ಆತ್ಮನಿರ್ಭರ ಭಾರತ ಯೋಜನೆಗೆ ಹಿನ್ನಡೆ: ಚೀನಾ ಉತ್ಪನ್ನಗಳು ದೇಶಕ್ಕೆ ಅನಿವಾರ್ಯವಾ..?

ಇತ್ತೀಚೆಗೆ ಭಾರತ ಸರ್ಕಾರದ ಅನುದಾನಿತ ವಿಶ್ವವಿದ್ಯಾಲಯವೊಂದು ಸಂಶೋಧನೆಯೊಂದನ್ನು ಕೈಗೊಂಡು, ಅದರ ಪ್ರಕಾರ ಭಾರತದ ಆರ್ಥಿಕತೆಯಲ್ಲಿ ಹಲವು ಅಂಶಗಳು ಚೀನಾದಿಂದ ಆಮದು ಮಾಡಿಕೊಳ್ಳುವುದರ ಮೇಲೆ ಅವಲಂಬಿತವಾಗಿವೆ ಎಂದು ತಿಳಿಸಿದೆ. ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ, ಅತ್ಯಾಧುನಿಕ ಮಾದರಿಯಲ್ಲಿ ಸ್ವದೇಶೀ ಉತ್ಪಾದನೆ ಮತ್ತು ಸ್ವಾವಲಂಬನೆಯ ಸಾಧನೆಯ ಪ್ರಯತ್ನಗಳನ್ನು ಮತ್ತೊಮ್ಮೆ ಮರು ಅವಲೋಕಿಸುವಂತೆ ಸಲಹೆ ಮಾಡಲಾಗಿದೆ.

setback to atmanirbhar bharat chinese products are indispensable for many industries ash

(ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

(ಏಪ್ರಿಲ್ 15, 2023): ಇತ್ತೀಚೆಗೆ ಬಿಡುಗಡೆಯಾದ ವರದಿಯೊಂದು ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸುವ ಭಾರತದ ಪ್ರಯತ್ನಗಳ ಕುರಿತು ಪ್ರಶ್ನೆಗಳು ಮೂಡುವಂತೆ ಮಾಡಿದೆ. ಈ ವರದಿಯ ಪ್ರಕಾರ, ಚೀನಾದ ಉತ್ಪನ್ನಗಳು ವಿವಿಧ ಕ್ಷೇತ್ರಗಳಿಗೆ ಅತ್ಯಂತ ಮುಖ್ಯವಾದುದು ಮಾತ್ರವಲ್ಲದೆ, ಹಲವು ಸಂದರ್ಭಗಳಲ್ಲಿ ಭಾರತೀಯ ಉತ್ಪಾದಕರಿಗೆ ಚೀನಾದ ಕಚ್ಚಾವಸ್ತುಗಳು ಮೊದಲ ಆಯ್ಕೆಯಾಗಿವೆ. ಈ ರೀತಿಯಲ್ಲಿ ಅವಲೋಕಿಸಿದಾಗ, ಚೀನಾದೊಡನೆ ವ್ಯವಹಾರಗಳನ್ನು ಸ್ಥಗಿತಗೊಳಿಸುವುದು ಪ್ರಾಯೋಗಿಕವಾಗಿ ಸಾಧ್ಯವಿಲ್ಲ.

ಭಾರತ ಸರ್ಕಾರದ ಅನುದಾನಿತ, ನವದೆಹಲಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಫಾರೀನ್ ಟ್ರೇಡ್ ವಿಶ್ವವಿದ್ಯಾಲಯದ ಅಧ್ಯಯನದ ಪ್ರಕಾರ, ಚೀನಾದಿಂದ ಆಮದು ಹೆಚ್ಚಾದಂತೆ ಭಾರತದ ಉತ್ಪಾದನಾ ವಲಯ ಅಭಿವೃದ್ಧಿ ಹೊಂದಿದೆ ಮತ್ತು ಔಷಧ, ಅಜೈವಿಕ ರಾಸಾಯನಿಕಗಳು, ಕಬ್ಬಿಣ ಮತ್ತು ಉಕ್ಕಿನ ರಫ್ತುಗಳಲ್ಲೂ ಹೆಚ್ಚಳವಾಗಿದೆ. ಕಬ್ಬಿಣ ಮತ್ತು ಉಕ್ಕು ಹೊರತುಪಡಿಸಿ, ಇನ್ನಿತರ ಉದ್ಯಮಗಳಲ್ಲಿ ಉತ್ಪಾದನೆ ಹೆಚ್ಚಳ ಕಂಡಿದೆ.

ಇದನ್ನು ಓದಿ: ಸೋರಿಕೆಯಾದ ಅಮೆರಿಕದ ದಾಖಲೆಗಳಿಂದ ಹಲವು ದೇಶಗಳಿಗೆ ಕಳವಳ: ಬೇಹುಗಾರಿಕೆ ಮೇಲೆ ಗಂಭೀರ ಪರಿಣಾಮ..?

ಈ ವರದಿ ಭಾರತದ ಉದ್ಯಮಗಳಲ್ಲಿ ಚೀನಾದ ಉತ್ಪನ್ನಗಳ ಮಹತ್ವವನ್ನು ತಿಳಿಸುತ್ತದೆ. ಹಲವು ಸಂದರ್ಭಗಳಲ್ಲಿ ಈ ಉದ್ಯಮಗಳಿಗೆ ಚೀನಾದ ಉತ್ಪನ್ನಗಳು ಮಾತ್ರವೇ ಆಯ್ಕೆಯಾಗಿವೆ. ಅಥವಾ ಚೀನಾದ ಉತ್ಪನ್ನಗಳು ಮಾತ್ರವೇ ಕಡಿಮೆ ಬೆಲೆಗೆ ಲಭ್ಯವಾಗುತ್ತವೆ. ಆದ್ದರಿಂದ ಐಐಎಫ್‌ಟಿ ವರದಿ ಭಾರತವನ್ನು ಸ್ವಾವಲಂಬಿಯಾಗಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪ್ರಯತ್ನವನ್ನು ಮರುಪರಿಶೀಲಿಸುವ ಅಗತ್ಯವಿದೆ ಎನ್ನುತ್ತದೆ. 

ಐಐಎಫ್‌ಟಿ ಉಪನ್ಯಾಸಕರಾಗಿರುವ ಸುನೀತಾ ರಾಜು ಅವರ ಪ್ರಕಾರ, ಭಾರತದಲ್ಲಿ ಉತ್ಪಾದನಾ ವಲಯದಲ್ಲಿ ಸ್ವಾವಲಂಬನೆ ಸಾಧ್ಯವಾಗಬೇಕಾದರೆ ಭಾರತದ ದೇಶೀಯ ಉತ್ಪಾದನಾ ವಲಯ ಹೈ ಟೆಕ್ ಉತ್ಪನ್ನಗಳನ್ನು ನಿರ್ಮಿಸುವ ಸಾಮರ್ಥ್ಯ ಗಳಿಸಬೇಕು. ಒಂದು ವೇಳೆ ಅದು ಸಾಧ್ಯವಾದರೆ, ಭಾರತದ ರಫ್ತೂ ಸಹ ಹೆಚ್ಚಳ ಕಂಡು, ಹೆಚ್ಚುತ್ತಿರುವ ಆಮದು ಭಾರತದ ಹಾದಿಯಲ್ಲಿ ಮುಳ್ಳಾಗುವುದಿಲ್ಲ. ಸುನೀತಾ ರಾಜು ಅವರು ಭಾರತ ವ್ಯಾಪಾರ ನಿರ್ಬಂಧಗಳನ್ನು ಕಡಿಮೆಗೊಳಿಸಿ, ಭಾರತದ ದೇಶೀಯ ಉತ್ಪಾದನಾ ಸಾಮರ್ಥ್ಯಕ್ಕೆ ಉತ್ತೇಜನ ನೀಡುವಂತಹ ಆಮದಿಗೆ ಬೆಂಬಲ ನೀಡಬೇಕು ಎಂದಿದ್ದಾರೆ. ಇದು ಉತ್ಪಾದನಾ ವಲಯಕ್ಕೆ ಉತ್ತೇಜನ ನೀಡಿ, ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ.

