ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮಗ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾನೆ. ಚುನಾವಣೆ ದಿನ ಹಿರಿಯ ತಾಯಿ ಮತ ಹಾಕಿದ ಬೆನ್ನಲ್ಲೇ ಮೃತಪಟ್ಟಿದ್ದಾರೆ. ಫಲಿತಾಂಶ ಬಂದಾಗ ದುಃಖ ಇಮ್ಮಡಿಯಾಗಿದೆ. ಮಗ ಕೇವಲ ಒಂದು ಮತದಿಂದ ಗೆದ್ದ ಘಟನೆ ನಡೆದಿದೆ.
ಜೈಪುರ (ಸೆ.15) ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿನ ಫಲಿತಾಂಶ,ಸ್ಪರ್ಧೆ ಹಲವು ಭಾರಿ ರಾಷ್ಟ್ರ ಮಟ್ಟದಲ್ಲಿ ಭಾರಿ ಸದ್ದು ಮಾಡುತ್ತಿದೆ. ಇದೀಗ ರಾಜಸ್ಥಾನದ ಸಿವಿಕ್ ಸಂಸ್ಥೆ ಚುನಾವಣೆ ಭಾರಿ ಸುದ್ದಿಯಾಗಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗೆ ಕೇವಲ ಒಂದು ಮತ, ಕೆಲ ಅಭ್ಯರ್ಥಿಗಳಿಗೆ ಶೂನ್ಯ ಮತ ಸೇರಿದಂತೆ ಹಲವು ಅಚ್ಚರಿ ಫಲಿತಾಂಶಗಳು ಹೊರಬಂದಿದೆ. ಇದರ ನಡುವೆ ತಾಯಿ ಮಗನ ಭಾವುಕ ಘಟನೆಯೊಂದು ಬಹಿರಂಗವಾಗಿದೆ. ಮಗ ಪಕ್ಷೇತರ ಅಭ್ಯರ್ಥಿಯಾಗಿ ಸ್ಥಳೀಯ ಸಂಸ್ಥೆ ಚುನಾವಣೆಗೆ ಸ್ಪರ್ಧಿಸಿದ್ದಾನೆ. ಮತದಾನ ದಿನ ತಾಯಿ ಮಗನ ಕೈಹಿಡಿದು ಬಂದು ಮತದಾನ ಮಾಡಿದ್ದಾರೆ. ತಕ್ಷಣವೇ ಅಸ್ವಸ್ಥಗೊಂಡು ತಾಯಿ ಮೃತಪಟ್ಟಿದ್ದಾರೆ. ಇತ್ತ ಫಲಿತಾಂಶ ಹೊರಬಂದಾಗ ಮಗ ಕೇವಲ ಒಂದು ಮತದಿಂದ ಗೆದ್ದ ಘಟನೆ ರಾಜಸ್ಥಾನದ ಭಾರತಪುರ ಜಿಲ್ಲೆಯ ನಡ್‌ಬಾಯಿ ಮುನ್ಸಿಪಾಲಿಟಿಯಲ್ಲಿ ನಡೆದಿದೆ.
ರಂಗೇರಿದ ಚುನಾವಣೆಯಲ್ಲಿ ಅಚ್ಚರಿ ಜೊತೆ ಆಘಾತ
ಜಗದೀಶ್ ಪ್ರಸಾದ್ ನಡ್‌ಬಾಯಿ ಮುನ್ಸಿಪಾಲಿಟಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಜಗದೀಶ್ ಪ್ರಸಾದ್ ಪಕ್ಷೇತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಇತ್ತ ಬಿಜೆಪಿಯ ಪ್ರಬಲ ಅಭ್ಯರ್ಥಿ ರಾಮಶರಣ್ ಸ್ಪರ್ಧಿಸಿದ್ದಾರೆ. ಹೋರಾಟ ತೀವ್ರಗೊಂಡಿತ್ತು. ಇದರ ಜೊತೆಗೆ ಇತರ ಕೆಲ ಪಾರ್ಟಿ ಸದಸ್ಯರು ಸ್ಪರ್ಧಿಸಿದ್ದಾರೆ.ಬಿಜೆಪಿ ಅಭ್ಯರ್ಥಿ ಗೆಲ್ಲುತ್ತಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ತನ್ನ ಗೆಲುವಿಗಾಗಿ ಜಗದೀಶ್ ಪ್ರಮಾಣಿಕ ಪ್ರಯತ್ನ ಮಾಡಿದ್ದರು.
