'ನಾ ನಿನ್ನ ಬಿಡಲಾರೆ' ಸೀರಿಯಲ್‌ನ ಶರತ್, ಹೆಣ್ಣುಮಕ್ಕಳು ಸಮಾಜದಲ್ಲಿ ಎದುರಿಸುವ ದ್ವಂದ್ವ ನಿಲುವುಗಳು ಮತ್ತು ನೋವುಗಳ ಬಗ್ಗೆ ಮಾತನಾಡಿದ್ದಾರೆ. ಎತ್ತರ, ದಪ್ಪ, ಮದುವೆ, ಕೆಲಸ ಹೀಗೆ ಪ್ರತಿಯೊಂದು ವಿಷಯದಲ್ಲೂ ಮಹಿಳೆಯರನ್ನು ಹೇಗೆ ಟೀಕಿಸಲಾಗುತ್ತದೆ ಎಂಬುದನ್ನು ಅವರ ಮಾತುಗಳು ವಿವರಿಸುತ್ತವೆ. ಈ ಮಾತುಗಳು ಅನೇಕ ಮಹಿಳೆಯರ ಬದುಕಿನ ಕರಾಳ ಸತ್ಯವನ್ನು ತೆರೆದಿಟ್ಟಿವೆ.

ಹೆಣ್ಣು ಎಂದರೆ ಆಕೆಯನ್ನು ಹೊಗಳುವ ಮಾತುಗಳು ಅದೆಷ್ಟೋ. ಕ್ಷಮಯಾಧರಿತ್ರಿ, ಭೂಮಿ ತಾಯಿ, ದೇವತೆ... ಹಾಗೆ ಹೀಗೆ ಎಂದು ಆಕೆಯ ಮೇಲೆ ಕವನ ಕಟ್ಟುತ್ತಾರೆ, ಭಾಷಣ ಮಾಡುತ್ತಾರೆ. ಹೆಣ್ಣನ್ನು ಹಾಡಿ ಹೊಗಳುತ್ತಾರೆ. ಹೆಣ್ಣಿಗೆ ಹಿಂದೂ ಸಂಸ್ಕೃತಿಯಲ್ಲಿ ಇರುವಷ್ಟು ಉನ್ನತ ಸ್ಥಾನಮಾನ ಎಲ್ಲಿಯೂ ಇಲ್ಲ ಎಂದು ಕೊಂಡಾಡುತ್ತಾರೆ. ಅದೇ ವೇಳೆ ಏನೇ ಆದರೂ ಅದು ಹೆಣ್ಣಿನಿಂದಲೇ ಎನ್ನುತ್ತಾರೆ. ರಾಮಾಯಣ, ಮಹಾಭಾರತ... ಹೀಗೆ ಎಲ್ಲವೂ ನಡೆದದ್ದು ಹೆಣ್ಣಿನಿಂದಲೇ, ಹೆಣ್ಣಿನಿಂದಲೇ ಸೃಷ್ಟಿ, ಹೆಣ್ಣಿನಿಂದಲೇ ವಿನಾಶ... ಹೀಗೆ ಹೆಣ್ಣಿನ ಬಗ್ಗೆ ಪ್ಲಸ್​, ಮೈನಸ್​ ಎಲ್ಲವೂ ಇದದ್ದೇ. ಬೇರೆಯ ದೇಶ, ಬೇರೆಯ ಧರ್ಮಕ್ಕೆ ಹೋಲಿಸಿದರೆ ಭಾರತದಲ್ಲಿ ಅದರಲ್ಲಿಯೂ ಹಿಂದೂಗಳಲ್ಲಿ ಹೆಣ್ಣಿಗೆ ಇರುವ ಸ್ಥಾನಮಾನ ಉನ್ನತವಾಗಿರುವುದು ನಿಜವೇ. ಆಕೆಯನ್ನು ದೇವಿಯಾಗಿ ಪೂಜಿಸುವುದೂ ನಿಜವೇ.

Add Asianetnews Kannada as a Preferred SourcegooglePreferred

100% ಸತ್ಯ ಎನ್ನುವ ಕಮೆಂಟ್​ಗಳ ಸುರಿಮಳೆ

ಇವೆಲ್ಲವುಗಳ ಹೊರತಾಗಿ, ಸಾಮಾನ್ಯ ಜೀವನದಲ್ಲಿ ಹೆಣ್ಣಿನ ಸ್ಥಾನ ಹೇಗಿದೆ, ಬಹುತೇಕ ಹೆಣ್ಣುಮಕ್ಕಳು ಅನುಭವಿಸುತ್ತಿರುವ ನೋವುಗಳು ಹೇಗಿದೆ, ಎಲ್ಲರ ಮನೆಯಲ್ಲಿ ಅಲ್ಲದಿದ್ದರೂ, ಹೊರಗೆ ನಗುತ್ತಾ, ಒಳಗೆ ಕುದಿಯುತ್ತಿರುವ ಹೆಣ್ಣುಮಕ್ಕಳ ದಿನನಿತ್ಯದ ಜೀವನ, ಆಗುಹೋಗು, ಆಕೆಯ ಬದುಕಿನ ಕರಾಳ ಸತ್ಯವನ್ನು ತೆರೆದಿಟ್ಟಿರೋದು ನಾನಿನ್ನೆ ಬಿಡಲಾರೆ (Naa Ninna Bidalaare Serial) ಸೀರಿಯಲ್​ ಶರತ್​. ಶರತ್​ ಮಾತಿಗೆ 100% ಸತ್ಯ ಎನ್ನುವ ಕಮೆಂಟ್​ಗಳ ಸುರಿಮಳೆಯಾಗುತ್ತಿರುವುದು ನೋಡಿದರೆ, ಅದೆಷ್ಟು ಹೆಣ್ಣುಮಗಳು ಇದನ್ನೇ ತಮ್ಮ ಜೀವನದಲ್ಲಿ ಒಂದಿಲ್ಲೊಂದು ಸಂದರ್ಭಗಳಲ್ಲಿ ಅನುಭವಿಸಿದ್ದಾಳೆ ಎನ್ನುವುದು ತಿಳಿಯುತ್ತದೆ.

