ಮಗು ತೂಕ ಏರ್ತಿಲ್ಲ ಅನ್ನೋ ಚಿಂತೆನಾ? ಈ ಆಹಾರ ನೀಡಿದ್ದೀರಾ?
ಮಗುವಿಗೆ ಒಂದು ವರ್ಷ ಆದ ತಕ್ಷಣ, ತಾಯಿ ಮಗುವಿನ ತೂಕ ಹೆಚ್ಚಿಸೋದು ಹೇಗೆ ಅನ್ನೋದರ ಬಗ್ಗೆ ಯೋಚನೆ ಮಾಡುತ್ತಾಳೆ. ಅಷ್ಟೇ ಅಲ್ಲ ಯಾವ ಆಹಾರ ತಿನ್ನುವ ಮೂಲಕ ಮಗುವಿನ ತೂಕವನ್ನು ಹೆಚ್ಚಿಸಬಹುದು ಎಂದು ಯೋಚಿಸುತ್ತಾಳೆ. ನೀವು ತಾಯಿಯಾಗಿದ್ದು, ಆ ಬಗ್ಗೆ ಯೋಚನೆ ಮಾಡುತ್ತಿದ್ದೀರಾ? ಒಂದು ವರ್ಷದ ಮಗುವಿನ ಬೆಳವಣಿಗೆಯು ವೇಗವಾಗಿರುತ್ತದೆ. ಆದುದರಿಂದ ನೀವು ಅದರ ಬೆಳವಣಿಗೆಯ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಇದಕ್ಕಾಗಿ, ಮಗುವಿಗೆ ಆರೋಗ್ಯಕರ ಮತ್ತು ಪೌಷ್ಟಿಕ ಆಹಾರವನ್ನ ನೀಡಬೇಕಾಗುತ್ತದೆ.
ಮಗುವಿನ ತೂಕ ಹೆಚ್ಚಿಸಲು ಏನು ಮಾಡಬಹುದು ಎಂದು ನೀವು ವೈದ್ಯರನ್ನು ಕೇಳಿದ್ರೆ ಖರ್ಜೂರ, ಬಾಳೆಹಣ್ಣು, ಹಣ್ಣುಗಳು, ಅಶ್ವಗಂಧ ಮತ್ತು ಕೆಂಪು ಅಕ್ಕಿಯನ್ನು ಸೇವಿಸಿ ಎಂದು ಸಲಹೆ ನೀಡಬಹುದು. ಆದರೆ ಪುಟಾಣಿ ಮಕ್ಕಳಿಗೆ ಇವುಗಳನ್ನು ಹೇಗೆ ನೀಡಬಹುದು ಎಂದು ನೀವು ಯೋಚನೆ ಮಾಡುತ್ತಿರಬಹುದು. ಈಗ, ಒಂದು ವರ್ಷದ ಮಗುವಿನ ಆಹಾರದಲ್ಲಿ(Baby Food) ನೀವು ಸೇರಿಸಬಹುದಾದ ಮತ್ತು ಮಗುವಿನ ತೂಕವನ್ನು ಹೆಚ್ಚಿಸಬಹುದಾದ ಇತರ ಕೆಲವು ಆಹಾರಗಳ ಬಗ್ಗೆ ಇಲ್ಲಿ ನಿಮಗಾಗಿ ಒಂದಿಷ್ಟು ಮಾಹಿತಿ ನೀಡುತ್ತೇವೆ…
ಬಾಳೆಹಣ್ಣು (Banana)
ಬಾಳೆಹಣ್ಣು ತೂಕ ಹೆಚ್ಚಳಕ್ಕೆ ಅತ್ಯುತ್ತಮ ಆಹಾರ. ಇದು ಪ್ರೋಟೀನ್ ಮತ್ತು ಫೈಬರ್ ನಿಂದ ಸಮೃದ್ಧವಾಗಿದೆ. ಬಾಳೆಹಣ್ಣನ್ನು ಶಿಶು ಆಹಾರ ಅಥವಾ ಪ್ಯೂರಿ ಅಥವಾ ಮ್ಯಾಶ್ ಮಾಡುವ ಮೂಲಕ ನೀವು ಮಗುವಿಗೆ ನೀಡಬಹುದು. ಇದರಿಂದ ತೂಕ ಹೆಚ್ಚಲು ಸಹಾಯವಾಗುತ್ತೆ.
ಖರ್ಜೂರ (Dates)
ಖರ್ಜೂರದ ಪ್ರಯೋಜನಗಳು ಹಲವಾರಿದೆ. ಇದು ತೂಕವನ್ನು ಹೆಚ್ಚಿಸುವುದರ ಜೊತೆಗೆ, ಹೊಟ್ಟೆಯನ್ನು ಸ್ವಚ್ಛವಾಗಿಡುತ್ತದೆ ಮತ್ತು ಹೊಟ್ಟೆಯಲ್ಲಿ ಹುಳುಗಳು ಕಾಣಿಸಿಕೊಳ್ಳುವುದನ್ನು ತಡೆಯುತ್ತದೆ. ಖರ್ಜೂರವು ಪೊಟ್ಯಾಸಿಯಮ್ ಹೊಂದಿದ್ದು, ಇದು ಮಗುವಿನ ಮೆದುಳಿನ ಬೆಳವಣಿಗೆಗೆ ಸಹಾಯ ಮಾಡುವ ಮೂಲಕ ಮಗುವಿನ ಬೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗಿದೆ.