ಮತದಾನ ಮಾಡಿದ ತಾಯಿ
ಮತದಾನ ದಿನ ಜಗದೀಶ್ ಪ್ರಸಾದ್ ತಾಯಿ ಆರೋಗ್ಯ ಕ್ಷೀಣಿಸಿತ್ತು. ತನ್ನ ಮಗ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದಾನೆ. ಹೀಗಾಗಿ ಆತನಿಗೆ ಮತ ಹಾಕಲೇಬೇಕು ಎಂದು ತಾಯಿ ಮತದಾನಕ್ಕೆ ಹೊರಟಿದ್ದಾರೆ. ಸ್ವತಃ ಜಗದೀಶ್ ಪ್ರಸಾದ್ ತಾಯಿಯನ್ನು ಕರೆದುಕೊಂಡು ಬಂದಿದ್ದಾರೆ. ಮಗನ ಕೈಹಿಡಿದು ಬೂತ್‌ಗೆ ಆಗಮಿಸಿದ ತಾಯಿ ಕಷ್ಟಪಟ್ಟು ಮತದಾನ ಮಾಡಿದ್ದಾರೆ. ಜಗದೀಶ್ ಪ್ರಸಾದ್ ತಾಯಿಯನ್ನು ಮನೆಗೆ ತಂದು ಬಿಟ್ಟಿದ್ದಾರೆ.
ಮತದಾನದ ಕಾರಣ ಜಗದೀಶ್ ಪ್ರಸಾದ್ ನೇರವಾಗಿ ಬೂತ್ ಬಳಿ ಬಂದಿದ್ದಾರೆ. ಮನೆಯಲ್ಲಿ ತಾಯಿ ಕುಟುಂಬಸ್ಥರ ಜೊತೆ ವಿಶ್ರಾಂತಿಗೆ ಜಾರಿದ್ದಾರೆ. ಆದರೆ ಸಂಜೆಯಾಗುತ್ತಿದ್ದಂತೆ ತಾಯಿ ಆರೋಗ್ಯ ಕ್ಷೀಣಿಸಿದೆ. ಹೀಗಾಗಿ ಆಸ್ಪತ್ರೆ ದಾಖಲಿಸಿದ್ದಾರೆ. ಇತ್ತ ಪಕ್ಷೇತರ ಅಭ್ಯರ್ಥಿ ಜಗದೀಶ್ ಪ್ರಸಾದ್ ಆಸ್ಪತ್ರೆಯತ್ತ ದೌಡಾಯಿಸಿದ್ದಾರೆ. ತೀವ್ರ ಅನಾರೋಗ್ಯದಿಂದ ಜಗದೀಶ್ ತಾಯಿ ಮೃತಪಟ್ಟಿದ್ದಾರೆ.
ಗೆಲುವು ಘೋಷಣೆಯಾದಾಗ ತಾಯಿ ಇರಲಿಲ್ಲ
ಅತ್ತ ಕಾಯಿ ನಿಧನರಾದರೆ, ಇತ್ತ ಸ್ಥಳೀಯ ಸಂಸ್ಥೆ ಚುನಾವಣೆ ಘೋಷಣೆಯಾಗಿದೆ. ಫಲಿತಾಂಶ ಅಚ್ಚರಿಯಾಗಿತ್ತು. ಬಿಜೆಪಿ ಅಭ್ಯರ್ಥಿ ಭರ್ಜರಿ ಗೆಲುವು ದಾಖಲಿಸುತ್ತಾರೆ ಎಂದುಕೊಂಡಿದ್ದರೆ, ಫಲಿತಾಂಶ ಉಲ್ಟಾ. ಜಗದೀಶ್ ಪ್ರಸಾದ್ ಗೆಲುವು ಸಾಧಿಸಿದ್ದರು. ಅದು ಕೂಡ ಕೇವಲ ಒಂದು ಮತದಿಂದ ಜಗದೀಶ್ ಪ್ರಸಾದ್ 151 ಮತಗಳನ್ನು ಪಡೆದರೆ, ಬಿಜೆಪಿ. ರಾಮಶರಣ್ 150 ಮತಗಳನ್ನು ಪಡೆದಿದ್ದರು. ತಾಯಿ ಹಾಕಿದ ಒಂದು ಮತ ಮಗನನ್ನು ಗೆಲ್ಲಿಸಿತು. ಆದರೆ ಗೆಲುವು ಘೋಷಣೆಯಾದಾಗ ತಾಯಿ ಇರಲಿಲ್ಲ.
ಜಗದೀಶ್ ಪ್ರಸಾದ್‌ಗೆ ಬೆಂಬಲಿಗರು ಅಭಿನಂದನೆ ಹೇಳಲು ಆಗಮಿಸಿದರೆ ಗೆದ್ದ ಅಭ್ಯರ್ಥಿ ಶೋಕದಲ್ಲಿ ಮುಳುಗಿದ್ದರು. ತಾಯಿ ನಿಧನದಿಂದ ಜಗದೀಶ್ ಪ್ರಸಾದ್ ಕಣ್ಣೀರಿಟ್ಟಿದ್ದಾರೆ.


