Silent Heart Attack: ಸೈಲೆಂಟ್ ಅಟ್ಯಾಕ್ ಬಗ್ಗೆ ನಿಮಗೆ ತಿಳಿದಿದೆಯೇ? ಈ ಸ್ಥಿತಿಯಲ್ಲಿ, ಒಬ್ಬ ವ್ಯಕ್ತಿಗೆ ತಾನು ಯಾವಾಗ ಸಾಯುತ್ತೇನೆಂದು ತಿಳಿದಿರುವುದಿಲ್ಲ. ನಿದ್ದೆಯಲ್ಲಿರುವಾಗಲೇ ಸಾಯುವ ಸ್ಥಿತಿಯನ್ನು ಸೈಲೆಂಟ್ ಅಟ್ಯಾಕ್ ಎನ್ನುತ್ತಾರೆ. ಈ ಸಮಸ್ಯೆ ಹಿಂದಿನ ಕಾರಣಗಳು ಏನು ಗೊತ್ತ? ಇಲ್ಲಿದೆ ಸಂಪೂರ್ಣ ಮಾಹಿತಿ.
ನಿದ್ದೆಯಲ್ಲಿ ಹಠಾತ್ ಸಾವು
ನಿದ್ದೆಯಲ್ಲಿ ಹಠಾತ್ ಸಾವು ಸಂಭವಿಸಿದ ಸುದ್ದಿ ಸದ್ದು ಮಾಡುತ್ತಿರುತ್ತದೆ. ಕೆಲವೊಮ್ಮೆ ವ್ಯಕ್ತಿಯೊಬ್ಬರು ರಾತ್ರಿ ಸಂಪೂರ್ಣವಾಗಿ ಸಾಮಾನ್ಯವಾಗಿಯೇ ಮಲಗಿರುತ್ತಾರೆ. ಆದರೆ ಬೆಳಗ್ಗೆ ಎದ್ದೇಳೋದೆ ಇಲ್ಲ. ಇದರ ಹಿಂದೆ ಹಲವು ಗಂಭೀರ ಆರೋಗ್ಯ ಸಮಸ್ಯೆಗಳು ಇರಬಹುದು. ಇವುಗಳಲ್ಲಿ ಸಡನ್ ಕಾರ್ಡಿಯಾಕ್ ಅರೆಸ್ಟ್, ಹಾರ್ಟ್ ಅಟ್ಯಾಕ್, ಸ್ಲೀಪ್ ಅಪ್ನಿಯಾ, ಸ್ಟ್ರೋಕ್ ಮತ್ತು ಕೆಲವು ಸಂದರ್ಭಗಳಲ್ಲಿ ಎಪಿಲೆಪ್ಸಿ (ಮೂರ್ಛೆ ರೋಗ) ಕೂಡ ಕಾರಣವಾಗಿರಬಹುದು.
ಸೈಲೆಂಟ್ ಹಾರ್ಟ್ ಅಟ್ಯಾಕ್ ಎಂದರೇನು?
ಸೈಲೆಂಟ್ ಹಾರ್ಟ್ ಅಟ್ಯಾಕ್ ವೈದ್ಯಕೀಯ ಭಾಷೆಯಲ್ಲಿ ಸೈಲೆಂಟ್ ಮೈಯೋಕಾರ್ಡಿಯಲ್ ಇನ್‌ಫಾರ್ಕ್ಷನ್ ಎಂದು ಕರೆಯಲಾಗುತ್ತದೆ. ಇದರಲ್ಲಿ ಹೃದಯದ ಸ್ನಾಯುಗಳಿಗೆ ರಕ್ತದ ಹರಿವು ಕಡಿಮೆಯಾಗಬಹುದು ಅಥವಾ ಸಂಪೂರ್ಣವಾಗಿ ನಿಂತುಹೋಗಬಹುದು. ಆದರೆ ಸಾಮಾನ್ಯ ಹಾರ್ಟ್ ಅಟ್ಯಾಕ್‌ನಲ್ಲಿ ಕಂಡುಬರುವ ತೀವ್ರ ಎದೆನೋವಿನಂತಹ ಲಕ್ಷಣಗಳು ಇಲ್ಲಿ ಕಾಣಿಸದೇ ಇರಬಹುದು. ಇದರಿಂದ ಹೃದಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದರೂ ವ್ಯಕ್ತಿಗೆ ಅದರ ಅರಿವೇ ಆಗದಿರಬಹುದು. ಕೆಲವೊಮ್ಮೆ ಎದೆಯಲ್ಲಿ ಸಣ್ಣ ಒತ್ತಡ, ಕಾರಣವಿಲ್ಲದೆ ಹೆಚ್ಚು ದಣಿವು, ಬೆವರು, ಉಸಿರಾಟದ ತೊಂದರೆ ಅಥವಾ ಅಸ್ವಸ್ಥತೆಯಂತಹ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಆದರೆ ಇವುಗಳನ್ನು ಹಲವರು ಸಾಮಾನ್ಯ ಸಮಸ್ಯೆ ಎಂದು ಭಾವಿಸಿ ನಿರ್ಲಕ್ಷಿಸುತ್ತಾರೆ.
