ಐಐಎಂ ಕಲ್ಲಿಕೋಟೆಯಲ್ಲಿ ಎಂಬಿಎ ಮುಗಿಸಿದ ಪ್ರತಿಭಾವಂತ ಯುವಕನೊಬ್ಬ 250ಕ್ಕೂ ಹೆಚ್ಚು ಕಂಪನಿಗಳಿಗೆ ಅರ್ಜಿ ಸಲ್ಲಿಸಿದರೂ ಒಂದೇ ಒಂದು ಇಂಟರ್‌ವ್ಯೂ ಕಾಲ್ ಬಂದಿಲ್ಲ. ಪ್ರಸ್ತುತ ಉದ್ಯೋಗ ಮಾರುಕಟ್ಟೆಯ ಹಿಂಜರಿಕೆ ಮತ್ತು ಕೃತಕ ಬುದ್ಧಿಮತ್ತೆಯ ಪ್ರಭಾವದಿಂದಾಗಿ ಐಐಎಂ ಗೋಲ್ಡ್ ಮೆಡಲಿಸ್ಟ್‌ಗಳಿಗೂ ಉದ್ಯೋಗ ಸಿಗುವುದು ಕಷ್ಟಕರವಾಗಿದೆ ಎಂಬುದನ್ನು ಈ ಘಟನೆ ಸಾಬೀತುಪಡಿಸಿದೆ.

ಬೆಂಗಳೂರು / ಕೋಝಿಕ್ಕೋಡ್: 'ಕೈಯಲ್ಲಿ ಐಐಎಂ (IIM) ಡಿಗ್ರಿ ಇದ್ದರೆ ಸಾಕು, ಕಂಪನಿಗಳು ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸುತ್ತವೆ' ಎಂಬ ಮಾತು ಈಗಿನ ಕಠಿಣ ಜಾಬ್ ಮಾರ್ಕೆಟ್‌ನಲ್ಲಿ ಸುಳ್ಳಾಗುತ್ತಿದೆ ಎಂಬುದಕ್ಕೆ ಇಲ್ಲೊಬ್ಬ ಉದಾಹರಣೆ ಸಿಕ್ಕಿದೆ. ದೇಶದ ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (IIM) ಕಲ್ಲಿಕೋಟೆಯಲ್ಲಿ ಎಂಬಿಎ (MBA) ಮುಗಿಸಿರುವ ಪ್ರತಿಭಾವಂತ ಯುವಕನೊಬ್ಬನಿಗೆ ಈಗಿನ ಉದ್ಯೋಗ ಮಾರುಕಟ್ಟೆ ಅಕ್ಷರಶಃ ದೊಡ್ಡ ಶಾಕ್ ನೀಡಿದೆ.

ಬರೋಬ್ಬರಿ 250ಕ್ಕೂ ಹೆಚ್ಚು ಕಂಪನಿಗಳಿಗೆ ಉದ್ಯೋಗಕ್ಕಾಗಿ ರೆಸ್ಯೂಮ್ ಕಳುಹಿಸಿದರೂ, ಈವರೆಗೂ ಒಂದೇ ಒಂದು ಇಂಟರ್‌ವ್ಯೂ ಕಾಲ್ ಕೂಡ ಬಂದಿಲ್ಲವಂತೆ! ಸ್ವತಃ ಆ ವ್ಯಕ್ತಿಯೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಈ ವಿಚಾರವು ಈಗ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದ್ದು, ಉದ್ಯೋಗ ಆಕಾಂಕ್ಷಿಗಳಲ್ಲಿ ಆತಂಕ ಮೂಡಿಸಿದೆ.

ಐಐಎಂ ಗೋಲ್ಡ್ ಮೆಡಲಿಸ್ಟ್‌ ಗತಿ ಹೀಗಾ?:

ಸಾಮಾನ್ಯವಾಗಿ ಐಐಎಂ ಕಾಲೇಜುಗಳಲ್ಲಿ ಕ್ಯಾಂಪಸ್ ಪ್ಲೇಸ್‌ಮೆಂಟ್ ಮೂಲಕ ಲಕ್ಷಾಂತರ, ಕೋಟಿ ರೂ. ಪ್ಯಾಕೇಜ್ ಸಿಗುತ್ತದೆ ಎಂಬುದು ಎಲ್ಲರ ನಂಬಿಕೆ. ಆದರೆ, ಕೆಲವು ಅನಿವಾರ್ಯ ಕಾರಣಗಳಿಂದ ಕ್ಯಾಂಪಸ್ ಪ್ಲೇಸ್‌ಮೆಂಟ್‌ನಲ್ಲಿ ಅವಕಾಶ ಸಿಗದೆ ಹೊರಗಿನ ಮಾರುಕಟ್ಟೆಯಲ್ಲಿ (Off-campus) ಉದ್ಯೋಗ ಹುಡುಕ ಹೊರಟ ಈ ಐಐಎಂ ಪದವೀಧರನ ಅನುಭವ ಎಲ್ಲರಿಗೂ ಕಣ್ಣು ತೆರೆಸುವಂತಿದೆ. "ಒಬ್ಬ ಐಐಎಂ ಗೋಲ್ಡ್ ಮೆಡಲಿಸ್ಟ್‌ಗೇ ಈ ಗತಿಯಾದರೆ, ಇನ್ನು ಸಾಮಾನ್ಯ ಕಾಲೇಜುಗಳಲ್ಲಿ ಓದಿದವರ ಕಥೆೇನು?" ಎಂದು ನೆಟಿಗರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.

ಪ್ರಸ್ತುತ ಜಾಬ್ ಮಾರ್ಕೆಟ್‌ನ ಕಠಿಣ ಸತ್ಯ:

ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಉದ್ಯೋಗ ಮಾರುಕಟ್ಟೆ ತೀವ್ರ ಹಿಂಜರಿಕೆ (Job Market Slowdown) ಎದುರಿಸುತ್ತಿದ್ದು, ದೈತ್ಯ ಕಂಪನಿಗಳು ಉದ್ಯೋಗಿಗಳನ್ನು ವಜಾಗೊಳಿಸುತ್ತಿವೆ ಮತ್ತು ಹೊಸ ನೇಮಕಾತಿಗಳನ್ನು ಕನಿಷ್ಠ ಮಟ್ಟಕ್ಕೆಳಿಸಿವೆ. ಕೃತಕ ಬುದ್ಧಿಮತ್ತೆ (AI) ಮತ್ತು ಆಟೋಮೇಷನ್ ಪ್ರವೇಶದಿಂದಾಗಿ ಹೈಯರ್ ಎಜುಕೇಷನ್ ಮುಗಿಸಿದವರಿಗೂ ಉದ್ಯೋಗ ಸಿಗುವುದು ಕಷ್ಟಕರವಾಗುತ್ತಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ಡಿಗ್ರಿ ಎಷ್ಟೇ ದೊಡ್ಡದಿದ್ದರೂ, ಇಂದಿನ ಕಾರ್ಪೊರೇಟ್ ಜಗತ್ತಿನಲ್ಲಿ ಸ್ಪರ್ಧೆ ಎಷ್ಟು ಕಠಿಣವಾಗಿದೆ ಎಂಬುದನ್ನು ಈ ಘಟನೆ ಮತ್ತೊಮ್ಮೆ ಸಾಬೀತುಪಡಿಸಿದೆ.