ಮೈಸೂರು ಒಡೆಯರಿಂದ ರಾಜೀವ್ ಚಂದ್ರಶೇಖರ್ ತನಕ: ಡಕೋಟಾ ಡಿಸಿ 3 ಯುದ್ಧ ವಿಮಾನದ ಇತಿಹಾಸ ಹೀಗಿದೆ..
ಮೂಲತಃ ರದ್ದಿ ಎಂಬಂತೆ ಖರೀದಿಸಲಾದ ಡಕೋಟಾ ಹಲವು ರೀತಿಯ ಮರುನಿರ್ಮಾಣಗಳಿಗೆ ಒಳಪಟ್ಟು, ಅಂತಿಮವಾಗಿ ಪರಶುರಾಮ್ ಎಂಬ ಹೆಸರು ಪಡೆದು, ಹೊಸರೂಪದಲ್ಲಿ ತಯಾರಾಯಿತು. ಈ ವಿಮಾನ ಹಿಂದನ್ ವಾಯುನೆಲೆಯಲ್ಲಿ 'ವಿಂಟೇಜ್ ಫ್ಲೈ' ವಿಮಾನ ಬಳಗಕ್ಕೆ ಸೇರ್ಪಡೆಯಾಗಲಿದೆ.
(ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಭಾರತದಲ್ಲಿ ಡಕೋಟಾ ವಿಮಾನ 1940ರ ದಶಕದ ಸ್ವಾತಂತ್ರ್ಯ ಹೋರಾಟದ ಸಮಯದಿಂದಲೂ ಒಂದು ಸುದೀರ್ಘ ಇತಿಹಾಸವನ್ನು ಹೊಂದಿದೆ. ಡಕೋಟಾ ವಿಮಾನ ಸ್ವಾತಂತ್ರ್ಯ ಗಳಿಸಿದ ಬಳಿಕ ಹಲವು ದಶಕಗಳ ಕಾಲ ಭಾರತೀಯ ವಾಯುಪಡೆಯ ಬತ್ತಳಿಕೆಯ ಪ್ರಮುಖ ಭಾಗವಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಡಕೋಟಾ ವಿಮಾನ ಮತ್ತೆ ಸುದ್ದಿಗೆ ಬರತೊಡಗಿದೆ. ಇದಕ್ಕೆ ಕಾರಣ ಕರ್ನಾಟಕದ ರಾಜ್ಯಸಭಾ ಸಂಸದರು, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ, ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನದ ರಾಜ್ಯ ಸಚಿವರಾದ ರಾಜೀವ್ ಚಂದ್ರಶೇಖರ್ ಅವರ ಪ್ರಯತ್ನಗಳು ಕಾರಣವಾಗಿದೆ.
ಡಕೋಟಾ ವಿಮಾನ ಎಲ್ಲರಿಗೂ ಪ್ರಿಯವಾದ ಹಾದಿ!
ಡಕೋಟಾ ಡಿಸಿ 3 ವಿಮಾನಕ್ಕೆ(Dakota DC - 3 Aircraft) ದಶಕಗಳ ಕಾಲದ, ವಿವಿಧ ಭೂಖಂಡಗಳನ್ನು ವ್ಯಾಪಿಸಿದ ಇತಿಹಾಸವಿದೆ. 1930ರ ದಶಕದಲ್ಲಿ ಡೊನಾಲ್ಡ್ ಡಬ್ಲ್ಯು ಡಗ್ಲಾಸ್ ಅವರ ನೇತೃತ್ವದ ಎಂಜಿನಿಯರ್‌ಗಳಿಂದ ವಿನ್ಯಾಸಗೊಂಡ ಡಿಸಿ3, ತನ್ನ ಉತ್ತಮ ವ್ಯಾಪ್ತಿ, ವಿಶ್ವಾಸಾರ್ಹತೆ ಮತ್ತು ಬಾಳಿಕೆಯ ಗುಣಗಳಿಂದ ಕ್ಷಿಪ್ರವಾಗಿ ವಾಣಿಜ್ಯಿಕ ಯಶಸ್ಸು ಸಾಧಿಸಿತು. ಇದರ ವಿನ್ಯಾಸ ಈ ಮೊದಲಿನ ಡಿಸಿ2 ಮಾದರಿಯ ಆಧಾರಿತವಾಗಿತ್ತು. ಆದರೆ ಡಿಸಿ2 ಮಾದರಿಗೆ ಒದಗಿಸಿದ್ದ ಅಗತ್ಯ ಸುಧಾರಣೆಗಳು ಡಿಸಿ3ಯನ್ನು ವಾಣಿಜ್ಯಿಕ ವಿಮಾನಯಾನ ಸಂಸ್ಥೆಗಳ ಪ್ರಥಮ ಆಯ್ಕೆಯನ್ನಾಗಿಸಿತು.
