Kargil Vijay Diwas: ವೀರ ಸೈನಿಕರ ಜತೆಗೆ ಮಿರೇಜ್ 2000 ಮತ್ತು ಬೋಫೋರ್ಸ್ ಗನ್ ಸಹ ಈ ಯುದ್ಧದ ಹೀರೋಗಳು!

ನಾವು ಪ್ರತಿವರ್ಷ ಜುಲೈ 26ರಂದು ಕಾರ್ಗಿಲ್ ವಿಜಯ ದಿವಸ ಆಚರಿಸುವ ಸಂದರ್ಭದಲ್ಲಿ, ಕಾರ್ಗಿಲ್ ಯುದ್ಧವನ್ನು ಗೆಲ್ಲಲು ಪ್ರಮುಖ ಪಾತ್ರ ವಹಿಸಿದ ಮಿರೇಜ್ 2000 ಯುದ್ಧ ವಿಮಾನ ಮತ್ತು ಬೋಫೋರ್ಸ್ ಫಿರಂಗಿಗಳು ನಿರ್ವಹಿಸಿದ ಪಾತ್ರವನ್ನು ಸ್ಮರಿಸಲೇಬೇಕು.

girish linganna kargil vijay diwas mirage 2000 and bofors gun are also kargil war winning heroes ash

(ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ನವದೆಹಲಿ (ಜುಲೈ 26, 2023): 1999ರಲ್ಲಿ ಭಾರತ ಪಾಕಿಸ್ತಾನಗಳ ನಡುವೆ ನಡೆದ ಕಾರ್ಗಿಲ್ ಯುದ್ಧ ಭಾರತೀಯ ಸೇನಾಪಡೆಗಳ ಶೌರ್ಯ, ತ್ಯಾಗ ಮತ್ತು ಸಾಟಿಯಿಲ್ಲದ ದೇಶಭಕ್ತಿಗೆ ಹಿಡಿದ ಕೈಗನ್ನಡಿಯಾಗಿದೆ. ನಾವು ಪ್ರತಿವರ್ಷ ಜುಲೈ 26ರಂದು ಕಾರ್ಗಿಲ್ ವಿಜಯ ದಿವಸ ಆಚರಿಸುವ ಸಂದರ್ಭದಲ್ಲಿ, ಕಾರ್ಗಿಲ್ ಯುದ್ಧವನ್ನು ಗೆಲ್ಲಲು ಪ್ರಮುಖ ಪಾತ್ರ ವಹಿಸಿದ ಮಿರೇಜ್ 2000 ಯುದ್ಧ ವಿಮಾನ ಮತ್ತು ಬೋಫೋರ್ಸ್ ಫಿರಂಗಿಗಳು ನಿರ್ವಹಿಸಿದ ಪಾತ್ರವನ್ನು ಸ್ಮರಿಸಲೇಬೇಕು. ಈ ಲೇಖನದಲ್ಲಿ, ಕಾರ್ಗಿಲ್ ಯುದ್ಧದಲ್ಲಿ ಭಾರತದ ಗೆಲುವನ್ನು ಖಾತ್ರಿಪಡಿಸಲು ಈ ಎರಡು ಮಹತ್ತರ ಆಯುಧಗಳು ನಿರ್ವಹಿಸಿದ ಪಾತ್ರದ ಕುರಿತು ಗಮನ ಹರಿಸೋಣ.

