Asianet Suvarna News Asianet Suvarna News

ನೆರಳಿನ ಯುದ್ಧ: ತಲ್ಲಣ ಸೃಷ್ಟಿಸಿದ ಭಾರತ ವಿರೋಧಿ ಉಗ್ರಗಾಮಿಗಳ ನಿರಂತರ ಹತ್ಯೆ

ರಾ ಸಂಸ್ಥೆಯ ಮಾಜಿ ಮುಖ್ಯಸ್ಥರಾದ ಹೊರ್ಮಿಸ್ ತಾರಕನ್ ಅವರ ಬಳಿ ವಿದೇಶಗಳಲ್ಲಿ ಈ ರೀತಿಯ ಹತ್ಯೆಗಳನ್ನು ಭಾರತ ಹಿಂದೆ ನಡೆಸಿದೆಯೇ ಎಂಬ ಪ್ರಶ್ನೆಗೆ, ಅಂತಹ ಯಾವುದೇ ಇತಿಹಾಸವಿಲ್ಲ ಎಂದಿದ್ದಾರೆ. ಆದರೆ, ಈ ಹಿಂದೆ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ರಾ ಸಂಸ್ಥೆಗೆ ಕೆಲಸ ಮಾಡಿದ ವ್ಯಕ್ತಿಯೊಬ್ಬರು ಹೇಳಿದ ಕಥೆ ಸಂಪೂರ್ಣ ಭಿನ್ನವಾಗಿತ್ತು.

how india s enemies met their fate in safe havens ash
Author
First Published Nov 18, 2023, 12:25 PM IST

(ಗಿರೀಶ್ ಲಿಂಗಣ್ಣ - ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಭಾರತದ ಹೊರಗೆ ನಡೆಯುತ್ತಿರುವ ಉಗ್ರರ ಹತ್ಯೆಗಳಲ್ಲಿ ತನ್ನ ಯಾವುದೇ ಪಾತ್ರವಿಲ್ಲವೆಂದು ನವದೆಹಲಿ ಹೇಳುತ್ತಾ ಬಂದಿದ್ದರೂ, ವಿದೇಶಗಳಲ್ಲಿ ಹೆಚ್ಚುತ್ತಿರುವ ಭಾರತ ವಿರೋಧಿ ಉಗ್ರರ ಸಾವಿನ ಸಂಖ್ಯೆ ಬೇರೆಯದೇ ಕತೆಯನ್ನು ಹೇಳುತ್ತಿದೆ. ಭಾರತ 2020ರಲ್ಲಿ ಉಗ್ರಗಾಮಿ ಎಂದು ಘೋಷಿಸಿದ್ದ ಖಲಿಸ್ತಾನ್ ಟೈಗರ್ ಫೋರ್ಸ್ ಮುಖ್ಯಸ್ಥ, ಕೆನಡಾ ಪ್ರಜೆ, ಹಾಗೂ ಸಿಖ್ ಪ್ರತ್ಯೇಕತಾವಾದಿ ನಾಯಕ ಹರ್‌ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಬಳಿಕ, ಭಾರತ ಮತ್ತು ಕೆನಡಾಗಳ ನಡುವೆ ಭಾರೀ ಉದ್ವಿಗ್ನತೆ ತಲೆದೋರಿತ್ತು.

ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ ಬ್ರಿಟಿಷ್ ಕೊಲಂಬಿಯಾದಲ್ಲಿ ನಡೆದ ನಿಜ್ಜರ್ ಹತ್ಯೆಯ ಹಿಂದೆ ಭಾರತದ ಅಧಿಕಾರಿಗಳ ಕೈವಾಡವಿದೆ ಎಂದು ಆರೋಪಿಸಿದ್ದರು. ಭಾರತ ಸರ್ಕಾರ ಈ ಹತ್ಯೆಗೆ ಸಂಬಂಧಿಸಿದಂತೆ ಕೆನಡಾದ ತನಿಖೆಯನ್ನು ದೋಷಪೂರಿತ ಎಂದಿದ್ದು, ಕೆನಡಾದ ಆರೋಪಗಳನ್ನು ಅಸಂಬದ್ಧ ಆರೋಪಗಳೆಂದು ತಳ್ಳಿಹಾಕಿದೆ.

ಇದನ್ನು ಓದಿ: Kargil Vijay Diwas: ವೀರ ಸೈನಿಕರ ಜತೆಗೆ ಮಿರೇಜ್ 2000 ಮತ್ತು ಬೋಫೋರ್ಸ್ ಗನ್ ಸಹ ಈ ಯುದ್ಧದ ಹೀರೋಗಳು!

ವಿದೇಶಾಂಗ ಸಾರ್ವಭೌಮತ್ವದ ವಿಚಾರದ ಕಡೆಗೆ ಗಮನ ಸೆಳೆಯುವ ಜೊತೆಗೆ, ನಿಜ್ಜರ್ ಹತ್ಯೆ ಭಾರತ - ಕೆನಡಾ ಸಂಬಂಧಗಳ ಮೇಲೆ ಕಾರ್ಮೋಡ ಬೀರಿದ್ದು, ಎರಡು ರಾಷ್ಟ್ರಗಳ ನಡುವಿನ ಹೂಡಿಕೆ ಮತ್ತು ವ್ಯಾಪಾರದ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿವೆ. ಒಟ್ಟಾವಾದಲ್ಲಿನ ಭಾರತೀಯ ಹೈ ಕಮಿಷನರ್ ಸಂಜಯ್ ವರ್ಮಾ ಈ ತನಿಖೆಗೆ ಸಂಬಂಧಿಸಿದಂತೆ ಮುಕ್ತತೆ ಮತ್ತು ನ್ಯಾಯದ ಕೊರತೆಯಿದ್ದು, ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಕೆನಡಾ ಪಕ್ಷಪಾತದ ತನಿಖೆ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.

ರಾಜತಾಂತ್ರಿಕ ಉದ್ವಿಗ್ನತೆಗಳ ನಡುವೆ, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರು ಕೆನಡಾದ ರಾಯಭಾರಿ ಕರೆಸಿಕೊಂಡು, ಕೆನಡಾದ ಉನ್ನತ ರಾಯಭಾರಿಯನ್ನು ಭಾರತದಿಂದ ವಾಪಸ್ ತೆರಳುವಂತೆ ಸೂಚಿಸಿದ್ದರು. ಕೆನಡಾ ಭಾರತದ ವಿದೇಶಾಂಗ ಗುಪ್ತಚರ ಸಂಸ್ಥೆಯಾದ ರಿಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್ (ರಾ) ಒಟ್ಟಾವಾ ಮುಖ್ಯಸ್ಥರಾದ ಪವನ್ ಕುಮಾರ್ ರೈ ಅವರನ್ನು ಖಲಿಸ್ತಾನಿ ಹೋರಾಟಗಾರನ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ ಎಂದು ಆರೋಪಿಸಿ ಗಡೀಪಾರು ಮಾಡಲು ನಿರ್ಧರಿಸಿದ ಬೆನ್ನಲ್ಲೇ ಭಾರತವೂ ಈ ನಿರ್ಧಾರ ಕೈಗೊಂಡಿತು.