ಇದನ್ನು ಓದಿ: ವಿನೂತನ ಸೂಪರ್‌ಸಾನಿಕ್ ಜೆಟ್ ಟ್ರೈನರ್ ವಿನ್ಯಾಸ ಪ್ರದರ್ಶಿಸಿದ ಎಚ್‌ಎಎಲ್
ಇದರ ಮೊದಲ ಮೂಲ ಮಾದರಿಯಾದ ಡಗ್ಲಾಸ್ ಸ್ಲೀಪರ್ ಟ್ರಾನ್ಸ್‌ಪೋರ್ಟ್ (Douglas Sleeper Transport) (ಡಿಎಸ್‌ಟಿ) ತನ್ನ ಮೊದಲ ಹಾರಾಟವನ್ನು 1935ರಲ್ಲಿ ನಡೆಸಿತು. ಇದನ್ನು ಅಮೆರಿಕನ್ ಏರ್‌ಲೈನ್ಸ್ ಹಾಗೂ ಯುನೈಟೆಡ್ ಏರ್‌ಲೈನ್ಸ್ ಸೇರಿದಂತೆ ವಿವಿಧ ವಾಯುಯಾನ ಸಂಸ್ಥೆಗಳು ಬಹುಬೇಗ ಬಳಸಲಾರಂಭಿಸಿದವು.
ಡಕೋಟಾ ಡಿಸಿ3 ವಿನ್ಯಾಸ ಅದನ್ನೊಂದು ವಿಶಿಷ್ಟ ವಿಮಾನವನ್ನಾಗಿಸಿದ್ದು, ಅದನ್ನು ವಿವಿಧ ಕಾರ್ಯಗಳಿಗೆ ಬಳಸಿಕೊಳ್ಳಬಹುದು. ವಸ್ತು ಸಾಗಾಣಿಕೆ, ಪ್ರಯಾಣಿಕರ ಬಳಕೆಗೆ, ವಾಯು ಸರ್ವೇಕ್ಷಣೆಗೆ ಹಾಗೂ ಮಿಲಿಟರಿ ಸಾಗಾಣಿಕೆಗಳು ಅದರ ಬಳಕೆಯ ವಿಧಗಳಾಗಿವೆ. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಡಕೋಟಾದ ಸ್ಥಾನಮಾನ ಇನ್ನಷ್ಟು ಹೆಚ್ಚಿತು. ಆ ಅವಧಿಯಲ್ಲಿ ಡಕೋಟಾ ಡಿಸಿ3 ಮಿಲಿಟರಿ ಸಾಗಾಣಿಕಾ ವಿಮಾನವಾಗಿ ಕಾರ್ಯ ನಿರ್ವಹಿಸಿತು. ಈ ವಿಮಾನವನ್ನು ಸೈನಿಕರ, ಆಯುಧಗಳ, ಗಾಯಗೊಂಡ ಸೈನಿಕರ, ಸಾಗಾಟಕ್ಕೆ ಬಳಸಿಕೊಳ್ಳಲಾಯಿತು. ಆ ಮೂಲಕ ವಿಮಾನಕ್ಕೆ "ಗೂನೀ ಬರ್ಡ್" ಎಂಬ ಹೆಸರೂ ಲಭಿಸಿತು. ಮಿಲಿಟರಿ ಕಾರ್ಯಾಚರಣೆಗಳಿಗೆ ಈ ವಿಮಾನ ಸೂಕ್ತವೆನಿಸಿತು. ಇದು ಯುರೋಪ್ ಮತ್ತು ಪೆಸಿಫಿಕ್ ಪ್ರದೇಶದಲ್ಲಿ ವ್ಯಾಪಕವಾಗಿ ಬಳಸಲಾಯಿತು.
ಇದನ್ನೂ ಓದಿ: ಭಾರತದ ವೈಮಾನಿಕ, ರಕ್ಷಣಾ ಉದ್ಯಮಕ್ಕೆ ಕರ್ನಾಟಕವೇ ತವರು ಮನೆ..!