ಮಿರೇಜ್ 2000: ವೈಮಾನಿಕ ಪ್ರಾಬಲ್ಯಕ್ಕೆ ಹೊಸ ವ್ಯಾಖ್ಯಾನ

ಮಿರೇಜ್ 2000 ಒಂದು ಬಹುಪಾತ್ರಗಳ ಯುದ್ಧ ವಿಮಾನವಾಗಿದ್ದು, ಕಾರ್ಗಿಲ್ ಯುದ್ಧದಲ್ಲಿ ಮಹತ್ವದ ಆಯುಧವಾಗಿ ಹೊರಹೊಮ್ಮಿತು. ಈ ವಿಮಾನ ನಿಖರವಾಗಿ ದಾಳಿ ನಡೆಸುವ ಮತ್ತು ಏರ್ - ಟು - ಏರ್ ಯುದ್ಧ ನಡೆಸುವ ಸಾಮರ್ಥ್ಯ ಹೊಂದಿದ್ದು, ಅಪಾಯಕಾರಿ ಸನ್ನಿವೇಶದಲ್ಲೂ ಸಮರ್ಥವಾಗಿ ಕಾರ್ಯ ನಿರ್ವಹಿಸಿತು. ಆಧುನಿಕ ಏವಿಯಾನಿಕ್ಸ್ ಮತ್ತು ಆಯುಧಗಳನ್ನು ಹೊಂದಿದ್ದ ಮಿರೇಜ್ 2000 ವಿಮಾನ ಅತ್ಯಂತ ಎತ್ತರದಲ್ಲಿ ಮತ್ತು ಸವಾಲಿನ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸಲು ಸೂಕ್ತವಾಗಿತ್ತು. ಕಾರ್ಗಿಲ್‌ನಂತಹ ದುರ್ಗಮ ಪರ್ವತ ಪ್ರದೇಶಗಳಲ್ಲೂ ಮಿರೇಜ್ 2000 ಸಮರ್ಥವಾಗಿ ಕಾರ್ಯ ನಿರ್ವಹಿಸಿ, ಭಾರತೀಯ ವಾಯುಪಡೆಯ ಪಾಲಿಗೆ ನಿರ್ಣಾಯಕ ಪಾತ್ರ ವಹಿಸಿತ್ತು.

ಇದನ್ನು ಓದಿ: ಕಾರ್ಗಿಲ್ ವಿಜಯಕ್ಕೆ 24 ವರ್ಷ : ಸೇನೆ, ನಾಗರಿಕರಿಂದ ವೀರಕಲಿಗಳಿಗೆ ಗೌರವ ನಮನ

ಕಾರ್ಯತಂತ್ರದ ವಾಯು ದಾಳಿಗಳು

ಕಾರ್ಗಿಲ್ ಯುದ್ಧದ ಆಪರೇಶನ್ ವಿಜಯ್ ಕಾರ್ಯಾಚರಣೆಯಲ್ಲಿ ಮಿರೇಜ್ 2000 ಮಹತ್ವದ ಪಾತ್ರ ನಿರ್ವಹಿಸಿತ್ತು. ಆಪರೇಷನ್ ವಿಜಯ್ ಎನ್ನುವುದು ಕಾರ್ಗಿಲ್ ಪ್ರಾಂತ್ಯದಲ್ಲಿದ್ದ ಪಾಕಿಸ್ತಾನಿ ನುಸುಳುಕೋರರನ್ನು ಹೊರಹಾಕುವ ಕಾರ್ಯಾಚರಣೆಗೆ ನೀಡಿದ ಹೆಸರಾಗಿತ್ತು. ಅತ್ಯಂತ ಕರಾರುವಾಕ್ಕಾದ ದಾಳಿ ಮತ್ತು ವೇಗದ ಕಾರಣದಿಂದ, ಮಿರೇಜ್ 2000 ವಿಮಾನಗಳು ಶತ್ರುಗಳ ನೆಲೆಗಳ ಮೇಲೆ ಗುರಿಯಿಟ್ಟು ದಾಳಿ ನಡೆಸಿ, ಅವರ ಭದ್ರ ನೆಲೆಗಳು, ಬಂಕರ್‌ಗಳು, ಮತ್ತು ಆಯುಧಾಗಾರಗಳನ್ನು ಧ್ವಂಸಗೊಳಿಸಿತು. ಮಿರೇಜ್ 2000 ಹೊಂದಿದ್ದ ಅತ್ಯಾಧುನಿಕ ಇಲೆಕ್ಟ್ರಾನಿಕ್ ವಾರ್‌ಫೇರ್ ಸಾಮರ್ಥ್ಯ ಪಾಕಿಸ್ತಾನದ ರೇಡಾರ್‌ಗಳು ಮತ್ತು ಭೂಮಿಯಿಂದ ಗಾಳಿಗೆ ದಾಳಿ ನಡೆಸುವ ಕ್ಷಿಪಣಿಗಳ ಅಪಾಯವನ್ನೂ ತೊಡೆದು ಹಾಕಿ, ಈ ವಾಯುದಾಳಿಗಳು ಅತ್ಯಂತ ಯಶಸ್ವಿಯಾಗುವಂತೆ ಮಾಡಿತು.

