2024ರ ಲೋಕಸಭಾ ಚುನಾವಣೆಗೂ ಮುನ್ನ ಗುಜರಾತ್‌ನ ಮಾನ್ಯತೆ ಇಲ್ಲದ 6 ರಾಜಕೀಯ ಪಕ್ಷಗಳು ಒಟ್ಟು 1700 ಕೋಟಿ ರೂಪಾಯಿ ದೇಣಿಗೆ ಪಡೆದಿವೆ. ಅಭ್ಯರ್ಥಿಗಳನ್ನೇ ಹೆಚ್ಚಾಗಿ ಕಣಕ್ಕಿಳಿಸದ ಈ ಪಕ್ಷಗಳು, 5 ರಾಷ್ಟ್ರೀಯ ಪಕ್ಷಗಳ ಒಟ್ಟು ದೇಣಿಗೆಗಿಂತ ಹೆಚ್ಚು ಹಣ ಪಡೆದಿರುವುದು ಅನುಮಾನಕ್ಕೆ ಕಾರಣವಾಗಿದೆ.

ನವದೆಹಲಿ (ಸೆ.6): ಚುನಾವಣಾ ದೇಣಿಗೆ ಕುರಿತು ಆಕ್ಷೇಪಗಳ ನಡುವೆಯೇ, 2024ರ ಲೋಕಸಭಾ ಚುನಾವಣೆಗೂ ಮುನ್ನ ಗುಜರಾತ್‌ನ ಮಾನ್ಯತೆ ಹೊಂದಿರದ 6 ಪಕ್ಷಗಳಿಗೆ ಭರ್ಜರಿ 1700 ಕೋಟಿ ರು.ದೇಣಿಗೆ ಸಂದಾಯವಾಗಿತ್ತು. ಇದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ ಎಂದು ವರದಿಗಳು ತಿಳಿಸಿವೆ.

ಚುನಾವಣೆಗೆ ಅಭ್ಯರ್ಥಿಗಳನ್ನೇ ಕಣಕ್ಕಿಳಿಸದ ಈ ಪಕ್ಷಗಳು, ಬಿಜೆಪಿ ಹೊರತುಪಡಿಸಿ 5 ರಾಷ್ಟ್ರೀಯ ಪಕ್ಷಗಳು ಸಂಗ್ರಹಿಸಿದ ಒಟ್ಟು ದೇಣಿಗೆಗಿಂತ 200 ಕೋಟಿ ರು. ಹೆಚ್ಚಿಗೆ ದೇಣಿಗೆ ಪಡೆದಿರುವುದು ಪಕ್ಷದ ಹೆಸರಲ್ಲಿ ಅಕ್ರಮ ಹಣ ವರ್ಗಾವಣೆ ನಡೆದಿರುವ ಶಂಕೆಗೆ ಎಡೆಮಾಡಿದೆ.

ಕಾಂಗ್ರೆಸ್, ಸಿಪಿಎಂ, ಎಎಪಿ, ಬಿಎಸ್‌ಪಿ ಮತ್ತು ನ್ಯಾಷನಲ್ ಪೀಪಲ್ಸ್ ಪಾರ್ಟಿಯ ಒಟ್ಟು ಆದಾಯವು 2023-24ರಲ್ಲಿ 1,480.43 ಕೋಟಿ ರು.ನಷ್ಟಿತ್ತು. ಇವುಗಳನ್ನು ಮೀರಿ 6 ಸ್ಥಳೀಯ ಪಕ್ಷಗಳು ದೇಣಿಗೆ ಸಂಗ್ರಹಿಸಿವೆ.

2020ರಲ್ಲಿ ಸ್ಥಾಪನೆಯಾಗಿದ್ದ ಆಮ್ ಜನ್ಮತ್ ಪಾರ್ಟಿಯು 2022-23ರಲ್ಲಿ 216 ಕೋಟಿ ರು. ದೇಣಿಗೆ ಪಡೆದಿದ್ದರೆ, 2023-24ನೇ ಸಾಲಿನಲ್ಲಿ ಅತಿ ಹೆಚ್ಚು, 620 ಕೋಟಿ ರು. ದೇಣಿಗೆ ಪಡೆದಿದೆ. ಸತ್ಯವಾದಿ ರಕ್ಷಕ ಪಾರ್ಟಿಯು 330.55 ಕೋಟಿ ರು. ಪಡೆದಿದ್ದು, ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಉಳಿದಂತೆ ಸ್ವತಂತ್ರತಾ ಅಭಿವ್ಯಕ್ತಿ ಪಾರ್ಟಿ 219.69 ಕೋಟಿ ರು., ನ್ಯೂ ಇಂಡಿಯಾ ಯುನೈಟೆಡ್ ಪಾರ್ಟಿ 200.69 ಕೋಟಿ ರು., ಭಾರತೀಯ ರಾಷ್ಟ್ರೀಯ ಜನತಾ ದಳ 191.61 ಕೋಟಿ ರು. ಮತ್ತು ಗರೀಬ್ ಕಲ್ಯಾಣ್ ಪಾರ್ಟಿ 138 ಕೋಟಿ ರು. ದೇಣಿಗೆ ಪಡೆದಿದ್ದವು. ಈ 6 ಪಕ್ಷಗಳು 2024ರ ಲೋಕಸಭಾ ಚುನಾವಣೆಗೆ ಕೇವಲ 15 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು.