2026ರ ಹುರುನ್ ಇಂಡಿಯಾ ರಿಚ್ ಲಿಸ್ಟ್ ಬಿಡುಗಡೆಯಾಗಿದ್ದು, ಬಾಲಿವುಡ್ ನಟ ಶಾರುಖ್ ಖಾನ್ 10 ಸಾವಿರ ಕೋಟಿ ರೂ. ನಿವ್ವಳ ಮೌಲ್ಯದೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಇವರ ನಂತರ ಅಮಿತಾಭ್ ಬಚ್ಚನ್ ಮತ್ತು ಸಲ್ಮಾನ್ ಖಾನ್ ಸ್ಥಾನ ಪಡೆದಿದ್ದಾರೆ. ಶಾರುಖ್ ಪ್ರಸ್ತುತ ತಮ್ಮ ಮುಂಬರುವ 'ಕಿಂಗ್' ಚಿತ್ರದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.
ಮುಂಬೈ: ಚಲನಚಿತ್ರ ರಂಗದಲ್ಲಿ ಶ್ರೀಮಂತರು ಯಾರು ಎನ್ನುವುದನ್ನು ತಿಳಿಸುವ ಹುರುನ್ ಇಂಡಿಯಾ ರಿಚ್ ಲಿಸ್ಟ್ 2026 ಬಿಡುಗಡೆಯಾಗಿದ್ದು, ಈ ಬಾರಿಯೂ ಬಾಲಿವುಡ್ ಬಾದ್ಶಾಹ್ ಎಂದೇ ಫೇಮಸ್ ಆಗಿರೋ ನಟ ಶಾರುಖ್ ಖಾನ್ ಮೊದಲ ಸ್ಥಾನದಲ್ಲಿದ್ದಾರೆ. ಇವರ ನಿವ್ವಳ ಮೌಲ್ಯ 10 ಸಾವಿರ ಕೋಟಿ ರೂಪಾಯಿ. ಬಾಯಲ್ಲಿ ಹೇಳಿ ಕೇಸರಿ ಎನ್ನುತ್ತಲೇ ಯುವಜನರ ಹಾದಿ ತಪ್ಪಿಸುವ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಮೂಲಕ ವಿವಾದ ಸೃಷ್ಟಿಸ್ತಿರೋ ಶಾರುಖ್ ಖಾನ್, ಯಾರು ಏನೇ ಹೇಳಿದ್ರೂ ನಾನು ಈ ಜಾಹೀರಾತಿನಿಂದ ಹಿಂದಕ್ಕೆ ಸರಿಯುವುದಿಲ್ಲ. ನಾನು ದುಡ್ಡು ಪಡೆದುಕೊಂಡಿದ್ದೇನೆ, ಅಂಥಮಹಾ ತಪ್ಪೇನು ಮಾಡುತ್ತಿದ್ದೇನೆ ಎಂದು ಪ್ರಶ್ನಿಸಿದ್ದರು. ಈ ಜಾಹೀರಾತಿಗೆ ಇವರಿಗೆ ಎಷ್ಟು ಕೋಟಿ ಸಂಭಾವನೆ ಸಿಕ್ಕಿದೆ ಎನ್ನುವುದು ರಿವೀಲ್ ಆಗಿಲ್ಲ. ಆದರೆ ಸದ್ಯ ಇವರು ಟಾಪ್ 1 ಸ್ಥಾನದಲ್ಲಿದ್ದಾರೆ.
ಶಾರುಖ್ ಅವರ ಪ್ರಸ್ತುತ ನಿವ್ವಳ ಮೌಲ್ಯ ₹10,000 ಕೋಟಿ. ಇದರಲ್ಲಿ ಚಲನಚಿತ್ರಗಳು ಮತ್ತು ಜಾಹೀರಾತುಗಳಿಂದ ಅವರ ಗಳಿಕೆ ಮಾತ್ರವಲ್ಲದೆ, ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ನೈಟ್ ರೈಡರ್ಸ್ ಸ್ಪೋರ್ಟ್ಸ್‌ನಂತಹ ಅವರ ವ್ಯವಹಾರಗಳು ಸಹ ಸೇರಿವೆ. ಅಂದಹಾಗೆ ಕಳೆದ ವರ್ಷವೂ ಇವರೇ ಟಾಪ್ನಲ್ಲಿ ಇದ್ದರು. ಅದಕ್ಕೆ ಹೋಲಿಸಿದರೆ ನಿವ್ವಳ ಮೌಲ್ಯ ಸುಮಾರು ₹2,500 ಕೋಟಿಗಳಷ್ಟು ಕಡಿಮೆಯಾಗಿದೆ ಎಂದು ವರದಿ ಹೇಳುತ್ತದೆ. ಕಳೆದ ವರ್ಷ ಅವರ ನಿವ್ವಳ ಮೌಲ್ಯ, ₹12,490 ಕೋಟಿ ರೂಪಾಯಿ ಇತ್ತು ಎನ್ನಲಾಗಿದೆ. ಈ ಗಮನಾರ್ಹ ಕುಸಿತದ ಹೊರತಾಗಿಯೂ, ಶಾರುಖ್ ಖಾನ್ ಭಾರತದ ಅತ್ಯಂತ ಶ್ರೀಮಂತ ನಟನಾಗಿ ಉಳಿದಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ.
ಮುಂದಿನ ಸ್ಥಾನದಲ್ಲಿ ಇರೋರು ಯಾರು?
