ಪೆರಿಯಾರ್ ಅವರ ಮಹಿಳಾ ಸಬಲೀಕರಣವನ್ನು ಒಪ್ಪುವ ಕೆ. ಅಣ್ಣಾಮಲೈ, ಅವರ ನಾಸ್ತಿಕ ಮತ್ತು ಬ್ರಾಹ್ಮಣ ವಿರೋಧಿ ನೀತಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ತಾವು ಅಧಿಕಾರಕ್ಕೆ ಬಂದರೆ ಹಿಂದೂ ದೇವಾಲಯಗಳ ಮುಂದಿರುವ ನಾಸ್ತಿಕ ಶಾಸನಗಳನ್ನು ತೆರವುಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ, ವೈಗೈ ನದಿ ಸ್ವಚ್ಛತಾ ಕಾರ್ಯವನ್ನು ಶ್ಲಾಘಿಸಿ, ಸ್ಥಳೀಯ ಆಡಳಿತದ ವೈಫಲ್ಯವನ್ನು ಟೀಕಿಸಿದ್ದಾರೆ.
ಮದುರೈ: ದ್ರಾವಿಡ ಚಳವಳಿಯ ನೇತಾರ ಇ.ವಿ. ರಾಮಸಾಮಿ ಪೆರಿಯಾರ್ ಜನ್ಮದಿನಕ್ಕೆ ಶುಭಾಶಯ ಕೋರಿದ್ದು ತೀವ್ರ ವಿವಾದಕ್ಕೆ ಕಾರಣವಾಗಿರುವ ನಡುವೆಯೇ, ಪೆರಿಯಾರ್ ಅವರ ಇತಿಹಾಸದಲ್ಲಿ ಅನೇಕ ವೈರುಧ್ಯಗಳಿವೆ. ಮಹಿಳಾ ಸಬಲೀಕರಣ ಮತ್ತು ಜಾತಿ ನಿರ್ಮೂಲನೆಗೆ ಅವರು ನೀಡಿದ ಕೊಡುಗೆಗಳನ್ನು ಒಪ್ಪಿಕೊಳ್ಳುವಂತೆಯೇ, ಅವರ ನಾಸ್ತಿಕ ಹಾಗೂ ಬ್ರಾಹ್ಮಣ ವಿರೋಧಿ ಸಿದ್ಧಾಂತಗಳನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತೇನೆ ಎಂದು ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಸ್ಪಷ್ಟಪಡಿಸಿದ್ದಾರೆ.
ವೈಗೈ ನದಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಜನರನ್ನುದ್ದೇಶಿಸಿ ಭಾನುವಾರ ಮಾತನಾಡಿದ ಅವರು, ‘ಪೆರಿಯಾರ್ ನಿಲುವುಗಳಲ್ಲಿ ವೈರುಧ್ಯವಿದೆ. ಅವರು 1935ರಲ್ಲಿ ಹಿಂದಿ ವಿರೋಧದ ಬಗ್ಗೆ ಮಾತನಾಡಿದ್ದರು. ಆದರೆ ಅದೇ ಪೆರಿಯಾರ್ 1965ರಲ್ಲಿ, ಹಿಂದಿಯನ್ನು ವಿರೋಧಿಸುವ ಯಾರನ್ನಾದರೂ ಗುಂಡಿಕ್ಕಿ ಕೊಲ್ಲಬೇಕು ಎಂದು ಹೇಳಿದ್ದರು. ಅವರು ಮಹಿಳಾ ವಿಮೋಚನೆ ಹಾಗೂ ಜಾತಿ ನಿರ್ಮೂಲನೆಯ ಪರವಾಗಿದ್ದರು ಎಂಬುದನ್ನು ನಾವು ಒಪ್ಪಿಕೊಳ್ಳುತ್ತೇವೆ. ಆದರೆ, ಅವರ ನಾಸ್ತಿಕ ಹಾಗೂ ಬ್ರಾಹ್ಮಣ-ವಿರೋಧಿ ನಿಲುವುಗಳನ್ನು ನಾನು ಖಂಡಿತವಾಗಿಯೂ ಒಪ್ಪುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.
ಜೊತೆಗೆ, ಡಿಎಂಕೆ ಜೊತೆಗಿನ ಪೆರಿಯಾರ್ ಅವರ ರಾಜಕೀಯ ಹೊಂದಾಣಿಕೆಯನ್ನು ಪ್ರಶ್ನಿಸಿದ ಅವರು, 1961 ರಲ್ಲಿ ಕೆ. ಕಾಮರಾಜ್ ಅವರನ್ನು 'ಪಚೈ ತಮಿಳನ್' (ನೈಜ ತಮಿಳ) ಎಂದು ಬಣ್ಣಿಸಿ, ಅವರಿಗೆ ಮತ ನೀಡುವಂತೆ ಪೆರಿಯಾರ್ ಜನರಲ್ಲಿ ಮನವಿ ಮಾಡಿದ್ದನ್ನು ನೆನಪಿಸಿಕೊಂಡರು.
