ಗಣಪತಿ ಹಬ್ಬದ ಮುನ್ನ ಮಹಾರಾಷ್ಟ್ರದ ಎಫ್‌ಡಿಎ, ಕರ್ನಾಟಕದ ಬೆಳಗಾವಿ ಮತ್ತು ಬಾಗಲಕೋಟೆಯಿಂದ ಸಾಗಿಸುತ್ತಿದ್ದ 4600 ಕೆ.ಜಿ. ಕಳಪೆ ಖೋವಾ ಮತ್ತು 12,500 ಕೆ.ಜಿ. ಪನೀರ್ ಅನ್ನು ವಶಪಡಿಸಿಕೊಂಡಿದೆ. ಈ ಕಾರ್ಯಾಚರಣೆಯಲ್ಲಿ ಸುಮಾರು 39 ಲಕ್ಷ ಮೌಲ್ಯದ ಆಹಾರೋತ್ಪನ್ನಗಳನ್ನು ಜಪ್ತಿ ಮಾಡಲಾಗಿದ್ದು, ನಕಲಿ ಪನೀರ್ ಮತ್ತು ಖೋವಾವನ್ನು ಪತ್ತೆ ಹಚ್ಚುವ ವಿಧಾನಗಳ ಬಗ್ಗೆಯೂ ಮಾಹಿತಿ ನೀಡಲಾಗಿದೆ.

ಪುಣೆ: ಗಣಪತಿ ಹಬ್ಬಕ್ಕೂ ಮುನ್ನ ಮಹಾರಾಷ್ಟ್ರದಲ್ಲಿ ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಕರ್ನಾಟಕದ ಬೆಳಗಾವಿ, ಬಾಗಲಕೋಟೆಯಿಂದ ಸಾಗಿಸಲಾಗುತ್ತಿದ್ದ ಕಳಪೆ ಗುಣಮಟ್ಟ ಹೊಂದಿದ್ದ 4600 ಕೆ.ಜಿ. ಖೋವಾ, 12,500 ಕೆ.ಜಿ ಪನೀರ್ ಅನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಹಬ್ಬದ ಹೊತ್ತಲ್ಲಿ ಬಯಲಾಯ್ತು 'ಸಿಹಿ' ರಹಸ್ಯ!

ಈ ಬಗ್ಗೆ 10-12 ದಿನಗಳಿಂದ ಪೊಲೀಸರು ಗುಪ್ತಚರ ಮಾಹಿತಿ ಕಲೆ ಹಾಕಿ ಕಾರ್ಯಾಚರಣೆಯನ್ನು ನಡೆಸಿ 39 ಲಕ್ಷ ರು. ಮೌಲ್ಯದ ಆಹಾರೋತ್ಪನ್ನಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಪೈಕಿ ಖೋವಾ ಸುಮಾರು 11.60 ಲಕ್ಷ ರು. ಮೌಲ್ಯದಾಗಿದ್ದು, ಅನೈರ್ಮಲ್ಯ ಸ್ಥಿತಿಯಲ್ಲಿ ಗೋಣಿ ಜಿಲ್ಲೆಗಳಲ್ಲಿ ಸಾಗಿಸಲಾಗುತ್ತಿತ್ತು, ಇನ್ನು ಎರಡು ವಾಹನಗಳಲ್ಲಿ ಸಾಗಿಸಲಾಗುತ್ತಿದ್ದ ವಿವಿಧ ಬಗೆಯ ಪನೀರ್‌ಗಳು ಜಪ್ತಿಯಾಗಿದ್ದು ಇದರ ಮೌಲ್ಯ, 27.83 ಲಕ್ಷ ರು. ಎಂದು ತಿಳಿದು ಬಂದಿದೆ. ಇವುಗಳನ್ನು ಬೆಳಗಾವಿ, ಬಾಗಲಕೋಟೆ ಸೇರಿದಂತೆ ಕರ್ನಾಟಕ ಗಡಿಯ ಕೆಲವು ಭಾಗಗಳಿಂದ ಸಾಗಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಸದ್ಯ ಅಧಿಕಾರಿಗಳು ಅವುಗಳ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.

ನಕಲಿ ಪನೀರ್, ಖೋವಾ ಪತ್ತೆ ಹಚ್ಚುವುದು ಹೇಗೆ?

ನಿಜವಾದ ಪನೀರ್ ಮೃದುವಾಗಿರುತ್ತದೆ. ಆದರೆ ನಕಲಿ ರಬ್ಬರ್‌ನಂತೆ ಹಿಗ್ಗುವಂತೆ ಭಾಸವಾಗುತ್ತದೆ. ಶುದ್ಧ ಪನೀರ್ ಹಗುರವಾದ ಸ್ವಚ್ಛವಾದ ಹಾಲಿನ ಪರಿಮಳವನ್ನು ಹೊಂದಿರುತ್ತದೆ. ದರೆ ಕಲಬೆರಕೆ ಮಾಡಿದ ಪನೀರ್ ಹುಳಿ ರಾಸಾಯನಿಕದಂತಹ ವಾಸನೆಯನ್ನು ಹೊಂದಿರುತ್ತದೆ. ಒಂದು ಸಣ್ಣ ಪನೀರ್ ಅನ್ನು ಕುದಿಸಿ, ಆ ಬಳಿಕ ತಣ್ಣಗಾಗಲು ಬಿಡಿ. ಕೆಲವು ಹನಿ ಅಯೋಡಿನ್ ದ್ರಾವಣ ಸೇರಿಸಿದರೆ, ಅದು ನೀಲಿ ಅಥವಾ ಕಪ್ಪು ಬಣಕ್ಕೆ ತಿರುಗಿದರೆ ಅದರಲ್ಲಿ ಪಿಷ್ಟವಿರುತ್ತದೆ. ಪ್ಯಾಕ್ ಮಾಡಲಾದ ಅನಲಾಗ್ ಪನೀರ್ ಅನ್ನು ಎಫ್‌ಎಸ್‌ಎಸ್‌ಎಐ ಲೇಬಲ್ ಪರಿಶೀಲನೆ ಮಾಡಿ.