ರದೇಶದ ಧರ್ಮಾವರಂನಲ್ಲಿ ಮುಸ್ಲಿಂ ದಂಪತಿಯೊಂದು ಹರಕೆ ಈಡೇರಿದ ಹಿನ್ನೆಲೆಯಲ್ಲಿ 1.45 ಲಕ್ಷ ರೂ. ನೀಡಿ ಗಣೇಶನ ಲಡ್ಡು ಖರೀದಿಸಿದ್ದಾರೆ. ಇನ್ನು ಈ ದಂಪತಿಗೆ ಗಣಪ ಏನು ಕರುಣಿಸಿದ್ದಾನೆ ಗೊತ್ತಾ? ಸ್ಟೋರಿ ಓದಿ.
ಭಕ್ತಿಗೆ ಜಾತಿ, ಮತ, ಕುಲದ ಹಂಗಿಲ್ಲ. ಇದು ಮೊದಲಿನಿಂದಲೂ ಸಾಬೀತಾಗುತ್ತಿದೆ. ಇದರ ಮಧ್ಯೆ ಕೆಲವು ದುಷ್ಟ ಶಕ್ತಿಗಳು ಸಮಾಜದಲ್ಲಿ ಆತಂಕದ ಸ್ಥಿತಿಗೆ ತರಲು ಪಯತ್ನಿಸುತ್ತಿರುವೆ. ಕೊನೆಗೆ ಒಂದಿನ ಶಾಶ್ವತವಾಗಿ ಉಳಿಯೋದು ಭಕ್ತಿ, ನಂಬಿಕೆ, ಸೌಹಾರ್ದತೆ, ಸಾಮರಸ್ಯ ಮಾತ್ರ. ಅಂದ್ಹಾಗೆ ವಾರದ ಹಿಂದಷ್ಟೇ ನಾಡಿನಾದ್ಯಂತ ಗಣೇಶ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಸಾರ್ವಜನಿಕ ಗಣೇಶೋತ್ಸವ ಇನ್ನೂ ನಡೆಯುತ್ತಲೇ ಇವೆ.. ಇದೇ ಸಂಭ್ರಮದಲ್ಲಿ ಮುಸ್ಲಿಂ ದಂಪತಿ ಬರೋಬ್ಬರಿ 1.45 ಲಕ್ಷ ರೂಪಾಯಿ ಹಣ ನೀಡಿ ಗಣೇಶನ ಲಡ್ಡುವನ್ನು ಖರೀದಿಸಿದ್ದಾರೆ.
ಯಾವೂರಲ್ಲಿ ನಡೆದ ಘಟನೆ..?
ಆಂಧ್ರ ಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯ ಧರ್ಮಾವರಂನಲ್ಲಿ ಮುಸ್ಲಿಂ ದಂಪತಿ ಗಣೇಶನ ಲಡ್ಡು ಖರೀದಿಸಿದ್ದಾರೆ. ಲಡ್ಡು ಪ್ರಸಾದಕ್ಕಾಗಿ ನಡೆದ ಹರಾಜಿನಲ್ಲಿ ಚಾಂದನಿ ಮತ್ತು ಮಸ್ತಾನ್ ವಾಲಿ ದಂಪತಿ 1,45,000 ರೂಪಾಯಿಗೆ ಗಣೇಶನ ಲಡ್ಡು ಗೆದ್ದರು. ಈ ಮುಸ್ಲಿಂ ದಂಪತಿ ಗಣೇಶನ ಲಡ್ಡು ಗೆಲ್ಲುತ್ತಿದ್ದಂತೆಯೇ ಭಾರೀ ಸುದ್ದಿಯಾಗಿದೆ.
ಗಣೇಶನ ಮೇಲಿನ ನಂಬಿಕೆ ಬಗ್ಗೆ ಪ್ರತಿಕ್ರಿಯಿಸಿರುವ ದಂಪತಿ, ನಾವು ಕಳೆದ 16 ವರ್ಷಗಳಿಂದ ಗಣೇಶೋತ್ಸವದಲ್ಲಿ ಭಾಗಿಯಾಗುತ್ತಿದ್ದೇವೆ. ಸ್ನೇಹಿತರೆಲ್ಲ ಸೇರಿ ಗಣೇಶ ಮೂರ್ತಿಯನ್ನು ಪ್ರತಿಷ್ಟಾಪಿಸುತ್ತೇವೆ ಎಂದು ಚಾಂದನಿ ಹೇಳಿದ್ದಾರೆ. ಮಾತು ಮುಂದುವರಿಸಿ.. ಈ ಹಿಂದೆ ನಾನು ಗಣೇಶನ ಬಳಿ ಹರಕೆ ಹೊತ್ತಿದ್ದೆ. ನನಗೆ ಒಂದು ಗಂಡು ಮಗುವನ್ನು ನೀಡು. ಆ ಆಸೆಯನ್ನ ಪೂರೈಸಿದರೆ ಯಾವುದೇ ಬೆಲೆ ತೆತ್ತು ಲಡ್ಡು ಪಡೆದು ಭಕ್ತರಿಗೆ ಪ್ರಸಾದವಾಗಿ ನೀಡುವುದಾಗಿ ಗಣೇಶನಲ್ಲಿ ಬೇಡಿಕೊಂಡಿದ್ದೆ. ವಿಘ್ನ ನಿವಾರಕನ ಕೃಪೆಯಿಂದ ನಮಗೆ ಗಂಡು ಮಗು ಜನಿಸಿದೆ. ಇಂದು ದೇವರಿಗೆ ಹೊತ್ತುಕೊಂಡಿದ್ದ ಆಸೆಯನ್ನು ಈಡೇರಿಸಿದ್ದೇನೆ. ತುಂಬಾ ಸಂತೋಷ ಆಗುತ್ತಿದೆಎಂದು ಚಾಂದನಿ ಭಾವುಕರಾಗಿದ್ದಾರೆ.
