ಪತಿ ಶವಕ್ಕಾಗಿ ಮಹಿಳೆಯರ ಕಿತ್ತಾಟ; ಅನಾಥವಾಯ್ತು ಇಬ್ಬರು ಹೆಂಡ್ತಿಯರ ಮುದ್ದಿನ ಗಂಡನ ಹೆಣ
ಶಿವಮೊಗ್ಗದಲ್ಲಿ, ಹನುಮಂತಪ್ಪ ಎಂಬವರ ಮರಣದ ನಂತರ ಅವರ ಶವಕ್ಕಾಗಿ ಇಬ್ಬರು ಪತ್ನಿಯರ ನಡುವೆ ಗಲಾಟೆ ನಡೆದಿದೆ. ಈ ಜಗಳ ಪೊಲೀಸ್ ಠಾಣೆಯ ಮೆಟ್ಟಿಲೇರಿ, ಕೊನೆಗೆ ಪೊಲೀಸರು ಮತ್ತು ಗ್ರಾಮಸ್ಥರ ಸಂಧಾನದ ಮೂಲಕ ಅಂತ್ಯಸಂಸ್ಕಾರವನ್ನು ಮೃತರ ಹುಟ್ಟೂರಿನಲ್ಲಿ ನಡೆಸಲು ಒಪ್ಪಿಗೆಯಾಯಿತು.

ಹೆಣಕ್ಕಾಗಿ ಗಲಾಟೆ
ಶಿವಮೊಗ್ಗ ಜಿಲ್ಲೆಯಲ್ಲಿ ಮಾನವೀಯ ಸಂಬಂಧಗಳ ನಡುವಿನ ವಿಚಿತ್ರ ಮತ್ತು ಸಂಕಟದ ಘಟನೆಯೊಂದು ನಡೆದಿದೆ. ಮೆಡಿಕಲ್ ರಿಪ್ರೆಸೆಂಟಿಟಿವ್ ಆಗಿ ಕೆಲಸ ಮಾಡುತ್ತಿದ್ದ 52 ವರ್ಷದ ಹನುಮಂತಪ್ಪ ಎಂಬವರು ಅನಾರೋಗ್ಯದಿಂದ ನಿಧನರಾದ ಬೆನ್ನಲ್ಲೇ, ಅವರ ಶವಕ್ಕಾಗಿ ಇಬ್ಬರು ಪತ್ನಿಯರ ನಡುವೆ ಗಲಾಟೆ ನಡೆದಿದೆ.
ಇಬ್ಬರು ಪತ್ನಿಯರ ಮುದ್ದಿನ ಗಂಡ ಹನುಮಂತಪ್ಪ
ಮೃತ ಹನುಮಂತಪ್ಪ ಅವರಿಗೆ ಕಮಲಮ್ಮ ಎಂಬ ಮೊದಲ ಪತ್ನಿಯಾಗಿದ್ದು, ಪ್ರತಿಭಾ ಎಂಬ ಎರಡನೇ ಪತ್ನಿಯಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಬ್ರೈನ್ ಸ್ಟ್ರೋಕ್ ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದ ಹನುಮಂತಪ್ಪ , ಎರಡನೇ ಪತ್ನಿ ಪ್ರತಿಭಾ ಅವರೊಂದಿಗೆ ವಾಸವಿದ್ದರು.
ಶವಕ್ಕಾಗಿ ಇಬ್ಬರ ನಡುವೆ ಜಗಳ
ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ ನಂತರ, ಶವಕ್ಕಾಗಿ ಇಬ್ಬರು ಪತ್ನಿಯರ ನಡುವೆ ಜಗಳ ಆರಂಭವಾಯಿತು. "ನಾನೇ ಕಾನೂನುಬದ್ಧ ಪತ್ನಿ, ಶವ ನನ್ನ ವಶಕ್ಕೆ ಬೇಕು" ಎಂದು ಕಮಲಮ್ಮ ಪಟ್ಟು ಹಿಡಿದರೆ, ಅಂತಿಮ ದಿನಗಳಲ್ಲಿ ಹನುಮಂತಪ್ಪ ತಮ್ಮೊಂದಿಗಿದ್ದರು ಎಂದು ಪ್ರತಿಭಾ ವಾದಿಸಿದ್ದರು.