ಭಾರತದ ಇತಿಹಾಸದಲ್ಲಿ ಡಕೋಟಾ ಡಿಸಿ3 ವಿಶೇಷ ಸ್ಥಾನ ಸಂಪಾದಿಸಿದೆ. ಮೈಸೂರು ರಾಜಮನೆತನ (Mysore Royal Family) ಈ ವಿಮಾನದೊಡನೆ (Flight) ವಿಶೇಷ ಸಂಬಂಧ ಹೊಂದಿದ್ದು, ಮೈಸೂರು ಮಹಾರಾಜರಾದ ಜಯಚಾಮರಾಜೇಂದ್ರ ಒಡೆಯರ್ (Jayachamarajendra Wodeyar) ಸ್ವತಃ ಪೈಲಟ್ ಆಗಿದ್ದರು. 1947-48ರ ಕಾಶ್ಮೀರ ಯುದ್ಧದಲ್ಲಿ, 1971ರ ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ಡಕೋಟಾ ಡಿಸಿ3ಯನ್ನು ಭಾರತೀಯ ವಾಯುಪಡೆ ಬಳಸಿಕೊಂಡಿತು. ಐವತ್ತು ವರ್ಷದ ಹಿಂದೆ, ಭಾರತದ ದಿಮಾಪುರ ಏರ್ ಸ್ಟ್ರಿಪ್ ಬಾಂಗ್ಲಾದೇಶ ವಾಯುಪಡೆಯ ವಿಮಾನಗಳಿಗೆ ಆಧಾರವಾಗಿತ್ತು.
ವಾಯುಪಡೆಗೆ ರಾಜೀವ್ ಚಂದ್ರಶೇಖರ್ ನೀಡಿದ ಉಡುಗೊರೆ
ಎರಡನೇ ಮಹಾಯುದ್ಧದಲ್ಲಿ ಬಳಸಲಾದ ಡಕೋಟಾ ಡಿಸಿ3 ವಿಮಾನವನ್ನು ರಾಜ್ಯಸಭಾ ಸದಸ್ಯರು ಮತ್ತು ಉದ್ಯಮಿಗಳಾದ ರಾಜೀವ್ ಚಂದ್ರಶೇಖರ್ ಅವರು ಭಾರತೀಯ ವಾಯುಪಡೆಗೆ ಉಡುಗೊರೆಯಾಗಿ ನೀಡಿದ್ದರು. ಈ ವಿಮಾನ 5,80,000 ಪೌಂಡ್ ಮೊತ್ತದಲ್ಲಿ ಯುನೈಟೆಡ್ ಕಿಂಗ್‌ಡಮ್‌ನ ರಿಫ್ಲೈಟ್ ಏರ್‌ವರ್ಕ್ಸ್ ಲಿಮಿಟೆಡ್‌ನಲ್ಲಿ ಭವ್ಯವಾದ ನವೀಕರಣಗಳಿಗೆ ಒಳಗಾಯಿತು.
ಇದನ್ನೂ ಓದಿ: ಕೇಂದ್ರ ಬಜೆಟ್ 2023-24: ರಕ್ಷಣಾ ವಲಯಕ್ಕೆ ಹೆಚ್ಚಿದ ಕೊಡುಗೆ; ಆಧುನೀಕರಣಕ್ಕೆ ಒತ್ತು..!
ವಿಶೇಷವಾಗಿ ಪರಿಣತಿ ಹೊಂದಿರುವ ಭಾರತೀಯ ಮತ್ತು ಬ್ರಿಟಿಷ್ ಪೈಲಟ್‌ಗಳನ್ನು ಹೊಂದಿದ ಈ ವಿಮಾನ, ಭಾರತಕ್ಕೆ ಬರುವ ಹಾದಿಯಲ್ಲಿ ಹಲವು ರಾಷ್ಟ್ರಗಳ ವಿಮಾನ ನಿಲ್ದಾಣಗಳಲ್ಲಿ ನಿಲುಗಡೆ ಮಾಡುತ್ತಾ ಬಂತು. ಫ್ರಾನ್ಸ್, ಇಟಲಿ, ಗ್ರೀಸ್, ಜೋರ್ಡಾನ್, ಬಹರೈನ್, ಹಾಗೂ ಒಮಾನ್‌ಗಳಲ್ಲಿ ನಿಲುಗಡೆ ಮಾಡಿದ ಬಳಿಕ, ಡಕೋಟಾ ಅಂತಿಮವಾಗಿ ಜಾಮ್‌ನಗರ ವಾಯನೆಲೆಯಲ್ಲಿ ಭೂಸ್ಪರ್ಶ ಮಾಡಿತು. ಈ ಪ್ರಯಾಣದಲ್ಲಿ ವಿಮಾನ 9,750 ಕಿಲೋಮೀಟರ್‌ಗಳ ಬೃಹತ್ ದೂರವನ್ನು ಕ್ರಮಿಸಿ, ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿತು.