ಇದನ್ನೂ ಓದಿ: ಮೈಸೂರು ಒಡೆಯರಿಂದ ರಾಜೀವ್ ಚಂದ್ರಶೇಖರ್ ತನಕ: ಡಕೋಟಾ ಡಿಸಿ 3 ಯುದ್ಧ ವಿಮಾನದ ಇತಿಹಾಸ ಹೀಗಿದೆ..

2020ರಲ್ಲಿ ಭಾರತ ಮತ್ತು ಚೀನಾದ ನಡುವೆ ನಡೆದ ಗಡಿ ಚಕಮಕಿಯ ಬಳಿಕ, ನವದೆಹಲಿ ಭಾರತದ ಆರ್ಥಿಕತೆಯನ್ನು ಚೀನಾದಿಂದ ದೂರ ಮಾಡಲು ಪ್ರಯತ್ನ ನಡೆಸುತ್ತಿದೆ. ಭಾರತ ಚೀನಾದ ಹೂಡಿಕೆಯನ್ನು ತಡೆಯಲು ಸಾಕಷ್ಟು ಕ್ರಮ ಕೈಗೊಂಡಿದ್ದು, ಚೀನಾದ ಸಂಸ್ಥೆಗಳು ಭಾರತದಲ್ಲಿ ವಿದ್ಯುತ್ ಹಾಗೂ ರೈಲ್ವೆಯಂತಹ ಪ್ರಮುಖ ಕ್ಷೇತ್ರಗಳಲ್ಲಿ ಪಾಲ್ಗೊಳ್ಳದಂತೆ ತಡೆದಿದೆ. ಜಗತ್ತಿನಾದ್ಯಂತ ಬಳಕೆಯಲ್ಲಿರುವ ಟಿಕ್ ಟಾಕ್ ಆ್ಯಪ್ ಸೇರಿದಂತೆ ಚೀನಾದ ಹಲವು ಮೊಬೈಲ್ ಅಪ್ಲಿಕೇಶನ್‌ಗಳನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಇವೆಲ್ಲ ಕ್ರಮಗಳ ಹೊರತಾಗಿಯೂ, ಭಾರತ - ಚೀನಾಗಳ ದ್ವಿಪಕ್ಷೀಯ ವ್ಯಾಪಾರ ದಾಖಲೆಯ ಹೆಚ್ಚಳ ಕಂಡಿತ್ತು. 2022ರಲ್ಲಿ ದ್ವಿಪಕ್ಷೀಯ ವಹಿವಾಟು ದಾಖಲೆಯ 135.98 ಬಿಲಿಯನ್ ಡಾಲರ್ ತಲುಪಿತ್ತು ಎಂದು ಚೀನಾದ ಕಸ್ಟಮ್ಸ್ ದಾಖಲೆಗಳು ತಿಳಿಸುತ್ತವೆ.

ಭಾರತದ ಒಟ್ಟಾರೆ ಆಮದಿನಲ್ಲಿ ಚೀನಾದ ಆಮದು ಪ್ರಮಾಣವೇ ನೂರು ಬಿಲಿಯನ್ ಡಾಲರ್‌ಗೂ ಹೆಚ್ಚಿದ್ದು, ದೆಹಲಿಗೆ ಕಳವಳದ ವಿಷಯವಾಗಿದೆ. ಜನವರಿ ತಿಂಗಳಲ್ಲಿ ಮೋದಿ ಸರ್ಕಾರ 18 ಪ್ರಮುಖ ಸಚಿವಾಲಯಗಳೊಡನೆ ಸಭೆ ಆಯೋಜಿಸಿ, ಚೀನಾದಿಂದ ನಡೆಸುತ್ತಿರುವ ಆಮದಿನ ಪ್ರಮಾಣವನ್ನು ಕಡಿಮೆಗೊಳಿಸುವ ಕುರಿತು ಚರ್ಚೆ ನಡೆಸಿತು.

