ಲೋಕಸಭೆಯಲ್ಲಿ ಆಪರೇಷನ್ ಸಿಂಧೂರ್ ಕುರಿತ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ, ಆಗಿನ ಪ್ರಧಾನಿ ಜವಾಹರಲಾಲ್ ನೆಹರು ಅವರು ಭಾರತದ 80% ನೀರನ್ನು ಪಾಕಿಸ್ತಾನಕ್ಕೆ ನೀಡಲು ಒಪ್ಪಿಕೊಂಡಿದ್ದರು ಎಂದು ಹೇಳಿದರು.
ನವದೆಹಲಿ (ಜು.29): ಸಿಂಧೂ ನದಿ ನೀರು ಒಪ್ಪಂದ (ಐಡಬ್ಲ್ಯೂಟಿ)ಕ್ಕೆ ಸಂಬಂಧಿಸಿದಂತೆ ಹಿಂದಿನ ಕಾಂಗ್ರೆಸ್ ಸರ್ಕಾರಗಳ ಮೇಲೆ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದು, ಇದು ದೇಶಕ್ಕೆ ಮಾಡಿದ ದೊಡ್ಡ ದ್ರೋಹ ಎಂದು ಹೇಳಿದರು. ಲೋಕಸಭೆಯಲ್ಲಿ ಆಪರೇಷನ್ ಸಿಂಧೂರ್ ಕುರಿತ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ, ಆಗಿನ ಪ್ರಧಾನಿ ಜವಾಹರಲಾಲ್ ನೆಹರು ಅವರು ಭಾರತದ 80% ನೀರನ್ನು ಪಾಕಿಸ್ತಾನಕ್ಕೆ ನೀಡಲು ಒಪ್ಪಿಕೊಂಡಿದ್ದರು ಎಂದು ಹೇಳಿದರು.
"ಭಾರತದ ಹಿತಾಸಕ್ತಿಗಳನ್ನು ಅಡಮಾನ ಇಡುವುದು ಕಾಂಗ್ರೆಸ್ಸಿನ ದೀರ್ಘಕಾಲದ ಅಭ್ಯಾಸವಾಗಿದೆ. ಇದಕ್ಕೆ ದೊಡ್ಡ ಉದಾಹರಣೆಯೆಂದರೆ ಪಂಡಿತ್ ನೆಹರು ಸಹಿ ಮಾಡಿದ ಸಿಂಧೂ ಜಲ ಒಪ್ಪಂದ. ಆ ನದಿಗಳು ಭಾರತದ ನಾಗರಿಕತೆಯ ಗುರುತಿನ ಭಾಗವಾಗಿದೆ, ನಮ್ಮ ಬೇರುಗಳು ಅವುಗಳೊಂದಿಗೆ ಸಂಪರ್ಕ ಹೊಂದಿವೆ" ಎಂದು ಪ್ರಧಾನಿ ಹೇಳಿದರು.
ಸಿಂಧೂ ನದಿ ವ್ಯವಸ್ಥೆಯಲ್ಲಿ ಕೇವಲ 20% ನೀರು ಮಾತ್ರ ದೇಶಕ್ಕೆ ಉಳಿದಿರುವುದರಿಂದ ಈ ಒಪ್ಪಂದವು ಭಾರತಕ್ಕೆ ಮಾಡಿದ ದೊಡ್ಡ ದ್ರೋಹವಾಗಿದೆ ಎಂದು ಅವರು ಹೇಳಿದರು. "ಇಂತಹ ನಿರ್ಧಾರದ ಹಿಂದಿನ ಮನಸ್ಥಿತಿಯನ್ನು ಯಾರಾದರೂ ವಿವರಿಸಬಹುದೇ? ಸಿಂಧೂ ನದಿ ವ್ಯವಸ್ಥೆಯ ನಮ್ಮ ಭಾಗ. ಆದರೆ, ಕೇವಲ 20% ನೀರು ಮಾತ್ರವೇ ನಾವು ಬಳಸಿಕೊಳ್ಳಬಹುದಾದ ಒಪ್ಪಂದ. ಭಾರತದ ಶತ್ರು ಎಂದು ಬಹಿರಂಗವಾಗಿ ಹೇಳಿಕೊಳ್ಳುವ ದೇಶಕ್ಕೆ 80% ನೀರು ನೀಡಿದರು..." ಎಂದು ಅವರು ಹೇಳಿದರು. ನಮ್ಮ ಸಿಂಧೂ ನದಿ ಮತ್ತು ಅದರ ನೀರಿನ ಬಗ್ಗೆ ನಿರ್ಧರಿಸಲು ಅಂದಿನ ಸರ್ಕಾರ ವಿಶ್ವಬ್ಯಾಂಕ್‌ಗೆ ಅಧಿಕಾರ ನೀಡಿತು ಎಂದು ಪ್ರಧಾನಿ ಹೇಳಿದರು.
ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಅವಧಿಯಲ್ಲಿ ಮಾಡಿದ ತಪ್ಪನ್ನು ಒಪ್ಪಂದವನ್ನು ಸ್ಥಗಿತಗೊಳಿಸುವ ಮೂಲಕ ಸರಿಪಡಿಸಲಾಗಿದೆ. ರಕ್ತ ಮತ್ತು ನೀರು ಒಟ್ಟುಗೆ ಹರಿಯಲು ಸಾಧ್ಯವಿಲ್ಲ ಎಂದು ಪುನರುಚ್ಚರಿಸು್ತೇವೆ. "ನೆಹರು ಜಿ ಮಾಡಿದ ಪ್ರಮುಖ ಪ್ರಮಾದ - ಸಿಂಧೂ ಜಲ ಒಪ್ಪಂದ - ಭಾರತವು ರಾಷ್ಟ್ರ ಮತ್ತು ನಮ್ಮ ರೈತರ ಹಿತದೃಷ್ಟಿಯಿಂದ ಸ್ಥಗಿತಗೊಳಿಸಿದೆ" ಎಂದು ಅವರು ಹೇಳಿದರು.
ಭಾರತ ಮತ್ತು ಪಾಕಿಸ್ತಾನದ ನಡುವೆ ದೀರ್ಘಕಾಲದ ವಿವಾದವನ್ನು ಬಗೆಹರಿಸಲು 1960 ರಲ್ಲಿ ಐಡಬ್ಲ್ಯೂಟಿಗೆ ಸಹಿ ಹಾಕಲಾಯಿತು, ಇದು ಎರಡೂ ದೇಶಗಳಿಗೆ, ವಿಶೇಷವಾಗಿ ಪಾಕಿಸ್ತಾನಕ್ಕೆ ನಿರ್ಣಾಯಕ ಜೀವನಾಡಿಯಾಗಿದೆ. ವಿಶ್ವ ಬ್ಯಾಂಕಿನ ಮಧ್ಯಸ್ಥಿಕೆಯಲ್ಲಿ, ನದಿಯ ಸಂಪನ್ಮೂಲಗಳನ್ನು ಹಂಚಿಕೊಳ್ಳಲು ಸಮಾನವಾದ ಮಾರ್ಗವನ್ನು ಸ್ಥಾಪಿಸುವ ಗುರಿಯನ್ನು ಹೊಂದಿರುವ ಈ ಒಪ್ಪಂದ ಇದಾಗಿತ್ತು.
ಈ ಒಪ್ಪಂದವು ಪಶ್ಚಿಮದ ನದಿಗಳನ್ನು (ಸಿಂಧೂ, ಝೀಲಂ, ಚೆನಾಬ್) ಪಾಕಿಸ್ತಾನಕ್ಕೆ ಮತ್ತು ಪೂರ್ವದ ನದಿಗಳನ್ನು (ರವಿ, ಬಿಯಾಸ್, ಸಟ್ಲೆಜ್) ಭಾರತಕ್ಕೆ ಹಂಚಿಕೆ ಮಾಡಿತು. ಪ್ರತಿಯೊಂದು ದೇಶವು ತನ್ನ ಹಂಚಿಕೆಯಾದ ನದಿಗಳ ಮೇಲೆ ವಿಶೇಷ ಹಕ್ಕುಗಳನ್ನು ಹೊಂದಿದ್ದರೂ, ಒಪ್ಪಂದವು ನೀರಿನ ಕೆಲವು ಬಳಕೆಗಳನ್ನು ಇನ್ನೊಂದು ಬದಿಯಿಂದ ಅನುಮತಿಸಿತು.
ಒಪ್ಪಂದದ ಪ್ರಕಾರ, ಭಾರತವು ಸಿಂಧೂ ನದಿ ವ್ಯವಸ್ಥೆಯಿಂದ ಶೇಕಡಾ 20 ರಷ್ಟು ನೀರನ್ನು ಬಳಸಲು ಅವಕಾಶ ನೀಡಲಾಯಿತು, ಉಳಿದ ಶೇಕಡಾ 80 ರಷ್ಟು ನೀರನ್ನು ಪಾಕಿಸ್ತಾನಕ್ಕೆ ಹಂಚಲಾಯಿತು. ಏಪ್ರಿಲ್ 22 ರ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಒಪ್ಪಂದವನ್ನು ಸ್ಥಗಿತಗೊಳಿಸುವ ನಿರ್ಧಾರ ಮಾಡಿದೆ.