ರಾಜೀವ್ ಚಂದ್ರಶೇಖರ್ ಅವರ ತಂದೆ, ಏರ್ ಕಮೋಡೋರ್ (ನಿವೃತ್ತ) ಎಂ.ಕೆ. ಚಂದ್ರಶೇಖರ್ ಅವರೂ ಭಾರತೀಯ ವಾಯುಪಡೆಯ ಡಕೋಟಾ ವಿಮಾನದ ಪೈಲಟ್ ಆಗಿದ್ದರು. ಅವರ ಗೌರವಾರ್ಥ ಈ ವಿಮಾನಕ್ಕೆ ಪರಶುರಾಮ್ ಎಂದು ಹೆಸರಿಡಲಾಯಿತು. ಈ ನಡೆ ವೈಮಾನಿಕ ಜಗತ್ತಿನಲ್ಲಿ ಒಂದು ಛಾಪು ಮೂಡಿಸಿದೆ. ಹಿಂದನ್‌ನಲ್ಲಿ ನಡೆದ ಸಮಾರಂಭದಲ್ಲಿ, ಡಕೋಟಾ ಡಿಸಿ-3 ವಿಪಿ 905 ಅಧಿಕೃತವಾಗಿ ಭಾರತೀಯ ವಾಯುಪಡೆಗೆ ಸೇರ್ಪಡೆಗೊಂಡಿತು. ಚೀಫ್ ಆಫ್ ಏರ್ ಸ್ಟಾಫ್, ಏರ್ ಮಾರ್ಷಲ್ ಬಿ ಎಸ್ ಧನೋವಾ, ಏರ್ ಕಮೋಡೋರ್ (ನಿವೃತ್ತ) ಎಂಕೆ ಚಂದ್ರಶೇಖರ್ ಅವರಿಂದ ವಿಮಾನದ ಕೀಲಿಕೈ ಸ್ವೀಕರಿಸಿದರು.
ಇದನ್ನೂ ಓದಿ: ಕೊಡಗಿನ ವೀರ ಯೋಧರು: ದೇಶ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಕೊಡವರಿಗೊಂಡು ನಮನ
ಮೂಲತಃ ರದ್ದಿ ಎಂಬಂತೆ ಖರೀದಿಸಲಾದ ಡಕೋಟಾ ಹಲವು ರೀತಿಯ ಮರುನಿರ್ಮಾಣಗಳಿಗೆ ಒಳಪಟ್ಟು, ಅಂತಿಮವಾಗಿ ಪರಶುರಾಮ್ (Parashurama) ಎಂಬ ಹೆಸರು ಪಡೆದು, ಹೊಸರೂಪದಲ್ಲಿ ತಯಾರಾಯಿತು. ಈ ವಿಮಾನ ಹಿಂದನ್ ವಾಯುನೆಲೆಯಲ್ಲಿ 'ವಿಂಟೇಜ್ ಫ್ಲೈ' ವಿಮಾನ ಬಳಗಕ್ಕೆ ಸೇರ್ಪಡೆಯಾಗಲಿದೆ. ಈ ಬಳಗದಲ್ಲಿ ಈಗಾಗಲೇ ಟೈಗರ್ ಮಾತ್ ಹಾಗೂ ಹೋವರ್ಡ್ ವಿಮಾನಗಳಿವೆ. ಈ ಶ್ಲಾಘನೀಯ ಸಾಧನೆ ಡಕೋಟಾವನ್ನು ಅದರ ಹಿಂದಿನ ರೂಪಕ್ಕೆ ತರುವಲ್ಲಿ ತೋರಿದ ಕಠಿಣ ಪರಿಶ್ರಮ ಹಾಗೂ ಸಮರ್ಪಣಾಭಾವಕ್ಕೆ ಕೈಗನ್ನಡಿಯಾಗಿದೆ.