ಭಾರತ ಕೆನಡಾಗೆ ಭಾರತದಲ್ಲಿರುವ ಅದರ ಪ್ರತಿನಿಧಿಗಳ ಸಂಖ್ಯೆಯನ್ನು ಮೂರನೇ ಎರಡಕ್ಕಿಂತಲೂ ಹೆಚ್ಚು ಕಡಿಮೆಗೊಳಿಸಲು ಆದೇಶ ನೀಡಿ, ಪರಿಸ್ಥಿತಿಯನ್ನು ಇನ್ನಷ್ಟು ತೀಕ್ಷ್ಣಗೊಳಿಸಿತು. ಜಸ್ಟಿನ್ ಟ್ರೂಡೋ ಅವರಿಗೆ ಈ ಹತ್ಯೆಯಲ್ಲಿ ಭಾರತದ ಪಾತ್ರವಿದೆ ಎನ್ನಲು ಯಾವುದೇ ಸಾಕ್ಷಿಗಳು ಲಭಿಸದಿರುವುದು ಮತ್ತು ಅದರ ಫೈವ್ ಐಸ್ ಒಕ್ಕೂಟದ ಸಹಯೋಗಿಗಳಿಂದ ಯಾವುದೇ ಬೆಂಬಲ ದೊರಕದಿರುವುದು ಈ ಆರೋಪವನ್ನು ತಳ್ಳಿ ಹಾಕಿರುವ ಭಾರತದ ವಾದಕ್ಕೆ ಇನ್ನಷ್ಟು ಪುಷ್ಟಿ ನೀಡಿದೆ. ಈ ಮೂಲಕ ಪ್ರಸ್ತುತ ರಾಜತಾಂತ್ರಿಕ ಬಿಕ್ಕಟ್ಟು ಇನ್ನಷ್ಟು ತೀಕ್ಷ್ಣಗೊಳ್ಳುತ್ತಿದೆ.

ಫೈವ್ ಐಸ್ ಇಂಟೆಲಿಜೆನ್ಸ್ ಅಲಯನ್ಸ್ ಎನ್ನುವುದು ಐದು ಇಂಗ್ಲಿಷ್‌ ಭಾಷಿಕ ರಾಷ್ಟ್ರಗಳಾದ ಅಮೆರಿಕಾ, ಯುನೈಟೆಡ್ ಕಿಂಗ್‌ಡಮ್, ಕೆನಡಾ, ಆಸ್ಟ್ರೇಲಿಯಾ, ಮತ್ತು ನ್ಯೂಜಿಲ್ಯಾಂಡ್‌ಗಳ ಒಕ್ಕೂಟವಾಗಿದ್ದು, ಗುಪ್ತಚರ ಮಾಹಿತಿಗಳನ್ನು ಹಂಚಿಕೊಳ್ಳಲು, ಮತ್ತು ಭದ್ರತೆ ಹಾಗೂ ರಕ್ಷಣಾ ನೀತಿಗಳ ಸಹಯೋಗ ಸಾಧಿಸಲು ಬಳಕೆಯಾಗುತ್ತದೆ.

ಇದನ್ನೂ ಓದಿ: ಬೆಂಗಳೂರಿನ ದೊಮ್ಲೂರಿನಲ್ಲಿ ನೂತನ ಘಟಕ ಆರಂಭಿಸಿದ ಹಿಟಾಚಿ ರೈಲ್ ಎಸ್‌ಟಿಎಸ್ ಇಂಡಿಯಾ

ಆದರೆ, ಎಲ್ಲರೂ ಭಾರತದ ನಿಲುವನ್ನು ಒಪ್ಪಿಕೊಳ್ಳುತ್ತಿದ್ದಾರೆ ಎಂದಲ್ಲ!

ಕರಾಚಿಯಲ್ಲಿ, ಹಿರಿಯ ಯುದ್ಧ ಅನುಭವಿ, ಪುಗ್ವಾಷ್ ಕಾನ್ಫರೆನ್ಸ್ ಸದಸ್ಯ, ಲೆಫ್ಟಿನೆಂಟ್ ಜನರಲ್ ತಲಾತ್ ಮಸೂದ್ ಈ ಕುರಿತು ಮಾತನಾಡುತ್ತಾ, "ಯಾವುದೇ ಹುರುಳಿಲ್ಲದೆ ಇಂತಹ ಆರೋಪಗಳು ಎದುರಾಗುತ್ತವೆ ಎಂದು ನಾನು ಭಾವಿಸುವುದಿಲ್ಲ. ಎಲ್ಲರಿಗೂ ತಿಳಿದಿರುವಂತೆ, ಕೆನಡಾ ಭಾರತದ ಮಿತ್ರ ರಾಷ್ಟ್ರ. ಅದರೊಡನೆ, ಜಸ್ಟಿನ್ ಟ್ರೂಡೋ ಸಹ ಭಾರತದ ಮಿತ್ರ. ಅವರಿಗೆ ಸಂಪೂರ್ಣ ಖಚಿತ ಮಾಹಿತಿ ಇರುವುದರ ಹೊರತಾಗಿ ಟ್ರೂಡೋ ಭಾರತದ ವಿರುದ್ಧ ಮಾತನಾಡುವ ಸಾಧ್ಯತೆಗಳಿಲ್ಲ. ಆದ್ದರಿಂದ, ತನ್ನ ಮಿತ್ರ ರಾಷ್ಟ್ರವಾದ ಕೆನಡಾದಲ್ಲಿ ಭಾರತ ನಡೆಸಿರುವ ಹೇಯ ಕೃತ್ಯಕ್ಕೆ ಟ್ರೂಡೋ ಆಘಾತ ವ್ಯಕ್ತಪಡಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ" ಎಂದಿದ್ದಾರೆ.

ಭಾರತದಲ್ಲಿ ಸಿಖ್ಖರಿಗಾಗಿ ಪ್ರತ್ಯೇಕ, ಸ್ವತಂತ್ರ ಖಲಿಸ್ತಾನ ಸ್ಥಾಪನೆಯಾಗಬೇಕೆಂದು ಆಗ್ರಹಿಸುವ ಪ್ರತ್ಯೇಕತಾವಾದಿಗಳಿಗೆ ಕೆನಡಾ ನೆಲೆಯಾಗಿರುವ ಹಿನ್ನೆಲೆಯಲ್ಲಿ, ಅದು ಹೇಗೆ ಭಾರತಕ್ಕೆ  ಮಿತ್ರನಾಗಿರಲು ಸಾಧ್ಯ? ಎಂಬ ಪ್ರಶ್ನೆಗೆ ಮಸೂದ್ ಉತ್ತರಿಸಿದ್ದಾರೆ. "ಜಗತ್ತಿನಾದ್ಯಂತ, ಅದರಲ್ಲೂ ವಿಶೇಷವಾಗಿ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಪಾಕಿಸ್ತಾನ, ಭಾರತ, ಬಾಂಗ್ಲಾದೇಶ ಮತ್ತು ಇತರ ಸರ್ಕಾರಗಳೊಡನೆ ಭಾರೀ ಭಿನ್ನಾಭಿಪ್ರಾಯ ಹೊಂದಿದ್ದಾರೆ. ಹಾಗೆಂದ ಮಾತ್ರಕ್ಕೆ, ಆ ರಾಷ್ಟ್ರಗಳು ಭಾರತ ಅಥವಾ ಇತರ ರಾಷ್ಟ್ರಗಳನ್ನು ವಿರೋಧಿಸುವುದಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದು ಅರ್ಥವಲ್ಲ. ಆದರೆ, ಆ ವ್ಯಕ್ತಿಗಳು ಬೇರೆಲ್ಲ ರೀತಿಯಲ್ಲಿ ಸಹಜವಾಗಿದ್ದರೆ ಅವರನ್ನು ಆ ರಾಷ್ಟ್ರಗಳು ಒಪ್ಪಿಕೊಳ್ಳುತ್ತವೆ, ಸಹಿಸಿಕೊಳ್ಳುತ್ತವೆ" ಎಂದಿದ್ದಾರೆ.