ದಾಳಿಯಲ್ಲಿನ ನಿಖರತೆ ಮತ್ತು ಹಗಲು ರಾತ್ರಿ ಕಾರ್ಯಾಚರಣೆಗಳು

ಮಿರೇಜ್ 2000 ವಿಮಾನದ ಪ್ರಮುಖ ಅಂಶಗಳಲ್ಲಿ ಒಂದೆಂದರೆ, ಅತ್ಯಂತ ಪ್ರತಿಕೂಲ ಹವಾಮಾನದಲ್ಲಿ ಮತ್ತು‌ ರಾತ್ರಿ ವೇಳೆಯಲ್ಲಿ ನಿಖರವಾಗಿ ದಾಳಿ ನಡೆಸುವ ಸಾಮರ್ಥ್ಯ. ಇದರ ಪರಿಣಾಮವಾಗಿ, ಭಾರತೀಯ ವಾಯುಪಡೆ ಅತ್ಯಂತ ಕಡಿಮೆ ಹಾನಿ ಉಂಟಾಡುವ ರೀತಿ ನಿಖರವಾಗಿ ದಾಳಿ ನಡೆಸಿ, ಶತ್ರು ಪ್ರದೇಶಗಳನ್ನು ನಾಶಪಡಿಸಿತು. ಇದರ ಪರಿಣಾಮವಾಗಿ, ನಾಗರಿಕರಿಗೆ ಮತ್ತು ಅವರ ಆಸ್ತಿಪಾಸ್ತಿಗಳಿಗೆ ಹೆಚ್ಚಿನ ಹಾನಿ ಉಂಟಾಗಲಿಲ್ಲ. ಮಿರೇಜ್ 2000 ಹೊಂದಿದ್ದ ಆಧುನಿಕ ನ್ಯಾವಿಗೇಶನ್ (ಸಂಚರಣೆ) ವ್ಯವಸ್ಥೆ ಮತ್ತು ಗುರಿ ಸಾಧಿಸುವ ವ್ಯವಸ್ಥೆಗಳು ನೆಲದಲ್ಲಿದ್ದ ಭಾರತೀಯ ಪಡೆಗಳ ಸುರಕ್ಷತೆಯನ್ನು ಕಾಪಾಡಿಕೊಂಡು, ಶತ್ರುಗಳ ಮೇಲೆ ಕರಾರುವಾಕ್ಕಾದ ದಾಳಿ ನಡೆಸಲು ನೆರವಾಯಿತು.

ಇದನ್ನೂ ಓದಿ: ಬೆಂಗಳೂರಿನ ದೊಮ್ಲೂರಿನಲ್ಲಿ ನೂತನ ಘಟಕ ಆರಂಭಿಸಿದ ಹಿಟಾಚಿ ರೈಲ್ ಎಸ್‌ಟಿಎಸ್ ಇಂಡಿಯಾ