ಡಕೋಟಾ ತಾಂತ್ರಿಕ ವೈಶಿಷ್ಟ್ಯಗಳೆಡೆಗೊಂದು ನೋಟ
ಡಕೋಟಾ ಡಿಸಿ3 ವಿಮಾನ ಕೇವಲ ಒಂದು ಐತಿಹಾಸಿಕ ವಿಮಾನ ಮಾತ್ರವಲ್ಲ. ಅದು ವೈಮಾನಿಕ ಜಗತ್ತಿನಲ್ಲಿ ತಾಂತ್ರಿಕ ಅದ್ಭುತವೂ ಹೌದು. ಈ ವಿಮಾನ ಅವಳಿ ಇಂಜಿನ್‌ಗಳನ್ನು ಹೊಂದಿದ್ದು, ಲೋ ವಿಂಗ್ ಡಿಸೈನ್ ಹಾಗೂ ಟೈಲ್‌ವೀಲ್ ಲ್ಯಾಂಡಿಂಗ್ ಗೇರ್ ಸಂರಚನೆ ಹೊಂದಿದೆ. 19.7 ಮೀಟರ್ ಉದ್ದವಿರುವ ಈ ವಿಮಾನ, 28.96 ಮೀಟರ್‌ಗಳ ರೆಕ್ಕೆಯ ಅಗಲವನ್ನು ಹೊಂದಿದೆ. ಡಿಸಿ3ಯಲ್ಲಿ ಎರಡು ಪ್ರ್ಯಾಟ್ & ವಿಟ್ನಿ ಆರ್-1830 ರೇಡಿಯಲ್ ಇಂಜಿನ್‌ಗಳಿದ್ದು, ತಮ್ಮ ನಂಬಿಕಾರ್ಹತೆ ಮತ್ತು ಸಾಮರ್ಥ್ಯಗಳಿಂದ ಜನಪ್ರಿಯವಾಗಿವೆ. ಈ ಇಂಜಿನ್‌ಗಳು ವಿಮಾನಕ್ಕೆ ಪ್ರತಿ ಗಂಟೆಗೆ 360 ಕಿಲೋಮೀಟರ್‌ಗಳ ಗರಿಷ್ಟ ವೇಗ ಮತ್ತು 2,400 ಕಿಲೋಮೀಟರ್‌ಗಳ ವ್ಯಾಪ್ತಿ ನೀಡುತ್ತವೆ. ಡಕೋಟಾ ಡಿಸಿ3 ಗರಿಷ್ಠ 7,620 ಮೀಟರ್ ಎತ್ತರಕ್ಕೆ ಏರಬಲ್ಲದು. ಆ ಮೂಲಕ ಎತ್ತರದ ಕಾರ್ಯಾಚರಣೆಗಳಿಗೆ ಇದು ಸೂಕ್ತ ಆಯ್ಕೆಯೆನಿಸಿತ್ತು.
ಇದನ್ನೂ ಓದಿ: ಯುಎವಿ, ಸಿ-ಯುಎಎಸ್ ಜಾಮರ್ ಖರೀದಿಗೆ ವೇಗ ನೀಡುತ್ತಿದೆ ಭಾರತೀಯ ಸೇನೆ; ವಿಶೇಷತೆಗಳು ಹೀಗಿವೆ..
ಡಕೋಟಾ ಡಿಸಿ3 ಗರಿಷ್ಠ 5,443 ಕೆಜಿ ತೂಕ ಹೊರಬಲ್ಲ ಸಾಮರ್ಥ್ಯ ಹೊಂದಿದ್ದು, ಅದರ ಗಾತ್ರಕ್ಕೆ ಈ ತೂಕ ಹೊರುವ ಸಾಮರ್ಥ್ಯ ವಿಶೇಷವಾಗಿದೆ. ಈ ವಿಮಾನ 28 ಪ್ರಯಾಣಿಕರನ್ನು ಕರೆದೊಯ್ಯಬಲ್ಲದಾಗಿದ್ದು, ಇದು ವಾಣಿಜ್ಯಿಕ ಮತ್ತು ಮಿಲಿಟರಿ ಸಾಗಾಟಕ್ಕೆ ಸೂಕ್ತ ಆಯ್ಕೆಯಾಗಿತ್ತು. ಡಕೋಟಾ ಡಿಸಿ3ಯ ಪ್ರಮುಖ ಅಂಶವೆಂದರೆ ಅದರ ಗಟ್ಟಿಯಾದ ನಿರ್ಮಾಣ. ಇದರ ಫ್ಯುಯಲ್‌ಸೇಜ್ ಅಲ್ಯೂಮಿನಿಯಂ ಅಲಾಯ್‌ನಿಂದ ನಿರ್ಮಿಸಲಾಗಿದ್ದು, ಇದು ವಿಮಾನವನ್ನು ಹಗುರವೂ, ಅತ್ಯಂತ ಬಾಳಿಕೆ ಬರುವಂತೆಯೂ ಮಾಡುತ್ತದೆ. ವಿಮಾನದ ರೆಕ್ಕೆಯ ರಚನೆ ಅಲ್ಯುಮಿನಿಯಮ್‌ನಿಂದ ಮಾಡಿದ್ದು, ಪ್ರಮುಖ ಭಾಗಗಳಲ್ಲಿ ಸ್ಟೀಲ್ ಮತ್ತು ಮರಗಳನ್ನು ಹೊಂದಿದ್ದು, ಎಂತಹ ಕಠಿಣ ಪರಿಸ್ಥಿತಿಯಲ್ಲೂ ಗಟ್ಟಿಯಾಗಿರುವಂತೆ ಮಾಡುತ್ತದೆ.
