ಇವನ್ನೆಲ್ಲಾ ಸ್ಟೀಲ್ ಪಾತ್ರೆಯಲ್ಲಿ ಹಾಕಿಡಬೇಡಿ.. ರುಚಿ, ಪರಿಮಳ ಇರಲ್ಲ, ಆರೋಗ್ಯನೂ ಹಾಳಾಗುತ್ತೆ!
Food Storage Mistakes: ಸ್ಟೀಲ್ ಪಾತ್ರೆಗಳು ಜನಪ್ರಿಯವಾಗಿದ್ದರೂ ಕೆಲವು ಆಹಾರ ಪದಾರ್ಥಗಳನ್ನು ಅದರಲ್ಲಿ ಸಂಗ್ರಹಿಸುವುದು ಅಪಾಯಕಾರಿ. ಈ ಕೆಳಕಂಡ ಪದಾರ್ಥಗಳು ಸ್ಟೀಲ್‌ನೊಂದಿಗೆ ರಾಸಾಯನಿಕವಾಗಿ ಪ್ರತಿಕ್ರಿಯಿಸಿ, ರುಚಿ ಹಾಳುಮಾಡುವುದಲ್ಲದೆ ಆರೋಗ್ಯಕ್ಕೂ ಹಾನಿಯುಂಟುಮಾಡಬಹುದು.

ನಿಮ್ಮ ಆರೋಗ್ಯಕ್ಕೂ ಅಪಾಯ
ಇತ್ತೀಚಿನ ದಿನಗಳಲ್ಲಿ ಸ್ಟೀಲ್ ಪಾತ್ರೆ ಅಥವಾ ಬಾಕ್ಸ್‌ಗಳಿಗೆ ಭಾರೀ ಡಿಮ್ಯಾಂಡ್. ಟಿಫಿನ್ ಬಾಕ್ಸ್‌ಗೆ, ಮನೆಯಲ್ಲಿ ಧಾನ್ಯಗಳನ್ನ ಸಂಗ್ರಹಿಸಲು ಹೀಗೆ ಎಲ್ಲದಕ್ಕೂ ಸ್ಟೀಲ್ ಪಾತ್ರೆಗಳು ಹೆಚ್ಚು ಬಳಕೆಯಾಗುತ್ತಿವೆ. ಇದಕ್ಕೆ ಕಾರಣವೂ ಇದೆ. ಮೊದಲನೆಯದಾಗಿ ಸ್ಟೀಲ್ ಪಾತ್ರೆಗಳು ಆರೋಗ್ಯಕ್ಕೆ ಒಳ್ಳೆಯದು. ಬೇರೆಯದಕ್ಕೆ ಹೋಲಿಕೆ ಮಾಡಿದರೆ ಇವು ಹೆಚ್ಚು ಕಾಲ ಬಾಳಿಕೆ ಬರುತ್ತವೆ. ಸ್ವಚ್ಛಗೊಳಿಸಲೂ ಸುಲಭ. ಆದರೆ ಇಷ್ಟೆಲ್ಲಾ ಪ್ರಯೋಜನಗಳನ್ನು ಹೊಂದಿರುವ ಸ್ಟೀಲ್ ಪಾತ್ರೆಗಳಲ್ಲಿ ಕೆಲವು ಆಹಾರ ಪದಾರ್ಥ ಸಂಗ್ರಹಿಸುವುದು ಅಪಾಯಕಾರಿ ಎಂದು ನಿಮಗೆ ತಿಳಿದಿದೆಯೇ?. ಹೌದು. ಸ್ಟೀಲ್ ಪಾತ್ರೆಗಳಲ್ಲಿ ಈ ಕೆಳಕಂಡ ಆಹಾರ ಸಂಗ್ರಹಿಸುವುದು ಅವುಗಳ ರುಚಿಯನ್ನು ಹಾಳು ಮಾಡುವುದಲ್ಲದೆ, ನಿಮ್ಮ ಆರೋಗ್ಯಕ್ಕೂ ಅಪಾಯವನ್ನುಂಟುಮಾಡುತ್ತದೆ.
