ಕಾಲಿಗೆ ಹರಕಲು ಚಪ್ಪಲಿ ಧರಿಸಿ ಡೆಲಿವರಿಗೆ ಬಂದಿದ್ದ ಯುವಕನಿಗೆ ಅಮನ್ ಶರ್ಮಾ ಎಂಬುವವರು ತಮ್ಮ ಹೊಚ್ಚಹೊಸ ಅಡಿಡಾಸ್ ಶೂಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಮಾನವೀಯ ಘಟನೆಯ ಸಿಸಿಟಿವಿ ದೃಶ್ಯಾವಳಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಒಂದು ಸಣ್ಣ ಸಹಾಯ, ಸ್ವಲ್ಪ ಕಾಳಜಿ ಬೇರೆಯವರ ದಿನವನ್ನೇ ಬದಲಿಸಬಹುದು ಅನ್ನೋದಕ್ಕೆ ಈ ವಿಡಿಯೋನೇ ಸಾಕ್ಷಿ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಇಂಥದ್ದೊಂದು ವಿಡಿಯೋ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಉತ್ತರಾಖಂಡದಲ್ಲಿ, ಸ್ಲಿಪ್ಪರ್ ಚಪ್ಪಲಿ ಹಾಕಿಕೊಂಡು ಡೆಲಿವರಿಗೆ ಬಂದಿದ್ದ ಯುವಕನಿಗೆ ಅಮನ್ ಶರ್ಮಾ ಅನ್ನೋರು ತಮ್ಮ ಬಳಿಯಿದ್ದ ಹೊಚ್ಚಹೊಸ ಅಡಿಡಾಸ್ ಶೂಗಳನ್ನೇ ಕೊಟ್ಟುಬಿಟ್ಟಿದ್ದಾರೆ. ಅಮನ್ ಶರ್ಮಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಈ ಸಿಸಿಟಿವಿ ದೃಶ್ಯಾವಳಿ ಈಗ ವೈರಲ್ ಆಗಿದೆ.

'ನನಗಿಂತ ಅವನಿಗೇ ಇದರ ಅವಶ್ಯಕತೆ ಹೆಚ್ಚಿತ್ತು'

"ನನಗಿಂತ ಹೆಚ್ಚು ಈ ಶೂಗಳ ಅವಶ್ಯಕತೆ ಆ ಡೆಲಿವರಿ ಬಾಯ್‌ಗೆ ಇತ್ತು" ಅನ್ನೋ ಸಾಲಿನೊಂದಿಗೆ ಈ ವಿಡಿಯೋ ಶುರುವಾಗುತ್ತೆ. ಮನೆಯ ಬಾಲ್ಕನಿಯಲ್ಲಿದ್ದ ಅಮನ್, ಕೆಳಗೆ ನಿಂತಿದ್ದ ಡೆಲಿವರಿ ಪಾರ್ಟ್‌ನರ್‌ರನ್ನು ಕೂಗುತ್ತಾರೆ. "ಬ್ರೋ, ಶೂಸ್ ಬೇಕಾ? ಒರಿಜಿನಲ್ ಅಡಿಡಾಸ್ ಶೂ" ಅಂತ ಕೇಳ್ತಾ, ಕೈಯಲ್ಲಿದ್ದ ಶೂ ಬಾಕ್ಸನ್ನು ತೋರಿಸುತ್ತಾರೆ. ವಿಡಿಯೋದಲ್ಲಿ ಇದನ್ನು ಸ್ಪಷ್ಟವಾಗಿ ನೋಡಬಹುದು. ನಂತರ ಕೆಳಗೆ ಹೋಗಿ ಆ ಡೆಲಿವರಿ ಬಾಯ್‌ಗೆ ಶೂಗಳನ್ನು ಕೊಡುತ್ತಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಈ ಪೋಸ್ಟ್ ನೋಡಿ

View post on Instagram
 

ಶೂಗಳನ್ನು ಪಡೆದ ಡೆಲಿವರಿ ಬಾಯ್, ತನ್ನ ಸೈಕಲ್ ಏರಿ ಹೋಗುವ ದೃಶ್ಯವೂ ವಿಡಿಯೋದಲ್ಲಿದೆ. ಈತ ಝೆಪ್ಟೋ ಕಂಪನಿಯ ಡೆಲಿವರಿ ಪಾರ್ಟ್‌ನರ್ ಆಗಿದ್ದರು ಅಂತ ಅಮನ್ ಹೇಳಿದ್ದಾರೆ. ಮಳೆಯಲ್ಲಿ ಆತ ಸಂಪೂರ್ಣ ನೆನೆದು ಹೋಗಿದ್ದ. ಮೈಮೇಲೆ ರೇನ್‌ಕೋಟ್ ಕೂಡ ಇರಲಿಲ್ಲ. ಆದರೂ, ಸರಿಯಾದ ಸಮಯಕ್ಕೆ ಸೈಕಲ್‌ನಲ್ಲಿ ಬಂದು ಆರ್ಡರ್ ತಲುಪಿಸಿದ್ದ. ಆತ ಕಾಲಿಗೆ ಚಪ್ಪಲಿ ಮಾತ್ರ ಹಾಕಿಕೊಂಡಿದ್ದನ್ನು ನೋಡಿ, ತಕ್ಷಣವೇ ತನ್ನ ಹೊಸ ಶೂಗಳನ್ನು ಕೊಡಲು ನಿರ್ಧರಿಸಿದೆ ಅಂತ ಅಮನ್ ವಿವರಿಸಿದ್ದಾರೆ.

ಮಿಶ್ರ ಪ್ರತಿಕ್ರಿಯೆ, ಸ್ಪಷ್ಟನೆ ಕೊಟ್ಟ ಅಮನ್

ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಮನ್ ಅವರ ಮಾನವೀಯತೆಗೆ ಹಲವರು ಮೆಚ್ಚುಗೆ ಸೂಚಿಸಿದರೆ, ಇನ್ನು ಕೆಲವರು ಇದೊಂದು ಪ್ರಚಾರಕ್ಕಾಗಿ ಮಾಡಿದ ನಾಟಕವಿರಬಹುದು ಅಂತ ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ, ಈ ಟೀಕೆಗಳಿಗೆ ಅಮನ್ ಪ್ರತಿಕ್ರಿಯಿಸಿದ್ದಾರೆ. ‘ನಾನು ಪ್ರಚಾರಕ್ಕಾಗಲಿ, ಜನಪ್ರಿಯತೆಗಾಗಲಿ ಹೀಗೆ ಮಾಡಿಲ್ಲ. ಆ ಕ್ಷಣದಲ್ಲಿ ನನಗೆ ಸಹಜವಾಗಿ ಅನಿಸಿದ್ದನ್ನು ಮಾಡಿದ್ದೇನೆ ಅಷ್ಟೇ. ಒಂದು ಸಣ್ಣ ಸಹಾಯದ ಕೆಲಸ ಕೂಡ ಒಬ್ಬರ ದಿನದಲ್ಲಿ ದೊಡ್ಡ ಬದಲಾವಣೆ ತರಬಲ್ಲದು ಅಂತ ನಾನು ನಂಬುತ್ತೇನೆ’ ಎಂದು ಅವರು ಹೇಳಿದ್ದಾರೆ.