ಡಕೋಟಾ ಡಿಸಿ3 ವಿಮಾನದ ಲ್ಯಾಂಡಿಂಗ್ ಗೇರ್ ಕಠಿಣ ಭೂಸ್ಪರ್ಶ ಮತ್ತು ಟೇಕ್ ಆಫ್‌ಗಳನ್ನು ತಾಳಿಕೊಳ್ಳುವಂತೆ ನಿರ್ಮಿಸಲಾಗಿದೆ. ಆ ಮೂಲಕ ಈ ವಿಮಾನ ದೂರದ, ಅಭಿವೃದ್ಧಿ ರಹಿತ ಏರ್‌ಫೀಲ್ಡ್‌ಗಳಲ್ಲೂ ಕಾರ್ಯಾಚರಿಸಲು ಸೂಕ್ತವಾಗಿದೆ. ಇದರ ಟೈಲ್‌ವೀಲ್ ಲ್ಯಾಂಡಿಂಗ್ ಗೇರ್ ವ್ಯವಸ್ಥೆ ವಿಮಾನಕ್ಕೆ ಹೆಚ್ಚಿನ ಸ್ಥಿರತೆ ನೀಡಿ, ಕಠಿಣ ಸ್ಥಳಗಳಲ್ಲೂ ಸುಲಭವಾಗಿ ಸಾಗುವಂತೆ ಮಾಡುತ್ತದೆ. ಡಕೋಟಾ ಡಿಸಿ3 ಸಣ್ಣ ಹಾಗೂ ಪೂರ್ಣ ತಯಾರಿ ಹೊಂದಿರದ ರನ್‌ವೇಗಳಲ್ಲೂ ಭೂಸ್ಪರ್ಶ ಮತ್ತು ಹಾರಾಟ ನಡೆಸಲು ಅನುಕೂಲಕರ ವಿಮಾನವಾಗಿದೆ. ಈ ಕಾರಣದಿಂದಲೇ ವಿಮಾನ ಎರಡನೇ ಮಹಾಯುದ್ಧದಲ್ಲಿ ಅತ್ಯಂತ ಪ್ರಸಿದ್ಧವಾಗಿತ್ತು.
ಡಕೋಟಾ ಡಿಸಿ3 ವಿಮಾನದ ತಾಂತ್ರಿಕ ವೈಶಿಷ್ಟ್ಯಗಳು ಇದನ್ನು ಅತ್ಯಂತ ದೀರ್ಘಕಾಲ ಬಾಳಿಕೆ ಬರುವ ವಿಮಾನವಾಗಿಸಿದ್ದು, ಅದು ಇಂದಿಗೂ ಬಳಕೆಯಲ್ಲಿದೆ. ಇದರ ಗಟ್ಟಿಮುಟ್ಟಾದ ನಿರ್ಮಾಣ, ವಿಶೇಷ ವಿನ್ಯಾಸ, ಹಾಗೂ ಅಸಾಧಾರಣ ಸಾಮರ್ಥ್ಯಗಳು ವಿಮಾನವನ್ನು ಪೈಲಟ್‌ಗಳು ಮತ್ತು ವೈಮಾನಿಕ ಆಸಕ್ತರ ನೆಚ್ಚಿನ ವಿಮಾನವಾಗಿಸಿದೆ. ಡಕೋಟಾ ಡಿಸಿ3 ವೈಮಾನಿಕ ಇತಿಹಾಸದಲ್ಲಿ ತನ್ನದೇ ಆದ ಸ್ಥಾನ ಸಂಪಾದಿಸಿದ್ದು, ಇದರ ಕಾರ್ಯಾಚರಣೆ ಇನ್ನೂ ಹಲವು ವರ್ಷಗಳ ಕಾಲ ಮುಂದುವರಿಯಲಿದೆ.