ಎಂದಿಗೂ ಸಂಗ್ರಹಿಸಬಾರದ ಆಹಾರ ಪದಾರ್ಥಗಳು
ಕೆಲವು ಆಹಾರ ಪದಾರ್ಥಗಳು ಸ್ಟೀಲ್‌ನೊಂದಿಗೆ ಪ್ರತಿಕ್ರಿಯಿಸುತ್ತವೆ. ಅಂದರೆ ಈ ಆಹಾರಗಳು ಮತ್ತು ಸ್ಟೀಲ್ ಪಾತ್ರೆಗಳ ನಡುವೆ ರಾಸಾಯನಿಕ ಕ್ರಿಯೆಗಳು ಸಂಭವಿಸುತ್ತವೆ. ಇದು ಆಹಾರದ ರುಚಿಯನ್ನು ಹಾಳುಮಾಡುತ್ತದೆ. ಜೊತೆಗೆ ಅದರ ಪೌಷ್ಟಿಕಾಂಶದ ಮೌಲ್ಯವನ್ನು ಕಳೆದುಕೊಳ್ಳಬಹುದು. ಅಷ್ಟೇ ಅಲ್ಲ, ಫುಡ್ ಪಾಯಿಸನ್ ಅಥವಾ ಇತರ ಹೊಟ್ಟೆ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ ನೀವು ಸ್ಟೀಲ್ ಪಾತ್ರೆಗಳಲ್ಲಿ ಎಂದಿಗೂ ಸಂಗ್ರಹಿಸಬಾರದ ಆಹಾರ ಪದಾರ್ಥಗಳು ಯಾವುವು ಎಂದು ನೋಡೋಣ..
ಹಣ್ಣುಗಳು
ಹಣ್ಣುಗಳು ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿವೆ. ಹಾಗಾಗಿ ಅವುಗಳನ್ನು ಸರಿಯಾಗಿ ಸಂಗ್ರಹಿಸುವುದು ಬಹಳ ಮುಖ್ಯ. ಸ್ಟೀಲ್ ಪಾತ್ರೆಗಳಲ್ಲಿ ಹಣ್ಣುಗಳನ್ನು ಸಂಗ್ರಹಿಸುವುದರಿಂದ ಅವು ವೇಗವಾಗಿ ಹಾಳಾಗಬಹುದು ಮತ್ತು ಅವುಗಳ ಪರಿಮಳವೂ ಹಾಳಾಗಬಹುದು. ಇದಲ್ಲದೆ ಸ್ಟೀಲ್ ಪಾತ್ರೆಗಳು ಹಣ್ಣಿನಲ್ಲಿರುವ ತೇವಾಂಶವನ್ನು ಹಿಡಿದಿಟ್ಟುಕೊಳ್ಳಬಹುದು. ಇದು ಬೇಗನೆ ಕೊಳೆಯಲು ಕಾರಣವಾಗಬಹುದು. ಹಣ್ಣುಗಳನ್ನು ಸಂಗ್ರಹಿಸಲು ಗಾಳಿಯಾಡದ ಗಾಜಿನ ಡಬ್ಬಿಗಳು ಉತ್ತಮ ಆಯ್ಕೆಯಾಗಿದೆ. ನೀವು ಬಯಸಿದರೆ ಉತ್ತಮ ಗುಣಮಟ್ಟದ ಪ್ಲಾಸ್ಟಿಕ್ ಡಬ್ಬಿಯನ್ನ ಸಹ ಬಳಸಬಹುದು. ಇದು ಹಣ್ಣನ್ನು ತಾಜಾ ಮತ್ತು ಹೆಚ್ಚು ಕಾಲ ಸುರಕ್ಷಿತವಾಗಿರಿಸುತ್ತದೆ.