ಇದನ್ನೂ ಓದಿ: ಎಲ್‌ಎಸಿ ಬಳಿ ಚೀನಾ ಕುತಂತ್ರಕ್ಕೆ ಟಕ್ಕರ್‌: ಅತಿ ಹಗುರ ಹೊವಿಟ್ಜರ್ ಕ್ಯಾನನ್ ನಿರ್ಮಿಸಲು ಭಾರತ, ಅಮೆರಿಕ ಪ್ಲ್ಯಾನ್‌

ಆದರೆ, ಭಾರತದ ಎಲ್ಲ ಹಿರಿಯ ಸೇನಾ ಮುಖಂಡರು, ಅಂತಾರಾಷ್ಟ್ರೀಯ ಸಂಬಂಧಗಳ ವಿಶ್ಲೇಷಕರು, ರಹಸ್ಯ ಕಾರ್ಯಾಚರಣಾ ಸಿಬ್ಬಂದಿಗಳು, ನಿಜ್ಜರ್ ಹತ್ಯೆಯಲ್ಲಿ ಭಾರತದ ಪಾತ್ರ ಇಲ್ಲ ಎಂದೇ ಮತ್ತೆ ಹೇಳಿದ್ದಾರೆ. ಹಾಗೆಂದು, ಕೆನಡಾ ಖಲಿಸ್ತಾನಿ ಹೋರಾಟಗಾರರನ್ನು ಬೆಂಬಲಿಸುತ್ತಿದೆ ಎಂದು ಆರೋಪಿಸುವವರ ಸಂಖ್ಯೆಯೂ ಸಣ್ಣ ಪ್ರಮಾಣದ್ದೇನಲ್ಲ.

ಇತ್ತೀಚಿನ ತನಕ ಹಿರಿಯ ರಾ ಸಿಬ್ಬಂದಿಯಾಗಿದ್ದ ಅರವಿಂದ್ ಹಿಪ್ಪರಗಿ ನಿಜ್ಜರ್‌ಗೆ ಸಂಬಂಧಿಸಿದಂತೆ ಕಾನೂನು ತೊಡಕುಗಳನ್ನು ನಿವಾರಿಸಲು ಭಾರತ ಪ್ರಯತ್ನಿಸುತ್ತಿಲ್ಲ ಎಂಬ ಆರೋಪಗಳನ್ನು ನಿರಾಕರಿಸಿದ್ದಾರೆ. "ನಾವು ಕೆನಡಾಗೆ ನಿರಂತರವಾಗಿ ಮಾಹಿತಿಗಳನ್ನು, ಸಾಕ್ಷಿಗಳನ್ನು ಒದಗಿಸುತ್ತಾ ಬಂದಿದ್ದೇವೆ" ಎಂದಿದ್ದಾರೆ.

ಇದನ್ನೂ ಓದಿ: ನೀವು ಪೋಕೆಮಾನ್‌ ಪ್ರಿಯರೇ? ಹಾಗಾದ್ರೆ, ಈ ವಿಮಾನದಲ್ಲೇ ಅನುಭವಿಸಿ 'ಪೋಕೆಮಾನ್ ಏರ್ ಅಡ್ವೆಂಚರ್'

"ಬ್ರಿಟಿಷ್ ಕೊಲಂಬಿಯಾ ಎಂಬಂತೆ ತೋರುವ ಪ್ರದೇಶದಲ್ಲಿ ನಿಜ್ಜರ್ ಮತ್ತು ಇತರ ಖಲಿಸ್ತಾನಿಗಳು ಸ್ವಯಂಚಾಲಿತ ಆಯುಧಗಳಿಂದ ಗುಂಡು ಹಾರಿಸುವ ವಿಡಿಯೋ ದೃಶ್ಯಗಳನ್ನು ನಾವು ಈಗಾಗಲೇ ಒದಗಿಸಿದ್ದೇವೆ. ನಾವು ಇಂತಹ ದಾಖಲೆಗಳನ್ನು ನೇರವಾಗಿ ಸರ್ಕಾರಕ್ಕೆ ಒಪ್ಪಿಸುವುದಿಲ್ಲ. ಬದಲಿಗೆ ಗುಪ್ತಚರ ಮಾಹಿತಿ ವರ್ಗಾವಣೆಯ ಹಂತದಲ್ಲಿ ಇದನ್ನು ಹಸ್ತಾಂತರಿಸುತ್ತೇವೆ" ಎಂದಿರುವ ಅರವಿಂದ್, ನಿಜ್ಜರ್ ಹತ್ಯೆಯ ಕುರಿತಾಗಿ ಯಾವುದೇ ಮಾಹಿತಿಗಳನ್ನು ಒಪ್ಪಿಕೊಂಡಿಲ್ಲ, ನಿರಾಕರಿಸಲೂ ಇಲ್ಲ.

ಭಾರತದ ಜೊತೆ ನಿಂತಿರುವ ಪಾಡ್‌ಕಾಸ್ಟರ್‌ಗಳು, ರಾಜಕೀಯ ಪ್ರಭಾವಿಗಳು, ಪತ್ರಕರ್ತರು, ಕೆನಡಾ ಮತ್ತು ಅದರ ಸಹಯೋಗಿಗಳ ಬೂಟಾಟಿಕೆಯ ವಿರುದ್ಧ ಧ್ವನಿ ಎತ್ತಿದ್ದಾರೆ. ಕೆನಡಾ ಪರವಿರುವ ರಾಷ್ಟ್ರಗಳು ಭಾರತದ ವಿರುದ್ಧ ಯಾವುದೇ ಸೂಕ್ತ ಸಾಕ್ಷಿಗಳಿಲ್ಲದೆ ಭಾರತವನ್ನು ಅಪರಾಧಿಯ ಸ್ಥಾನದಲ್ಲಿ ನಿಲ್ಲಿಸಲು ಪ್ರಯತ್ನಿಸುತ್ತಿವೆ ಎಂದಿದ್ದಾರೆ.

ಇದನ್ನು ಓದಿ: ಸೋನಮ್ ವಾಂಗ್‌ಚುಕ್‌ ಆವಿಷ್ಕಾರ: ಹಿಮಾಲಯದಲ್ಲಿ ಅಂತರ್ಜಾಲ ಸಂಪರ್ಕ ಬದಲಾಯಿಸಿದ 'ಲೈಫೈ'!

"ಪಾಶ್ಚಾತ್ಯ ರಾಷ್ಟ್ರಗಳು ಅಂತಾರಾಷ್ಟ್ರೀಯ ಗಡಿಯ ಆಧಾರಿತ ನಿಯಮಗಳನ್ನು ಮುರಿಯುವುದರಲ್ಲಿ ಸದಾ ಮುಂದಿದ್ದವು. ಅವರು ತಮ್ಮ ಮನಸ್ಸಿಗೆ ಅನಿಸಿದಲ್ಲಿ ಹೋಗಿ ಹತ್ಯೆಗಳನ್ನು ನಡೆಸಿದ್ದಾರೆ. ಆದರೆ ಭಾರತದ ವಿಚಾರಕ್ಕೆ ಬಂದಾಗ ಮಾನವ ಹಕ್ಕುಗಳ ಕುರಿತು ಮಾತನಾಡಲು ಮುಂದೆ ಬರುತ್ತಾರೆ. ಪ್ರತಿಯೊಂದು ಪ್ರಮುಖ ರಾಷ್ಟ್ರವೂ ಇಂತಹ ನಡೆ ಪ್ರದರ್ಶಿಸಿವೆ. ರಷ್ಯಾ ಸಹ ಲಂಡನ್ನಿನಲ್ಲಿ ಇದೇ ರೀತಿ ವಿಷಪ್ರಾಶನ ನಡೆಸಿರಲಿಲ್ಲವೇ?" ಎನ್ನುತ್ತಾರೆ ಅರವಿಂದ್ ಹಿಪ್ಪರಗಿ.

ಪ್ರಜಾಪ್ರಭುತ್ವ ಮತ್ತು ಉದಾರವಾದದ ಅತಿದೊಡ್ಡ ವಕ್ತಾರರಾಗಿದ್ದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರ ಅವಧಿಯಲ್ಲೇ ಅಮೆರಿಕ ಅತಿಹೆಚ್ಚು ಸೀಮಾತೀತ ಹತ್ಯೆಗಳನ್ನು ನಡೆಸಿದೆ ಎಂದು ಮಸೂದ್ ಅವರು ಒಪ್ಪಿಕೊಳ್ಳುತ್ತಾರೆ. ಅಮೆರಿಕದ ನಡೆ ಎಷ್ಟೋ ಬಾರಿ ಅದು ಬೋಧಿಸುವುದಕ್ಕಿಂತ ಸಂಪೂರ್ಣ ಭಿನ್ನವಾಗಿರುತ್ತದೆ.

ಇದನ್ನೂ ಓದಿ: ಭಾರತದಲ್ಲಿ ನಿರುದ್ಯೋಗಿ ತಲೆಮಾರನ್ನೇ ಸೃಷ್ಟಿಸಿದ ಪ್ರಯೋಜನವಿಲ್ಲದ ಪದವಿಗಳು!

ನಿಜ್ಜರ್ ಹತ್ಯೆಯಲ್ಲಿ ಭಾರತದ ಪಾತ್ರದ ಕುರಿತು ಕೆನಡಾ ಬಳಿ ಸಾಕ್ಷಿಗಳು ಇಲ್ಲದಿರುವುದು ಮತ್ತು ಭಾರತ ಈ ಆರೋಪವನ್ನು ತಿರಸ್ಕರಿಸಿರುವುದರಿಂದ, ನಿಜ್ಜರ್ ಹತ್ಯೆ ಹೆಚ್ಚಿನ ವಿವಾದಗಳನ್ನು ಉಂಟುಮಾಡುವ ಸಾಧ್ಯತೆಗಳಿಲ್ಲ. ಆದರೆ ಇನ್ನೊಂದೆಡೆ, ಪಾಕಿಸ್ತಾನದ ಲಾಹೋರ್‌ನಲ್ಲಿ ಈ ವರ್ಷ ಮೇ 6 ರಂದು ನಿಜ್ಜರ್ ಹತ್ಯೆಯ ರೀತಿಯಲ್ಲೇ ಖಲಿಸ್ತಾನ್ ಕಮಾಂಡೋ ಫೋರ್ಸ್ ಮುಖಂಡ ಪರಮ್‌ಜಿತ್ ಸಿಂಗ್ ಪಂಜ್ವಾರ್ ಹತ್ಯೆಯಾಗಿದ್ದ. ಈ ಎರಡೂ ಹತ್ಯೆಗಳ ನಡುವೆ ಸಾಕಷ್ಟು ಹೋಲಿಕೆಗಳಿದ್ದು, (ಇಬ್ಬರನ್ನೂ ಸಾದಾ ವಸ್ತ್ರ ಧರಿಸಿದ್ದ, ದ್ವಿಚಕ್ರ ವಾಹನದಲ್ಲಿ ಆಗಮಿಸಿದ್ದ, ಕ್ಷಿಪ್ರ ಹತ್ಯೆಗೆ ಅನುಕೂಲಕರವಾದ ಸಣ್ಣ ಬಂದೂಕುಗಳನ್ನು ಹೊಂದಿದ್ದ ದುಷ್ಕರ್ಮಿಗಳು) ಇದು ಕೇವಲ ಕಾಕತಾಳೀಯ ಎನ್ನುವುದಕ್ಕಿಂತ ಹೆಚ್ಚಿನದಾಗಿ ತೋರುತ್ತಿದೆ.

ನಿಜ್ಜರ್ ಮತ್ತು ಪಂಜ್ವಾರ್ ಇಬ್ಬರೂ ರೈತರ ಪ್ರತಿಭಟನೆಗಳು ಮತ್ತು ಖಲಿಸ್ತಾನ ಪರ ಭಾವನೆಗಳು ಹೆಚ್ಚುವ ಮುನ್ನ ತಮ್ಮ ಖಲಿಸ್ತಾನಿ ರಾಷ್ಟ್ರೀಯವಾದ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದ್ದರು. ರೈತ ಹೋರಾಟದಂತಹ ಬೆಳವಣಿಗೆಗಳು ಅವರಿಗೆ ತಮ್ಮ ಉದ್ದೇಶವನ್ನು ಜಾರಿಗೆ ತರಲು ಹೊಸ ಶಕ್ತಿ ತುಂಬಿತು. ಅವರಿಗೆ ಮಾಧ್ಯಮ ಪ್ರಚಾರಗಳು ಹೆಚ್ಚಾದವು ಮತ್ತು ಭಾರತದ ವಿರುದ್ಧ ಸಶಸ್ತ್ರ ಹೋರಾಟಕ್ಕೆ ಮುಂದಾಗುವಂತೆ ಅವರು ಕರೆ ನೀಡಿದರು. 

ಇದನ್ನೂ ಓದಿ: ಆತ್ಮನಿರ್ಭರ ಭಾರತ ಯೋಜನೆಗೆ ಹಿನ್ನಡೆ: ಚೀನಾ ಉತ್ಪನ್ನಗಳು ದೇಶಕ್ಕೆ ಅನಿವಾರ್ಯವಾ..?

ಅದರೊಡನೆ, ಭಾರತದ ವಿರುದ್ಧ ಪಾಕಿಸ್ತಾನಕ್ಕೆ ನೆರವಾಗುವಂತೆ ಜಾಗತಿಕವಾಗಿ ಕರೆ ನೀಡಿದರು. ಇದೆಲ್ಲದರ ಪರಿಣಾಮವಾಗಿ, ಸಹಜವಾಗಿಯೇ ಅವರನ್ನು ದಾಳಿಗೆ ಗುರಿಯಾಗಿಸಲಾಯಿತು.

ರಾ ಸಂಸ್ಥೆಯ ಮಾಜಿ ಮುಖ್ಯಸ್ಥರಾದ ಹೊರ್ಮಿಸ್ ತಾರಕನ್ ಅವರ ಬಳಿ ವಿದೇಶಗಳಲ್ಲಿ ಈ ರೀತಿಯ ಹತ್ಯೆಗಳನ್ನು ಭಾರತ ಹಿಂದೆ ನಡೆಸಿದೆಯೇ ಎಂಬ ಪ್ರಶ್ನೆಗೆ, ಅಂತಹ ಯಾವುದೇ ಇತಿಹಾಸವಿಲ್ಲ ಎಂದಿದ್ದಾರೆ. ಆದರೆ, ಈ ಹಿಂದೆ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ರಾ ಸಂಸ್ಥೆಗೆ ಕೆಲಸ ಮಾಡಿದ ವ್ಯಕ್ತಿಯೊಬ್ಬರು ಹೇಳಿದ ಕಥೆ ಸಂಪೂರ್ಣ ಭಿನ್ನವಾಗಿತ್ತು.

ಇದನ್ನೂ ಓದಿ: ಸೋರಿಕೆಯಾದ ಅಮೆರಿಕದ ದಾಖಲೆಗಳಿಂದ ಹಲವು ದೇಶಗಳಿಗೆ ಕಳವಳ: ಬೇಹುಗಾರಿಕೆ ಮೇಲೆ ಗಂಭೀರ ಪರಿಣಾಮ..?