ಇದನ್ನೂ ಓದಿ: ವಿನೂತನ ಸೂಪರ್‌ಸಾನಿಕ್ ಜೆಟ್ ಟ್ರೈನರ್ ವಿನ್ಯಾಸ ಪ್ರದರ್ಶಿಸಿದ ಎಚ್‌ಎಎಲ್‌

ಸಂಶೋಧನೆಯ ಪ್ರಕಾರ, ಚೀನಾದಿಂದ ಆಮದು ಮಾಡಿಕೊಳ್ಳುವ 32 ಉತ್ಪನ್ನಗಳ ಉಪ ವಿಭಾಗಗಳಲ್ಲಿ ಬಹುತೇಕ 33% ಉತ್ಪನ್ನಗಳು ಅತ್ಯಂತ ಕಡಿಮೆ ಬೆಲೆ ಹೊಂದಿದ್ದವು. ಆದರೆ ಇನ್ನುಳಿದ ಬಹುತೇಕ 70% ವಸ್ತುಗಳಲ್ಲಿ ಕಡಿಮೆ ಬೆಲೆಯ ಇನ್ನಿತರ ಉತ್ಪನ್ನಗಳಿದ್ದರೂ, ಚೀನಾದ ಉತ್ಪನ್ನಗಳು ಅತ್ಯುನ್ನತ ಆಯ್ಕೆಗಳಾಗಿದ್ದವು.

ಸುನಿತಾ ರಾಜು ಅವರು ಚೀನಾದ ವಸ್ತುಗಳು ಕಡಿಮೆ ಬೆಲೆಯವು ಎಂಬ ಕಾರಣಕ್ಕೆ ಅವುಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ ಎಂಬ ತಪ್ಪು ಗ್ರಹಿಕೆಗಳಿವೆ ಎನ್ನುತ್ತಾರೆ. ಚೀನಾದ ಉತ್ಪನ್ನಗಳ ಗುಣಮಟ್ಟ ಗ್ರಾಹಕರು ಎಷ್ಟು ಬೆಲೆ ತೆರಲು ಸಿದ್ಧರಿದ್ದಾರೆ ಎಂಬುದರ ಮೇಲೆ ಆಧಾರಿತವಾಗಿರುತ್ತದೆ. ಹಲವಾರು ದೇಶೀಯ ಗ್ರಾಹಕರು ಚೀನಾ ನಿರ್ಮಿತ ಉತ್ಪನ್ನಗಳು ಇತರ ದೇಶಗಳ ಉತ್ಪನ್ನಗಳಿಂದ ಉತ್ತಮವಾಗಿವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇದು ಮಾರುಕಟ್ಟೆಯನ್ನು ಇನ್ನಷ್ಟು ಜಟಿಲಗೊಳಿಸುತ್ತದೆ. ಯಾಕೆಂದರೆ 16 ಉತ್ಪನ್ನಗಳಿಗೆ ಕೇವಲ ಚೀನಾ ಮಾತ್ರವೇ ಮೂಲವಾಗಿದ್ದು, ಸ್ಥಳೀಯ ಗ್ರಾಹಕರಿಗೆ ಕನಿಷ್ಠ ಆಯ್ಕೆಗಳು ಲಭ್ಯವಿವೆ.

ಇದನ್ನೂ ಓದಿ: ಭಾರತದ ವೈಮಾನಿಕ, ರಕ್ಷಣಾ ಉದ್ಯಮಕ್ಕೆ ಕರ್ನಾಟಕವೇ ತವರು ಮನೆ..!