ಅಶ್ವಗಂಧ(Ashwagandha)
ಅಶ್ವಗಂಧಕ್ಕೆ ಆಯುರ್ವೇದದಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಅಶ್ವಗಂಧವು ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ. ಅಶ್ವಗಂಧ ಪುಡಿಯು ಮಕ್ಕಳ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹ ಸಹಾಯ ಮಾಡುತ್ತೆ. ಇದನ್ನು ಮಕ್ಕಳಿಗೆ ನಿಯಮಿತವಾಗಿ ನೀಡಿದರೆ ಉತ್ತಮ.
ಆವಕಾಡೊ(Avocado)
ಆವಕಾಡೊ ಉತ್ತಮ ಪೋಷಕಾಂಶಗಳಿಂದ ತುಂಬಿರೋ ಆಹಾರವಾಗಿದೆ. 30 ಗ್ರಾಂ ಆವಕಾಡೊದಲ್ಲಿ 50 ಕ್ಯಾಲೋರಿಗಳು ಮತ್ತು 4.5 ಗ್ರಾಂ ಆರೋಗ್ಯಕರ ಕೊಬ್ಬು ಇರುತ್ತದೆ. ನೀವು ಮಗುವಿಗೆ ನೀಡುವ ಆಹಾರದಲ್ಲಿ ಆವಕಾಡೊ ಪ್ಯೂರಿಯನ್ನು ಸೇರಿಸಬಹುದು. ಈ ಹಣ್ಣನ್ನು ತಿನ್ನುವ ಮೂಲಕ, ಮಗುವು ಕೊಬ್ಬು, ವಿಟಮಿನ್ ಬಿ, ಕೆ, ಸಿ, ಇ ಮತ್ತು ಪೊಟ್ಯಾಸಿಯಮ್, ರಂಜಕ ಮತ್ತು ಸಿಲೇನಿಯಂನಂತಹ ಇತರ ಅನೇಕ ರೀತಿಯ ಪೋಷಕಾಂಶಗಳನ್ನು ಸಹ ಪಡೆಯುತ್ತದೆ.
ರಾಗಿ(Raagi)
ರಾಗಿ ಒಂದು ಸೂಪರ್ ಫುಡ್ ಅನ್ನೋದು ನಿಮಗೂ ಗೊತ್ತಿರುತ್ತೆ. ಒಂದು ವರ್ಷದ ಮಗುವಿನ ಆಹಾರದಲ್ಲಿ ರಾಗಿಯನ್ನು ಸೇರಿಸೋದು ಬೆಸ್ಟ್. ರಾಗಿಯು ಗೋಧಿ ಗಿಂತ 10 ಪಟ್ಟು ಹೆಚ್ಚು ಕ್ಯಾಲ್ಸಿಯಂ ಮತ್ತು ಒಂದು ಲೋಟ ಹಾಲಿಗಿಂತ 3 ಪಟ್ಟು ಹೆಚ್ಚು ಕ್ಯಾಲ್ಸಿಯಂ ಅನ್ನು ಹೊಂದಿರುತ್ತೆ. ರಾಗಿಯಲ್ಲಿ ಫೈಬರ್, ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿವೆ. ಇದು ಮಗುವಿನ ಆರೋಗ್ಯಕರ ಬೆಳವಣಿಗೆಗೆ ಉತ್ತಮವಾಗಿದೆ.
ಚಿಯಾ ಬೀಜಗಳು(Chia seeds)
ಇವುಗಳಲ್ಲಿ ಸಾಕಷ್ಟು ಪ್ರೋಟೀನ್, ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳಿವೆ. ಚಿಯಾ ಬೀಜಗಳು ತೂಕವನ್ನು ಹೆಚ್ಚಿಸಲು ಸಹಾಯಕವಾಗಿದೆ. ಚಿಯಾದ ಬೀಜಗಳನ್ನು ಅರೆದು ಪುಡಿ ಮಾಡಿ, ಅದರ ಪುಡಿಯನ್ನು ಶಿಶು ಆಹಾರದಲ್ಲಿ ಸೇರಿಸುವ ಮೂಲಕ ನೀವು ಮಗುವಿಗೆ ಉಣಿಸಬಹುದು. ಇದರಿಂದ ಮಗುವಿನ ತೂಕ ಹೆಚ್ಚಲು ಸಹಾಯವಾಗುತ್ತೆ.