ದಂತಕಥೆಯಂತಹ ಪರಂಪರೆ
ಡಕೋಟಾ ಡಿಸಿ3 ಒಂದು ವೈಮಾನಿಕ ಕ್ಷೇತ್ರದ ದಂತಕತೆಯಾಗಿದ್ದು, ವೈಮಾನಿಕ ಇತಿಹಾಸದಲ್ಲಿ ತನ್ನ ಛಾಪು ಮೂಡಿಸಿದೆ. ಇದು ಹಲವು ಕಾರಣಗಳಿಗಾಗಿ ಅತ್ಯಂತ ಮಹತ್ವದ ವಿಮಾನಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿದೆ. ವಾಣಿಜ್ಯಿಕವಾಗಿ ಮತ್ತು ಮಿಲಿಟರಿ ಬಳಕೆಯಲ್ಲಿ ವಾಯುಯಾನ ಉದ್ಯಮದ ಮೇಲೆ ಡಕೋಟಾ ಡಿಸಿ3 ಬೀರಿರುವ ಪ್ರಭಾವ ಅಪಾರವಾದುದು. ಸಿ-47 ಸ್ಕೈಟ್ರೇನ್ ಅಥವಾ ಡಕೋಟಾ ಎಂದೂ ಹೆಸರು ಪಡೆದಿರುವ ಡಿಸಿ3 1930ರ ದಶಕದಲ್ಲಿ ಸೇವೆ ಆರಂಭಿಸಿದಾಗ ಉದ್ಯಮದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದಿತ್ತು.
ಡಕೋಟಾ ಡಿಸಿ3 ವಾಯುಯಾನವನ್ನು ಹೆಚ್ಚು ಆರಾಮದಾಯಕ, ಕಡಿಮೆ ವೆಚ್ಚದಾಯಕ, ಹಾಗೂ ಎಲ್ಲ ವರ್ಗಗಳ ಜನರಿಗೂ ಲಭ್ಯವಾಗುವಂತೆ ಮಾಡಿತ್ತು. ಇದರ ವಿಶಾಲ ಕ್ಯಾಬಿನ್ ಹಾಗೂ ಆಧುನಿಕ ಇಂಜಿನಿಯರಿಂಗ್ ಡಿಸಿ3 ವಾಣಿಜ್ಯಿಕ ವಾಯುಯಾನ ಸಂಸ್ಥೆಗಳ ನೆಚ್ಚಿನ ಆಯ್ಕೆಯನ್ನಾಗಿಸಿತು. ಇದು ಅತ್ಯಂತ ಕ್ಷಿಪ್ರವಾಗಿ ಸಣ್ಣ ವ್ಯಾಪ್ತಿಯ ಮತ್ತು ಮಧ್ಯಮ ವ್ಯಾಪ್ತಿಯ ಪ್ರಯಾಣಗಳಿಗೆ ಪ್ರಥಮ ಆಯ್ಕೆಯ ವಿಮಾನವಾಗಿಸಿತು. ತನ್ನ ಉತ್ತುಂಗದ ಅವಧಿಯಲ್ಲಿ 16,000ಕ್ಕೂ ಹೆಚ್ಚು ಡಿಸಿ3 ವಿಮಾನಗಳು ನಿರ್ಮಾಣಗೊಂಡು, ಜಗತ್ತಿನಲ್ಲಿ ಅತ್ಯಂತ ಜನಪ್ರಿಯ ವಿಮಾನವಾಗಿಸಿತು.
