ಆಂಧ್ರಪ್ರದೇಶದ ಸಾಯಿ ವರ್ಷಿತಾ ಎಂಬ ಯುವತಿ ಸತತ ಪ್ರಯತ್ನದಿಂದ ಬರೋಬ್ಬರಿ ಆರು ಸರ್ಕಾರಿ ಉದ್ಯೋಗಗಳನ್ನು ಪಡೆದು ಸಾಧನೆ ಮಾಡಿದ್ದಾರೆ. ಆರಂಭಿಕ ಸೋಲಿನಿಂದ ಪಾಠ ಕಲಿತ ಇವರು, ಎಸ್‌ಎಸ್‌ಸಿ ಸಿಜಿಎಲ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಆದಾಯ ತೆರಿಗೆ ಇಲಾಖೆಯಲ್ಲಿ ಹುದ್ದೆ ಗಿಟ್ಟಿಸಿಕೊಂಡಿದ್ದಾರೆ. ಸರ್ಕಾರಿ ಕೆಲಸದ ಆಕಾಂಕ್ಷಿಗಳಿಗೆ ಗುರಿ ಮತ್ತು ಸತತ ಪ್ರಯತ್ನದ ಬಗ್ಗೆ ಇವರು ಸ್ಫೂರ್ತಿದಾಯಕ ಸಲಹೆ ನೀಡಿದ್ದಾರೆ.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸರ್ಕಾರಿ ಕೆಲಸ ಪಡೆದುಕೊಳ್ಳುವುದು ಅಷ್ಟು ಸುಲಭವಲ್ಲ. ಅದರಲ್ಲೂ ಲಕ್ಷಾಂತರ ಜನರೊಂದಿಗೆ ಸ್ಪರ್ಧೆ ಮಾಡಿ ಉದ್ಯೋಗ ಪಡೆದುಕೊಳ್ಳುವುದು ಸುಲಭದ ಮಾತಲ್ಲ. ವರ್ಷಗಳ ಕಾಲ ನಿತ್ಯ 10-12 ಗಂಟೆಗಳ ಓದಿ, ಪರೀಕ್ಷೆಗಳನ್ನು ಬರೆಯಬೇಕಾಗುತ್ತದೆ. ಇಂತಹ ದಿನಗಳಲ್ಲಿ ಓರ್ವ ಯುವತಿ ಬರೋಬ್ಬರಿ ಆರು ಸರ್ಕಾರಿ ಉದ್ಯೋಗಗಳನ್ನು ಪಡೆದುಕೊಂಡಿದ್ದಾರೆ ಎಂದರೆ, ನೀವು ನಂಬಲೇ ಬೇಕು.
6 ಸರ್ಕಾರಿ ಕೆಲಸ ಪಡೆದ ಯುವತಿಯ ಯಶಸ್ಸಿನ ರಹಸ್ಯವೇನು?
ಅಂದಹಾಗೇ ಈ ಸಾಧನೆ ಮಾಡಿದ ಯುವತಿ ಹೆಸರು ಸಾಯಿ ವರ್ಷಿತಾ, ಮೂಲತಃ ಆಂಧ್ರ ಪ್ರದೇಶದ ವೈಎಸ್ಆರ್ ಕಡಪ ಜಿಲ್ಲೆಯ ನಿವಾಸಿ. ಅನಿಲಾದೇವಿ, ಗುರುದತ್ತ ದಂಪತಿಯ ಎರಡನೇ ಪುತ್ರಿಯಾಗಿರುವ ಸಾಯಿ ವಕ್ಷಿತಾ, ಪುಲಿವೆಂದುಲದಲ್ಲಿ 10ನೇ ತರಗತಿ ವರೆಗೂ ಓದಿದ್ದರು. ಆ ಬಳಿಕ ಹೈದರಾಬಾದ್‌ನ ಎನ್‌ಟಿಆರ್ ಜೂನಿಯರ್ ಕಾಲೇಜಿನಲ್ಲಿ ಪಿಯು ಶಿಕ್ಷಣ ಮುಗಿಸಿದ್ದರು. ಆ ಬಳಿಕ ವಿಶಾಖಪಟ್ಟಣದ ದಾಮೋದರಂ ಸಂಜೀವಯ್ಯ ಕೇಂದ್ರ ಕಾನೂನು ವಿವಿಯಲ್ಲಿ ಪದವಿ ಮುಗಿಸಿ, ನಾಲ್ಕು ಚಿನ್ನದ ಪದಕ ಪಡೆದುಕೊಂಡಿದ್ದರು.
ಸೋಲಿನಿಂದ ಪಾಠ ಕಲಿತ ಯುವತಿ
ಚಿಕ್ಕ ವಯಸ್ಸಿನಿಂದಲೂ ಸರ್ಕಾರಿ ಉದ್ಯೋಗದ ಕನಸು ಕಂಡಿದ್ದ ಸಾಯಿ ವರ್ಷಿತಾ, ಪದವಿ ಸಿಕ್ಕ ಬೆನ್ನಲ್ಲೇ ಸರ್ಕಾರಿ ಉದ್ಯೋಗಕ್ಕೆ ಸಿದ್ಧತೆ ನಡೆಸಿದ್ದರು. 2024ರಲ್ಲಿ ಮೊದಲ ಬಾರಿಗೆ ಸ್ಟಾಫ್ ಸೆಲೆಕ್ಷನ್ ಕಮಿಷನ್ ಪರೀಕ್ಷೆ ಬರೆದಿದ್ದರು. ಆದರೆ ಪ್ರಿಲಿಮ್ಸ್‌ಗೆ ಆಯ್ಕೆಯಾದರೂ ಮುಖ್ಯ ಪರೀಕ್ಷೆಯಲ್ಲಿ ನಿರೀಕ್ಷಿತಾ ಫಲಿತಾಂಶ ಸಿಕ್ಕಿರಲಿಲ್ಲ. ಈ ಸೋಲಿನೊಂದಿಗೆ ಪಾಠ ಕಲಿತ ಅವರು ಈ ಬಾರಿ ಮತ್ತಷ್ಟು ಶ್ರದ್ಧೆಯಿಂದ ತಯಾರಿ ನಡೆಸಿದ್ದರು. ಈ ಬಾರಿ ಕಾನೂನು ಇಲಾಖೆಯಲ್ಲಿ, ಒಂದರ ನಂತರ ಒಂದರಂತೆ ಉದ್ಯೋಗಗಳನ್ನು ಪಡೆದುಕೊಂಡಿದ್ದರು.
