ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿಗೆ ತೆರೆದ ಸರ್ಕಾರದ ನಿರ್ಧಾರಕ್ಕೆ ಇಸ್ರೋದ ನೌಕರರ ಸಂಘಟನೆಗಳು ಕಳವಳ ವ್ಯಕ್ತಪಡಿಸಿವೆ. ಇಸ್ರೋ ಅಧ್ಯಕ್ಷರಿಗೆ ಪತ್ರ ಬರೆದಿರುವ ಅವರು, ತಂತ್ರಜ್ಞಾನ ವರ್ಗಾವಣೆ ಮತ್ತು ಸಾರ್ವಜನಿಕ ವಲಯದ ಪಾತ್ರದ ಬಗ್ಗೆ ಲಿಖಿತ ಸ್ಪಷ್ಟೀಕರಣವನ್ನು ಕೋರಿವೆ.
ಬೆಂಗಳೂರು (ಸೆ.6): ಭಾರತೀಯ ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿಗೆ ತೆರೆದ ಕೇಂದ್ರ ಸರ್ಕಾರದ ನಡೆಗೆ ಇಸ್ರೋದ ಸಾವಿರಾರು ಸಿಬ್ಬಂದಿಯನ್ನು ಪ್ರತಿನಿಧಿಸುವ 9 ನೌಕರರ ಸಂಘಟನೆಗಳು ಕಳವಳ ವ್ಯಕ್ತಪಡಿಸಿವೆ. ಈ ಕುರಿತು ಇಸ್ರೋ ಅಧ್ಯಕ್ಷರಿಂದ ಲಿಖಿತ ಸ್ಪಷ್ಟೀಕರಣ ಕೇಳಿವೆ. ಇಸ್ರೋ ಅಭಿವೃದ್ಧಿಪಡಿಸಿದ ತಂತ್ರಜ್ಞಾನವು ದೇಶದ ಆಸ್ತಿ. ಈ ತಂತ್ರಜ್ಞಾನದ ವರ್ಗಾವಣೆ ಪಾರದರ್ಶಕವಾಗಿರಬೇಕು, ಉತ್ತರದಾಯಿತ್ವ, ವ್ಯೂಹಾತ್ಮಕ, ಸುರಕ್ಷಿತ ಹಾಗೂ ಉದ್ಯೋಗಿಗಳನ್ನು ಪರಿಗಣಿಸಿ ನಡೆಯಬೇಕು. ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ಈ ಕುರಿತು ಮಾಹಿತಿ ನೀಡಬೇಕು, ಅವರ ಅಭಿಪ್ರಾಯ ಪಡೆಯಬೇಕು ಎಂದು ಇಸ್ರೋ ಅಧ್ಯಕ್ಷರಿಗೆ ಬರೆದ ಪತ್ರದಲ್ಲಿ ಉದ್ಯೋಗಿಗಳ ಸಂಘಟನೆಗಳು ತಿಳಿಸಿವೆ.
ಇಸ್ರೋ ಸ್ಟಾಪ್ ಅಸೋಸಿಯೇಷನ್, ಎಚ್‌ಎಆರ್ ಎಂಪ್ಲಾಯಿಸ್ ಅಸೋಸಿಯೇಷನ್, ಐಸಾಕ್ ಎಂಪ್ಲಾಯಿಸ್ ಅಸೋಸಿಯೇಷನ್, ಇಸ್ರೋ ಸ್ಟಾಪ್ ಅಸೋಸಿಯೇಷನ್-ಎಲ್‌ಪಿಎಸ್‌ಸಿ ಸೇರಿ ಒಂಬತ್ತು ಸಂಘಟನಗೆಳು ಈ ಪತ್ರಕ್ಕೆ ಸಹಿಹಾಕಿವೆ.
ಇಸ್ರೋದ ಭವಿಷ್ಯ ಏನು?
ವಿಶೇಷವಾಗಿ ಪಿಎಸ್‌ಎಲ್ವಿ, ಎಲ್‌ವಿಎಂ-3, ಎಸ್‌ಎಸ್‌ಎಲ್‌ವಿ ಮತ್ತು ಭವಿಷ್ಯದ ರಾಕೆಟ್‌ಗಳ ಉಡ್ಡಯನ, ವಿನ್ಯಾಸ, ಅಭಿವೃದ್ಧಿ, ಜೋಡಣೆ ಕಾರ್ಯವು ಮುಂದುವರಿಯಲಿದೆಯೇ? ಅವು ಬಂದ್ ಆಗಲಿದೆಯೇ? ಪ್ರಸ್ತಾಪಿತ ಪಿಎಸ್‌ಎಲ್‌ವಿ/ಎಲ್‌ವಿಎಂ-3 ಉತ್ಪಾದನೆಯ ವರ್ಗಾವಣೆಯಿಂದ ಸಾರ್ವಜನಿಕ ವಲಯದ ಕಂಪನಿಗಳನ್ನು ಹೊರಗಿಡಲು ನಿರ್ಧರಿಸಲಾಗಿದೆಯೇ? ಅಂಥ ಕ್ರಮಕ್ಕೆ ನಿಮ್ಮ ಸಮರ್ಥನೆ ಏನು ಎಂದು ಪ್ರಶ್ನಿಸಲಾಗಿದೆ.