ದೇವಾಲಯಗಳ ಹೊರಗಿನ ನಾಸ್ತಿಕ ಶಾಸನಗಳ ತೆರವು
ತಮ್ಮ ‘ವೀ ದಿ ಲೀಡರ್ಸ್’ ಚಳವಳಿಯ ರಾಜಕೀಯ ಕಾರ್ಯಸೂಚಿಯ ಬಗ್ಗೆ ಮಾತನಾಡಿದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ, ತಮಿಳುನಾಡಿನಲ್ಲಿ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಹಿಂದೂ ದೇವಾಲಯಗಳ ಪ್ರವೇಶದ್ವಾರಗಳ ಬಳಿ ಸ್ಥಾಪಿಸಲಾಗಿರುವ ನಾಸ್ತಿಕ ಶಾಸನಗಳನ್ನು ಹೊಂದಿರುವ ಪ್ರತಿಮೆಗಳನ್ನು ತೆರವುಗೊಳಿಸುವ ಭರವಸೆಯನ್ನು ಪುನರುಚ್ಚರಿಸಿದರು.
ದೇವಾಲಯದ ಹೊಸ್ತಿಲಲ್ಲೇ 'ದೇವರಿಲ್ಲ, ದೇವರಿಲ್ಲ, ದೇವರೇ ಇಲ್ಲ' ಎಂದು ಬರೆದಿರುವುದು ಭಕ್ತರ ಭಾವನೆಗೆ ಸೂಕ್ತವಲ್ಲ. ದೇವಾಲಯಕ್ಕೆ ಬರುವ ಪ್ರತಿಯೊಬ್ಬರೂ ದೇವರ ಮೇಲೆ ನಂಬಿಕೆ ಉಳ್ಳವರು. ಅವರು ಪ್ರವೇಶದ್ವಾರದಲ್ಲೇ ಇಂತಹ ಸಂದೇಶಗಳನ್ನು ಎದುರಿಸಬಾರದು. ನಾವು ಆ ಪ್ರತಿಮೆಗಳನ್ನು ಅತ್ಯಂತ ಗೌರವಯುತವಾಗಿ ತೆರವುಗೊಳಿಸಿ, ಬೇರೆ ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪಿಸುತ್ತೇವೆ" ಎಂದು ಸ್ಪಷ್ಟಪಡಿಸಿದರು.
ವೈಗೈ ನದಿ ಸ್ವಚ್ಛತಾ ಅಭಿಯಾನದ ಯಶಸ್ಸು
ಆಗಸ್ಟ್ 3 ರಂದು ಪ್ರಾರಂಭವಾದ ಏಳು ವಾರಗಳ ಸ್ವಚ್ಛತಾ ಅಭಿಯಾನದಲ್ಲಿ, ಮಧುರೈನ ವೈಗೈ ನದಿಯ 33 ಎಕರೆ ಪ್ರದೇಶದಿಂದ ಸುಮಾರು 163 ಟನ್ ತ್ಯಾಜ್ಯ ಹಾಗೂ ಪ್ಲಾಸ್ಟಿಕ್ ವಿಲೇವಾರಿ ಮಾಡಿದ ‘ವೀ ದಿ ಲೀಡರ್ಸ್’ ಸ್ವಯಂಸೇವಕರ ಶ್ರಮವನ್ನು ಅವರು ಮುಕ್ತಕಂಠದಿಂದ ಶ್ಲಾಘಿಸಿದರು. ತಮಿಳುನಾಡಿನಲ್ಲಿ ನಿಜವಾದ ರಾಜಕೀಯ ಬದಲಾವಣೆ ಬರಬೇಕಾದರೆ ಬರಿ ಭಾಷಣಗಳಿಂದ ಸಾಧ್ಯವಿಲ್ಲ. ತಳಮಟ್ಟದ ಕೆಲಸಗಳು ಅಗತ್ಯ ಎಂದರು, 2014 ರಿಂದ 2019ರ ನಡುವೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಮಧುರೈನ ನೈರ್ಮಲ್ಯ ಯೋಜನೆಗಳಿಗೆ ಬಿಡುಗಡೆ ಮಾಡಿದ ಅಂದಾಜು ₹1,400 ಕೋಟಿ ಅನುದಾನವನ್ನು ಸರಿಯಾಗಿ ಬಳಸಿಕೊಳ್ಳಲು ಸ್ಥಳೀಯ ಆಡಳಿತ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದರು.


