ಲಡಾಖ್‌ನ ಗಡಿ ಭಾಗದಲ್ಲಿ, ಸಿಂಧೂ ನದಿಗೆ ಅಡ್ಡಲಾಗಿ ಭಾರತವು ತನ್ನ ಮೊದಲ ನೈಸರ್ಗಿಕ 'ರಾಕ್ ಚೆಕ್ ಡ್ಯಾಂ' ಅನ್ನು ನಿರ್ಮಿಸಿದೆ. ಸಿಮೆಂಟ್ ಬಳಸದೆ, ಕೇವಲ ಬಂಡೆಗಲ್ಲುಗಳಿಂದ ನಿರ್ಮಿಸಲಾದ ಈ ಅಣೆಕಟ್ಟು, ಸ್ಥಳೀಯ ರೈತರ ನೀರಿನ ಸಮಸ್ಯೆ ನೀಗಿಸಿ, ಒಣ ಭೂಮಿಗೆ ನೀರುಣಿಸಲು ಸಹಕಾರಿಯಾಗಿದೆ.
ಲೇಹ್ (ಸೆ.6): ಪಾಕಿಸ್ತಾನದ ಜೊತೆಗಿನ ಸಿಂಧೂ ನದಿ ಒಪ್ಪಂದವನ್ನು ಸ್ಥಗಿತಗೊಳಿಸಿದ್ದ ಭಾರತ, ಇದೀಗ ಲಡಾಖ್‌ನಲ್ಲಿ ಸಿಂಧೂ ನದಿಗೆ ಅಡ್ಡಲಾಗಿ ಸಣ್ಣ ಅಣೆಕಟ್ಟೆಯೊಂದನ್ನು (ಚೆಕ್ ಡ್ಯಾಂ) ಕಟ್ಟಿದೆ. ಲಡಾಖ್ ಗಡಿ ಭಾಗದಲ್ಲಿ ಕೃಷಿ ಸಮುದಾಯದ ನೀರಿನ ಕೊರತೆ ನೀಗಿಸಲು ಹಾಗೂ ಸಿಂಧೂ ನದಿ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಇದನ್ನು ನಿರ್ಮಿಸಿದೆ. ವಿಶೇಷವೆಂದರೆ ಲೇಹ್‌ನ ಉಪಶಿ ಬಳಿ ಸಿಂಧೂ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಈ ಡ್ಯಾಂ, ಭಾರತದ ಮೊದಲ ನೈಸರ್ಗಿಕ ‘ರಾಕ್ ಚೆಕ್ ಡ್ಯಾಮ್’ ಎಂಬ ದಾಖಲೆಗೂ ಪಾತ್ರವಾಗಿದೆ.
ಸಿಮೆಂಟ್ ಬಳಸದೆ, ಕೇವಲ ನೈಸರ್ಗಿಕ ಬಂಡೆಗಲ್ಲುಗಳನ್ನು ಜೋಡಿಸಿ ನಿರ್ಮಿಸಲಾಗಿರುವ ಈ ಅಣೆಕಟ್ಟು ನದಿಯ ನೀರಿನ ಮಟ್ಟವನ್ನು ಸುಮಾರು 10 ಅಡಿಗಳಷ್ಟು ಹೆಚ್ಚಿಸಿದೆ. ಇದರಿಂದಾಗಿ ಬಿತ್ತನೆ ಸಮಯದಲ್ಲಿ ನೀರಿನ ಸಮಸ್ಯೆ ಎದುರಿಸುತ್ತಿದ್ದ ಸ್ಥಳೀಯ ರೈತರಿಗೆ ಜಮೀನುಗಳಿಗೆ ನೀರುಣಿಸಲು ಅನುಕೂಲವಾಗಲಿದೆ.
ವರ್ಷಗಳಿಂದ ಸಿಂಧೂ ನದಿಯು ಆಳವಾದ ಕಂದಕಗಳಲ್ಲಿ ತಗ್ಗಿನಲ್ಲಿ ಹರಿಯುತ್ತಿದ್ದ ಕಾರಣ, ಬಿತ್ತನೆ ಅವಧಿಯಲ್ಲಿ ಪಂಪ್‌ಗಳ ಮೂಲಕ ನೀರೆತ್ತುವುದು ರೈತರಿಗೆ ದುಸ್ತರವಾಗಿತ್ತು. ಸಿಂಧೂ ನೀರು ಹಂಚಿಕೆ ನಿಯಮಗಳ ಮಿತಿ ಮತ್ತು ನೀರಿನ ಅಭಾವದಿಂದ ಕೃಷಿ ಭೂಮಿಗಳು ಒಣಗಿ, ಅನ್ನದಾತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಇದೀಗ ನೂತನ ಶಿಲಾ ಅಣೆಕಟ್ಟು ಸುಮಾರು 4 ಕೋಟಿ ಲೀಟರ್ ನೀರನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿದ್ದು, ‘ಇಗೂ ಫೇ’ ನೀರಾವರಿ ಕಾಲುವೆಯ ಮೂಲಕ ಒಣ ಭೂಮಿಗಳಿಗೆ ನೀರುಣಿಸುತ್ತಿದೆ.
ಸಮುದ್ರಮಟ್ಟದಿಂದ 11400 ಅಡಿ ಎತ್ತರದಲ್ಲಿ ನಿರ್ಮಿಸಿರುವ ಈ ಡ್ಯಾಂ 200 ಅಡಿ ಉದ್ದ ಹೊಂದಿದ್ದು, 30 ಅಡಿ ಅಗಲವಿದೆ. 180 ಮೆಟ್ರಿಕ್ ಟನ್ ತೂಕದ ಕಲ್ಲುಗಳನ್ನು ಬಳಸಿ ಕೇವಲ 7 ದಿನಗಳಲ್ಲಿ ನಿರ್ಮಿಸಲಾಗಿದೆ.
ಲಡಾಖ್ ಆಡಳಿತವು ಸಿಂಧೂ ನದಿಯುದ್ದಕ್ಕೂ ಇಂತಹ ಇನ್ನಷ್ಟು ಚೆಕ್ ಡ್ಯಾಂಗಳನ್ನು ನಿರ್ಮಿಸಲು ಮುಂದಾಗಿದ್ದು, ಈಗಾಗಲೇ ಹಲವೆಡೆ ಕಾಮಗಾರಿ ಆರಂಭವಾಗಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ ಜಲ ಭದ್ರತೆ ಮತ್ತು ನೀರಾವರಿ ವಿಸ್ತರಣೆಗಾಗಿ ಒಟ್ಟು 36 ಚೆಕ್ ಡ್ಯಾಂ ಯೋಜನೆಗಳ ನಿರ್ಮಾಣಕ್ಕೆ ಕೇಂದ್ರ ಜಲಶಕ್ತಿ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. 56 ಕೋಟಿ ರೂ.ಗೂ ಅಧಿಕ ವೆಚ್ಚದ ಈ ಯೋಜನೆಯಲ್ಲಿ ಲೇಹ್ ಭಾಗದಲ್ಲಿ 7 ಹಿಮಾಲಯನ್ ರಾಕ್ ಚೆಕ್ ಡ್ಯಾಂಗಳು ಹಾಗೂ ಕಾರ್ಗಿಲ್ ಭಾಗದಲ್ಲಿ 29 ಚೆಕ್ ಡ್ಯಾಂಗಳು ಒಳಗೊಂಡಿವೆ.