ಭಾರತ - ಚೀನಾ ವಾಣಿಜ್ಯ ಮಂಡಳಿಯ ಮುಖ್ಯಸ್ಥರಾದ ನರೇಶ್ ಗುಪ್ತಾ ಅವರ ಪ್ರಕಾರ, ಭಾರತದ ಆರ್ಥಿಕತೆಯ ಹಲವು ಅಂಶಗಳು ಚೀನಾದಿಂದ ನಡೆಸುವ ಆಮದಿನ ಮೇಲೆಯೇ ಅವಲಂಬಿತವಾಗಿವೆ. ಅದರಲ್ಲೂ ಔಷಧಿಯಂತಹ ಉದ್ಯಮಗಳು ಎಷ್ಟರ ಮಟ್ಟಿಗೆ ಚೀನಾದ ಮೇಲೆ ಅವಲಂಬಿತವಾಗಿವೆ ಎಂದರೆ, ಚೀನಾದ ಆಮದಿನ ಹೊರತಾಗಿ ಅವುಗಳು ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ. ಗುಪ್ತಾ ಅವರ ಪ್ರಕಾರ, ಔಷಧ ಉದ್ಯಮಕ್ಕೆ ಅಗತ್ಯವಿರುವ 60% ಮೂಲವಸ್ತುಗಳನ್ನು ಚೀನಾವೇ ಒದಗಿಸುತ್ತದೆ. ಅವುಗಳ ಆಮದಿನಲ್ಲಿ ಏನಾದರೂ ತಡವಾದರೆ, ಉತ್ಪಾದನಾ ಪ್ರಕ್ರಿಯೆಯೇ ಸ್ಥಗಿತಗೊಳ್ಳಬಹುದು.

ತಜ್ಞರ ಪ್ರಕಾರ ಟೆಲಿ ಕಮ್ಯುನಿಕೇಷನ್ ಉದ್ಯಮದ ಪರಿಸ್ಥಿತಿಯೂ ಅದೇ ರೀತಿಯಾಗಿದೆ. ಭಾರತದ ಟೆಲಿಕಾಮ್ ವಲಯದ ಹಿರಿಯರೊಬ್ಬರ ಪ್ರಕಾರ, ಉದ್ಯಮ ಚೀನಾದ ಮೇಲೆ ಸಾಕಷ್ಟು ಅವಲಂಬಿತವಾಗಿದೆ. ಮೊಬೈಲ್ ಫೋನ್‌ಗಳು ಭಾರತದಲ್ಲಿ ಉತ್ಪಾದನೆಯಾಗುತ್ತಿದ್ದರೂ, ಅವುಗಳಲ್ಲಿ ಬಳಕೆಯಾಗುವ ಬಹುತೇಕ ಉಪಕರಣಗಳು ಚೀನಾ ನಿರ್ಮಿತವಾಗಿವೆ. ಆದ್ದರಿಂದ ಮೊಬೈಲ್ ಫೋನ್‌ಗಳು ಭಾರತದಲ್ಲಿ ನಿರ್ಮಾಣವಾಗುವುದು ಎನ್ನುವುದಕ್ಕಿಂತ ಭಾರತದಲ್ಲಿ ಜೋಡಿಸಲ್ಪಡುತ್ತವೆ ಎನ್ನಬಹುದು.

ಇದನ್ನೂ ಓದಿ: ಕೊಡಗಿನ ವೀರ ಯೋಧರು: ದೇಶ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಕೊಡವರಿಗೊಂಡು ನಮನ

ಇತ್ತೀಚಿನ ಅಧ್ಯಯನದ ಪ್ರಕಾರ, ಭಾರತ ಚೀನಾದಿಂದ ಆಮದು ಮಾಡುವ ಹೆಚ್ಚಿನ ಉತ್ಪನ್ನಗಳು ಮಧ್ಯಮ ಹಾಗೂ ಕನಿಷ್ಠ ಮಟ್ಟದ ತಾಂತ್ರಿಕ ವರ್ಗಕ್ಕೆ ಸೇರುತ್ತವೆ. ಇದು ಭಾರತದ ಉತ್ಪಾದನಾ ಸಾಮರ್ಥ್ಯ ನಿರೀಕ್ಷಿತ ಮಟ್ಟದಲ್ಲಿಲ್ಲ ಎಂದು ಸೂಚಿಸುತ್ತದೆ. ಚೀನಾದಿಂದ ಆಮದು ತಡೆಗಟ್ಟಲು, ಒಂದೋ ಅವುಗಳನ್ನು ಬೇರೆ ದೇಶದಿಂದ ಆಮದು ಮಾಡಿಕೊಳ್ಳಬೇಕು, ಅಥವಾ ಅವುಗಳನ್ನು ಭಾರತ ದೇಶೀಯವಾಗಿ ಉತ್ಪಾದಿಸಬೇಕು. ಈ ಎರಡೂ ಆಯ್ಕೆಗಳ ಹೊರತಾಗಿ, ಪರಿಸ್ಥಿತಿ ನಿರ್ವಹಿಸಲು ಕಷ್ಟಕರವಾಗುತ್ತದೆ.