ಲಕ್ಷಾಂತರ ಮಂದಿಯಲ್ಲಿ ಸಿಕ್ಕೇ ಬಿಡ್ತು ಕನಸಿನ ಉದ್ಯೋಗ
ಹಿರಿಯ ತಾಂತ್ರಿಕ ಸಹಾಯಕ, ಜೂನಿಯರ್ ತಾಂತ್ರಿಕ ಸಹಾಯಕ, ಜೂನಿಯರ್ ಸಹಕಾರಿ ಅಧಿಕಾರಿ, ಜೂನಿಯರ್ ಅಕೌಂಟೆಂಟ್ ಮತ್ತು ತಾಂತ್ರಿಕ ಗುಮಾಸ್ತ ಹುದ್ದೆಗಳನ್ನು ಪಡೆದುಕೊಂಡಿದ್ದರು. ಸಾಯಿ ವರ್ಷಿತಾ ಅಲ್ಲಿಗೆ ನಿಲ್ಲದೆ, ಕೇಂದ್ರ ಸರ್ಕಾರದಲ್ಲಿ ಉದ್ಯೋಗ ಪಡೆದುಕೊಳ್ಳಲೇ ಬೇಕು ಎಂಬ ಛಲದೊಂದಿಗೆ ಮತ್ತೆ ಅಧ್ಯಯನ ನಡೆಸಿದ್ದರು. ಇದರಂತೆ ಎಸ್‌ಎಸ್‌ಸಿ ಸಿಜಿಎಲ್ ಪರೀಕ್ಷೆಗೆ ಸಿದ್ಧತೆ ನಡೆಸಿದ್ದರು. ಕೇವಲ 412 ಹುದ್ದೆಗಳಿಗೆ ನಡೆದ ಪರೀಕ್ಷೆಗೆ ದೇಶದಾದ್ಯಂತ ಒಟ್ಟು 28 ಲಕ್ಷದ 15 ಸಾವಿರದ 445 ಜನರು ಅರ್ಜಿ ಸಲ್ಲಿಸಿದ್ದರು. ಇದರಲ್ಲಿ 13.77 ಲಕ್ಷ ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಈ ಪರೀಕ್ಷೆ ಬರೆದಿದ್ದ ಸಾಯಿ ವರ್ಷಿತಾಗೆ ಆದಾಯ ತೆರಿಗೆ ಇಲಾಖೆಯಲ್ಲಿ ಸಂಶೋಧನಾ ನಿರೀಕ್ಷಕರ ಹುದ್ದೆ ಸಿಕ್ಕಿತ್ತು. ಇದೇ ತಿಂಗಳ 19ರಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವೆ ಶೋಭಾ ಕರಂದ್ಲಾಜೆ ಅವರು ನೇಮಕಾತಿ ಪತ್ರವನ್ನು ಸಾಯಿ ವರ್ಷಿತಾಗೆ ಹಸ್ತಾಂತರ ಮಾಡಿದ್ದರು.
ಯುವಕರಿಗೆ ಸಾಯಿ ವರ್ಷಿತಾ ಹೇಳಿದ್ದೇನು?
ಉದ್ಯೋಗ ಪಡೆದುಕೊಂಡ ಬಳಿಕ ಇದೇ ರೀತಿ ಸರ್ಕಾರಿ ಉದ್ಯೋಗಕ್ಕೆ ತಯಾರಿ ನಡೆಸುತ್ತಿರುವ ಯುವಜನತೆಗೆ ಸಲಹೆ ನೀಡಿರುವ ವರ್ಷಿತಾ, ಪರೀಕ್ಷೆಗೆ ನೀವು ಸಿದ್ಧತೆ ನಡೆಸುವ ಸಂದರ್ಭದಲ್ಲಿ ಮೊದಲು ನಿಮ್ಮ ಗುರಿಯನ್ನು ತಿಳಿದುಕೊಳ್ಳಿ. ಆ ಬಳಿಕ ಅದಕ್ಕೆ ಏನೆಲ್ಲಾ ತಯಾರಿ ಮಾಡಬೇಕು ಎಂದು ತಿಳಿದುಕೊಂಡು ತಯಾರಿ ಆರಂಭ ಮಾಡಿ. ಎಲ್ಲಾ ವಿಷಯಗಳನ್ನು ಓದಿದ ಬಳಿಕ ಮತ್ತೆ ವಿಷಯವಾರು ಓದಲು ಶುರು ಮಾಡಿ. ಇದರ ನಡುವೆ ವೈಫಲ್ಯ ಎದುರಿಸಿದರೆ, ಮತ್ತೆ ಮತ್ತೆ ಪ್ರಯತ್ನಿಸಿ ಎಂದಿದ್ದಾರೆ.