ಉಪ್ಪಿನಕಾಯಿ
ಯಾವುದೇ ಅಡುಗೆ ಮಾಡಿದರೂ ಜೊತೆಗೆ ಸೈಡ್ ಆಗಿ ಉಪ್ಪಿನಕಾಯಿಯನ್ನ ಪ್ರತಿಯೊಬ್ಬರ ಮನೆಯಲ್ಲೂ ಬಳಸುತ್ತಾರೆ. ನಿಮಗೇ ಗೊತ್ತಿರುವಂತೆ ಉಪ್ಪಿನಕಾಯಿಯನ್ನ ದೀರ್ಘಕಾಲದವರೆಗೆ ಸಂಗ್ರಹಿಸಲಾಗುತ್ತದೆ. ಒಂದು ವೇಳೆ ನೀವು ಉಪ್ಪಿನಕಾಯಿಯನ್ನ ಸ್ಟೀಲ್ ಡಬ್ಬಿಯಲ್ಲಿ ಹಾಕಿಟ್ಟರೆ ಅದು ತುಕ್ಕು ಹಿಡಿಯುತ್ತದೆ. ಇದರಿಂದ ಉಪ್ಪಿನಕಾಯಿಯ ರುಚಿ ಹಾಳಾಗುತ್ತದೆ. ಆದ್ದರಿಂದ ಉಪ್ಪಿನಕಾಯಿ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಮತ್ತು ಆರೋಗ್ಯ ಹಾಳಾಗದಂತೆ ತಡೆಗಟ್ಟಲು ಅವುಗಳನ್ನು ಯಾವಾಗಲೂ ಗಾಜಿನ ಅಥವಾ ಗುಣಮಟ್ಟದ ಪ್ಲಾಸ್ಟಿಕ್ ಡಬ್ಬಿಯಲ್ಲಿ ಸಂಗ್ರಹಿಸಬೇಕು.
ಮೊಸರು
ಮೊಸರು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಸ್ಟೀಲ್ ಪಾತ್ರೆ ಅಥವಾ ಡಬ್ಬಿಯಲ್ಲಿ ಮೊಸರು ಸಂಗ್ರಹಿಸುವುದು ಒಳ್ಳೆಯದಲ್ಲ. ಮೊಸರು ಉಕ್ಕಿನೊಂದಿಗೆ ಪ್ರತಿಕೂಲವಾಗಿ ಪ್ರತಿಕ್ರಿಯಿಸುವ ಕೆಲವು ಪದಾರ್ಥಗಳನ್ನು ಹೊಂದಿರುವುದರಿಂದ ಅದರ ರುಚಿಯನ್ನು ಹಾಳು ಮಾಡುತ್ತದೆ ಮತ್ತು ಬೇಗನೆ ಹಾಳಾಗುತ್ತದೆ. ಇದಲ್ಲದೆ ಸ್ಟೀಲ್ ಪಾತ್ರೆಗಳಲ್ಲಿ ಮೊಸರು ಸಂಗ್ರಹಿಸುವುದು ಹುದುಗುವಿಕೆ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಇದು ಸೇವನೆಗೆ ಸೂಕ್ತವಲ್ಲ. ಆದ್ದರಿಂದ ಮೊಸರನ್ನು ಯಾವಾಗಲೂ ಗಾಜಿನ ಅಥವಾ ಮಣ್ಣಿನ ಪಾತ್ರೆಗಳಲ್ಲಿ ಸಂಗ್ರಹಿಸಬೇಕು. ಮಣ್ಣಿನ ಪಾತ್ರೆಗಳು ಮೊಸರನ್ನು ತಾಜಾವಾಗಿಡುವುದು ಮಾತ್ರವಲ್ಲದೆ, ಅದರ ಪರಿಮಳವನ್ನು ಸಹ ಕಾಪಾಡಿಕೊಳ್ಳುತ್ತವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