"ಬಶೀರ್ ಹತ್ಯೆ ಹಫೀಜ್ ಸಯೀದ್‌ಗೆ ಕಳುಹಿಸಲಾದ ಸಂದೇಶವಾಗಿತ್ತು" ಎಂದು ಸಾಮ್ರಾಟ್ ಉಪಾಧ್ಯಾಯ್ ಹೇಳಿದ್ದಾರೆ. "ಆ ಸಂದೇಶ ಬಹಳ ಸ್ಪಷ್ಟವೂ ಆಗಿತ್ತು. ನಾವು ಬಯಸಿದರೆ ಹಫೀಜ್ ಸಯೀದ್‌ನನ್ನು ಮುಗಿಸಬಹುದು ಎಂಬುದಾಗಿತ್ತು" ಎಂದು ಹೇಳಿದ್ದಾರೆ.

ಈ ಹೇಳಿಕೆಯಲ್ಲಿ, ಉಪಾಧ್ಯಾಯ್ ಖಾಲಿದ್ ಬಷೀರ್ ಕುರಿತು ಮಾತನಾಡಿದ್ದರು. ಖಾಲಿದ್ ಬಷೀರ್, ಪಾಕಿಸ್ತಾನದ ಇಸ್ಲಾಮಿಕ್ ಸಂಘಟನೆಯಾದ ಜಮಾತ್ ಉದ್ ದಾವಾ (ಜೆಯುಡಿ) ಹಾಗೂ ಅದರ ಸಶಸ್ತ್ರ ಪಡೆಯಾದ ಲಷ್ಕರ್ ಇ ತೋಯ್ಬಾ (ಎಲ್ಇಟಿ) ಮುಖ್ಯಸ್ಥ ಹಫೀಜ್ ಸಯೀದ್ ಭದ್ರತೆಯ ಮುಖ್ಯಸ್ಥನಾಗಿದ್ದ.

ಇದನ್ನೂ ಓದಿ: ಮೈಸೂರು ಒಡೆಯರಿಂದ ರಾಜೀವ್ ಚಂದ್ರಶೇಖರ್ ತನಕ: ಡಕೋಟಾ ಡಿಸಿ 3 ಯುದ್ಧ ವಿಮಾನದ ಇತಿಹಾಸ ಹೀಗಿದೆ..

ಬಷೀರ್ ಮೂಲತಃ ಹಫೀಜ್ ಸಯೀದ್ ಸುರಕ್ಷತೆಯನ್ನು ನೋಡಿಕೊಳ್ಳಲು ಅತ್ಯಂತ ಮುಖ್ಯ ವ್ಯಕ್ತಿಯಾಗಿದ್ದ. ವಿಶ್ವಸಂಸ್ಥೆ ಭಯೋತ್ಪಾದಕ ಎಂದು ಘೋಷಿಸಿದ್ದ, 2008ರ ಮುಂಬೈ ದಾಳಿ ರೂವಾರಿ ಎಂದು ಭಾರತ ಆರೋಪಿಸಿದ್ದ ಹಫೀಜ್ ಸಯೀದ್ ಓಡಾಟದ ನಿರ್ವಹಣೆಯನ್ನೂ ಬಷೀರ್ ನೋಡಿಕೊಳ್ಳುತ್ತಿದ್ದ.

ಇದನ್ನೂ ಓದಿ: ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಗಂಟೆಯಾಗಿರೋ ಭಿಂದ್ರನ್‌ವಾಲೆ 2.0 ಅಮೃತ್ ಪಾಲ್ ಸಿಂಗ್ ಏಳು ಬೀಳು ಹೀಗಿದೆ..

ಬಷೀರ್ ಜೆಯುಡಿ ಸಂಘಟನೆ ಮತ್ತು ಹಫೀಜ್ ಸಯೀದ್‌ಗೆ ಅತ್ಯಂತ ನಿಷ್ಠನಾಗಿದ್ದ. ಆತ ಸಾಯುವ 25 ವರ್ಷಗಳ ಮುನ್ನವೇ ಜೆಯುಡಿ ಸೇರ್ಪಡೆಯಾಗಿದ್ದ. ಆತನ ಕಠಿಣ ಪರಿಶ್ರಮದ ಕಾರಣದಿಂದ ಸಂಘಟನೆಯಲ್ಲಿ ಮಹತ್ವ ಹೊಂದಿದ್ದ ಭದ್ರತಾ ಮುಖ್ಯಸ್ಥನ ಸ್ಥಾನಕ್ಕೆ ಏರಿದ್ದ. ಮೇ 19, 2013ರಂದು ಆತನ ಹತ್ಯೆ ಪಾಕಿಸ್ತಾನಿ ಮಿಲಿಟರಿ ಮತ್ತು ರಾಜಕೀಯ ವಲಯಕ್ಕೆ ಆಘಾತ ನೀಡಿತ್ತು.

ಬಷೀರ್ ಓರ್ವ ಆತ್ಮೀಯ ಸ್ನೇಹಿತನ ದೂರವಾಣಿ ಕರೆ ಬಂದಿದೆ ಎಂದು ಮನೆಯಿಂದ ಹೊರಟಿದ್ದ. ಆತನ ಮೃತದೇಹ ಮೇ 19ರಂದು ಲಭಿಸಿತ್ತು. ಅದರಲ್ಲಿ ಆತನಿಗೆ ಚಿತ್ರಹಿಂಸೆ ನೀಡಲಾಗಿತ್ತು ಎಂಬುದಕ್ಕೆ ಕುರುಹುಗಳಿದ್ದವು.

ಬಷೀರ್ ಹತ್ಯೆಯ ಹಿಂದೆ ಯಾರಿದ್ದಾರೆ ಎನ್ನುವುದು ಇಂದಿಗೂ ರಹಸ್ಯವಾಗಿಯೇ ಉಳಿದಿದೆ. ಬಷೀರ್‌ಗೆ ಆ ಮಹತ್ವದ ದೂರವಾಣಿ ಕರೆ ಮಾಡಿದ್ದು ಯಾರು, ಆತನನ್ನು ಕೊಲೆ ಮಾಡಿದ್ದು ಯಾರು ಎನ್ನುವುದು ರಹಸ್ಯವಾಗಿಯೇ ಉಳಿದಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಸಂಪೂರ್ಣ ವಿಚಾರಣೆ ನಡೆಸಿ, ಭಾರತದ ಮೇಲೂ ಆರೋಪ ಹೊರಿಸಿತ್ತು.

ಹರ್‌ದೀಪ್ ಸಿಂಗ್ ನಿಜ್ಜರ್ ಹತ್ಯೆಯ ವಿಚಾರ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಭಾರಿ ಸುದ್ದಿಯಾದರೂ, ಬಷೀರ್ ಪ್ರಕರಣ ಮತ್ತು ಪಾಕಿಸ್ತಾನದಲ್ಲಿ ನಡೆದ ಇತರ ಹತ್ಯಾ ಸರಣಿಗಳು ಅಂತಹ ಪ್ರಚಾರ ಪಡೆದಿಲ್ಲ. 1999ರ ಡಿಸೆಂಬರ್ 24ರಂದು ನಡೆದ, ಇಂಡಿಯನ್ ಏರ್‌ಲೈನ್ಸ್ ಐಸಿ-814 ವಿಮಾನ ಅಪಹರಣ ಪ್ರಕರಣ ಮತ್ತು ಈ ಹತ್ಯಾ ಸರಣಿಗಳಿಗೆ ಸಂಬಂಧವಿದೆ ಎನ್ನಲಾಗಿದೆ.

