ಬ್ರಿಕ್ಸ್ ಸಂಘಟನೆಯ ನಿಯಮದ ಪ್ರಕಾರ.. ಯಾವುದೇ ನಿರ್ಧಾರ ಅಥವಾ ಜಂಟಿ ಘೋಷಣಾಪತ್ರ ಹೊರಬರಬೇಕಾದರೆ ಎಲ್ಲಾ ಸದಸ್ಯ ರಾಷ್ಟ್ರಗಳೂ ಅದನ್ನು ಸರ್ವಾನುಮತದಿಂದ (ಒಮ್ಮತದಿಂದ) ಒಪ್ಪಿಕೊಳ್ಳಬೇಕು. ಆದರೆ ಹೊಸ ಸದಸ್ಯರ ನಡುವಿನ ವೈಮನಸ್ಸು ಭಾರತಕ್ಕೆ ಕಗ್ಗಂಟಾಗಿ ಪರಿಣಮಿಸಿದೆ.

ನವದೆಹಲಿ: ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ‘ಬ್ರಿಕ್ಸ್’ (BRICS) ಶೃಂಗಸಭೆಯಲ್ಲಿ ಎಲ್ಲರ ಚಿತ್ತ ‘ಜಂಟಿ ಘೋಷಣಾಪತ್ರ’ದ (Joint Declaration) ಕಡೆ ನೆಟ್ಟಿದೆ. ಸಮ್ಮೇಳನದ ಕೊನೆಯಲ್ಲಿ ಎಲ್ಲಾ ಸದಸ್ಯ ರಾಷ್ಟ್ರಗಳು ಒಪ್ಪಿಕೊಳ್ಳುವ ಅಧಿಕೃತ ಜಂಟಿ ಹೇಳಿಕೆಯನ್ನು ಸಿದ್ಧಪಡಿಸಲು 11 ಸದಸ್ಯ ರಾಷ್ಟ್ರಗಳ ‘ಶೇರ್ಪಾ’ಗಳು (ಹಿರಿಯ ರಾಜತಾಂತ್ರಿಕ ಪ್ರತಿನಿಧಿಗಳು) ಹರಸಾಹಸ ಪಡುತ್ತಿದ್ದಾರೆ. ಇರಾನ್ ಮತ್ತು ಯುಎಇ ನಡುವಿನ ರಾಜಕೀಯ ಭಿನ್ನಾಭಿಪ್ರಾಯಗಳು ಈ ಒಮ್ಮತಕ್ಕೆ ದೊಡ್ಡ ತಡೆಗೋಡೆಯಾಗಿ ಪರಿಣಮಿಸಿದ್ದು, ಭಾರತದ ರಾಜತಾಂತ್ರಿಕತೆಗೆ ಅಗ್ನಿಪರೀಕ್ಷೆಯಾಗಿದೆ.

ಬ್ರಿಕ್ಸ್ ಸಂಘಟನೆಯ ನಿಯಮದ ಪ್ರಕಾರ.. ಯಾವುದೇ ನಿರ್ಧಾರ ಅಥವಾ ಜಂಟಿ ಘೋಷಣಾಪತ್ರ ಹೊರಬರಬೇಕಾದರೆ ಎಲ್ಲಾ ಸದಸ್ಯ ರಾಷ್ಟ್ರಗಳೂ ಅದನ್ನು ಸರ್ವಾನುಮತದಿಂದ (ಒಮ್ಮತದಿಂದ) ಒಪ್ಪಿಕೊಳ್ಳಬೇಕು. ಆದರೆ ಹೊಸ ಸದಸ್ಯರ ನಡುವಿನ ವೈಮನಸ್ಸು ಭಾರತಕ್ಕೆ ಕಗ್ಗಂಟಾಗಿ ಪರಿಣಮಿಸಿದೆ.

ಜಂಟಿ ಹೇಳಿಕೆಗೆ ಅಡ್ಡಿಯಾಗುತ್ತಿರುವುದೇನು?