ನಿದ್ದೆ ಮಾಡುವಾಗ ಅಪಾಯ ಏಕೆ ಹೆಚ್ಚಾಗುತ್ತದೆ?
ಒಬ್ಬ ವ್ಯಕ್ತಿಗೆ ಈಗಾಗಲೇ ಹೃದಯದ ಕಾಯಿಲೆ, ಅನಿಯಮಿತ ಹೃದಯ ಬಡಿತ ಅಥವಾ ಮತ್ತಾವುದೇ ಗಂಭೀರ ಆರೋಗ್ಯ ಸಮಸ್ಯೆ ಇದ್ದರೆ, ನಿದ್ದೆಯ ಸಮಯದಲ್ಲಿ ಅವರ ಸ್ಥಿತಿ ಹಠಾತ್ ಹದಗೆಡಬಹುದು. ಆಳವಾದ ನಿದ್ದೆಯಲ್ಲಿರುವುದರಿಂದ ವ್ಯಕ್ತಿಗೆ ಕೆಲವು ಲಕ್ಷಣಗಳು ಸರಿಯಾಗಿ ಅನುಭವವಾಗದೇ ಇರಬಹುದು. ಜೊತೆಗೆ ತಕ್ಷಣ ಸಹಾಯ ಪಡೆಯಲು ಸಾಧ್ಯವಾಗದೇ ಹೋಗಬಹುದು.
ಸಡನ್ ಕಾರ್ಡಿಯಾಕ್ ಅರೆಸ್ಟ್ ಕೂಡ ಕಾರಣವಾಗಬಹುದು
ಸಡನ್ ಕಾರ್ಡಿಯಾಕ್ ಅರೆಸ್ಟ್ ಸಂಭವಿಸಿದಾಗ ಹೃದಯದ ವಿದ್ಯುತ್ ಚಟುವಟಿಕೆಯಲ್ಲಿ ಹಠಾತ್ ಅಡಚಣೆ ಉಂಟಾಗುತ್ತದೆ. ಇದರಿಂದ ಹೃದಯವು ದೇಹಕ್ಕೆ ಪರಿಣಾಮಕಾರಿಯಾಗಿ ರಕ್ತವನ್ನು ಪಂಪ್ ಮಾಡುವುದನ್ನು ನಿಲ್ಲಿಸುತ್ತದೆ. ಇದು ಹಾರ್ಟ್ ಅಟ್ಯಾಕ್‌ಗಿಂತ ಭಿನ್ನವಾದ ಸ್ಥಿತಿ. ಆದರೆ ಕೆಲವೊಮ್ಮೆ ಹಾರ್ಟ್ ಅಟ್ಯಾಕ್ ಕಾರ್ಡಿಯಾಕ್ ಅರೆಸ್ಟ್‌ಗೆ ಕಾರಣವಾಗಬಹುದು. ಕೊರೊನರಿ ಆರ್ಟರಿ ಡಿಸೀಸ್, ಕೆಲವು ರೀತಿಯ ಅನಿಯಮಿತ ಹೃದಯ ಬಡಿತ ಮತ್ತು ಈಗಾಗಲೇ ಇರುವ ಹೃದಯ ಕಾಯಿಲೆಗಳು ಇದರ ಅಪಾಯವನ್ನು ಹೆಚ್ಚಿಸಬಹುದು.
ಸ್ಲೀಪ್ ಅಪ್ನಿಯಾವನ್ನು ನಿರ್ಲಕ್ಷಿಸಬೇಡಿ
ಆಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ (OSA) ಸಮಸ್ಯೆಯಲ್ಲಿ ವ್ಯಕ್ತಿ ನಿದ್ದೆ ಮಾಡುವಾಗ ಪದೇಪದೇ ಉಸಿರಾಟ ನಿಲ್ಲುತ್ತದೆ ಮತ್ತು ನಂತರ ಮತ್ತೆ ಆರಂಭವಾಗುತ್ತದೆ. ಇದರಿಂದ ದೇಹದಲ್ಲಿನ ಆಮ್ಲಜನಕದ ಮಟ್ಟದ ಮೇಲೆ ಪರಿಣಾಮ ಬೀಳಬಹುದು. ಹೃದಯ ಮತ್ತು ರಕ್ತದೊತ್ತಡದ ಮೇಲೂ ಹೆಚ್ಚುವರಿ ಒತ್ತಡ ಉಂಟಾಗಬಹುದು. ಜೋರಾಗಿ ಗೊರಕೆ ಹೊಡೆಯುವುದು, ನಿದ್ದೆಯಲ್ಲಿ ಉಸಿರು ನಿಲ್ಲುವುದು, ರಾತ್ರಿ ಪದೇಪದೇ ಗಾಬರಿಯಿಂದ ಎಚ್ಚರಗೊಳ್ಳುವುದು ಮತ್ತು ಹಗಲಿನಲ್ಲಿ ಅತಿಯಾದ ನಿದ್ದೆ ಬರುವುದು ಇದರ ಕೆಲವು ಲಕ್ಷಣಗಳಾಗಿರಬಹುದು. ಈ ಲಕ್ಷಣಗಳು ನಿರಂತರವಾಗಿ ಕಾಣಿಸಿಕೊಂಡರೆ ವೈದ್ಯರನ್ನು ಸಂಪರ್ಕಿಸಿ ತಪಾಸಣೆ ಮಾಡಿಸಿಕೊಳ್ಳುವುದು ಮುಖ್ಯ.