ಗುಪ್ತಾ ಹಾಗೂ ಸುನೀತಾ ರಾಜು ಅವರ ಪ್ರಕಾರ, ಮೋದಿ ಸರ್ಕಾರ 'ಸ್ವಾವಲಂಬಿ ಭಾರತ' ಎಂಬ ಪರಿಕಲ್ಪನೆಯ ಬದಲಿಗೆ, ರಫ್ತು ಆಧಾರಿತ ಉತ್ಪಾದನಾ ವಲಯವನ್ನು ಹೆಚ್ಚು ಪ್ರೋತ್ಸಾಹಿಸಬೇಕು. ಗುಪ್ತಾ ಅವರು ಸರ್ಕಾರ ಉದ್ಯಮಗಳು ಸುಲಭವಾಗಿ ಕಾರ್ಯ ನಿರ್ವಹಿಸಲು ಅನುಕೂಲವಾಗುವಂತಹ ಕ್ರಮಗಳಾದ ಸುಲಭವಾಗಿ ಭೂಮಿಯ ಪೂರೈಕೆ ಮತ್ತು ಕಡಿಮೆ ಬೆಲೆಯ ವಿದ್ಯುತ್ ವ್ಯವಸ್ಥೆ ಒದಗಿಸಬೇಕು ಎನ್ನುತ್ತಾರೆ.

ಇದನ್ನೂ ಓದಿ: ಕೇಂದ್ರ ಬಜೆಟ್ 2023-24: ರಕ್ಷಣಾ ವಲಯಕ್ಕೆ ಹೆಚ್ಚಿದ ಕೊಡುಗೆ; ಆಧುನೀಕರಣಕ್ಕೆ ಒತ್ತು..!

ಸುನೀತಾ ರಾಜು ಅವರ ಪ್ರಕಾರ, ಮೋದಿ ಸರ್ಕಾರ ತನ್ನ ನೀತಿಗಳನ್ನು ಮರುಪರಿಶೀಲನೆ ನಡೆಸುವ ಅಗತ್ಯವಿದೆ. ಭಾರತ ಕೇವಲ ದೇಶೀಯ ಮಾರುಕಟ್ಟೆಯ ಮೇಲೆ ಗಮನ ಹರಿಸುವ ಬದಲು, ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆ ಮಾಡಬೇಕು. ಸರ್ಕಾರ ಕೇವಲ ಬೃಹತ್ ವಿದೇಶೀ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡಬೇಕೆಂದು ಬಯಸುವ ಬದಲು, ಮೈಕ್ರೋ, ಸಣ್ಣ ಹಾಗೂ ಮಧ್ಯಮ ಗಾತ್ರದ ಸ್ಥಳೀಯ ಸಂಸ್ಥೆಗಳನ್ನೂ ಪಾಲ್ಗೊಳ್ಳುವಂತೆ ಮಾಡಬೇಕು. ಇದಕ್ಕಾಗಿ ಸ್ಥಳೀಯ ಉದ್ದಿಮೆಗಳು ದೇಶೀಯವಾಗಿ ಉತ್ಪಾದನೆ ನಡೆಸಲು ಸಾಧ್ಯವಾಗುವಂತೆ ಮಾಡಲು ಕ್ರಮ ಕೈಗೊಳ್ಳಬೇಕು.

ಇದನ್ನೂ ಓದಿ: ವರ್ಷ ಪೂರೈಸಿದ ಹತ್ಯಾಕಾಂಡ: ಉಕ್ರೇನ್‌ನಲ್ಲಿ ರಷ್ಯಾ ನಡೆಸಿದ ಯುದ್ಧದ ಪರಿಣಾಮವೇನು?

Latest Videos
Follow Us:
Download App:
  • android
  • ios