ಬ್ರಿಕ್ಸ್ ಸಂಘಟನೆಗೆ ಇತ್ತೀಚೆಗಷ್ಟೇ ಪೂರ್ಣ ಪ್ರಮಾಣದ ಸದಸ್ಯರಾಗಿ ಸೇರ್ಪಡೆಗೊಂಡಿರುವ ಯುಎಇ (UAE), ಇರಾನ್ ಮತ್ತು ಸೌದಿ ಅರೇಬಿಯಾ ದೇಶಗಳ ನಡುವಿನ ಭಿನ್ನಾಭಿಪ್ರಾಯವೇ ಈ ಬಿಕ್ಕಟ್ಟಿಗೆ ಮೂಲ ಕಾರಣ. ಮುಖ್ಯವಾಗಿ ಇರಾನ್ ಮತ್ತು ಯುಎಇ ನಡುವೆ ಭಿನ್ನಾಭಿಪ್ರಾಯ ತಾರಕಕ್ಕೇರಿದೆ. ಅಮೆರಿಕ ಮತ್ತು ಇಸ್ರೇಲ್ ದಾಳಿಗಳಿಗೆ ಪ್ರತಿಯಾಗಿ, ಇರಾನ್ ಹಲವು ಬಾರಿ ಯುಎಇ ನೆಲದಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತ್ತು. ಈ ಪಶ್ಚಿಮ ಏಷ್ಯಾ (ಮಧ್ಯಪ್ರಾಚ್ಯ) ಬಿಕ್ಕಟ್ಟಿನ ವಿಷಯದಲ್ಲಿ ಎರಡೂ ದೇಶಗಳು ವಿರುದ್ಧ ನಿಲುವು ಹೊಂದಿದ್ದು, ಜಂಟಿ ಹೇಳಿಕೆಯಲ್ಲಿ ಯಾವ ದೇಶದ ಪರವಾಗಿ ಯಾವ ಅಂಶಗಳು ಸೇರ್ಪಡೆಯಾಗಬೇಕು ಎಂಬ ವಿಚಾರದಲ್ಲಿ ತೀವ್ರ ಹಗ್ಗಜಗ್ಗಾಟ ನಡೆಯುತ್ತಿದೆ.

ಒಮ್ಮತ ಮೂಡಿಸಲು ಭಾರತ, ರಷ್ಯಾ ತೀವ್ರ ಕಸರತ್ತು

ಇರಾನ್ ಮತ್ತು ಯುಎಇಯನ್ನು ಒಂದೇ ವೇದಿಕೆಗೆ ತಂದು ಒಪ್ಪಿಸಲು ಭಾರತದ ಜೊತೆಗೆ ರಷ್ಯಾ, ಬ್ರೆಜಿಲ್ ಮತ್ತು ಈಜಿಪ್ಟ್ ದೇಶಗಳ ಅಧಿಕಾರಿಗಳು ರಾತ್ರಿ-ಹಗಲು ಮಾತುಕತೆ ನಡೆಸುತ್ತಿದ್ದಾರೆ. ಎರಡೂ ದೇಶಗಳಿಗೂ ಆಕ್ಷೇಪವಿಲ್ಲದಂತಹ ಸಮತೋಲಿತ ಪದಗಳನ್ನು ಘೋಷಣಾಪತ್ರದಲ್ಲಿ ಬಳಸಲು ಶ್ರಮಿಸಲಾಗುತ್ತಿದೆ.

ರಷ್ಯಾ ಹೇಳಿದ್ದೇನು?

