heart health : ಹಬ್ಬಗಳೆಂದ್ರೆ ಡಿಜೆ, ಲೌಡ್ ಸ್ಪೀಕರ್ ಸಾಮಾನ್ಯ. ಆದ್ರೆ ಇದ್ರ ಬಳಕೆ ಮಿತಿ ಮೀರಿದ್ರೆ ಅಪಾಯ. ಅತಿಯಾದ ಶಬ್ಧಕ್ಕೂ ಹೃದಯಕ್ಕೂ ಏನು ಸಂಬಂಧ ಗೊತ್ತಾ?
ಭಾರತದಲ್ಲಿ ಹಬ್ಬಗಳ ಸಂಭ್ರಮ ಮನೆ ಮಾಡಿದೆ. ಸದ್ಯ ಗಣೇಶೋತ್ಸವದ ಖುಷಿಯಲ್ಲಿ ಜನರಿದ್ದಾರೆ. ಭಾರತದಲ್ಲಿ ಹಬ್ಬಗಳೆಂದ್ರೆ ಬರೀ ಪೂಜೆಯಲ್ಲ, ಅದೊಂದು ಉತ್ಸವ. ಅಲ್ಲಿಪೂಜೆ, ಉತ್ಸಾಹ, ಸಂಗೀತ, ಸಡಗರ ಮನೆ ಮಾಡಿರುತ್ತದೆ. ಹಬ್ಬದ ದಿನಗಳಲ್ಲಿ ಡಿಜೆ, ಲೌಡ್ಸ್ಪೀಕರ್, ಡೊಳ್ಳು, ಪಟಾಕಿಗಳ ಸದ್ದು ಸಾಮಾನ್ಯ. ಆದರೆ ಇದೇ ಶಬ್ದ ಕೆಲವೊಮ್ಮೆ ನಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ವಿಶೇಷವಾಗಿ ಅತಿಯಾದ ಮತ್ತು ದಿಢೀರ್ ಶಬ್ದ ಹೃದಯದ ಆರೋಗ್ಯದ ಮೇಲೆ ಒತ್ತಡವನ್ನುಂಟು ಮಾಡುತ್ತದೆ.
ಲೌಡ್ ಸ್ಪೀಕರ್ ಹೃದಯಕ್ಕೆ ಹಾನಿಕರ
ತಜ್ಞರ ಪ್ರಕಾರ, ಏಕಾಏಕಿ ಕೇಳಿಸುವ ದೊಡ್ಡ ಶಬ್ದ ದೇಹದಲ್ಲಿ ಒತ್ತಡದ ಪ್ರತಿಕ್ರಿಯೆ ಉಂಟು ಮಾಡುತ್ತದೆ. ಇಂತಹ ಸಂದರ್ಭಗಳಲ್ಲಿ ದೇಹ ಎಚ್ಚರಿಕೆಯ ಸ್ಥಿತಿಗೆ ಹೋಗುತ್ತದೆ. ಒತ್ತಡಕ್ಕೆ ಸಂಬಂಧಿಸಿದ ಹಾರ್ಮೋನ್ಗಳ ಪ್ರಮಾಣ ಹೆಚ್ಚಾಗುವುದರಿಂದ ಹೃದಯ ಬಡಿತ ವೇಗವಾಗುತ್ತದೆ. ಕೆಲವರಲ್ಲಿ ರಕ್ತದೊತ್ತಡವೂ ತಾತ್ಕಾಲಿಕವಾಗಿ ಏರಿಕೆಯಾಗುವ ಸಾಧ್ಯತೆ ಇದೆ.