ಹಲವು ವರ್ಷಗಳ ಬಳಿಕ, ಈ ಘಟನೆಯಲ್ಲಿ ಭಾಗಿಯಾಗಿದ್ದ ದುಷ್ಕರ್ಮಿಗಳು ಈಗ ಒಬ್ಬೊಬ್ಬರಾಗಿ ಹತ್ಯೆಯಾಗುತ್ತಿದ್ದಾರೆ. ಈ ಹತ್ಯೆಗಳೆಲ್ಲವೂ ನಿಜ್ಜರ್ ಹತ್ಯೆಯ ಮಾದರಿಯಲ್ಲೇ ಜರುಗುತ್ತಿವೆ.

2018ರ ವೇಳೆಗೆ, ಈ ಸರಣಿಯಲ್ಲಿ ಮೊದಲ ಹತ್ಯೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನಡೆಯಿತು. ಆ ಬಾರಿ ಎಲ್ಇಟಿ ಸದಸ್ಯ ಮೊಹಮ್ಮದ್ ಇಸ್ಮಾಯಿಲ್ ಹತ್ಯೆಯಾಗಿದ್ದ. ಈ ಹತ್ಯೆ ಐಸಿ814 ಅಪಹರಣಕ್ಕೆ ಸಂಬಂಧಿಸಿದವರ ಹತ್ಯೆಗೆ ನಾಂದಿ ಹಾಡಿತು.

ಅದಾಗಿ ಐದು ವರ್ಷಗಳ ಬಳಿಕವೂ ಈ ಸರಣಿ ಮುಂದುವರಿಯುತ್ತಿದೆ. ಇದೇ ರೀತಿಯಲ್ಲಿ ಹಿಜ್ಬುಲ್ ಮುಜಾಹಿದೀನ್ ಸದಸ್ಯ ಬಷೀರ್ ಅಹ್ಮದ್ ಫೆಬ್ರವರಿ 20ರಂದು ರಾವಲ್ಪಿಂಡಿಯಲ್ಲಿ ಕೊಲೆಯಾಗಿದ್ದ. ಅದಾದ ಕೆಲ ದಿನಗಳ ಬಳಿಕ ಅಲ್ ಬದರ್ ಸಂಘಟನೆಯ ಖಾಲಿದ್ ರಾಜಾ಼ ಹತ್ಯೆಯಾಗಿದ್ದ.

ಲಷ್ಕರ್ ಎ ತೊಯ್ಬಾದ ಮೊಹಮ್ಮದ್ ರಿಯಾಜ್ ಇತ್ತೀಚೆಗೆ, ಅಂದರೆ ಸೆಪ್ಟೆಂಬರ್ 8ರಂದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಕೊಲೆಯಾಗಿದ್ದ. ಇವುಗಳಲ್ಲಿ ಪ್ರತಿಯೊಂದು ಹತ್ಯೆಯೂ ಯೋಜಿತ ಕೊಲೆಯಂತೆ ಕಂಡುಬರುತ್ತಿದ್ದು, ಯಾವ ಕೊಲೆಗೂ ಸಾಕ್ಷಿಗಳು ಲಭ್ಯವಾಗುತ್ತಿಲ್ಲ.

ಈ ಸರಣಿ ಹತ್ಯೆಗಳ ಪೈಕಿ, ಜಹೂರ್ ಮಿಸ್ತ್ರಿ ಎಂಬಾತನ ಕೊಲೆ ಬಹುತೇಕ ನಿಜ್ಜರ್ ಹತ್ಯೆಯನ್ನು ಹೋಲುತ್ತದೆ. ಮಿಸ್ತ್ರಿ ತನ್ನ ಹೆಸರು ಬದಲಾಯಿಸಿಕೊಂಡು, ಜಾಹಿದ್ ಅಖುಂಡ್ ಎಂಬ ಹೊಸ ಗುರುತಿನಲ್ಲಿ ಪೀಠೋಪಕರಣಗಳ ಅಂಗಡಿಯೊಂದರ ಮಾಲೀಕನಾಗಿದ್ದ. ಆದರೆ ಇದರಿಂದಲೂ ಆತ ಸಾವಿಗೀಡಾಗುವುದನ್ನು ತಪ್ಪಿಸಲಾಗಲಿಲ್ಲ. ಬೈಕ್‌ಗಳಲ್ಲಿ ಬಂದ ಇಬ್ಬರು ದಾಳಿಕೋರರು ಆತನ ಮೇಲೆ ಗುಂಡಿನ ದಾಳಿ ನಡೆಸಿ, ಮಾರ್ಚ್ 1, 2022ರಂದು ಹತ್ಯೆಗೈದರು.

ಮಿಸ್ತ್ರಿ ಸಾವಿನ ಕೆಲ ದಿನಗಳ ಬಳಿಕ, ಐಸಿ-814 ಅಪಹರಣದಲ್ಲಿ ಆತನ ಸಹಚರನಾಗಿದ್ದ ಜಫರುಲ್ಲಾ ಜಮೈಲ್ ಕರಾಚಿಯ ಇನ್ನೊಂದು ಪ್ರದೇಶದಲ್ಲಿ ಹತ್ಯೆಗೀಡಾಗಿದ್ದ. ಜಮೈಲ್ ಓಡಿ ಹೋಗಿ ಬಚ್ಚಿಟ್ಟುಕೊಳ್ಳಲು ಸಿದ್ಧನಾಗಿದ್ದರೂ, ಆತನ ವೇಗ ಅವನನ್ನು ರಕ್ಷಿಸಲು ಸಾಕಾಗಲಿಲ್ಲ.

ಸಾಕಷ್ಟು ನಿರಾಕರಣೆಗಳು ಮತ್ತು ರಾಜತಾಂತ್ರಿಕತೆಗಳ ಹೊರತಾಗಿಯೂ, ವಿದೇಶಗಳಲ್ಲಿ ನಡೆಯುತ್ತಿರುವ ಇಂತಹ ಹತ್ಯೆಗಳ ಹಿಂದೆ ಒಂದು ರಹಸ್ಯ, ಪ್ರಾಯಶಃ ಸರ್ಕಾರಿ ಪ್ರಾಯೋಜಿತ ಹತ್ಯಾ ಯೋಜನೆ ಜಾರಿಯಲ್ಲಿರುವಂತೆ ಕಾಣುತ್ತದೆ. ಇದು ದೀರ್ಘಕಾಲದಿಂದಲೂ ಭಾರತಕ್ಕೆ ತೊಂದರೆಯಾಗುವಂತೆ ಕಾಣುವ ಉಗ್ರರನ್ನು ಹತ್ಯೆಗೈಯುತ್ತಿದೆ.

ಈ ಹತ್ಯೆಗಳ ಕುರಿತು ಕೆನಡಾದಲ್ಲಿ ನಡೆದ ನಿಜ್ಜರ್ ಹತ್ಯೆಯ ಮಟ್ಟಿಗೆ ಮಾಧ್ಯಮಗಳು ವರದಿ ಮಾಡಿಲ್ಲ. ಬಹುಶಃ ಅವುಗಳು ನಿಜ್ಜರ್ ಹತ್ಯೆಯಷ್ಟು ಮಹತ್ವ ಇಲ್ಲದಿರುವುದೂ ಅದಕ್ಕೆ ಕಾರಣವಾಗಿರಬಹುದು. ಮಸೂದ್ ಭಾರತದೊಡನೆ ಪಾಕಿಸ್ತಾನದ ಸಂಬಂಧ ಭಾರತ - ಕೆನಡಾ ಸಂಬಂಧಕ್ಕಿಂತ ಭಿನ್ನವಾಗಿದೆ ಎಂದಿದ್ದಾರೆ.