ಅವರ ನಂತರ ಅಮಿತಾಬ್ ಬಚ್ಚನ್ ಇದ್ದಾರೆ. ಅವರ ನಿವ್ವಳ ಮೌಲ್ಯ ₹4,000 ಕೋಟಿ. ₹3,000 ಕೋಟಿ ನಿವ್ವಳ ಮೌಲ್ಯದೊಂದಿಗೆ ಸಲ್ಮಾನ್ ಖಾನ್ ಮೂರನೇ ಸ್ಥಾನದಲ್ಲಿದ್ದಾರೆ. ನಿವ್ವಳ ಮೌಲ್ಯ ₹2,500 ಕೋಟಿಯೊಂದಿಗೆ ಹೃತಿಕ್ ರೋಷನ್ 4ನೇ ಸ್ಥಾನದಲ್ಲಿದ್ದಾರೆ. ಸಿನಿಮಾ ನಟರನ್ನು ಹೊರತುಪಡಿಸಿ ಸಿನಿಮಾ ಕ್ಷೇತ್ರದ ಉಳಿದವರ ಪಟ್ಟಿಯನ್ನು ನೋಡುವುದಾದರೆ, 'ರಾಮಾಯಣಂ' ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರ ತಂದೆ ನರೇಶ್ ಮಲ್ಹೋತ್ರಾ ಟಾಪ್ 1 ಸ್ಥಾನ ಪಡೆದುಕೊಂಡಿದ್ದಾರೆ. ಅವರ ನಿವ್ವಳ ಮೌಲ್ಯ ಪ್ರಸ್ತುತ ₹16,000 ಕೋಟಿ.
ಶಾರುಖ್ ಖಾನ್ ಅವರ ಮುಂದಿನ ಚಿತ್ರ
ಶಾರುಖ್ ಖಾನ್ ಪ್ರಸ್ತುತ ತಮ್ಮ ಮುಂದಿನ ಚಿತ್ರ 'ಕಿಂಗ್' ನಲ್ಲಿ ಕೆಲಸ ಮಾಡುತ್ತಿದ್ದಾರೆ, ಇದು ಸಿದ್ಧಾರ್ಥ್ ಆನಂದ್ ನಿರ್ದೇಶನದ ಆಕ್ಷನ್-ಥ್ರಿಲ್ಲರ್ ಚಿತ್ರ. ಮೂರು ವರ್ಷಗಳ ನಂತರ ಶಾರುಖ್ ಖಾನ್ ಅವರು ತೆರೆಗೆ ಮರಳುತ್ತಿರುವುದನ್ನು ಗುರುತಿಸುವ ಈ ಚಿತ್ರವು ಅಭಿಮಾನಿಗಳಿಗೆ ವಿಶೇಷವಾಗಿದೆ. ನಟ ಕೊನೆಯ ಬಾರಿಗೆ 2023 ರಲ್ಲಿ ಬಿಡುಗಡೆಯಾದ 'ಡಂಕಿ' ಚಿತ್ರದಲ್ಲಿ ಕಾಣಿಸಿಕೊಂಡರು. ಶಾರುಖ್ ಖಾನ್ ಜೊತೆಗೆ, 'ಕಿಂಗ್' ನಲ್ಲಿ ದೀಪಿಕಾ ಪಡುಕೋಣೆ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. "ದಿ ಆರ್ಚೀಸ್" ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ ಕಿಂಗ್ ಖಾನ್ ಅವರ ಪುತ್ರಿ ಸುಹಾನಾ ಖಾನ್ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. "ಆಪರೇಷನ್ ಸಫೇದ್ ಸಾಗರ್" ನಲ್ಲಿ ಕಾಣಿಸಿಕೊಂಡ ಅಭಯ್ ವರ್ಮಾ ಕೂಡ ಈ ಚಿತ್ರದ ಭಾಗವಾಗಲಿದ್ದಾರೆ. ವರದಿಗಳ ಪ್ರಕಾರ, ಅಭಿಷೇಕ್ ಬಚ್ಚನ್ ಕೂಡ ಈ ಚಿತ್ರದಲ್ಲಿ ಖಳನಾಯಕನ ಪಾತ್ರದಲ್ಲಿ ನಟಿಸಲಿದ್ದಾರೆ.
ಇತ್ತೀಚೆಗೆ, ಶಾರುಖ್ ಖಾನ್ "X" ನಲ್ಲಿ "ಆಸ್ಕ್ ಮಿ ಎನಿಥಿಂಗ್" ಸೆಷನ್ ನಡೆಸಿದರು, ಇದರಲ್ಲಿ "ಕಿಂಗ್" ಚಿತ್ರವನ್ನು ಮುಂದೂಡಲಾಗುತ್ತಿಲ್ಲ ಮತ್ತು ಡಿಸೆಂಬರ್ 24, 2026 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಬಹಿರಂಗಪಡಿಸಿದರು. "ಕಿಂಗ್" ಬಗ್ಗೆ ಬಳಕೆದಾರರು ಶಾರುಖ್ ಅವರನ್ನು ಅಪ್‌ಡೇಟ್‌ಗಾಗಿ ಕೇಳಿದಾಗ, ನಟ "ಈಗಲೇ ಸಿನಿಮಾ ನೋಡಿ! ನಾನು ಅದಕ್ಕಾಗಿ ಕಾಯುತ್ತಿಲ್ಲ, ನಾನು ಒಳ್ಳೆಯ ಸಿನಿಮಾ ಮಾಡುತ್ತಿದ್ದೇನೆ... ನನ್ನ ಹೃದಯ ತೃಪ್ತಿಗೊಳ್ಳುವಂತೆ... ಎಲ್ಲವೂ ಡಿಸೆಂಬರ್ 24 ರ ಮೊದಲು ಬರುತ್ತದೆ" ಎಂದು ಉತ್ತರಿಸಿದರು.


