ತೀವ್ರ ಹೊಟ್ಟೆನೋವಿನಿಂದ ಆಸ್ಪತ್ರೆಗೆ ದಾಖಲಾದ ಮಹಿಳೆಯೊಬ್ಬರ ಹೊಟ್ಟೆಯಿಂದ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ 14 ಪೆನ್ನುಗಳು, 5 ಚಮಚಗಳು ಹಾಗೂ ಒಂದು ಮೇಣದಬತ್ತಿಯನ್ನು ಹೊರತೆಗೆದಿದ್ದಾರೆ. ಆಂಧ್ರಪ್ರದೇಶದಲ್ಲಿ ನಡೆದ ಈ ಘಟನೆಗೆ, ಮಹಿಳೆ ಕಳೆದ 10 ವರ್ಷಗಳಿಂದ ಅನುಭವಿಸುತ್ತಿದ್ದ ಮಾನಸಿಕ ಖಿನ್ನತೆಯೇ ಕಾರಣ ಎಂದು ಶಂಕಿಸಲಾಗಿದೆ.
ಆಂಧ್ರಪ್ರದೇಶ: ತೀವ್ರ ಹೊಟ್ಟೆನೋವು ಮತ್ತು ಎದೆನೋವು ಎಂದು ಆಸ್ಪತ್ರೆಗೆ ದಾಖಲಾದ 33 ವರ್ಷದ ಮಹಿಳೆಯೊಬ್ಬರಿಗೆ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು, ಆಕೆಯ ಹೊಟ್ಟೆಯಲ್ಲಿದ್ದ ವಸ್ತುಗಳನ್ನು ನೋಡಿ ದಂಗಾಗಿ ಹೋಗಿದ್ದಾರೆ. ಮಹಿಳೆಯ ಹೊಟ್ಟೆಯಿಂದ ಬರೋಬ್ಬರಿ 14 ಪೆನ್ನುಗಳು, 5 ಮರದ ಚಮಚಗಳು (Spoons) ಹಾಗೂ ಒಂದು ಮೇಣದಬತ್ತಿಯನ್ನು ವೈದ್ಯರು ಯಶಸ್ವಿಯಾಗಿ ಹೊರತೆಗೆದಿದ್ದಾರೆ.
ಆಂಧ್ರಪ್ರದೇಶದ ಪಲ್ನಾಡು ಜಿಲ್ಲಾ ಕೇಂದ್ರವಾದ ನರಸರಾವ್ ಪೇಟೆಯ ಖಾಸಗಿ ಆಸ್ಪತ್ರೆಯಾದ 'ಮಾತಾಶ್ರೀ ಆಸ್ಪತ್ರೆ'ಯಲ್ಲಿ ಈ ಅಪರೂಪದ ಹಾಗೂ ಅಚ್ಚರಿಯ ಘಟನೆ ಬೆಳಕಿಗೆ ಬಂದಿದೆ.
ಆಸ್ಪತ್ರೆಗೆ ಬಂದಾಗ ಕಾದಿತ್ತು ಆಘಾತ:
ಪೆಟ್ಲೂರಿವಾರಿಪಾಲೆಂ ಗ್ರಾಮದ 33 ವರ್ಷದ ವಿವಾಹಿತ ಮಹಿಳೆಗೆ ಶನಿವಾರ ಇದ್ದಕ್ಕಿದ್ದಂತೆ ವಿಪರೀತ ಎದೆ ಮತ್ತು ಹೊಟ್ಟೆ ನೋವು ಕಾಣಿಸಿಕೊಂಡಿದೆ. ಗಾಬರಿಗೊಂಡ ಕುಟುಂಬಸ್ಥರು ಆಕೆಯನ್ನು ತಕ್ಷಣ ಮಾತಾಶ್ರೀ ಆಸ್ಪತ್ರೆಗೆ ಕರೆತಂದಿದ್ದಾರೆ. ಅಲ್ಲಿ ವೈದ್ಯರು ಸ್ಕ್ಯಾನಿಂಗ್ ಮತ್ತು ವಿವಿಧ ರೋಗನಿರ್ಣಯ ಪರೀಕ್ಷೆಗಳನ್ನು ನಡೆಸಿದಾಗ ಮಹಿಳೆಯ ಹೊಟ್ಟೆಯಲ್ಲಿ ಲೋಹ ಹಾಗೂ ಪ್ಲಾಸ್ಟಿಕ್ ವಸ್ತುಗಳು ಇರುವುದು ದೃಢಪಟ್ಟಿದೆ.