ಧರ್ಮಾವರಂನಲ್ಲಿ ನಡೆದ ಈ ಅಪರೂಪದ ದೃಶ್ಯವು ಭಕ್ತಿ ಮತ್ತು ಪ್ರೀತಿ ಎಲ್ಲರನ್ನೂ ಒಂದು ಗೂಡಿಸುತ್ತದೆ ಎಂಬುದನ್ನ ಮತ್ತೆ ಸಾಬೀತು ಮಾಡಿತು. ಇನ್ನು ಲಡ್ಡು ಗೆದ್ದ ಬಳಿಕ ಗಣೇಶ ವಿಸರ್ಜನೆಯ ಮೆರವಣಿಗೆಯಲ್ಲಿ ದಂಪತಿ ಪಾಲ್ಗೊಂಡರು ಎಂದು ವರದಿಯಾಗಿದೆ.
ಸಾಮಾರಸ್ಯದ ಸಂದೇಶ ಸಾರಿದ ಕರ್ನಾಟಕ ಪುಟ್ಟ ಗ್ರಾಮ
ಇದೇ ರೀತಿ ನಿನ್ನೆ ಕರ್ನಾಟಕದಲ್ಲೂ ಒಂದು ಅಪರೂಪದ ವಿದ್ಯಾಮಾನ ನಡೆಯಿತು. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕೌದಳ್ಳಿ ಗ್ರಾಮವು ಇಡೀ ನಾಡಿಗೆ ಸಾಮರಸ್ಯದ ಸುಂದರ ಸಂದೇಶ ಸಾರಿದೆ. ಇಲ್ಲಿನ ಗಣೇಶ ವಿಸರ್ಜನಾ ಮಹೋತ್ಸವವು ಹಿಂದೂ, ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿ ಆಯಿತು. ಕೌದಳ್ಳಿ ಗ್ರಾಮದ ಹಿಂದೂ ಸಮುದಾಯದವರು ಸಾರ್ವಜನಿಕ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದರು. ಈ ಮೆರವಣಿಗೆಯು ಊರಿನ ಪ್ರಮುಖ ಬೀದಿಗಳಲ್ಲಿ ಅತ್ಯಂತ ಸಂಭ್ರಮದಿಂದ ಅದ್ದೂರಿಯಾಗಿ ಸಾಗಿತು. ಬಿಸಿಲಿನಲ್ಲಿ ನೂರಾರು ಯುವಕರು ಹಾಗೂ ಭಕ್ತರು ಉತ್ಸಾಹದಿಂದ ಕುಣಿದು ಕುಪ್ಪಳಿಸುತ್ತ ಸಾಗಿದರು. ಈ ವೇಳೆ ದಣಿದಿದ್ದ ನೂರಾರು ಭಕ್ತರ ದಾಹ ತಣಿಸಲು ಸ್ಥಳೀಯ ಮುಸ್ಲಿಂ ಮುಖಂಡರು ಮತ್ತು ಯುವಕರು ಮುಂದೆ ಬಂದಿದ್ದರು. ಅವರೆಲ್ಲ ಸ್ವಯಂಪ್ರೇರಿತರಾಗಿ ಮೆರವಣಿಗೆಯಲ್ಲಿ ಸಾಗುತ್ತಿದ್ದ ನೂರಾರು ಜನರಿಗೆ ಕುಡಿಯುವ ನೀರಿನ ಬಾಟಲಿ ಹಾಗೂ ತಂಪು ಪಾನೀಯ (ಜ್ಯೂಸ್) ವಿತರಿಸಿ ಸೋದರತೆ ಮೆರೆದು ಭಾವೈಕ್ಯತೆ ಮೆರೆದಿದ್ದಾರೆ. ಈ ಗ್ರಾಮದಲ್ಲೂ ಕೂಡ ಹಲವಾರು ವರ್ಷಗಳಿಂದ ಹಿಂದೂ ಹಾಗೂ ಮುಸ್ಲಿಮರು ಗಣೇಶೋತ್ಸವದಲ್ಲಿ ಒಟ್ಟಿಗೆ ಭಾಗಿಯಾಗಿ ಸಾಮಾರಸ್ಯವನ್ನು ಸಾರುತ್ತಿದ್ದಾರೆ.