ಹೊಸ ಮಾದರಿಯ, ಅತ್ಯಾಧುನಿಕ ವಿಮಾನಗಳು ನಿರ್ಮಾಣಗೊಂಡರೂ, ಡಕೋಟಾ ಡಿಸಿ3 ಇಂದಿಗೂ ವೈಮಾನಿಕ ಬಳಕೆಯ ಜನಪ್ರಿಯ ಆಯ್ಕೆಯಾಗಿದೆ. ಇದರ ಬಹುಮುಖತೆ ಹಾಗೂ ನಂಬಿಕಾರ್ಹತೆ ಡಿಸಿ3 ವಿಮಾನ ಪೈಲಟ್‌ಗಳು ಮತ್ತು ವೈಮಾನಿಕ ಆಸಕ್ತರ ಅಚ್ಚುಮೆಚ್ಚಿನ ವಿಮಾನವಾಗಿಸಿದೆ. ಅಲಾಸ್ಕಾ, ಆಫ್ರಿಕಾ ಮತ್ತು ಏಷ್ಯಾದ ಸಾಮಾನ್ಯ ವಿಮಾನಗಳು ಕಾರ್ಯಾಚರಿಸಲು ಕಷ್ಟವಾಗುವಂತಹ ಪ್ರದೇಶಗಳಲ್ಲಿ ಡಕೋಟಾ ಡಿಸಿ3 ಜನಪ್ರಿಯ ವಿಮಾನವಾಗಿದೆ.
ಕಳೆದ ಹಲವು ವರ್ಷಗಳಲ್ಲಿ, ಹಲವು ಸಂಸ್ಥೆಗಳು ಹಾಗೂ ವ್ಯಕ್ತಿಗಳು ಡಕೋಟಾ ಡಿಸಿ3 ವಿಮಾನಗಳನ್ನು ರಕ್ಷಿಸುವ, ಅಭಿವೃದ್ಧಿ ಪಡಿಸುವ ಪ್ರಯತ್ನಗಳು ಸತತವಾಗಿ ನಡೆದಿವೆ. ಈ ವಿಮಾನಗಳು ಕೇವಲ ಐತಿಹಾಸಿಕ ಕಲಾಕೃತಿಗಳಲ್ಲ. ಬದಲಿಗೆ ಅವುಗಳ ವಿನ್ಯಾಸಕಾರರ ಜಾಣ್ಮೆ ಮತ್ತು ನಾವೀನ್ಯತೆಗೆ ಸಾಕ್ಷಿಗಳಾಗಿವೆ. 1995ರಲ್ಲಿ ಡಕೋಟಾ ಡಿಸಿ3 ಸೌತ್ ಡಕೋಟಾದ ಅಧಿಕೃತ ರಾಜ್ಯ ವಿಮಾನ ಎಂದು ಘೋಷಿಸಲ್ಪಟ್ಟಿದ್ದು, ಅದರ ಪ್ರಾದೇಶಿಕ ಮಹತ್ವವನ್ನೂ ಸಾಬೀತುಪಡಿಸಿತ್ತು.
ಇಂದಿಗೂ ಡಕೋಟಾ ಡಿಸಿ3 ವೈಮಾನಿಕ ಇತಿಹಾಸದ ಸಂಕೇತವಾಗಿದೆ. ಇದು ಹೊಸ ತಲೆಮಾರಿನ ಪೈಲಟ್‌ಗಳು ಹಾಗೂ ವೈಮಾನಿಕ ಆಸಕ್ತರಿಗೆ ತನ್ನ ವಿಶಿಷ್ಟ ವಿನ್ಯಾಸ ಮತ್ತು ಪರಂಪರೆಗಳಿಂದ ಸ್ಫೂರ್ತಿ ನೀಡುತ್ತಿದೆ. ಆರಂಭಿಕ ದಿನಗಳಲ್ಲಿ ವಾಣಿಜ್ಯಿಕ ವಿಮಾನವಾಗಿ, ಎರಡನೇ ಮಹಾಯುದ್ಧ ಮತ್ತು ನಂತರದ ಅವಧಿಯಲ್ಲಿ ಮಿಲಿಟರಿ ವಿಮಾನಗಳಾಗಿ ಡಕೋಟಾ ಡಿಸಿ3 ಜನಪ್ರಿಯವಾಗಿದೆ. ತನ್ನ ಸಾಮರ್ಥ್ಯ ಮತ್ತು ಸೇವೆಗಳಿಂದ ಸಹಜವಾಗಿಯೇ ಡಕೋಟಾ ಡಿಸಿ3 ವೈಮಾನಿಕ ಇತಿಹಾಸದಲ್ಲಿ ಅತ್ಯಂತ ಮಹತ್ವದ, ಜನಪ್ರಿಯ ವಿಮಾನವೆನಿಸಿದೆ.