ಬೋಫೋರ್ಸ್ ಗನ್‌ಗಳು: ತಡೆಯಿಲ್ಲದ ಆರ್ಟಿಲರಿ ದಾಳಿ

ಮಿರೇಜ್ 2000 ಯುದ್ಧ ವಿಮಾನದ ಜೊತೆಗೆ, ಬೋಫೋರ್ಸ್ ಎಫ್ಎಚ್-77ಬಿ ಹವಿಟ್ಜರ್‌ಗಳು ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಪಡೆಗಳ ಕೈ ಮೇಲಾಗುವಂತೆ ಮಾಡಿದವು. ಬೋಫೋರ್ಸ್ ಫಿರಂಗಿಗಳು ತಮ್ಮ ಕರಾರುವಾಕ್ಕಾದ ಗುರಿ, ಹೆಚ್ಚಿನ ವ್ಯಾಪ್ತಿ, ಹಾಗೂ ಬಹುಮುಖತೆಯ ಕಾರಣದಿಂದ ಭೂಸೇನೆಗೆ ಸತತವಾಗಿ ಆರ್ಟಿಲರಿ ಬೆಂಬಲ ಒದಗಿಸಲು ಯಶಸ್ವಿಯಾದವು.

ನಿಖರತೆಯೊಡನೆ ದಾಳಿ

ಬೋಫೋರ್ಸ್ ಗನ್‌ಗಳನ್ನು ಬಳಸಿ, ಅತ್ಯಂತ ನಿಖರವಾಗಿ ಶತ್ರುಗಳ ನೆಲೆಗಳ ಮೇಲೆ ನಿರಂತರ ದಾಳಿ ನಡೆಸಲಾಯಿತು. ಇದರಿಂದ ಪಾಕಿಸ್ತಾನಿ ಸೇನೆ ತನ್ನ ಸುರಕ್ಷಿತ ನೆಲೆಗಳನ್ನು ಕಳೆದುಕೊಂಡಿತು. ಅದರೊಡನೆ ಪಾಕಿಸ್ತಾನದ ಆರ್ಟಿಲರಿ ವ್ಯವಸ್ಥೆಯೂ ದುರ್ಬಲವಾಯಿತು. ಬೋಫೋರ್ಸ್ ಫಿರಂಗಿಗಳು 24 ಕಿಲೋಮೀಟರ್‌ಗೂ ಹೆಚ್ಚಿನ ವ್ಯಾಪ್ತಿ ಹೊಂದಿದ್ದು, ಭಾರತೀಯ ಪಡೆಗಳಿಗೆ ದೂರದಲ್ಲಿನ ಗುರಿಗಳನ್ನೂ ನಾಶಪಡಿಸಲು ನೆರವಾದವು. ಅತ್ಯಂತ ದೂರದಿಂದ ದಾಳಿ ನಡೆಸುತ್ತಿದ್ದ ಕಾರಣ, ಪಾಕಿಸ್ತಾನದ ಪಡೆಗಳಿಗೆ ಬೋಫೋರ್ಸ್ ಎಲ್ಲಿದೆ ಎಂದು ತಿಳಿಯಲು ಸಾಧ್ಯವಾಗಿರಲಿಲ್ಲ.

ಇದನ್ನೂ ಓದಿ: ಎಲ್‌ಎಸಿ ಬಳಿ ಚೀನಾ ಕುತಂತ್ರಕ್ಕೆ ಟಕ್ಕರ್‌: ಅತಿ ಹಗುರ ಹೊವಿಟ್ಜರ್ ಕ್ಯಾನನ್ ನಿರ್ಮಿಸಲು ಭಾರತ, ಅಮೆರಿಕ ಪ್ಲ್ಯಾನ್‌