ಲ್ಯಾಪರೊಸ್ಕೋಪಿಕ್ ಸರ್ಜರಿ ಮೂಲಕ ವಸ್ತುಗಳ ಹೊರತೆಗೆತ:
ಸ್ಥಿತಿಯ ಗಂಭೀರತೆಯನ್ನು ಅರಿತ ಸರ್ಜಿಕಲ್ ಸ್ಪೆಷಲಿಸ್ಟ್ ಡಾ. ಪಿ. ರಾಮಚಂದ್ರ ರೆಡ್ಡಿ ನೇತೃತ್ವದ ವೈದ್ಯರ ತಂಡ ತಕ್ಷಣ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ ನಡೆಸಿದೆ. "ನಾವು ಶಸ್ತ್ರಚಿಕಿತ್ಸೆ ನಡೆಸಿ ಆಕೆಯ ಜಠರದಿಂದ 14 ಬಾಲ್‌ಪಾಯಿಂಟ್ ಪೆನ್ನುಗಳು, 5 ಸಣ್ಣ ಮರದ ಚಮಚಗಳು ಮತ್ತು ಒಂದು ಮೇಣದಬತ್ತಿಯನ್ನು ಸುರಕ್ಷಿತವಾಗಿ ಹೊರತೆಗೆದಿದ್ದೇವೆ. ಒಂದು ಪೆನ್ನಿನ ಮುಚ್ಚಳ (ಕ್ಯಾಪ್) ಇರಲಿಲ್ಲ. ಅದು ಹೊಟ್ಟೆಯ ಒಳಭಾಗವನ್ನು ಚುಚ್ಚಿ ಗಾಯಗೊಳಿಸಿದ್ದು, ಇದರಿಂದ ಆಕೆಗೆ ತೀವ್ರ ನೋವು ಕಾಣಿಸಿಕೊಂಡಿತ್ತು" ಎಂದು ಡಾ. ರೆಡ್ಡಿ ಮಾಧ್ಯಮಗಳಿಗೆ ವಿವರಿಸಿದ್ದಾರೆ. ಪ್ರಸ್ತುತ ಮಹಿಳೆ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.

ವಿಚಿತ್ರ ವರ್ತನೆಗೆ ಕಾರಣವೇನು?
ಇಷ್ಟೊಂದು ವಸ್ತುಗಳನ್ನು ಆಕೆ ಹೇಗೆ ಮತ್ತು ಯಾವಾಗ ನುಂಗಿದಳು ಎಂಬುದು ಆರಂಭದಲ್ಲಿ ನಿಗೂಢವಾಗಿತ್ತು. ಆದರೆ ಮಹಿಳೆಯ ತಂದೆ ನೋಮುಲ ಹನುಮಂತರಾವ್ ನೀಡಿದ ಮಾಹಿತಿ ಪ್ರಕಾರ, ಆಕೆ ಕಳೆದ 10 ವರ್ಷಗಳಿಂದ ತೀವ್ರ ಮಾನಸಿಕ ಖಿನ್ನತೆ ಹಾಗೂ ಅಸ್ವಸ್ಥತೆಯಿಂದ ಬಳಲುತ್ತಿದ್ದಳು. ಕೇವಲ ಎರಡು ತಿಂಗಳ ಹಿಂದಷ್ಟೇ ಆಕೆಯ ಪತಿ ವಿಚ್ಛೇದನ (ಡೈವೋರ್ಸ್) ನೀಡಿದ್ದರಿಂದ ಆಕೆ ಇನ್ನಷ್ಟು ತೀವ್ರ ಖಿನ್ನತೆಗೆ ಜಾರಿದ್ದು, ಈ ಹುಚ್ಚು ಸಾಹಸಕ್ಕೆ ಕೈಹಾಕಿರಬಹುದು ಎಂದು ಶಂಕಿಸಲಾಗಿದೆ.


