16281/16282: ಮೈಸೂರು-ಅಜ್ಮೀರ್ ನಡುವೆ ಹೊಸ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಆರಂಭ
ಮೈಸೂರು-ಅಜ್ಮೀರ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (16281/16282) ಸೆಪ್ಟೆಂಬರ್ 5 ರಿಂದ ಕಾರ್ಯಾಚರಣೆಯನ್ನು ಆರಂಭಿಸಲಿದೆ. ಈ ರೈಲು ದಕ್ಷಿಣ, ಮಧ್ಯ ಮತ್ತು ಉತ್ತರ ಕರ್ನಾಟಕದ ಪ್ರಮುಖ ನಗರಗಳಾದ ಹಾಸನ, ಹುಬ್ಬಳ್ಳಿ, ಬೆಳಗಾವಿ ಮೂಲಕ ಹಾದುಹೋಗಿ, ಮಹಾರಾಷ್ಟ್ರ, ಗುಜರಾತ್ ಮಾರ್ಗವಾಗಿ ಅಜ್ಮೀರ್ ತಲುಪಲಿದೆ.

ಮೈಸೂರು-ಅಜ್ಮೀರ್ ಎಕ್ಸ್‌ಪ್ರೆಸ್ ಕಾರ್ಯಾಚರಣೆ
ಇದೇ ತಿಂಗಳು ಮೈಸೂರು-ಅಜ್ಮೀರ್ ಎಕ್ಸ್‌ಪ್ರೆಸ್ ಕಾರ್ಯಾಚರಣೆಯನ್ನು ಮಾಡಲಿದೆ. ಈ ರೈಲು ಬೆಳಗ್ಗೆ 8 ಗಂಟೆಗೆ ಮೈಸೂರಿನಿಂದ ತನ್ನ ಪ್ರಯಾಣವನ್ನು ಆರಂಭಿಸುತ್ತದೆ. ಮೈಸೂರಿನಿಂದ ಪ್ರಯಾಣ ಆರಂಭಿಸಿ ಹಾಸನ, ದಾವಣಗೆರೆ, ಕೊಟ್ಟೂರು, ಕೊಪ್ಪಳ, ಗದಗ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಲೋಂಡಾ, ಲೋನಾಬಾಲಾ, ಕಲ್ಯಾಣ, ವಾಸಿ, ಸೂರತ್, ವಡೋದರಾ ಮಾರ್ಗವಾಗಿ ಅಜ್ಮೀರ್ ನಿಲ್ದಾಣ ತಲುಪುತ್ತದೆ. ಮೈಸೂರು, ಹಾಸನ ನಗರದಿಂದ ಉತ್ತರ ಕರ್ನಾಟಕದ ಕೊಪ್ಪಳ, ಗದಗ, ಧಾರವಾಡ, ಬೆಳಗಾವಿಗೆ ಹಗಲು ಪ್ರಯಾಣಿಕರಿಗೆ ಈ ರೈಲು ಸೂಕ್ತವಾಗಿದೆ
ರೈಲು ಸಂಖ್ಯೆ 16281/16282
ಸೆಪ್ಟೆಂಬರ್ 5ರಂದು ಮೈಸೂರಿನಿಂದ ತನ್ನ ಮೊದಲ ಕಾರ್ಯಚರಣೆಯನ್ನು ಆರಂಭಿಸಲಿದೆ. ಸೆಪ್ಟೆಂಬರ್ 7ರಂದು ಸಂಜೆ 6.30ಕ್ಕೆ ಅಜ್ಮೀರ್ ನಿಲ್ದಾಣದಿಂದ ಪ್ರಯಾಣ ಆರಂಭಿಸುವ ಈ ರೈಲು 48 ಗಂಟೆಗಳ ಬಳಿಕ ಸಂಜೆ 7 ಗಂಟೆಗೆ ಮೈಸೂರು ತಲುಪುತ್ತದೆ.
ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು
ಭಾರತೀಯ ರೈಲ್ವೆ ನೀಡಿರುವ ಮಾಹಿತಿ ಪ್ರಕಾರ, ಈ ರೈಲು ವಾರಕ್ಕೊಮ್ಮೆ ಮಾತ್ರ ಸಂಚರಿಸಲಿದೆ. ಮೊದಲು ಈ ರೈಲು ಸಂಖ್ಯೆ 06218/06282 ಆಗಿತ್ತು. ಈಗ ಇದನ್ನು 16281/16282 ಮಾಡಿ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಸೇವೆಯಾಗಿ ಬದಲಾಯಿಸಲಾಗಿದೆ.
ದಕ್ಷಿಣ, ಮಧ್ಯ ಮತ್ತು ಉತ್ತರ ಕರ್ನಾಟಕ
ಈ ರೈಲು ಕರ್ನಾಟಕದ 15ಕ್ಕೂ ಅಧಿಕ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆಯನ್ನು ಹೊಂದಿದೆ. ದಕ್ಷಿಣ, ಮಧ್ಯ ಮತ್ತು ಉತ್ತರ ಕರ್ನಾಟಕವನ್ನು ಈ ರೈಲು ಸಂಪರ್ಕಿಸುತ್ತದೆ. ಇದರ ಜೊತೆ ಗೋವಾ, ಮಹಾರಾಷ್ಟ್ರ, ರಾಜಸ್ಥಾನ, ಗುಜರಾತ್ ರಾಜ್ಯಗಳಲ್ಲಿ ಮೈಸೂರು-ಅಜ್ಮೀರ್ ಎಕ್ಸ್‌ಪ್ರೆಸ್ ಸಂಚರಿಸಲಿದೆ.
ಮೈಸೂರು-ಅಜ್ಮೀರ್ ಎಕ್ಸ್‌ಪ್ರೆಸ್ ವಿಶೇಷ ರೈಲು
ಮೈಸೂರು-ಅಜ್ಮೀರ್ ಎಕ್ಸ್‌ಪ್ರೆಸ್ ವಿಶೇಷ ರೈಲನ್ನು (ರೈಲು ಸಂಖ್ಯೆ 06281/06282) ಕ್ರಮಬದ್ಧಗೊಳಿಸಲಾಗಿದ್ದು, ಈ ರೈಲು ಈಗ ಸಾಪ್ತಾಹಿಕ ಎಕ್ಸಪ್ರೆಸ್ (Weekly Express) ರೈಲಾಗಿ ಕಾರ್ಯನಿರ್ವಹಿಸಲಿದೆ. ಕ್ರಮಬದ್ಧಗೊಳಿಸಲಾದ ಈ ರೈಲು ಸೆಪ್ಟೆಂಬರ್ 5, 2026 ರ ಶನಿವಾರದಂದು ಬೆಳಿಗ್ಗೆ 08:00 ಗೆ ಮೈಸೂರು ಜಂಕ್ಷನ್‌ನಿಂದ ರೈಲು ಹೊರಡಲಿದೆ ಮತ್ತು ಸೆಪ್ಟೆಂಬರ್ 7, 2026 ರ ಸೋಮವಾರದಂದು ಅಜ್ಮೀರ್‌ನಿಂದ ಸಂಜೆ 06:30 ಕ್ಕೆ ರೈಲು ಹೊರಡಲಿದೆ. ಸಾರ್ವಜನಿಕರು ಈ ರೈಲಿನ ಸೇವೆಯನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಎಂದು ಕೇಂದ್ರ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