ಯುದ್ಧ ರಂಗದಲ್ಲಿ ಪಾರಮ್ಯ

ಬೋಫೋರ್ಸ್ ಗನ್‌ಗಳನ್ನು ಬಳಕೆಗೆ ತಂದದ್ದು ಕಾರ್ಗಿಲ್ ಯುದ್ಧದಲ್ಲಿ ವಿಜಯ ಭಾರತದ ಕಡೆ ತಿರುಗಲು ಪೂರಕವಾಗಿತ್ತು. ಭಾರತೀಯ ಸೇನೆಯ ದೃಢವಾದ ಬದ್ಧತೆ, ಅದರೊಡನೆ ಈ ಗನ್‌ಗಳ ಅಸಾಧಾರಣ ಸಾಮರ್ಥ್ಯಗಳು ಜೊತೆಯಾಗಿ ಪಾಕಿಸ್ತಾನಿ ನುಸುಳುಕೋರರು ಕಾರ್ಗಿಲ್ ಪ್ರದೇಶದ ಮೇಲುಗೈ ಹೊಂದುವ ಸ್ಥಳಗಳಿಂದ ಹಿಂದಕ್ಕೆ ಓಡುವಂತಾಯಿತು. ಬೋಫೋರ್ಸ್ ಫಿರಂಗಿಗಳ ಸತತ ಆರ್ಟಿಲರಿ ಬೆಂಬಲ ಭಾರತೀಯ ಪಡೆಗಳಿಗೆ ಅವಶ್ಯಕ ಬೆಂಬಲ ಒದಗಿಸಿ, ಭಾರತೀಯ ಪಡೆಗಳ ಸಾವುನೋವುಗಳನ್ನು ಅತ್ಯಂತ ಕಡಿಮೆಯಾಗಿಸಿತು. ಇದರಿಂದಾಗಿ, ಅಂತಿಮವಾಗಿ ವಿಜಯ ಭಾರತದ ಪಾಲಿಗೆ ಲಭಿಸಿತು.

ನಾವು ಕಾರ್ಗಿಲ್ ವಿಜಯ ದಿವಸವನ್ನು ಆಚರಿಸುವ ಸಂದರ್ಭದಲ್ಲಿ, ಭಾರತೀಯ ಸೇನಾಪಡೆಗಳ ಅಸಾಧಾರಣ ಶೌರ್ಯ ಮತ್ತು ಸಾಟಿಯಿಲ್ಲದ ತ್ಯಾಗಕ್ಕಾಗಿ ನಮನಗಳನ್ನು ಸಲ್ಲಿಸಬೇಕು. ಮಿರೇಜ್ 2000 ಯುದ್ಧ ವಿಮಾನ ಹಾಗೂ ಬೋಫೋರ್ಸ್ ಫಿರಂಗಿಗಳು ಕಾರ್ಗಿಲ್ ಯುದ್ಧದಲ್ಲಿ ನಮ್ಮ ಸೇನಾಪಡೆಗಳ ಅದಮ್ಯ ಚೈತನ್ಯ ಮತ್ತು ತಾಂತ್ರಿಕತೆಯ ಸಂಕೇತಗಳಾಗಿವೆ. ಅವುಗಳು ಒದಗಿಸಿದ ಸತತ ವಾಯು ಪಾರಮ್ಯ ಮತ್ತು ಆರ್ಟಿಲರಿ ಬೆಂಬಲಗಳು ಭಾರತದ ವಿಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದವು. ಅದರೊಡನೆ, ರಾಷ್ಟ್ರೀಯ ಭದ್ರತೆಯ ಮಹತ್ವವನ್ನೂ ಸಾರಿದ್ದವು. ಈ ದಿನದಂದು, ನಾವು ಭಾರತೀಯ ಪಡೆಗಳ ಮಿತಿಯಲ್ಲದ ಬದ್ಧತೆ ಮತ್ತು ದೇಶಕ್ಕಾಗಿ ನಡೆಸಿದ ತ್ಯಾಗವನ್ನು ಗೌರವಿಸೋಣ. ಭಾರತದ ಸಾರ್ವಭೌಮತ್ವವನ್ನು ರಕ್ಷಿಸುವ, ಶಾಂತಿ ಮತ್ತು ಒಗ್ಗಟ್ಟನ್ನು ಪ್ರದರ್ಶಿಸುವ ನಿಶ್ಚಯ ಕೈಗೊಳ್ಳೋಣ.

ಇದನ್ನೂ ಓದಿ: ನೀವು ಪೋಕೆಮಾನ್‌ ಪ್ರಿಯರೇ? ಹಾಗಾದ್ರೆ, ಈ ವಿಮಾನದಲ್ಲೇ ಅನುಭವಿಸಿ 'ಪೋಕೆಮಾನ್ ಏರ್ ಅಡ್ವೆಂಚರ್'

Latest Videos
Follow Us:
Download App:
  • android
  • ios