ಡಯಾಬಿಟಿಸ್ ಮತ್ತು ರಾತ್ರಿ ವೇಳೆ ಕಡಿಮೆಯಾಗುವ ಬ್ಲಡ್ ಶುಗರ್
ಇನ್ಸುಲಿನ್ ತೆಗೆದುಕೊಳ್ಳುವ ಕೆಲವು ಡಯಾಬಿಟಿಸ್ ರೋಗಿಗಳಲ್ಲಿ ರಾತ್ರಿ ವೇಳೆ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ತುಂಬಾ ಕಡಿಮೆಯಾಗಬಹುದು. ತೀವ್ರವಾದ ಹೈಪೋಗ್ಲೈಸೀಮಿಯಾ ಅಪಾಯಕಾರಿ ಪರಿಸ್ಥಿತಿಯನ್ನು ಉಂಟುಮಾಡಬಹುದು. ಹೀಗಾಗಿ ವೈದ್ಯರ ಸಲಹೆಯಿಲ್ಲದೆ ಔಷಧಿ ಅಥವಾ ಇನ್ಸುಲಿನ್‌ನ ಡೋಸ್ ಸ್ವತಃ ಬದಲಾಯಿಸಬಾರದು. ವೈದ್ಯರು ನೀಡಿರುವ ಸಲಹೆಯನ್ನು ಸರಿಯಾಗಿ ಪಾಲಿಸಬೇಕು.
ಎಪಿಲೆಪ್ಸಿಯಲ್ಲಿ SUDEP ಅಪಾಯ
ಎಪಿಲೆಪ್ಸಿ ಅಥವಾ ಮೂರ್ಛೆ ರೋಗದಿಂದ ಬಳಲುತ್ತಿರುವ ಕೆಲವು ವ್ಯಕ್ತಿಗಳಲ್ಲಿ Sudden Unexpected Death in Epilepsy (SUDEP) ಎಂಬ ಅಪಾಯವಿರುತ್ತದೆ. ಇದು ಅಪರೂಪವಾದರೂ ಗಂಭೀರ ಸ್ಥಿತಿಯಾಗಿದೆ. ಇದರ ಕೆಲವು ಪ್ರಕರಣಗಳು ನಿದ್ದೆಯ ಸಮಯದಲ್ಲಿ ಸಂಭವಿಸಬಹುದು. ಆದ್ದರಿಂದ ಔಷಧಿಗಳನ್ನು ಸರಿಯಾದ ಸಮಯಕ್ಕೆ ತೆಗೆದುಕೊಳ್ಳುವುದು ಮತ್ತು ನ್ಯೂರಾಲಜಿಸ್ಟ್‌ಗಳ ಸಲಹೆಯಂತೆ ನಿಯಮಿತವಾಗಿ ಫಾಲೋ-ಅಪ್ ಮಾಡಿಸಿಕೊಳ್ಳುವುದು ಬಹಳ ಮುಖ್ಯ. ಇದರ ಜೊತೆಗೆ ಹೈ ಬ್ಲಡ್ ಪ್ರೆಶರ್, ನಿಯಂತ್ರಣದಲ್ಲಿರದ ಡಯಾಬಿಟಿಸ್ ಮತ್ತು ರಕ್ತನಾಳಗಳಿಗೆ ಸಂಬಂಧಿಸಿದ ಇತರ ಸಮಸ್ಯೆಗಳು ಸ್ಟ್ರೋಕ್ ಅಪಾಯವನ್ನು ಹೆಚ್ಚಿಸಬಹುದು.
ಯಾವ ಕಾರಣಗಳಿಂದ ಅಪಾಯ ಹೆಚ್ಚಾಗಬಹುದು?
- ಧೂಮಪಾನ
- ಅತಿಯಾದ ಮದ್ಯಪಾನ
- ಬೊಜ್ಜು
- ಅಧಿಕ ರಕ್ತದೊತ್ತಡ
- ಅಧಿಕ ಕೊಲೆಸ್ಟ್ರಾಲ್
- ಡಯಾಬಿಟಿಸ್
- ದೈಹಿಕ ಚಟುವಟಿಕೆಯ ಕೊರತೆ
- ಅನಿಯಮಿತ ನಿದ್ರೆಯ ಸಮಯ
- ಈಗಾಗಲೇ ಇರುವ ಹೃದಯ ಅಥವಾ ಶ್ವಾಸಕೋಶದ ಕಾಯಿಲೆಗಳು