ಹಬ್ಬದ ಸಂದರ್ಭದಲ್ಲಿ ಗಂಟೆಗಟ್ಟಲೆ ಅತಿಯಾದ ಶಬ್ದದ ನಡುವೆ ಇರಬೇಕಾದರೆ ದೇಹದ ಮೇಲಿನ ಒತ್ತಡ ಇನ್ನಷ್ಟು ಹೆಚ್ಚಾಗಬಹುದು. ಅದರಲ್ಲೂ ಹೈ ಬಿಪಿ, ಹೃದಯ ಸಂಬಂಧಿ ಸಮಸ್ಯೆ, ಹಾರ್ಟ್ ಫೇಲಿಯರ್ ಅಥವಾ ಹೃದಯ ಬಡಿತದಲ್ಲಿ ಅಸಹಜತೆ ಇರುವವರು ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಅತಿಯಾದ ಶಬ್ದ ಇಂತಹವರಲ್ಲಿ ಆತಂಕ ಮತ್ತು ಒತ್ತಡವನ್ನು ಹೆಚ್ಚಿಸಿ, ಹೃದಯದ ಕೆಲಸದ ಭಾರವನ್ನು ಹೆಚ್ಚಿಸಬಹುದು.
ಹಬ್ಬದ ದಿನಗಳಲ್ಲಿ ತಡರಾತ್ರಿಯವೆಗೂ ಜನರು ಸಂಭ್ರಮಾಚರಣೆಯಲ್ಲಿ ನಿರತರಾಗಿರ್ತಾರೆ. ಡಿಜೆ, ಲೌಡ್ಸ್ಪೀಕರ್ ಅಥವಾ ಪಟಾಕಿಗಳ ಸದ್ದು ಸಾಮಾನ್ಯವಾಗಿರುತ್ತದೆ. ಇದು ನಿದ್ರೆಯನ್ನು ಭಂಗಗೊಳಿಸುತ್ತದೆ. ಇದ್ರಿಂದ ಸರಿಯಾಗಿ ನಿದ್ರೆ ಆಗದೆ ದೇಹದ ಒತ್ತಡ ಹೆಚ್ಚಾಗುತ್ತದೆ. ಜೊತೆಗೆ ರಕ್ತದೊತ್ತಡ ಮತ್ತು ಒಟ್ಟಾರೆ ಹೃದಯ ಆರೋಗ್ಯದ ಮೇಲೂ ಇದು ಪರಿಣಾಮ ಬೀರುತ್ತದೆ. ಮಕ್ಕಳು, ವೃದ್ಧರು ಮತ್ತು ಈಗಾಗಲೇ ಆರೋಗ್ಯ ಸಮಸ್ಯೆ ಇರುವವರನ್ನು ಅತಿಯಾದ ಶಬ್ದದಿಂದ ಸಾಧ್ಯವಾದಷ್ಟು ದೂರ ಇಡುವುದು ಉತ್ತಮ. ಮನೆಯ ಸುತ್ತಮುತ್ತ ಶಬ್ದ ಹೆಚ್ಚಿದ್ದರೆ ಸ್ವಲ್ಪ ಸಮಯ ಶಾಂತವಾದ ಕೋಣೆಯಲ್ಲಿ ಕುಳಿತುಕೊಳ್ಳಿ.
ಹಬ್ಬದ ಸಂಭ್ರಮದಲ್ಲಿ ಸಂಗೀತ ಮತ್ತು ಉತ್ಸಾಹ ಇರಬೇಕು. ಆದರೆ ಶಬ್ದದ ಪ್ರಮಾಣದ ಮೇಲೂ ಗಮನ ಹರಿಸಬೇಕು. ಡಿಜೆ ಹಾಗೂ ಲೌಡ್ಸ್ಪೀಕರ್ಗಳ ಧ್ವನಿಯನ್ನು ಮಿತಿಯಲ್ಲಿ ಇಡುವುದು, ತಡರಾತ್ರಿ ಅತಿಯಾದ ಶಬ್ದ ತಪ್ಪಿಸುವುದು ಮತ್ತು ಹಿರಿಯರು, ಮಕ್ಕಳು, ಅಸ್ವಸ್ಥರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಮುಖ್ಯ.