ಈ ಕುರಿತು ದೆಹಲಿಯಲ್ಲಿ ಮಾತನಾಡಿರುವ ರಷ್ಯಾದ ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಮಹತ್ವದ ಹೇಳಿಕೆ ನೀಡಿದ್ದಾರೆ. ಇರಾನ್ ಮತ್ತು ಯುಎಇಯ ರಾಜಕೀಯ ನಿಲುವುಗಳಲ್ಲಿ ಭಿನ್ನಾಭಿಪ್ರಾಯವಿರುವುದು ಸಹಜ. ಆದರೆ ರಷ್ಯಾದ ಮಿತ್ರ ರಾಷ್ಟ್ರಗಳಾಗಿರುವ ಈ ಎರಡೂ ದೇಶಗಳು ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲಿವೆ ಎಂಬ ನಂಬಿಕೆ ನಮಗಿದೆ. ಅಗತ್ಯವಿದ್ದರೆ ಇರಾನ್ ಮತ್ತು ಯುಎಇ ನಡುವಿನ ಬಾಂಧವ್ಯ ಸುಧಾರಿಸಲು ಮಧ್ಯಸ್ಥಿಕೆ ವಹಿಸಲು ರಷ್ಯಾ ಸಿದ್ಧವಿದೆ. ಘೋಷಣಾಪತ್ರದ ಕುರಿತು ನಡೆಯುತ್ತಿರುವ ಮಾತುಕತೆ ಸಕಾರಾತ್ಮಕವಾಗಿ ಮುಕ್ತಾಯಗೊಳ್ಳುವ ಆಶಯವಿದೆ. ಏಕೆಂದರೆ ಭಾರತದ ಬಳಿ ಅತ್ಯಂತ ಸಮರ್ಥ ಮತ್ತು ಚಾಣಾಕ್ಷ ರಾಜತಾಂತ್ರಿಕರಿದ್ದಾರೆ. ಎರಡೂ ದೇಶಗಳ ಹಿತಾಸಕ್ತಿಗೂ ಧಕ್ಕೆಯಾಗದಂತಹ ಸೂಕ್ತ ಭಾಷಾ ಶೈಲಿ ಹಾಗೂ ಪದಗಳನ್ನು ಭಾರತ ಕಂಡುಕೊಳ್ಳಲಿದೆ ಎಂದು ಪೆಸ್ಕೋವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇರಾನ್ ಮತ್ತು ಯುಎಇ ನಡುವಿನ ಈ ತಿಕ್ಕಾಟ ಹೊಸದೇನಲ್ಲ. ಇದೇ ವರ್ಷದ ಮೇ ತಿಂಗಳಲ್ಲಿ ನಡೆದಿದ್ದ ಬ್ರಿಕ್ಸ್ ವಿದೇಶಾಂಗ ಸಚಿವರ ಸಭೆಯಲ್ಲೂ ಪಶ್ಚಿಮ ಏಷ್ಯಾದ ಬಿಕ್ಕಟ್ಟಿನ ಕುರಿತು ಈ ಎರಡು ದೇಶಗಳ ನಡುವೆ ತೀವ್ರ ವಾಕ್ಸಮರ ನಡೆದಿತ್ತು. ಆ ಸಭೆಯಲ್ಲಿ ಉಭಯ ದೇಶಗಳ ಹಠಮಾರಿತನದಿಂದಾಗಿ ಸರ್ವಸಮ್ಮತ ‘ಜಂಟಿ ಹೇಳಿಕೆ’ ಬಿಡುಗಡೆ ಮಾಡಲು ಸಾಧ್ಯವಾಗಿರಲಿಲ್ಲ. ಕೊನೆಗೆ ಅಧ್ಯಕ್ಷತೆ ವಹಿಸಿದ್ದ ಭಾರತವು ಕೇವಲ ‘ಅಧ್ಯಕ್ಷೀಯ ಹೇಳಿಕೆ’ (Chair's Statement) ಮತ್ತು ಒಂದು ಕಾರ್ಯಫಲದ ದಾಖಲೆಯನ್ನು (Outcome Document) ಬಿಡುಗಡೆ ಮಾಡಿತ್ತು. ಅದರಲ್ಲಿ ಒಮ್ಮತ ಮೂಡದಿದ್ದ ಎರಡು ಪ್ರತ್ಯೇಕ ಪ್ಯಾರಾಗ್ರಾಫ್‌ಗಳನ್ನು ಪ್ರತ್ಯೇಕವಾಗಿ ನಮೂದಿಸಲಾಗಿತ್ತು.

ಈಗ ಅದೇ ಹಳೆಯ ಸಂಕಷ್ಟ ಮುಖ್ಯ ಶೃಂಗಸಭೆಯಲ್ಲೂ ಎದುರಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೆಹಲಿಯಲ್ಲಿ ನಡೆಯುತ್ತಿರುವ ಈ ಐತಿಹಾಸಿಕ ಸಭೆಯಲ್ಲಿ ಎಲ್ಲ 11 ರಾಷ್ಟ್ರಗಳನ್ನೂ ಒಪ್ಪಿಸಿ ಸರ್ವಸಮ್ಮತ ‘ನವದೆಹಲಿ ಜಂಟಿ ಘೋಷಣಾಪತ್ರ’ ಹೊರತರುವುದು ಭಾರತದ ರಾಜತಾಂತ್ರಿಕತೆಗೆ ಅತಿ ದೊಡ್ಡ ಪರೀಕ್ಷೆಯಾಗಿದೆ. ಇಂದು ಇರಾನ್ ಅಧ್ಯಕ್ಷರ ಜೊತೆ ಪ್ರಧಾನಿ ಮೋದಿ ಮಾತುಕತೆ ನಡೆಸಲಿದ್ದು, ಈ ಬಿಕ್ಕಟ್ಟಿಗೆ ಶಾಶ್ವತ ಪರಿಹಾರ ಸಿಗಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.