ಮಸೂದ್ ಪ್ರಕಾರ, ಒಂದು ವೇಳೆ ತಮ್ಮ ಶತ್ರು ರಾಷ್ಟ್ರಗಳೊಡನೆ ಹೊಂದಾಣಿಕೆ ನಡೆಸಲು ಸಾಧ್ಯವಾಗದಿದ್ದರೆ, ಅವುಗಳಿಗೆ ಅತ್ಯಂತ ನೋವು ನೀಡಲು ಏನು ಮಾಡಬಹುದು ಎಂದು ಯೋಚಿಸುತ್ತವೆ. ಇಂತಹ ಸಂದರ್ಭಗಳಲ್ಲಿ ಯುದ್ಧದ ಸಾಧ್ಯತೆಯೂ ಒಂದು ಆಯ್ಕೆಯಾಗಿರುತ್ತದೆ.

ಕೆನಡಾದಲ್ಲಿ ಸವಾಲಿನ ರಾಜಕೀಯ ಸನ್ನಿವೇಶ ಇದ್ದಾಗಲೂ, ಗಮನಾರ್ಹ ಭಿನ್ನಾಭಿಪ್ರಾಯಗಳು ಇದ್ದಾಗ್ಯೂ ಒಂದು ಹಂತದ ಮಾನದಂಡಗಳನ್ನು ಇಟ್ಟುಕೊಳ್ಳುವುದು ಮುಖ್ಯವಾಗುತ್ತದೆ. ಆದರೆ, ಒಂದು ಚಕಮಕಿ ಅಥವಾ ಯುದ್ಧ ನಡೆಯುತ್ತಿರುವಾಗ, ಆಗ ಏನು ಮಾಡಬಹುದು ಎನ್ನುವುದಕ್ಕೆ ಇತಿಮಿತಿಗಳಿರುವುದಿಲ್ಲ.

ಆದರೆ, ನಿಜ್ಜರ್ ಹತ್ಯೆಯ ರೀತಿಯಲ್ಲೇ, ಭಾರತೀಯ ಗುಪ್ತಚರ ಸಿಬ್ಬಂದಿಗಳು ಭಾರತ ಸರ್ಕಾರ ಇಂತಹ ಹತ್ಯೆಗಳನ್ನು ನಡೆಸಿಲ್ಲ ಎಂದೇ ಅಭಿಪ್ರಾಯ ಪಡುತ್ತಾರೆ. "ಇಂತಹ ಹತ್ಯೆಗಳನ್ನು ಭಾರತ ನಡೆಸಿರುವ ಸಾಧ್ಯತೆಗಳಿಲ್ಲ. ಕನಿಷ್ಟ ಪಕ್ಷ ನೇರವಾಗಿಯಂತೂ ಭಾರತ ಇದರಲ್ಲಿ ಪಾತ್ರವಾಗಿರುವುದಿಲ್ಲ" ಎಂದು ಕೊಲೊನೆಲ್ ಎಂಬಿ ಅವರು ಭಾರತ ಏನಾದರೂ ಪಂಜ್ವಾರ್ ಮತ್ತು ಐಸಿ814 ಅಪಹರಣಕಾರರ ಹತ್ಯೆಯಲ್ಲಿ ಪಾತ್ರ ವಹಿಸಿದೆಯೇ ಎಂದು ಕೇಳಿದಾಗ ಉತ್ತರಿಸಿದ್ದಾರೆ.

ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ, ವಿದೇಶಾಂಗ ಇಲಾಖೆಯ ರಾಜ್ಯ ಸಚಿವರಾದ ಜನರಲ್ ವಿ ಕೆ ಸಿಂಗ್ ಅವರು ಸ್ಥಾಪಿಸಿದ್ದ ಟೆಕ್ನಿಕಲ್ ಸಪೋರ್ಟ್ ಡಿವಿಷನ್ (ಟಿಎಸ್‌ಡಿ) ನಲ್ಲಿ ಕೊಲೊನೆಲ್ ಎಂಬಿ ಸದಸ್ಯರಾಗಿದ್ದರು. ಆದರೆ ಈ ವಿಭಾಗ ನ್ಯಾಯ ವ್ಯಾಪ್ತಿಯ ನಿಯಮಾವಳಿಗಳನ್ನು ಉಲ್ಲಂಘಿಸುತ್ತಿದೆ ಮತ್ತು ರಹಸ್ಯ ಮಾಹಿತಿಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂಬ ಕಾರಣ ನೀಡಿ, ಮನಮೋಹನ್ ಸಿಂಗ್ ಅವರ ನೇತೃತ್ವದ ಸರ್ಕಾರ ಇದನ್ನು ರದ್ದುಪಡಿಸಿತು.

"ಪಾಕಿಸ್ತಾನದ ಪಂಜಾಬಿನಲ್ಲಿ ಪೊಲೀಸ್ ಇಲಾಖೆ ಹೇಗೆ ಕಾರ್ಯಾಚರಿಸುತ್ತಿದೆ ಎಂದು ನಿಮಗೆ ತಿಳಿದಿದೆಯೇ? ಆ ಪೂರ್ಣ ಪ್ರದೇಶ, ಅದರಲ್ಲೂ ನಗರ ಪ್ರದೇಶಗಳಲ್ಲಿ ಸಂಪೂರ್ಣ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಆದರೆ ಈ ಹತ್ಯೆಗಳಿಗೆ ಸಂಬಂಧಿಸಿದಂತೆ ಯಾವುದೇ ವಿಡಿಯೋ ಚಿತ್ರಣಗಳು ಯಾಕೆ ಲಭ್ಯವಿಲ್ಲ? ಒಂದು ಹತ್ಯೆಯನ್ನು ಹೊರತುಪಡಿಸಿ, ಕೊಲೆಗಾರರ ಮುಖ, ವಾಹನಗಳು ಸೇರಿದಂತೆ ಯಾವ ಮಾಹಿತಿಯೂ ಲಭ್ಯವಿಲ್ಲ. ಒಂದು ವೇಳೆ ನಾನೇನಾದರೂ ಕೊಲೆಯಾಗುವ ಸಂಭಾವ್ಯ ಪಟ್ಟಿಯಲ್ಲಿದ್ದರೆ, ನಾನು ಯಾವಾಗಲೂ ಕ್ಯಾಮರಾಗಳಲ್ಲಿ ಸೆರೆಯಾಗುವ ಸಾಧ್ಯತೆಗಳಿವೆಯಲ್ಲ? 

ಹಲವು ಕೆಲಸಗಳನ್ನು ನಾವು ಮಾಡಲು ಸಾಧ್ಯವಿದೆ, ಇತರರು ಮಾಡಲು ಸಾಧ್ಯವಿಲ್ಲ. ಆದರೆ ಇಂತಹ ಹತ್ಯೆಗಳನ್ನು ನಾವು ಮಾಡಿಲ್ಲ. ಈಗ ಗಮನಿಸಿದರೆ, ಪಾಕಿಸ್ತಾನವೇ ಈ ವ್ಯಕ್ತಿಗಳನ್ನು ಕೊಲೆಗೈಯುತ್ತಿರುವಂತೆ ತೋರುತ್ತಿದೆ. ಪಾಕಿಸ್ತಾನದಂತಹ ರಾಕ್ಷಸಿ ರಾಷ್ಟ್ರ ಹಲವು ಬಾರಿ ತನಗೆ ಅಗತ್ಯವಿಲ್ಲದ ಉಗ್ರರನ್ನು ಕೊನೆಗೊಳಿಸುತ್ತದೆ. ಇದು ಈ ಪ್ರಕ್ರಿಯೆಯ ಆರಂಭದಂತೆ ಕಾಣುತ್ತಿದೆ. ಪಾಕಿಸ್ತಾನದ ಆರ್ಥಿಕತೆಯೂ ಕುಸಿಯುತ್ತಿರುವುದರಿಂದ, ಇದು ಹಣ ಉಳಿಸಲು ಪಾಕಿಸ್ತಾನಕ್ಕೆ ಮಹತ್ವದ ವಿಧಾನವೂ ಆಗಿದೆ" ಎಂದು ಕೊಲೊನೆಲ್ ಎಂಬಿ ವಿವರಿಸುತ್ತಾರೆ.

ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ, ಏನಾಗಿರಬಹುದು ಎಂಬುದಕ್ಕೆ ರಾ ಸಂಸ್ಥೆಯ ಅರವಿಂದ್ ಹಿಪ್ಪರಗಿ ಬೇರೆಯೇ ದೃಷ್ಟಿಕೋನವನ್ನು ಹೊಂದಿದ್ದಾರೆ. "ನಿಜ್ಜರ್ ಒಂದು ಗ್ಯಾಂಗ್ ವಾರ್‌ನಲ್ಲಿ ಕೊಲೆಯಾಗಿಲ್ಲ ಎಂದು ಯಾರು ಖಾತ್ರಿಪಡಿಸಿದ್ದಾರೆ? ಕೆನಡಾದಲ್ಲಿರುವ ಖಲಿಸ್ತಾನಿಗಳು ಹಲವು ಗುಂಪುಗಳಲ್ಲಿ ವಿಭಜನೆಯಾಗಿದ್ದಾರೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. 
ನಿಜ್ಜರ್‌ನನ್ನು ಆತನ ವಿರೋಧಿ ಗುಂಪು ಕೊಲೆ ಮಾಡಿರುವ ಸಾಧ್ಯತೆಗಳಿವೆ. ಜಸ್ಟಿನ್ ಟ್ರೂಡೋ ಈಗ ಕೆನಡಾದಲ್ಲಿ ಅಷ್ಟೊಂದು ಪ್ರಭಾವಿ, ಜನಪ್ರಿಯ ಪ್ರಧಾನಿಯಾಗಿಲ್ಲ. ಆದ್ದರಿಂದ ಆತ ತನ್ನ ಖಲಿಸ್ತಾನಿ ಮತಗಳನ್ನು ಭದ್ರಪಡಿಸಲು ಮತ್ತು ಅವರಿಂದ ಹಣ ಪಡೆಯಲು ಇಂತಹ ಪ್ರಯತ್ನ ನಡೆಸುತ್ತಿರಬಹುದು" ಎನ್ನುತ್ತಾರೆ.

"ನಾನೊಬ್ಬ ರಾಜಕೀಯ ವಿಜ್ಞಾನಿಯೂ ಆಗಿರುವುದರಿಂದ, ನಾನು ಇನ್ನೊಂದು ಕೋನದಲ್ಲಿಯೂ ಮಾತನಾಡಬಹುದು. ಪ್ರತಿಯೊಂದು ದೊಡ್ಡ ರಾಷ್ಟ್ರವೂ ಹತ್ಯೆಗಳನ್ನು ನಡೆಸುತ್ತದೆ. ಕಾನೂನು, ಮಾನವ ಜೀವ, ಹಾಗೂ ಇತರ ಮಹತ್ವದ ವಿಚಾರಗಳಿಗೆ ಅದೆಷ್ಟು ಬೆಲೆ ಕೊಟ್ಟರೂ, ಕೆಲವು ಸಂದರ್ಭಗಳಲ್ಲಿ ಯೋಜಿತ ಹತ್ಯೆಗಳು ಅನಿವಾರ್ಯವಾಗುತ್ತವೆ. ದೊಡ್ಡ ಪ್ರಮಾಣದಲ್ಲಿ ತೊಂದರೆ ಉಂಟಾಗಬಾರದು ಎಂಬ ಕಾರಣಕ್ಕೆ ಕೆಲವೊಂದು ಬಾರಿ ಸಣ್ಣ ಪ್ರಮಾಣದಲ್ಲಿ ಕಾನೂನು ಮೀರಬೇಕಾಗುತ್ತದೆ. ಭಾರತ ಬಲವಾದ, ಸ್ವತಂತ್ರವಾದ ರಾಷ್ಟ್ರೀಯ ಹಿತಾಸಕ್ತಿ ಹೊಂದಿರುವ ಪ್ರಬಲ ಶಕ್ತಿಯಾಗಿ ಬೆಳೆಯುತ್ತಿದೆ. ಭಾರತ ಸಾಮರ್ಥ್ಯದಲ್ಲಿ ಅಮೆರಿಕ, ಚೀನಾ, ರಷ್ಯಾಗಳಿಗೆ ಸರಿಸಮನಾಗಿ ನಿಲ್ಲುತ್ತಿದೆ. ಭಾರತ ಈ ರೀತಿಯ ಹತ್ಯೆಗಳನ್ನು ನಡೆಸಿಲ್ಲವಾದರೂ, ಇವುಗಳನ್ನು ನಡೆಸುವ ಸಾಮರ್ಥ್ಯ ಹೊಂದಿದೆ. ಎಲ್ಲ ಬೃಹತ್ ರಾಷ್ಟ್ರಗಳೂ ಇಂತಹ ಕೆಲಸ ಮಾಡಿರುತ್ತವೆ" ಎಂದು ಅವರು ವಿವರಿಸುತ್ತಾರೆ.

"ಕೆಲವೊಂದು ಬಾರಿ ಗುಪ್ತಚರ ಸಂಸ್ಥೆಗಳು ಏನು ಮಾಡಿರುತ್ತವೆ ಎನ್ನುವುದು ಅವುಗಳ ಸರ್ಕಾರಗಳ ಗಮನಕ್ಕೂ ಬಂದಿರುವುದಿಲ್ಲ. ಇಂತಹ ಘಟನೆಗಳು ಸಂಭವಿಸತೊಡಗಿದರೆ, ಆಗ ಭಾರತದ ಗೌರವಕ್ಕೂ ಚ್ಯುತಿ ಉಂಟಾಗುವ ಸಾಧ್ಯತೆಗಳಿವೆ. ಇಂತಹದ್ದು ನಡೆಯತೊಡಗಿದರೆ, ಇವುಗಳನ್ನು ಹಿಂಬಾಲಿಸುವಂತಹ ಸಂಸ್ಕೃತಿಯೂ ಆರಂಭವಾಗುತ್ತದೆ. ಇವುಗಳನ್ನು ಕೇವಲ ವಿದೇಶದಲ್ಲಿ ಮಾತ್ರ ನಡೆಸುವುದಲ್ಲ. ಬದಲಿಗೆ, ಸ್ವದೇಶದಲ್ಲೂ ಇದನ್ನು ದೊಡ್ಡ ಪ್ರಮಾಣದಲ್ಲಿ ನಡೆಸಲಾಗುತ್ತದೆ. ಆದರೆ ಇದು ಸಮಾಜ ಕಾನೂನಿಗೆ ಒಳಪಟ್ಟು ಇರಬೇಕು ಎಂಬುದಕ್ಕೆ ವಿರುದ್ಧವಾಗಿದೆ. ಆದ್ದರಿಂದಲೇ ಭಾರತದಂತಹ ಮುಕ್ತ ರಾಷ್ಟ್ರದಲ್ಲಿ ಇಂತಹ ಘಟನೆಗಳು ನಡೆಯಬಾರದು" ಎಂದು ಮಸೂದ್ ಅಭಿಪ್ರಾಯ ಪಡುತ್ತಾರೆ.

Follow Us:
Download App:
  • android
  • ios