ಪೊಲೀಸ್ ಠಾಣೆಯ ಮೆಟ್ಟಿಲೇರಿದ ಜಗಳ
ಈ ಕಿತ್ತಾಟ ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಯ ಮೆಟ್ಟಿಲೇರಿತು. ಗ್ರಾಮಸ್ಥರು ಮತ್ತು ಸಂಬಂಧಿಕರ ಸಮ್ಮುಖದಲ್ಲಿ ದೊಡ್ಡ ಮಟ್ಟದ ವಾಗ್ವಾದಗಳೇ ನಡೆದವು. ಶವಸಂಸ್ಕಾರ ಎಲ್ಲಿ ನಡೆಯಬೇಕು ಎಂಬ ಬಗ್ಗೆಯೂ ಗೊಂದಲ ಏರ್ಪಟ್ಟಿತ್ತು. ಒಬ್ಬರಿಗೆ ಪುರಲೆ ಗ್ರಾಮದಲ್ಲಿ ಅಂತ್ಯಸಂಸ್ಕಾರವಾಗಬೇಕೆಂಬ ಆಸೆ ಇತ್ತು, ಇನ್ನೊಬ್ಬರಿಗೆ ರೋಟರಿ ಚಿತಾಗಾರದಲ್ಲಿ ಸಂಸ್ಕಾರ ಮಾಡುವ ಇಚ್ಛೆ ಇತ್ತು.
ಇದನ್ನೂ ಓದಿ: Shivamogga: ನಾನ್‌ವೆಜ್ ತಿನ್ನೋವಾಗ ಗಂಟಲಿನಲ್ಲಿ ಮೂಳೆ ಸಿಲುಕಿ ಪ್ರಾಣಬಿಟ್ಟ 21 ವರ್ಷದ ಯುವಕ
ಅನಾಥವಾಗಿದ್ದ ಶವಕ್ಕೆ ಮುಕ್ತಿ
ಪೊಲೀಸರು ಮತ್ತು ಗ್ರಾಮಸ್ಥರ ಸುದೀರ್ಘ ಸಂಧಾನದ ನಂತರ, ಕೊನೆಗೂ ಇಬ್ಬರು ಪತ್ನಿಯರು ಒಮ್ಮತಕ್ಕೆ ಬಂದರು. ಇಬ್ಬರೂ ಪತ್ನಿಯರು ಮೃತದೇಹಕ್ಕೆ ಪೂಜೆ ಸಲ್ಲಿಸಿದ ನಂತರ, ಹನುಮಂತಪ್ಪ ಅವರ ಹುಟ್ಟೂರಾದ ಬೇಡರ ಹೊಸಹಳ್ಳಿ ಗ್ರಾಮದಲ್ಲಿಯೇ ಸಕಲ ವಿಧಿವಿಧಾನಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ನಿರ್ಧರಿಸಲಾಯಿತು. ಈ ಮೂಲಕ ಎರಡು ದಿನಗಳಿಂದ ಶವಾಗಾರದಲ್ಲಿ ಅನಾಥವಾಗಿದ್ದ ಶವಕ್ಕೆ ಮುಕ್ತಿ ಸಿಕ್ಕಂತಾಗಿದೆ.
ಇದನ್ನೂ ಓದಿ: ಗಂಡ ಸತ್ತ ಮೇಲೆ ಮಹಿಳೆಯರು ಹೂ ಮುಡಿಬಾರದಾ? ಏನಿದು ಆಚರಣೆ? ಈ ನಂಬಿಕೆ ಎಷ್ಟು ಸರಿ?
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