ಎತ್ತರವಿದ್ದರೆ, ಕುಳ್ಳಗಿದ್ದರೆ

ಅಷ್ಟಕ್ಕೂ ಶರತ್​ ಹೇಳಿದ್ದು ಏನೆಂದರೆ, ಎತ್ತರವಿದ್ದರೆ ನಿನಗೆ ಗಂಡು ಸಿಗುವುದಿಲ್ಲ ಸ್ವಲ್ಪ ಕುಳ್ಳಗೆ ಇರಬಾರದಿತ್ತಾ ಎನ್ನುತ್ತಾರೆ, ಕುಳ್ಳಗೆ ಇದ್ದರೆ ಕುಳ್ಳಿ, ಸ್ವಲ್ಪ ಎತ್ತರ ಇರಬೇಕಿತ್ತು ಎನ್ನುತ್ತಾರೆ. ದಪ್ಪ ಇದ್ದರೆ ಸಣ್ಣ ಆಗಬಾರದಾ ಎಂದೂ ಸಣ್ಣ ಇದ್ದರೆ ಇದೇನು ಇಷ್ಟು ಸಣ್ಣ ಇದ್ಯಾ, ದಪ್ಪ ಆಗಬಾರದಾ ಎನ್ನುತ್ತಾರೆ. ಕೆಲಸಕ್ಕೆ ಹೋಗ್ತೇನೆ ಎಂದರೆ ಹೆಚ್ಚು ಆ್ಯಂಬೀಷಿಯಸ್​ ಆಗ್ಬೇಡಾ, ಮನೆ ನೋಡಿಕೋ ಎನ್ನುತ್ತಾರೆ. ಮನೆಯಲ್ಲಿ ಇರ್ತೇನೆ ಎಂದರೆ ಸೋಮಾರಿ ರೀತಿ ಮನೆಯಲ್ಲಿ ಯಾಕೆ ಇದ್ಯಾ, ಸಾಧನೆ ಮಾಡು ಎನ್ನುತ್ತಾರೆ ಎಂದು ಶರತ್​ ಹೇಳಿದ್ದಾನೆ.

ಹಾಗಾದ್ರೂ ಕಷ್ಟ, ಹೀಗಾದ್ರೂ ಕಷ್ಟ...

ಬೇಗ ಮದುವೆಯಾದರೆ ಇಷ್ಟು ಬೇಗ ಯಾಕೆ ಆದಿ ಅಂತಾರೆ, ಲೇಟಾದ್ರೆ, ಏನೋ ದೋಷ ಇರಬೇಕು ವಯಸ್ಸಾಗಿ ಹೋಯ್ತು ಎನ್ನುತ್ತಾರೆ. ಬೆಳ್ಳಗಿದ್ದರೆ ಬಿಳಿ ಜಿರಲೆ ಅಂತಾರೆ, ಕಪ್ಪಗೆ ಇದ್ದರೆ ಇದ್ದಿಲು ಅಂತಾರೆ. ಈ ಸಮಾಜ ಹುಡುಗಿಯರಿಗೆ ಎಂಥ ರೂಲ್ಸ್​ ಇಟ್ಟಿದೆ ಗೊತ್ತಾ, ಹೆಣ್ಣಾದವಳು ಓದಬೇಕು, ಆದರೆ ಗಂಡಿಗಿಂತ ಜಾಸ್ತಿ ಓದಬಾರದು. ಗಂಡಿಗಿಂತ ಜಾಸ್ತಿ ಓದಿದ್ರೆ ಹೆಣ್ಣಿಗೆ ಅಹಂಕಾರ ಬರುತ್ತದೆ ಅಂತಾರೆ. ಬುದ್ಧಿವಂತಿಕೆ ಇರಬೇಕು ಆದರೆಅದನ್ನು ಮನೆಯಲ್ಲಿ ತೋರಿಸಬಾರದು. ಅಡುಗೆ ಮನೆಯಲ್ಲಿ ಮಾತ್ರ ತೋರಿಸಬೇಕು ಅಂತಾರೆ. ಹೆಣ್ಣು ಮನೆಯ ಕಳೆ, ಮಾತನಾಡುತ್ತಾ ಇರಬೇಕು ಅಂತಾರೆ. ಅದೇ ಹಕ್ಕಿನ ಬಗ್ಗೆ ಮಾತನಾಡಿದ್ರೆ ಗಂಡುಬೀರಿ, ಬಾಯಿ ಬಡಕಿ ಎನ್ನುತ್ತಾರೆ. ನಮಗೇ ಎದುರುತ್ತರ ಕೊಡ್ತಿಯಾ ಎನ್ನುತ್ತಾರೆ. ಸೈಲೆಂಟ್ ಆಗಿದ್ರೆ ದಡ್ಡಿ ಅಂತಾರೆ, ಪ್ರಶ್ನೆ ಮಾಡಿದ್ರೆ ಸಂಸ್ಕಾರ ಇಲ್ಲ ಎನ್ನುತ್ತಾರೆ ಎಂಬ ಶರತ್​ ಮಾತಿಗೆ ಹೆಣ್ಣುಮಕ್ಕಳು ನಿಜ ನಿಜ ಎನ್ನುತ್ತಿದ್ದಾರೆ.